English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Books

2 Samuel Chapters

2 Samuel 17 Verses

1 ಅಹೀತೋಫೆಲನು, “ಈಗ ನಾನು ಹನ್ನೆರಡು ಸಾವಿರ ಜನರನ್ನು ಆರಿಸಿಕೊಂಡು ಈ ರಾತ್ರಿಯೇ ದಾವೀದನನ್ನು ಅಟ್ಟಿಸಿಕೊಂಡು ಹೋಗುತ್ತೇನೆ.
2 ಅವನು ಆಯಾಸದಿಂದ ಬಲಹೀನನಾದಾಗ ಅವನ ಮೇಲೆ ದಾಳಿಮಾಡಿ ಹೆದರಿಸುವೆನು; ಆಗ ಅವನ ಜನರೆಲ್ಲರೂ ಓಡಿಹೋಗುತ್ತಾರೆ. ಆದರೆ ನಾನು ರಾಜನಾದ ದಾವೀದನನ್ನು ಮಾತ್ರ ಕೊಲ್ಲುತ್ತೇನೆ.
3 ಅನಂತರ ನಾನು ಜನರೆಲ್ಲರನ್ನೂ ಹಿಂದಕ್ಕೆ ನಿನ್ನ ಬಳಿಗೆ ಕರೆತರುತ್ತೇನೆ. ದಾವೀದನು ಸತ್ತರೆ, ಜನರೆಲ್ಲರೂ ಸಮಾಧಾನದಿಂದ ಹಿಂದಕ್ಕೆ ಬರುತ್ತಾರೆ” ಎಂದು ಅಬ್ಷಾಲೋಮನಿಗೆ ಹೇಳಿದನು.
4 ಈ ಉಪಾಯವು ಅಬ್ಷಾಲೋಮನಿಗೆ ಮತ್ತು ಇಸ್ರೇಲಿನ ನಾಯಕರಿಗೆಲ್ಲ ಸರಿಯೆಂದು ಕಂಡಿತು.
5 ಆದರೆ ಅಬ್ಷಾಲೋಮನು, “ಈಗ ಅರ್ಕೀಯನಾದ ಹೂಷೈಯನನ್ನು ಕರೆಯಿರಿ. ಅವನು ಏನು ಹೇಳುತ್ತಾನೆಂಬುದನ್ನು ನಾನು ಕೇಳಬೇಕಾಗಿದೆ” ಎಂದು ಹೇಳಿದನು.
6 ಹೂಷೈಯು ಅಬ್ಷಾಲೋಮನ ಬಳಿಗೆ ಬಂದನು. ಅಬ್ಷಾಲೋಮನು ಹೂಷೈಗೆ, “ಇದು ಅಹೀತೋಫೆಲನು ನೀಡಿದ ಉಪಾಯ. ಇದನ್ನು ನಾವು ಅನುಸರಿಸಬೇಕೇ? ಅಥವಾ ಅನುಸರಿಸಬಾರದೆ? ನಮಗೆ ತಿಳಿಸು.” ಎಂದನು.
7 ಹೂಷೈಯು ಅಬ್ಷಾಲೋಮನಿಗೆ, “ಈ ಸಮಯದಲ್ಲಿ ಅಹೀತೋಫೆಲನ ಸಲಹೆಯು ಸರಿಯಲ್ಲ” ಎಂದು ಹೇಳಿದನು.
8 ಅವನು ಮಾತನ್ನು ಮುಂದುವರಿಸಿ, “ನಿನ್ನ ತಂದೆಯು ಮತ್ತು ಅವನ ಜನರು ಶೂರರೆಂಬುದು ನಿನಗೆ ತಿಳಿದಿದೆ. ಕಾಡಿನಲ್ಲಿ ತನ್ನ ಮರಿಗಳನ್ನು ಕಳೆದುಕೊಂಡ ಕರಡಿಯಂತೆ ಅವರು ರೋಷವುಳ್ಳವರಾಗಿದ್ದಾರೆ. ನಿನ್ನ ತಂದೆಯು ಒಬ್ಬ ನುರಿತ ಹೋರಾಟಗಾರ. ಅವನು ಜನರೊಂದಿಗೆ ರಾತ್ರಿಯಲ್ಲಿ ಇರುವುದಿಲ್ಲ.
9 ಈಗಾಗಲೇ ಅವನು ಒಂದು ಗವಿಯಲ್ಲಾಗಲಿ ಇಲ್ಲವೆ ಬೇರೆ ಯಾವ ಸ್ಥಳದಲ್ಲಾಗಲಿ ಅಡಗಿಕೊಂಡಿರಬಹುದು. ನಿನ್ನ ತಂದೆಯು ನಿನ್ನ ಜನರ ಮೇಲೆ ಆಕ್ರಮಣ ಮಾಡಿದರೆ, ಆಗ ಜನರಿಗೆ ಸುದ್ದಿಯು ತಿಳಿಯುತ್ತದೆ. ‘ಅಬ್ಷಾಲೋಮನ ಹಿಂಬಾಲಕರು ಸೋಲುತ್ತಿದ್ದಾರೆ’ ಎಂದು ಅವರು ಯೋಚಿಸುತ್ತಾರೆ.
10 ಆಗ ಸಿಂಹದಂತೆ ಶೂರರಾದ ಜನರು ಸಹ ಹೆದರಿಕೊಳ್ಳುತ್ತಾರೆ. ಏಕೆಂದರೆ ನಿನ್ನ ತಂದೆಯು ರಣವೀರನೆಂದು ಮತ್ತು ಅವನ ಜನರು ಧೈರ್ಯಶಾಲಿಗಳೆಂದು ತಿಳಿದಿದೆ.
11 “ನನ್ನ ಸಲಹೆ ಹೀಗಿದೆ: ನೀನು ದಾನ್‌ನಿಂದ ಬೇರ್ಷೆಬದವರೆಗಿನ ಇಸ್ರೇಲರನ್ನೆಲ್ಲ ಒಟ್ಟುಗೂಡಿಸು. ಆಗ ಸಮುದ್ರ ತೀರದ ಮರಳಿನ ಕಣಗಳಂತೆ ಅಲ್ಲಿ ಅನೇಕ ಜನರಿರುತ್ತಾರೆ. ನೀನೇ ಸ್ವತಃ ಯುದ್ಧರಂಗಕ್ಕೆ ಹೋಗಬೇಕು.
12 ದಾವೀದನನ್ನು ಅವನು ಅಡಗಿಕೊಂಡಿರುವ ಸ್ಥಳದಲ್ಲಿಯೇ ನಾವು ಹಿಡಿದುಕೊಳ್ಳುತ್ತೇವೆ. ಮಂಜಿನ ಹನಿಗಳು ಭೂಮಿಯ ಮೇಲೆ ಬೀಳುವಂತೆ ನಾವು ದಾವೀದನ ಮೇಲೆ ಬೀಳುವೆವು. ದಾವೀದನನ್ನು ಮತ್ತು ಅವನ ಜನರೆಲ್ಲರನ್ನು ನಾವು ಕೊಲ್ಲುವೆವು. ಯಾರನ್ನೂ ಜೀವಸಹಿತ ಬಿಡುವುದಿಲ್ಲ.
13 ಆದರೆ ದಾವೀದನು ತಪ್ಪಿಸಿಕೊಂಡು ಬಂದು ನಗರಕ್ಕೆ ನುಗ್ಗಿದರೆ, ಇಸ್ರೇಲರೆಲ್ಲ ಆ ನಗರದ ಹತ್ತಿರಕ್ಕೆ ಹಗ್ಗಗಳನ್ನು ತರುತ್ತಾರೆ. ನಾವು ಆ ನಗರದ ಗೋಡೆಗಳನ್ನು ಕಣಿವೆಯ ಆಳಕ್ಕೆ ಎಳೆದು ಬಿಡುತ್ತೇವೆ. ಆ ನಗರದಲ್ಲಿ ಒಂದು ಸಣ್ಣ ಕಲ್ಲು ಸಹ ಉಳಿಯಲು ಬಿಡುವುದಿಲ್ಲ” ಎಂದು ಹೇಳಿದನು.
14 ಅಬ್ಷಾಲೋಮನು ಮತ್ತು ಇಸ್ರೇಲರೆಲ್ಲ, “ಅರ್ಕೀಯನಾದ ಹೂಷೈಯನ ಸಲಹೆಯು ಅಹೀತೋಫೆಲನ ಸಲಹೆಗಿಂತ ಉತ್ತಮವಾಗಿದೆ” ಎಂದು ಹೇಳಿದರು. ಇದು ಯೆಹೋವನ ಯೋಜನೆಯಾಗಿದ್ದ ಕಾರಣ ಅವರು ಹಾಗೆ ಹೇಳಿದರು. ಅಹೀತೋಫೆಲನ ಒಳ್ಳೆಯ ಸಲಹೆಯನ್ನು ನಾಶಗೊಳಿಸಲು ಯೆಹೋವನು ಈ ಯೋಜನೆಯನ್ನು ಮಾಡಿದ್ದನು. ಹೀಗೆ ಯೆಹೋವನು ಅಬ್ಷಾಲೋಮನನ್ನು ದಂಡಿಸಲಿದ್ದನು.
15 ಹೂಷೈಯು ಯಾಜಕರಾದ ಚಾದೋಕನಿಗೆ ಮತ್ತು ಎಬ್ಯಾತಾರನಿಗೆ ಆ ವಿಚಾರಗಳನ್ನು ಹೇಳಿದನು. ಅಬ್ಷಾಲೋಮನಿಗೆ ಮತ್ತು ಇಸ್ರೇಲಿನ ನಾಯಕರಿಗೆ ಅಹೀತೋಫೆಲನು ಮಾಡಿದ ಸಲಹೆಗಳ ವಿಚಾರವನ್ನು ಮತ್ತು ತಾನು ನೀಡಿದ ಸಲಹೆಗಳ ವರದಿಯನ್ನು, ಚಾದೋಕ ಮತ್ತು ಎಬ್ಯಾತಾರನಿಗೆ ತಿಳಿಸಿದನು.
16 ಹೂಷೈಯು ಅವರಿಗೆ, ನೀವು ದಾವೀದನಿಗೆ ಹೀಗೆ ಹೇಳಿರಿ: “ಈ ರಾತ್ರಿ ನದಿಯನ್ನು ದಾಟುವ ಅಡವಿಯಲ್ಲಿ ತಂಗಬೇಡ, ಆದಷ್ಟು ಬೇಗನೆ ನದಿಯನ್ನು ದಾಟಿ ಆಚೆ ಹೋದರೆ ಒಳ್ಳೆಯದು. ಇಲ್ಲವಾದರೆ ನೀನು ನಿನ್ನ ಜನರೊಂದಿಗೆ ನಾಶವಾಗುವೆ” ಎಂದು ಹೇಳಿದನು.
17 ಯಾಜಕರ ಮಕ್ಕಳಾದ ಯೋನಾತಾನನು ಮತ್ತು ಅಹೀಮಾಚನು ಎನ್-ರೋಗೆಲಿನ ಬುಗ್ಗೆಯ ಹತ್ತಿರ ಕಾದಿದ್ದರು. ತಾವು ನಗರದೊಳಕ್ಕೆ ಹೋಗುವುದನ್ನು ಯಾರೂ ನೋಡಬಾರದೆಂದು ಅವರು ಅಲ್ಲಿ ಅಡಗಿಕೊಂಡಿದ್ದರು. ಆದ್ದರಿಂದ ಕೆಲಸದ ಹುಡುಗಿಯೊಬ್ಬಳು ಹೊರಗೆ ಬಂದು ಅವರಿಗೆ ಆ ಸಂದೇಶವನ್ನು ತಿಳಿಸಿದಳು. ಬಳಿಕ ಯೋನಾತಾನನು ಮತ್ತು ಅಹೀಮಾಚನು ದಾವೀದ ರಾಜನ ಬಳಿಗೆ ಹೋಗಿ ಅದನ್ನು ತಿಳಿಸಿದರು.
18 ಆದರೆ ಯೋನಾತಾನ್ ಮತ್ತು ಅಹೀಮಾಚರನ್ನು ಒಬ್ಬ ಬಾಲಕನು ನೋಡಿದನು. ಆ ಬಾಲಕನು ಅಬ್ಷಾಲೋಮನಿಗೆ ತಿಳಿಸಲು ಓಡಿದನು. ಯೋನಾತಾನನು ಮತ್ತು ಅಹೀಮಾಚನು ಬೇಗನೆ ಓಡಿಹೋಗಿ ಬಹುರೀಮಿನಲ್ಲಿ ಒಬ್ಬನ ಮನೆಯೊಳಗೆ ಹೋದರು. ಅವನ ಮನೆಯ ಅಂಗಳದಲ್ಲಿ ಒಂದು ಬಾವಿಯಿತ್ತು. ಯೋನಾತಾನನು ಮತ್ತು ಅಹೀಮಾಚನು ಈ ಬಾವಿಯೊಳಗೆ ಇಳಿದರು.
19 ಆ ಮನುಷ್ಯನ ಹೆಂಡತಿಯು ಒಂದು ಹಲಗೆಯನ್ನು ಬಾವಿಯ ಮೇಲೆ ಹಾಕಿದಳು. ನಂತರ ಅವಳು ಅದರ ಮೇಲೆ ಗೋಧಿಯನ್ನು ಹರಡಿದಳು. ಅದು ಗೋಧಿಯ ರಾಶಿಯಂತೆ ಕಂಡಿತು. ಆದ್ದರಿಂದ ಯೋನಾತಾನನು ಮತ್ತು ಅಹೀಮಾಚರು ಅಲ್ಲಿ ಅಡಗಿಕೊಂಡಿದ್ದಾರೆಂಬುದು ಯಾರಿಗೂ ಗೊತ್ತಾಗಲಿಲ್ಲ.
20 ಅಬ್ಷಾಲೋಮನ ಸೇವಕರು ಆ ಮನೆಯಲ್ಲಿದ್ದ ಹೆಂಗಸಿನ ಬಳಿಗೆ ಬಂದು, “ಅಹೀಮಾಚ್ ಮತ್ತು ಯೋನಾತಾನರು ಎಲ್ಲಿ?” ಎಂದು ಕೇಳಿದರು. ಆ ಸ್ತ್ರೀಯು ಅಬ್ಷಾಲೋಮನ ಸೇವಕರಿಗೆ, “ಅವರು ಈಗಾಗಲೇ ಹಳ್ಳವನ್ನು ದಾಟಿಹೋಗಿರಬೇಕು” ಎಂದಳು. ಆಗ ಅಬ್ಷಾಲೋಮನ ಸೇವಕರು ಯೋನಾತಾನ್ ಮತ್ತು ಅಹೀಮಾಚರನ್ನು ಹುಡುಕಲು ಹೋದರು. ಆದರೆ ಅವರು ಸೇವಕರಿಗೆ ಸಿಗಲಿಲ್ಲ. ಆದ್ದರಿಂದ ಅಬ್ಷಾಲೋಮನ ಸೇವಕರು ಜೆರುಸಲೇಮಿಗೆ ಹಿಂದಿರುಗಿದರು.
21 ಅಬ್ಷಾಲೋಮನ ಸೈನಿಕರು ಹೋದ ಮೇಲೆ ಯೋನಾತಾನ್ ಮತ್ತು ಅಹೀಮಾಚರು ಬಾವಿಯಿಂದ ಮೇಲಕ್ಕೆ ಬಂದರು. ಅವರು ಅರಸನಾದ ದಾವೀದನ ಬಳಿಗೆ ಹೋಗಿ, “ಬೇಗ, ನದಿಯನ್ನು ದಾಟಿಹೋಗು. ಅಹೀತೋಫೆಲನು ನಿನ್ನ ವಿರುದ್ಧವಾಗಿ ಈ ಸಂಗತಿಗಳನ್ನು ಹೇಳಿದ್ದಾನೆ” ಎಂದರು.
22 ದಾವೀದನು ಮತ್ತು ಅವನ ಜನರೆಲ್ಲರೂ ಜೋರ್ಡನ್ ನದಿಯನ್ನು ದಾಟಿಹೋದರು. ಸೂರ್ಯನು ಮೇಲೇರುವುದಕ್ಕೆ ಮುಂಚೆಯೇ, ದಾವೀದನ ಜನರೆಲ್ಲರೂ ಜೋರ್ಡನ್ ನದಿಯನ್ನು ದಾಟಿಹೋಗಿದ್ದರು.
23 ಅಹೀತೋಫೆಲನು ತನ್ನ ಸಲಹೆಯನ್ನು ಇಸ್ರೇಲರು ಸ್ವೀಕರಿಸಲಿಲ್ಲವೆಂಬುದನ್ನು ತಿಳಿದು ತನ್ನ ಹೇಸರಕತ್ತೆಯ ಮೇಲೆ ತಡಿಯನ್ನು ಹಾಕಿ ತನ್ನ ಸ್ವಂತ ಊರಿನಲ್ಲಿದ್ದ ಮನೆಗೆ ಹೋದನು. ಅವನು ತನ್ನ ಕುಟುಂಬಕ್ಕೆ ಯೋಜನೆಗಳನ್ನು ಮಾಡಿದನು. ನಂತರ ಅವನೇ ನೇಣು ಹಾಕಿಕೊಂಡು ಸತ್ತನು. ಅಹೀತೋಫೆಲನನ್ನು ಜನರು ಅವನ ತಂದೆಯ ಸಮಾಧಿಯ ಬಳಿ ಸಮಾಧಿ ಮಾಡಿದರು.
24 ದಾವೀದನು ಮಹನಯಿಮಿಗೆ ಬಂದನು. ಅಬ್ಷಾಲೋಮನು ಮತ್ತು ಇಸ್ರೇಲರೆಲ್ಲರೂ ಜೋರ್ಡನ್ ನದಿಯನ್ನು ದಾಟಿದರು.
25 ಅಬ್ಷಾಲೋಮನು ಅಮಾಸನನ್ನು ಸೈನ್ಯದ ಅಧಿಪತಿಯನ್ನಾಗಿ ಮಾಡಿದನು. ಅಮಾಸನು ಯೋವಾಬನ ಸ್ಥಾನಕ್ಕೆ ಬಂದನು. [*ಅಮಾಸನು … ಬಂದನು ಯೋವಾಬನು ದಾವೀದನಿಗೆ ಇನ್ನೂ ಬೆಂಬಲ ಕೊಡುತ್ತಿದ್ದನು. ದಾವೀದನು ಅಬ್ಷಾಲೋಮನಿಂದ ತಪ್ಪಿಸಿಕೊಂಡು ಓಡಿಹೋಗುವಾಗ, ಯೋವಾಬನು ದಾವೀದನ ಮೂವರು ಸೇನಾಪತಿಗಳಲ್ಲಿ ಒಬ್ಬನಾಗಿದ್ದನು.] ಅಮಾಸನು ಇಸ್ರೇಲನಾದ ಇತ್ರನ ಮಗ. ಅಮಾಸನ ತಾಯಿಯಾದ ಅಬೀಗಲಳು, ನಾಹಾಷನ ಮಗಳು ಮತ್ತು ಚೆರೂಯಳ ಸೋದರಿ.
26 ಅಬ್ಷಾಲೋಮನು ಮತ್ತು ಇಸ್ರೇಲರು ಗಿಲ್ಯಾದ್ ದೇಶದಲ್ಲಿ ಪಾಳೆಯವನ್ನು ಮಾಡಿದರು. ಶೋಬಿ, ಮಾಕೀರ್ ಮತ್ತು ಬರ್ಜಿಲ್ಲೈಯರು
27 ದಾವೀದನು ಮಹನಯಿಮಿಗೆ ಬಂದನು. ಶೋಬಿ, ಮಾಕೀರ್ ಮತ್ತು ಬರ್ಜಿಲ್ಲೈಯರು ಆ ಸ್ಥಳದಲ್ಲಿದ್ದರು. (ಶೋಬಿಯು ಅಮ್ಮೋನಿಯರ ಪಟ್ಟಣವಾದ ರಬ್ಬಾದ ಊರಿನ ನಾಹಾಷನ ಮಗ. ಮಾಕೀರನು ಲೋದೆಬಾರಿನ ಅಮ್ಮೀಯೇಲನ ಮಗ. ಬರ್ಜಿಲ್ಲೈಯು ಗಿಲ್ಯಾದ್ ನಾಡಿನ ರೋಗೆಲೀಮ್ ನಗರದವನು.)
28 (28-29) ಅವರು, “ಅರಣ್ಯದಲ್ಲಿ ಪ್ರಯಾಣಮಾಡಿ ಜನರು ದಣಿದಿದ್ದಾರೆ, ಹಸಿದಿದ್ದಾರೆ ಮತ್ತು ದಾಹಗೊಂಡಿದ್ದಾರೆ” ಎಂದು ಹೇಳಿ, ದಾವೀದನಿಗೂ ಅವನ ಜನರಿಗೂ ತಿನ್ನಲು ಅನೇಕ ಆಹಾರಪದಾರ್ಥಗಳನ್ನು ತಂದರು. ಅವರು ಹಾಸಿಗೆಗಳನ್ನು, ಬಟ್ಟಲುಗಳನ್ನು ಮತ್ತು ಮಡಕೆಕುಡಿಕೆಗಳನ್ನು, ಗೋಧಿ, ಬಾರ್ಲಿ, ಹಿಟ್ಟು, ಹುರಿದಕಾಳುಗಳು, ಅವರೆ, ಅಲಸಂದಿ, ಒಣಗಿಸಿದ ಬೇಳೆ, ಜೇನುತುಪ್ಪ, ಬೆಣ್ಣೆ, ಕುರಿ ಮತ್ತು ಹಸುವಿನ ಹಾಲಿನಿಂದ ಮಾಡಿದ ಗಿಣ್ಣು ಇವುಗಳನ್ನು ತಂದುಕೊಟ್ಟರು.
×

Alert

×