ನನಗೆ ಇಬ್ಬರು ಗಂಡುಮಕ್ಕಳಿದ್ದರು. ಈ ಇಬ್ಬರು ಗಂಡುಮಕ್ಕಳು ಜಗಳಮಾಡುತ್ತಾ ಹೊರಗೆ ಮೈದಾನದಲ್ಲಿದ್ದರು. ಅವರನ್ನು ತಡೆಯುವ ಬೇರೊಬ್ಬನು ಅಲ್ಲಿರಲಿಲ.್ಲ ಒಬ್ಬ ಮಗನು ಮತ್ತೊಬ್ಬನನ್ನು ಕೊಂದನು.
ಈಗ ನಮ್ಮ ಕುಟುಂಬದವರೆಲ್ಲಾ ನನಗೆ ವಿರುದ್ಧವಾಗಿದ್ದಾರೆ. ಅವರು ನನಗೆ, ‘ತನ್ನ ಸೋದರನನ್ನೇ ಕೊಂದ ಮಗನನ್ನು ಕರೆದುಕೊಂಡು ಬಾ. ಅವನು ತನ್ನ ಸೋದರನನ್ನೇ ಕೊಂದುಹಾಕಿದ್ದರಿಂದ ಅವನನ್ನು ನಾವು ಕೊಂದುಹಾಕುತ್ತೇವೆ’ ಎಂದು ಹೇಳಿದರು. ನನ್ನ ಮಗನನ್ನು ಕೊಲ್ಲಲು ನಾನು ಅವರಿಗೆ ಬಿಟ್ಟುಕೊಟ್ಟರೆ, ತನ್ನ ತಂದೆಯ ಆಸ್ತಿಗೆ ವಾರಸುದಾರನಾದ ಮಗನನ್ನೇ ಕೊಂದುಹಾಕಿದಂತಾಗುತ್ತದೆ. ನನ್ನ ಮಗ ನನ್ನ ಬದುಕಿನ ಕೊನೆಯ ಆಶಾಕಿರಣ. ಆ ಕೊನೆಯ ಆಶಾಕಿರಣವು ಸುಟ್ಟು ನಾಶವಾಗಿಬಿಡುತ್ತದೆ. ನಂತರ ನನ್ನ ಸತ್ತ ಗಂಡನ ಆಸ್ತಿ ಬೇರೊಬ್ಬನಿಗೆ ಹೋಗುತ್ತದೆ ಮತ್ತು ಅವನ ಹೆಸರು ದೇಶದೊಳಗಿಂದ ತೆಗೆದುಹಾಕಲ್ಪಡುತ್ತದೆ” ಎಂದು ಹೇಳಿದಳು.
ಆ ಸ್ತ್ರೀಯು, “ಅವರು ನನಗೆ ತೊಂದರೆ ಕೊಡದಂತೆ ನೀನು ನೋಡಿಕೊಳ್ಳುವುದಾಗಿ ನಿನ್ನ ದೇವರಾದ ಯೆಹೋವನ ಮೇಲೆ ದಯವಿಟ್ಟು ಪ್ರಮಾಣ ಮಾಡು. ಆಗ ಕೊಲೆಗಾರರನ್ನು ದಂಡಿಸಲು ಇಚ್ಛಿಸುವ ಈ ಜನರು, ನನ್ನ ಮಗನನ್ನು ದಂಡಿಸುವುದಿಲ್ಲ” ಎಂದು ಹೇಳಿದಳು. ದಾವೀದನು, “ಯೆಹೋವನಾಣೆ, ನಿನ್ನ ಮಗನನ್ನು ಯಾವ ವ್ಯಕ್ತಿಯೂ ತೊಂದರೆಗೊಳಿಸುವುದಿಲ್ಲ. ನಿನ್ನ ಮಗನ ತಲೆಯ ಮೇಲಿನ ಕೂದಲುಗಳಲ್ಲಿ ಒಂದಾದರೂ ನೆಲಕ್ಕೆ ಬೀಳುವುದಿಲ್ಲ” ಎಂದನು.
ಆಗ ಆ ಸ್ತ್ರೀಯು, “ದೇವರ ಜನರ ವಿರುದ್ಧವಾಗಿ ನೀನು ಈ ಕಾರ್ಯಗಳನ್ನು ಮಾಡಲು ಯೋಚಿಸಿರುವುದಾದರೂ ಏಕೆ? ಹೌದು, ನೀನು ಕೊಟ್ಟ ತೀರ್ಪಿನ ಮೂಲಕ ನೀನು ನನ್ನನ್ನು ತಪ್ಪಿತಸ್ಥನೆಂದು ತೋರಿಸಿ ಕೊಟ್ಟಿರುವೆ. ಏಕೆಂದರೆ ನೀನು ಬಲಾತ್ಕಾರದಿಂದ ಮನೆ ಬಿಡಿಸಿದ ಮಗನನ್ನು ಮನೆಗೆ ಕರೆದು ತಂದಿಲ್ಲ.
ನಾವೆಲ್ಲ ಎಂದಾದರೂ ಒಂದು ದಿನ ಸಾಯುತ್ತೇವೆ ಎನ್ನುವುದು ನಿಜ. ನಾವೆಲ್ಲ ನೆಲದ ಮೇಲೆ ಚೆಲ್ಲಿದ ನೀರಿನಂತಿದ್ದೇವೆ. ಈ ನೀರನ್ನು ನೆಲದಿಂದ ಮತ್ತೆ ಒಟ್ಟುಗೂಡಿಸುವುದು ಯಾವ ವ್ಯಕ್ತಿಯಿಂದಲೂ ಸಾಧ್ಯವಿಲ್ಲ. ಆದರೆ ಜೀವವನ್ನು ತೆಗೆದುಬಿಡಲು ದೇವರು ಇಚ್ಛಿಸುವುದಿಲ್ಲ. ಬಲಾತ್ಕಾರವಾಗಿ ಹೊರಗೆ ನೂಕಲ್ಪಟ್ಟವನು ತಿರುಗಿ ತನ್ನ ಬಳಿಗೆ ಬರುವ ಹಾಗೆ ಆತನದೇ ಆದ ಉಪಾಯವಿದೆ.
ರಾಜನಾದ ನನ್ನ ಒಡೆಯನೇ, ನಾನು ಈ ಮಾತುಗಳನ್ನು ನಿನಗೆ ಹೇಳುವುದಕ್ಕೆಂದೇ ಬಂದೆನು. ಏಕೆಂದರೆ ಜನರು ನನ್ನನ್ನು ಹೆದರಿಸಿದರು. ನಾನು ನನ್ನೊಳಗೆ ಹೀಗೆಂದುಕೊಂಡೆನು. ‘ನಾನು ರಾಜನೊಂದಿಗೆ ಮಾತಾಡುತ್ತೇನೆ. ಬಹುಶಃ ರಾಜನು ನನ್ನ ಮಾತುಗಳನ್ನು ಕೇಳಿ ಸಹಾಯ ಮಾಡಬಹುದು.
ರಾಜನು ನನ್ನನ್ನೂ ನನ್ನ ಮಗನನ್ನೂ ಕೊಲ್ಲಲು ಇಚ್ಛಿಸುವ ವ್ಯಕ್ತಿಯಿಂದ ನಮ್ಮಿಬ್ಬರನ್ನೂ ರಕ್ಷಿಸಬಹುದು; ದೇವರು ನಮಗೆ ಕೊಟ್ಟಿರುವ ಸ್ವಾಸ್ತ್ಯವನ್ನು ನಮ್ಮಿಂದ ಕಸಿದುಕೊಳ್ಳದಂತೆ ಕಾಪಾಡಬಹುದು.’
ರಾಜನಾದ ನನ್ನ ಒಡೆಯನ ಮಾತುಗಳು ನನಗೆ ವಿಶ್ರಾಂತಿಯನ್ನು ಕೊಡುತ್ತವೆ ಎಂದು ನನಗೆ ತಿಳಿದಿರುವುದರಿಂದ ನಿನ್ನ ಬಳಿಗೆ ಬಂದಿರುವೆನು. ಏಕೆಂದರೆ ನೀನು ದೇವದೂತನಂತಿರುವೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದು ನಿನಗೆ ತಿಳಿದಿದೆ. ನಿನ್ನ ದೇವರಾದ ಯೆಹೋವನು ನಿನ್ನೊಂದಿಗಿರುವನು” ಎಂದು ಹೇಳಿದಳು.
ರಾಜನಾದ ದಾವೀದನು ಆ ಸ್ತ್ರೀಗೆ, “ನಾನು ಕೇಳುವ ಪ್ರಶ್ನೆಗೆ ನೀನು ಉತ್ತರವನ್ನು ಹೇಳಲೇಬೇಕು” ಎಂದು ಉತ್ತರಿಸಿದನು. ಆ ಸ್ತ್ರೀಯು, “ರಾಜನಾದ ನನ್ನ ಒಡಯನೇ, ದಯವಿಟ್ಟು ನಿನ್ನ ಪ್ರಶ್ನೆಯನ್ನು ಕೇಳು” ಎಂದಳು.
ರಾಜನು, “ಈ ವಿಚಾರಗಳನ್ನೆಲ್ಲ ಹೇಳಲು ಯೋವಾಬನು ನಿನಗೆ ತಿಳಿಸಿದನಲ್ಲವೇ?” ಎಂದನು. ಆ ಸ್ತ್ರೀಯು, “ರಾಜನಾದ ನನ್ನ ಒಡಯನೇ, ನಿಮ್ಮ ಆಣೆಯಾಗಿಯೂ, ನೀನು ಹೇಳಿದ್ದು ಸರಿ! ನಿಮ್ಮ ಸೇವಕನಾದ ಯೋವಾಬನು ಈ ವಿಷಯಗಳನ್ನು ಹೇಳಲು ನನಗೆ ತಿಳಿಸಿದನು.
ಈ ವಿಷಯಗಳ ಬಗ್ಗೆ ನಿಮ್ಮ ದೃಷ್ಟಿಯು ಬದಲಾಗಲೆಂಬುದಕ್ಕಾಗಿ ಯೋವಾಬನು ಹೀಗೆ ಮಾಡಿದನು. ನನ್ನ ಒಡೆಯನೇ, ನೀನು ದೇವದೂತನಂತೆ ಬುದ್ಧಿವಂತನಾಗಿರುವೆ. ಈ ಲೋಕದಲ್ಲಿ ನಡೆಯುತ್ತಿರುವುದೆಲ್ಲವನ್ನೂ ನೀನು ತಿಳಿದಿರುವೆ” ಎಂದಳು.
ಯೋವಾಬನು ಅರಸನಾದ ದಾವೀದನಿಗೆ ಸಾಷ್ಟಾಂಗನಮಸ್ಕಾರಮಾಡಿ, “ನಾನು ಕೇಳಿಕೊಂಡದ್ದನ್ನು ನೀನು ನೆರವೇರಿಸಿದ್ದರಿಂದ, ನೀನು ನನ್ನ ವಿಷಯದಲ್ಲಿ ಸಂತೋಷದಿಂದಿರುವೆ ಎಂಬುದು ಇಂದು ನನಗೆ ಗೊತ್ತಾಯಿತು” ಎಂದನು.
ಆದರೆ ರಾಜನಾದ ದಾವೀದನು, “ಅಬ್ಷಾಲೋಮನು ತನ್ನ ಸ್ವಂತ ಮನೆಗೆ ಹಿಂದಿರುಗಿ ಹೋಗಲಿ. ಅವನು ನನ್ನನ್ನು ನೋಡಲು ಬರುವುದು ಬೇಡ” ಎಂದನು. ಆದ್ದರಿಂದ ಅಬ್ಷಾಲೋಮನು ತನ್ನ ಸ್ವಂತ ಮನೆಗೆ ಹಿಂದಿರುಗಿಹೋದನು. ಅಬ್ಷಾಲೋಮನು ರಾಜನನ್ನು ನೋಡಲು ಹೋಗಲಿಲ್ಲ.
ಜನರು ಅಬ್ಷಾಲೋಮನನ್ನು, ಅವನ ಸುಂದರ ರೂಪಕ್ಕಾಗಿ ಬಹಳ ಹೊಗಳುತ್ತಿದ್ದರು. ಇಸ್ರೇಲಿನಲ್ಲಿ ಅವನಷ್ಟು ರೂಪವಂತನು ಬೇರೆ ಯಾರೂ ಇರಲಿಲ್ಲ. ಅಬ್ಷಾಲೋಮನ ತಲೆಯಿಂದ ಪಾದಗಳವರೆಗೆ ಯಾವ ಕಳಂಕವೂ ಇರಲಿಲ್ಲ.
ಆದ್ದರಿಂದ ಅಬ್ಷಾಲೋಮನು ಯೋವಾಬನ ಬಳಿಗೆ ಸಂದೇಶಕರನ್ನು ಕಳುಹಿಸಿದನು. ಅಬ್ಷಾಲೋಮನನ್ನು ರಾಜನ ಹತ್ತಿರಕ್ಕೆ ಕಳುಹಿಸಿ ಕೊಡುವಂತೆ ಈ ಸಂದೇಶಕರು ಯೋವಾಬನನ್ನು ಕೇಳಿದರು. ಆದರೆ ಯೋವಾಬನು ಅಬ್ಷಾಲೋಮನ ಬಳಿಗೆ ಬರಲಿಲ್ಲ. ಅಬ್ಷಾಲೋಮನು ಎರಡನೆಯ ಬಾರಿ ಸಂದೇಶವನ್ನು ಕಳುಹಿಸಿದನು. ಆದರೂ ಯೋವಾಬನು ಬರಲಿಲ್ಲ.
ಆಗ ಅಬ್ಷಾಲೋಮನು ತನ್ನ ಸೇವಕರಿಗೆ, “ನೋಡಿರಿ, ನನ್ನ ಹೊಲದ ಪಕ್ಕದಲ್ಲಿ ಯೋವಾಬನ ಹೊಲವಿದೆ. ಅವನು ಆ ಹೊಲದಲ್ಲಿ ಜವೆಗೋಧಿಯನ್ನು ಬೆಳೆದಿದ್ದಾನೆ. ಹೋಗಿ ಆ ಜವೆಗೋಧಿಯನ್ನು ಸುಟ್ಟುಬಿಡಿರಿ” ಎಂದು ಹೇಳಿದನು. ಅಬ್ಷಾಲೋಮನ ಸೇವಕರು ಹೋಗಿ ಯೋವಾಬನ ಹೊಲದಲ್ಲಿ ಬೆಂಕಿಯನ್ನು ಹಚ್ಚಿದರು.
ಅಬ್ಷಾಲೋಮನು ಯೋವಾಬನಿಗೆ, “ನಾನು ನಿನಗೆ ಸಂದೇಶವನ್ನು ಕಳುಹಿಸಿ ಇಲ್ಲಿಗೆ ಬರಲು ಹೇಳಿ ಕಳುಹಿಸಿದ್ದೆನು. ರಾಜನ ಬಳಿಗೆ ನಿನ್ನನ್ನು ಕಳುಹಿಸಲು ನಾನು ಅಪೇಕ್ಷಿಸಿದೆನು. ಗೆಷೂರಿನಿಂದ ನನ್ನನ್ನು ಮನೆಗೆ ಕರೆಸಲು ಅವನು ಇಚ್ಛಿಸಿದ್ದು ಏಕೆ ಎಂಬುದನ್ನು ನೀನು ಕೇಳಬೇಕೆಂದು ನಾನು ಅಪೇಕ್ಷಿಸಿದೆನು. ನಾನು ಅವನನ್ನು ನೋಡಲಾಗದಿದ್ದರೆ ಗೆಷೂರಿನಲ್ಲಿ ವಾಸಿಸುವುದೇ ನನಗೆ ಚೆನ್ನಾಗಿರುತ್ತಿತ್ತು. ಈಗ ರಾಜನನ್ನು ನೋಡಲು ನನಗೆ ಅವಕಾಶವನ್ನು ಕೊಡು. ನಾನು ಪಾಪವನ್ನು ಮಾಡಿದ್ದರೆ ಅವನು ನನ್ನನ್ನು ಕೊಂದುಬಿಡಲಿ!” ಎಂದನು.
ಯೋವಾಬನು ರಾಜನ ಬಳಿಗೆ ಅಬ್ಷಾಲೋಮನು ಹೇಳಿದ್ದನ್ನೆಲ್ಲ ತಿಳಿಸಿದನು. ರಾಜನು ಅಬ್ಷಾಲೋಮನನ್ನು ಕರೆಸಿದನು. ಅಬ್ಷಾಲೋಮನು ರಾಜನ ಬಳಿಗೆ ಬಂದನು. ರಾಜನ ಎದುರಿನಲ್ಲಿ ಅಬ್ಷಾಲೋಮನು ಸಾಷ್ಟಾಂಗನಮಸ್ಕಾರ ಮಾಡಿದನು. ರಾಜನು ಅಬ್ಷಾಲೋಮನಿಗೆ ಮುದ್ದಿಟ್ಟನು.