English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

2 Samuel Chapters

2 Samuel 11 Verses

1 ವಸಂತಕಾಲದಲ್ಲಿ, ಎಲ್ಲಾ ರಾಜರೂ ಯುದ್ಧಕ್ಕೆ ಹೊರಡುವ ಸಮಯ ಬಂದಾಗ, ದಾವೀದನು ಯೋವಾಬನನ್ನೂ ಅವನ ಸೇವಕರನ್ನೂ ಮತ್ತು ಇಸ್ರೇಲರೆಲ್ಲರನ್ನೂ ಅಮ್ಮೋನಿಯರೊಂದಿಗೆ ಯುದ್ಧಮಾಡಲು ಕಳುಹಿಸಿದನು. ಯೋವಾಬನ ಸೈನ್ಯವು ರಬ್ಬಕ್ಕೆ ಮುತ್ತಿಗೆ ಹಾಕಿತು. ಆದರೆ ದಾವೀದನು ಜೆರುಸಲೇಮಿನಲ್ಲಿಯೇ ಉಳಿದುಕೊಂಡನು.
2 ಅವನು ಸಾಯಂಕಾಲ ತನ್ನ ಹಾಸಿಗೆಯಿಂದ ಮೇಲೆದ್ದು ಅರಮನೆಯ ಮಾಳಿಗೆಯ ಮೇಲಕ್ಕೆ ಹೋಗಿ ತಿರುಗಾಡುತ್ತಿದ್ದನು. ದಾವೀದನು ಮಾಳಿಗೆಯ ಮೇಲಿರುವಾಗ, ಒಬ್ಬ ಹೆಂಗಸು ಸ್ನಾನ ಮಾಡುತ್ತಿರುವುದನ್ನು ನೋಡಿದನು. ಅವಳು ಅತ್ಯಂತ ಸುಂದರಳಾಗಿದ್ದಳು.
3 ದಾವೀದನು ತನ್ನ ಸೇವಕರನ್ನು ಕರೆದು ಅವಳು ಯಾರೆಂದು ಕೇಳಿದನು. ಒಬ್ಬ ಸೇವಕನು, “ಅವಳು ಎಲೀಯಾಮನ ಮಗಳಾದ ಬತ್ಷೆಬೆಳು. ಹಿತ್ತಿಯನಾದ ಊರೀಯನ ಹೆಂಡತಿ” ಎಂದು ಉತ್ತರಿಸಿದನು.
4 ದಾವೀದನು ತನಗಾಗಿ ಬತ್ಷೆಬೆಳನ್ನು ಕರೆತರಲು ಸಂದೇಶಕರನ್ನು ಕಳುಹಿಸಿದನು. ಅವಳು ದಾವೀದನ ಬಳಿಗೆ ಬಂದಾಗ ಅವನು ಅವಳೊಡನೆ ಲೈಂಗಿಕ ಸಂಬಂಧವನ್ನು ಹೊಂದಿದನು. ತನ್ನ ಮಾಸಿಕ ಮುಟ್ಟು ನಿಂತಮೇಲೆ ತನ್ನನ್ನು ಶುದ್ಧಪಡಿಸಿಕೊಳ್ಳಲು ಆಕೆ ಸ್ನಾನಮಾಡಿಕೊಂಡ ಮೇಲೆ ಇದು ಸಂಭವಿಸಿತು. [*ತನ್ನ … ಸಂಭವಿಸಿತು ಅಕ್ಷರಶಃ, “ತನ್ನ ಅಶುಚಿತ್ವದಿಂದ ಆಕೆ ತನ್ನನ್ನು ಶುದ್ಧಪಡಿಸಿಕೊಂಡಳು.”]
5 ಬಳಿಕ ಬತ್ಷೆಬೆ ಗರ್ಭಿಣಿಯಾದಳು. ಅವಳು ದಾವೀದನಿಗೆ, “ನಾನು ಗರ್ಭಿಣಿಯಾಗಿದ್ದೇನೆ” ಎಂದು ಹೇಳಿ ಕಳುಹಿಸಿದಳು.
6 ದಾವೀದನು ಯೋವಾಬನಿಗೆ, “ಹಿತ್ತಿಯನಾದ ಊರೀಯನನ್ನು ನನ್ನ ಬಳಿಗೆ ಕಳುಹಿಸು” ಎಂಬ ಸಂದೇಶವನ್ನು ಕಳುಹಿಸಿದನು. ಯೋವಾಬನು ಊರೀಯನನ್ನು ದಾವೀದನ ಬಳಿಗೆ ಕಳುಹಿಸಿದನು.
7 ಊರೀಯನು ದಾವೀದನ ಬಳಿಗೆ ಬಂದನು. ದಾವೀದನು ಊರೀಯನ ಜೊತೆಯಲ್ಲಿ ಮಾತನಾಡಿ, ಯೋವಾಬನು ಹೇಗಿದ್ದಾನೆ? ಸೈನಿಕರು ಹೇಗಿದ್ದಾರೆ? ಯುದ್ಧವು ಹೇಗೆ ನಡೆಯುತ್ತಿದೆ? ಎಂದು ಕೇಳಿದನು.
8 ನಂತರ ದಾವೀದನು ಊರೀಯನಿಗೆ, “ಮನೆಗೆ ಹೋಗಿ ವಿಶ್ರಾಂತಿಯನ್ನು ಪಡೆ” ಎಂದನು. ಊರೀಯನು ರಾಜನ ಮನೆಯನ್ನು ಬಿಟ್ಟುಹೋದನು. ಊರೀಯನಿಗೆ ರಾಜನು ಕೊಡುಗೆಗಳನ್ನು ಸಹ ಕಳುಹಿಸಿದನು.
9 ಆದರೆ ಊರೀಯನು ಮನೆಗೆ ಹೋಗದೆ ಅರಮನೆಯ ಹೊರಬಾಗಿಲಿನಲ್ಲಿ ರಾಜನ ಸೇವಕರೊಂದಿಗೆ ಮಲಗಿದನು.
10 ಸೇವಕರು ದಾವೀದನಿಗೆ, “ಊರಿಯನು ಮನೆಗೆ ಹೋಗಲೇ ಇಲ್ಲ” ಎಂದು ಹೇಳಿದರು. ಆಗ ದಾವೀದನು, “ನೀನು ದೀರ್ಘ ಪ್ರಯಾಣದಿಂದ ಬಂದಿರುವೆ. ನೀನು ಏಕೆ ಮನೆಗೆ ಹೋಗಲಿಲ್ಲ?” ಎಂದು ಊರೀಯನನ್ನು ಕೇಳಿದನು.
11 ಊರೀಯನು ದಾವೀದನಿಗೆ, “ಪವಿತ್ರ ಪೆಟ್ಟಿಗೆಯೂ ಇಸ್ರೇಲಿನ ಮತ್ತು ಯೆಹೂದದ ಸೈನಿಕರೂ ಗುಡಾರಗಳಲ್ಲಿ ನೆಲೆಸಿದ್ದಾರೆ. ನನ್ನ ಒಡೆಯನಾದ ಯೋವಾಬನು ಮತ್ತು ನನ್ನ ರಾಜನ ಸೇವಕರು ಹೊಲದಲ್ಲಿ ಪಾಳೆಯ ಮಾಡಿಕೊಂಡಿದ್ದಾರೆ. ಆದ್ದರಿಂದ ಅನ್ನಪಾನಗಳನ್ನು ತೆಗೆದುಕೊಳ್ಳುವುದಕ್ಕೂ ಪತ್ನಿಯ ಜೊತೆಯಲ್ಲಿ ಮಲಗುವುದಕ್ಕೂ ನಾನು ಮನೆಗೆ ಹೋಗುವುದು ಸರಿಯಲ್ಲ. ನಿನ್ನಾಣೆ, ನಿನ್ನ ಜೀವದಾಣೆ, ನಾನು ಇಂಥದನ್ನು ಮಾಡುವುದೇ ಇಲ್ಲ.” ಎಂದು ಹೇಳಿದನು.
12 ದಾವೀದನು ಊರೀಯನಿಗೆ, “ಈ ದಿನ ಇಲ್ಲಿಯೇ ಇರು. ನಾಳೆ ನಿನ್ನನ್ನು ಯುದ್ಧಕ್ಕೆ ಕಳುಹಿಸುತ್ತೇನೆ” ಎಂದು ಹೇಳಿದನು. ಊರೀಯನು ಅಂದು ಜೆರುಸಲೇಮಿನಲ್ಲಿಯೇ ಉಳಿದುಕೊಂಡನು. ಅಂದರೆ ಮಾರನೆಯ ದಿನದ ಬೆಳಗಿನವರೆಗೆ ಅಲ್ಲೇ ಇದ್ದನು.
13 ಆಗ ದಾವೀದನು ತನ್ನನ್ನು ಬಂದು ಕಾಣುವಂತೆ ಊರೀಯನಿಗೆ ಹೇಳಿ ಕಳುಹಿಸಿದನು; ಊರೀಯನು ದಾವೀದನೊಂದಿಗೆ ಕುಡಿದು ಊಟ ಮಾಡಿದನು. ದಾವೀದನು ಊರೀಯನನ್ನು ಮತ್ತನನ್ನಾಗಿ ಮಾಡಿದನು. ಆದರೂ ಊರೀಯನು ಮನೆಗೆ ಹೋಗಲಿಲ್ಲ. ಅಂದು ಸಂಜೆ ರಾಜನ ಮನೆಯ ಹೊರಬಾಗಿಲಿನಲ್ಲಿ ಸೇವಕರೊಂದಿಗೆ ಮಲಗಲು ಹೋದನು.
14 ಮಾರನೆಯ ದಿನ ಬೆಳಿಗ್ಗೆ ದಾವೀದನು ಯೋವಾಬನಿಗೆ ಒಂದು ಪತ್ರವನ್ನು ಬರೆದನು. ದಾವೀದನು ಆ ಪತ್ರವನ್ನು ಊರೀಯನ ಕೈಯಿಂದ ಕಳುಹಿಸಿಕೊಟ್ಟನು.
15 ದಾವೀದನು ಆ ಪತ್ರದಲ್ಲಿ, “ಯುದ್ಧವು ಹೆಚ್ಚು ಭೀಕರವಾಗಿ ನಡೆಯುವ ಕಡೆ ಊರೀಯನನ್ನು ಮುಂದಿನ ಸಾಲಿನಲ್ಲಿ ನಿಲ್ಲಿಸು. ಅವನನ್ನು ಒಬ್ಬಂಟಿಗನನ್ನಾಗಿ ಬಿಟ್ಟುಬಿಡಿ. ಅವನು ಯುದ್ಧದಲ್ಲಿ ಕೊಲ್ಲಲ್ಪಡಲಿ” ಎಂದು ಬರೆದಿದ್ದನು.
16 ಅಮ್ಮೋನಿಯರಲ್ಲಿ ಅತ್ಯಂತ ಧೈರ್ಯಶಾಲಿಗಳು ಆ ನಗರದಲ್ಲಿ ಎಲ್ಲಿರುವರೆಂಬುದನ್ನು ಯೋವಾಬನು ಗುರುತಿಸಿದನು. ಆ ಸ್ಥಳಕ್ಕೆ ಕಳುಹಿಸಲು ಊರೀಯನನ್ನು ಆರಿಸಿಕೊಂಡನು.
17 ಯೋವಾಬನ ವಿರುದ್ಧ ಹೋರಾಡಲು ಆ ನಗರದ [†ಆ ನಗರದ ರಬ್ಬ ಎಂಬ ಅಮ್ಮೋನಿಯರ ನಗರ.] ಜನರು ಹೊರಗೆ ಬಂದು ದಾವೀದನ ಕೆಲವು ಜನರನ್ನು ಕೊಂದರು. ಹಿತ್ತಿಯನಾದ ಊರೀಯನೂ ಅವರಲ್ಲೊಬ್ಬನಾಗಿದ್ದನು.
18 ಅನಂತರ ಯೋವಾಬನು ತನ್ನ ಸಂದೇಶಕರಲ್ಲಿ ಒಬ್ಬನನ್ನು ಕರೆದು, “ಯುದ್ಧದಲ್ಲಿ ಸಂಭವಿಸಿದ ಎಲ್ಲಾ ವಿವರಗಳನ್ನು ದಾವೀದನಿಗೆ ತಿಳಿಸು.
19 ನೀನು ಹೇಳಿ ಮುಗಿಸಿದ ಮೇಲೆ
20 ರಾಜನು ತಳಮಳಗೊಂಡು, ‘ಯೋವಾಬನ ಸೈನ್ಯವು ಯುದ್ಧಮಾಡುವುದಕ್ಕಾಗಿ ನಗರದ ಹತ್ತಿರಕ್ಕೆ ಏಕೆ ಹೋಯಿತು? ನಗರದ ಗೋಡೆಗಳ ಮೇಲಿರುವ ಜನರು, ಕೆಳಗಿರುವ ಜನರ ಮೇಲೆ ಬಾಣಗಳನ್ನು ಪ್ರಯೋಗಿಸಬಲ್ಲರೆಂಬುದು ಅವನಿಗೆ ಖಂಡಿತವಾಗಿಯೂ ತಿಳಿದಿದೆ.
21 ಯೆರುಬ್ಬೆಷೆತನ ಮಗನಾದ ಅಬೀಮೆಲೆಕನನ್ನು ಯಾರು ಕೊಂದರೆಂಬುದು ನಿಮಗೆ ಗೊತ್ತಿಲ್ಲವೇ? ಅಬೀಮೆಲೆಕನ ಮೇಲೆ ಬೀಸುವ ಕಲ್ಲನ್ನು ನಗರದ ಗೋಡೆಯ ಮೇಲಿನಿಂದ ಎಸೆದವಳು ತೇಬೇಚಿನ ಒಬ್ಬ ಹೆಂಗಸಲ್ಲವೇ? ನೀವು ಗೋಡೆಯ ಹತ್ತಿರಕ್ಕೆ ಏಕೆ ಹೋದಿರಿ?’ ಎಂದು ಹೇಳಬಹುದು. ಆಗ ನೀನು, ‘ಹಿತ್ತಿಯನಾದ ನಿನ್ನ ಸೇವಕ ಊರೀಯನು ಸಹ ಸತ್ತುಹೋದನು’ ಎಂದು ಉತ್ತರಿಸಬೇಕು” ಎಂದು ಹೇಳಿ ಕಳುಹಿಸಿದನು.
22 ಯೋವಾಬನು ತಿಳಿಸಲು ಹೇಳಿದ್ದನ್ನೆಲ್ಲವನ್ನೂ ಸಂದೇಶಕನು ದಾವೀದನಿಗೆ ತಿಳಿಸಿದನು.
23 ಸಂದೇಶಕನು ದಾವೀದನಿಗೆ, “ಅಮ್ಮೋನಿಯರು ಮೈದಾನದಲ್ಲಿ ನಮ್ಮ ಮೇಲೆ ಆಕ್ರಮಣ ಮಾಡಿದರು. ಆದರೆ ನಾವು ಅವರೊಡನೆ ಹೋರಾಡಿ ನಗರದ ಬಾಗಿಲಿನವರೆಗೂ ಅಟ್ಟಿಸಿಕೊಂಡು ಹೋದೆವು.
24 ನಗರದ ಗೋಡೆಯ ಮೇಲಿದ್ದ ಜನರು ನಿಮ್ಮ ಸೈನಿಕರ ಮೇಲೆ ಬಾಣಗಳನ್ನು ಎಸೆದರು. ನಿಮ್ಮ ಸೈನಿಕರಲ್ಲಿ ಕೆಲವರನ್ನು ಕೊಂದರು. ಹಿತ್ತಿಯನಾದ ನಿಮ್ಮ ಸೈನಿಕ ಊರೀಯನೂ ಸಹ ಸತ್ತುಹೋದನು” ಎಂದು ಹೇಳಿದನು.
25 ದಾವೀದನು ಸಂದೇಶಕನಿಗೆ, “ನೀನು ಹೋಗಿ ಯೋವಾಬನಿಗೆ: ‘ಇದರಿಂದ ನೀನು ತಳಮಳಗೊಳ್ಳಬೇಡ. ಒಂದೇ ಖಡ್ಗವು ಈ ಹೊತ್ತು ಒಬ್ಬನನ್ನು ಕೊಂದರೆ, ಇನ್ನೊಂದು ದಿನ ಇನ್ನೊಬ್ಬನನ್ನು ಕೊಲ್ಲುವುದು. ರಬ್ಬ ನಗರದ ಮೇಲೆ ಧೈರ್ಯವಾಗಿ ಆಕ್ರಮಣಮಾಡು. ಆಗ ನೀನು ನಗರವನ್ನು ಗೆಲ್ಲುವೆ!’ ಈ ಮಾತುಗಳಿಂದ ಯೋವಾಬನನ್ನು ಹುರಿದುಂಬಿಸು” ಎಂಬುದಾಗಿ ಹೇಳಿದನು.
26 ತನ್ನ ಗಂಡನಾದ ಊರೀಯನು ಸತ್ತನೆಂಬ ಸುದ್ದಿಯು ಬತ್ಷೆಬೆಳಿಗೆ ತಿಳಿಯಿತು. ಆಗ ಅವಳು ತನ್ನ ಗಂಡನಿಗಾಗಿ ಗೋಳಾಡಿದಳು.
27 ಅವಳು ತನ್ನ ಶೋಕಕಾಲವನ್ನು ಮುಗಿಸಿದ ನಂತರ, ಅವಳನ್ನು ತನ್ನ ಮನೆಗೆ ಕರೆತರಲು ದಾವೀದನು ಸೇವಕರನ್ನು ಕಳುಹಿಸಿದನು. ಅವಳು ದಾವೀದನ ಪತ್ನಿಯಾದಳು. ಅವಳು ದಾವೀದನಿಂದ ಒಂದು ಗಂಡುಮಗುವಿಗೆ ಜನ್ಮನೀಡಿದಳು. ದಾವೀದನು ಮಾಡಿದ ಈ ಕೆಟ್ಟಕಾರ್ಯವು ಯೆಹೋವನಿಗೆ ದುಃಖವನ್ನುಂಟುಮಾಡಿತು.
×

Alert

×