ಆದ್ದರಿಂದ ಬಾಬಿಲೋನ್ ರಾಜನಾದ ನೆಬೂಕದ್ನೆಚ್ಚರನು ಜೆರುಸಲೇಮಿನ ವಿರುದ್ಧ ಯುದ್ಧಮಾಡಲು ತನ್ನ ಎಲ್ಲಾ ಸೇನೆಯೊಡನೆ ಬಂದನು. ನೆಬೂಕದ್ನೆಚ್ಚರನು ಜೆರುಸಲೇಮಿನ ಸುತ್ತಲೂ ಪಾಳೆಯ ಮಾಡಿಕೊಂಡು ಮಣ್ಣಿನ ದಿಬ್ಬವನ್ನು ನಿರ್ಮಿಸಿದನು. ಅವನು ನಗರದೊಳಕ್ಕೆ ಹೋಗುವ ಮತ್ತು ನಗರದಿಂದ ಬರುವ ಜನರನ್ನು ತಡೆಯಲು ಹೀಗೆ ಮಾಡಿದನು. ಇದು ನೆಬೂಕದ್ನೆಚ್ಚರನ ಆಳ್ವಿಕೆಯ ಒಂಭತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹತ್ತನೆಯ ದಿನದಂದು ಸಂಭವಿಸಿತು.
ಆಗ ನೆಬೂಕದ್ನೆಚ್ಚರನ ಸೇನೆಯು ನಗರದ ಗೋಡೆಯಲ್ಲಿ ಒಂದು ರಂಧ್ರವನ್ನು ಕೊರೆದರು. ಅಂದಿನ ರಾತ್ರಿ ರಾಜನಾದ ಚಿದ್ಕೀಯ ಮತ್ತು ಅವನ ಸೈನಿಕರೆಲ್ಲರೂ ಓಡಿಹೋದರು. ಅವರು ರಾಜನ ತೋಟದ ಎರಡು ಗೋಡೆಗಳ ಮಧ್ಯಭಾಗದ ರಹಸ್ಯ ಬಾಗಿಲಿನ ಮೂಲಕ ಓಡಿಹೋದರು. ಬಾಬಿಲೋನ್ ಸೇನೆಯು ನಗರವನ್ನು ಸುತ್ತುವರಿದಿತ್ತು. ಆದರೆ ಚಿದ್ಕೀಯ ಮತ್ತು ಅವನ ಸೇನೆಯು ಮರುಭೂಮಿಯ ರಸ್ತೆಯಲ್ಲಿ ತಪ್ಪಿಸಿಕೊಂಡರು.
ಅವರು ಚಿದ್ಕೀಯನ ಮಕ್ಕಳನ್ನು ಅವನ ಎದುರಿನಲ್ಲಿಯೇ ಕೊಂದುಹಾಕಿದರು. ನಂತರ ಅವರು ಚಿದ್ಕೀಯನ ಕಣ್ಣುಗಳನ್ನು ಕಿತ್ತುಹಾಕಿದರು. ಅವರು ಅವನನ್ನು ಸರಪಣಿಗಳಿಂದ ಬಂಧಿಸಿ, ಬಾಬಿಲೋನಿಗೆ ಕೊಂಡೊಯ್ದರು.
ಬಾಬಿಲೋನ್ ರಾಜನಾಗಿದ್ದ ನೆಬೂಕದ್ನೆಚ್ಚರನು ತನ್ನ ಆಳ್ವಿಕೆಯ ಹತ್ತೊಂಭತ್ತನೆಯ ವರ್ಷದ ಐದನೆಯ ತಿಂಗಳ ಏಳನೆಯ ದಿನದಂದು ಜೆರುಸಲೇಮಿಗೆ ಬಂದನು. ನೆಬೂಜರದಾನ ಎಂಬವನು ನೆಬೂಕದ್ನೆಚ್ಚರನ ರಕ್ಷಕ ದಳದ ಅಧಿಪತಿಯಾಗಿದ್ದನು.
ಆ ನಗರದಲ್ಲಿ ಉಳಿದಿದ್ದ ಜನರನ್ನೆಲ್ಲಾ ನೆಬೂಜರದಾನನು ಸೆರೆಹಿಡಿದನು. ರಾಜನಾದ ನೆಬೂಕದ್ನೆಚ್ಚರನಿಗೆ ವಿಧೇಯರಾಗಿರಲು ಕೆಲವು ಜನರು ಒಪ್ಪಿದರು. ಆದರೆ ನೆಬೂಜರದಾನನು ಆ ಜನರನ್ನೆಲ್ಲಾ ಸೆರೆಹಿಡಿದನು. ಅವನು ನಗರದಲ್ಲಿದ್ದ ಪ್ರತಿಯೊಬ್ಬರನ್ನೂ ಕರೆದೊಯ್ದನು.
ಸಾಮಾನ್ಯ ಜನರಲ್ಲಿ ತೀರ ಬಡವರಾದ ಜನರನ್ನು ಮಾತ್ರ ನೆಬೂಜರದಾನನು ಅಲ್ಲಿಯೇ ನೆಲೆಸಲು ಬಿಟ್ಟನು. ಆ ಬಡಜನರು ಅಲ್ಲಿಯೇ ನೆಲೆಸಿ, ಬೇಸಾಯಮಾಡಿ ದ್ರಾಕ್ಷಿಯನ್ನು ಬೆಳೆಯಲು ಅವರನ್ನು ಬಿಟ್ಟುಬಿಟ್ಟನು.
ಬಾಬಿಲೋನ್ ಸೈನಿಕರು ದೇವಾಲಯದಲ್ಲಿದ್ದ ತಾಮ್ರದ ಸ್ತಂಭಗಳನ್ನು ಚೂರುಚೂರು ಮಾಡಿದರು. ಅವರು ಯೆಹೋವನ ಆಲಯದಲ್ಲಿದ್ದ ತಾಮ್ರದ ದೊಡ್ಡ ತೊಟ್ಟಿಯನ್ನು ಮತ್ತು ತಾಮ್ರದ ಬಂಡಿಯನ್ನು ಚೂರುಚೂರಾಗಿ ಒಡೆದುಹಾಕಿದರು. ನಂತರ ಬಾಬಿಲೋನ್ ಸೈನಿಕರು ತಾಮ್ರದ ಚೂರುಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದರು.
ನೆಬೂಜರದಾನನು ಅಗ್ಗಿಷ್ಟಿಕೆಗಳನ್ನು ಮತ್ತು ಬಟ್ಟಲುಗಳನ್ನು ತೆಗೆದುಕೊಂಡು ಹೋದನು. ಅವನು ಬಂಗಾರದ ವಸ್ತುಗಳನ್ನು ಬಂಗಾರಕ್ಕಾಗಿಯೂ ಬೆಳ್ಳಿಯ ವಸ್ತುಗಳನ್ನು ಬೆಳ್ಳಿಗಾಗಿಯೂ ತೆಗೆದುಕೊಂಡು ಹೋದನು.
ಅವನು ತೆಗೆದುಕೊಂಡು ಹೋದ ವಸ್ತುಗಳ ಪಟ್ಟಿಯು ಹೀಗಿದೆ: ಎರಡು ತಾಮ್ರ ಕಂಬಗಳು, ಒಂದು ತೊಟ್ಟಿ ಮತ್ತು ದೇವಾಲಯಕ್ಕೆ ಸೊಲೊಮೋನನು ನಿರ್ಮಿಸಿದ್ದ ಬಂಡಿಗಳು. ಈ ವಸ್ತುಗಳ ತಾಮ್ರವು ತೂಕ ಮಾಡಲಾರದಷ್ಟು ಅಧಿಕವಾಗಿತ್ತು.
ಪ್ರತಿಯೊಂದು ಕಂಬವೂ ಸುಮಾರು ಇಪ್ಪತ್ತೇಳು ಅಡಿ ಉದ್ದವಾಗಿತ್ತು. ಕಂಬಗಳ ಮೇಲಿದ್ದ ಬೋದಿಗೆಗಳನ್ನು ತಾಮ್ರದಿಂದ ನಿರ್ಮಿಸಿದ್ದರು. ಪ್ರತಿಯೊಂದು ಬೋದಿಗೆಯೂ ನಾಲ್ಕುವರೆ ಅಡಿ ಉದ್ದವಾಗಿತ್ತು. ಪ್ರತಿಯೊಂದು ಬೋದಿಗೆಯ ಮೇಲೆ ಜಾಲರಿಯ ಆಕಾರವಿತ್ತು ಮತ್ತು ದಾಳಿಂಬೆ ಹಣ್ಣುಗಳ ಆಕಾರಗಳಿದ್ದವು. ಇವೆಲ್ಲವುಗಳನ್ನು ತಾಮ್ರದಿಂದಲೇ ಮಾಡಿದ್ದರು. ಎರಡು ಕಂಬಗಳೂ ಒಂದೇ ರೀತಿಯ ಆಕಾರದಲ್ಲಿದ್ದವು.
ನೆಬೂಜರದಾನನು ಸೇನೆಯ ಸೇನಾಧಿಕಾರಿಯೊಬ್ಬನನ್ನು ಹಿಡಿದುಕೊಂಡು ಹೋದನು. ನೆಬೂಜರದಾನನು ನಗರದಲ್ಲಿ ಸಿಕ್ಕಿದ ರಾಜನ ಐದು ಮಂದಿ ಸಲಹೆಗಾರರನ್ನು ಹಿಡಿದೊಯ್ದನು. ಅವನು ಸೇನೆಯ ಅಧಿಕಾರಿಯ ಕಾರ್ಯದರ್ಶಿಯನ್ನು ಹಿಡಿದೊಯ್ದನು. ಸೇನಾಧಿಕಾರಿಯ ಕಾರ್ಯದರ್ಶಿಯು ಸಾಮಾನ್ಯ ಜನರನ್ನು ಒಟ್ಟುಗೂಡಿಸಿ, ಅವರನ್ನು ಸೈನಿಕರನ್ನಾಗಿ ಆರಿಸುತ್ತಿದ್ದನು. ನೆಬೂಜರದಾನನು ನಗರದಲ್ಲಿ ಸಿಕ್ಕಿದ ಇತರ ಅರವತ್ತು ಮಂದಿಯನ್ನು ಹಿಡಿದೊಯ್ದನು. ಈ ಜನರು ಸಾಮಾನ್ಯ ಜನರಾಗಿದ್ದರು.
ಬಾಬಿಲೋನ್ ರಾಜನಾದ ನೆಬೂಕದ್ನೆಚ್ಚರನು ಯೆಹೂದ ದೇಶದಲ್ಲಿ ಕೆಲವು ಜನರನ್ನು ಬಿಟ್ಟನು. ಅವನು ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನನ್ನು ಯೆಹೂದದಲ್ಲಿ ಜನರಿಗೆ ರಾಜ್ಯಪಾಲನನ್ನಾಗಿ ಮಾಡಿದನು.
ಬಾಬಿಲೋನ್ ರಾಜನು ಗೆದಲ್ಯನನ್ನು ರಾಜ್ಯಪಾಲನನ್ನಾಗಿ ನೇಮಿಸಿರುವುದನ್ನು ಸೇನಾಧಿಪತಿಗಳು ಮತ್ತು ಅವನ ಜನರು ಕೇಳಿ ಮಿಚ್ಛದಲ್ಲಿದ್ದ ಗೆದಲ್ಯನ ಬಳಿಗೆ ಬಂದರು. ಈ ಸೇನಾಧಿಪತಿಗಳು ಯಾರೆಂದರೆ: ನೆತನ್ಯನ ಮಗನಾದ ಇಷ್ಮಾಯೇಲ, ಕಾರೇಹನ ಮಗನಾದ ಯೋಹಾನಾನ್, ನೆಟೋಫದವನೂ ತನ್ಹುಮೆತನ ಮಗನೂ ಆದ ಸೆರಾಯ, ಮಾಕಾತ್ಯರಲ್ಲಿ ಒಬ್ಬನ ಮಗನಾದ ಯಾಜನ್ಯ.
ನಂತರ ಗೆದಲ್ಯನು ಈ ಸೇನಾಧಿಪತಿಗಳಿಗೆ ಮತ್ತು ಅವರ ಜನರಿಗೆ, “ಬಾಬಿಲೋನ್ ಅಧಿಕಾರಿಗಳಿಗೆ ನೀವು ಹೆದರಬೇಡಿ. ನೀವು ದೇಶದಲ್ಲಿ ವಾಸಿಸುತ್ತ ಬಾಬಿಲೋನ್ ರಾಜನ ಸೇವೆಯನ್ನು ಮಾಡಿ. ಆಗ ನಿಮಗೇನೂ ತೊಂದರೆಯಾಗುವುದಿಲ್ಲ” ಎಂದು ಪ್ರಮಾಣ ಮಾಡಿದನು.
ಆದರೆ ಏಳನೆಯ ತಿಂಗಳಲ್ಲಿ, ರಾಜನ ಕುಲದವನೂ ಎಲೀಷಾಮನ ಮೊಮ್ಮಗನೂ ನೆತನ್ಯನ ಮಗನೂ ಆದ ಇಷ್ಮಾಯೇಲನು ಹತ್ತು ಜನರೊಂದಿಗೆ ಬಂದು ಗೆದಲ್ಯನನ್ನು ಕೊಂದುಹಾಕಿದನು. ಇಷ್ಮಾಯೇಲ ಮತ್ತು ಅವನ ಜನರು ಮಿಚ್ಛದಲ್ಲಿ ಗೆದಲ್ಯನ ಜೊತೆಗಿದ್ದ ಯೆಹೂದ್ಯರನ್ನು ಮತ್ತು ಬಾಬಿಲೋನಿನವರನ್ನು ಕೊಂದುಹಾಕಿದರು.
ಬಾಬಿಲೋನ್ ರಾಜನಾದ ಎವೀಲ್ಮೆರೋದಕನು, ಯೆಹೂದದ ರಾಜನಾದ ಯೆಹೋಯಾಖೀನನನ್ನು ಸೆರೆಯಿಂದ ಬಿಡುಗಡೆ ಮಾಡಿದನು. ಯೆಹೋಯಾಖೀನನನ್ನು ಸೆರೆಹಿಡಿದ ಮೂವತ್ತೇಳನೆಯ ವರ್ಷದ ನಂತರ ಇದು ಸಂಭವಿಸಿತು. ಎವೀಲ್ಮೆರೋದಕನ ಆಳ್ವಿಕೆಯ ಹನ್ನೆರಡನೆ ತಿಂಗಳಿನ ಇಪ್ಪತ್ತೇಳನೆಯ ದಿನದಂದು ಇದು ಸಂಭವಿಸಿತು.
ಎವೀಲ್ಮೆರೋದಕನು ಯೆಹೋಯಾಖೀನನ ಸೆರೆವಾಸದ ಬಟ್ಟೆಗಳನ್ನು ತೆಗೆಸಿ ಹೊಸ ಬಟ್ಟೆಗಳನ್ನು ತೊಡಿಸಿದನು. ಯೆಹೋಯಾಖೀನನು ಬದುಕಿರುವ ತನಕ ತನ್ನ ಪಂಕ್ತಿಯಲ್ಲಿ ಊಟಮಾಡಲು ಎವೀಲ್ಮೆರೋದಕನು ಅವಕಾಶ ಮಾಡಿಕೊಟ್ಟನು.