ಸಹಾಯ ಮಾಡಬೇಕೆಂಬ ಬಯಕೆಯು ನಿಮಗಿದೆಯೆಂದು ನನಗೆ ಗೊತ್ತಿದೆ. ಮಕೆದೋನಿಯದಲ್ಲಿ ಜನರಿಗೆ ನಿಮ್ಮ ಈ ವಿಷಯದಲ್ಲಿ ಹೆಮ್ಮೆಯಿಂದ ಹೇಳುತ್ತಲೇ ಇದ್ದೇನೆ. ಅಖಾಯದಲ್ಲಿರುವ ನೀವು ಕಳೆದ ವರ್ಷದಿಂದಲೂ ಕೊಡಲು ಸಿದ್ಧರಾಗಿದ್ದೀರೆಂದು ಅವರಿಗೆ ಹೇಳಿದೆನು. ನಿಮ್ಮಲ್ಲಿರುವ ಕೊಡಬೇಕೆಂಬ ಬಯಕೆಯು ಇಲ್ಲಿರುವ ಅನೇಕ ಜನರಲ್ಲಿ ಕೊಡಬೇಕೆಂಬ ಬಯಕೆಯನ್ನು ಉಂಟುಮಾಡಿದೆ.
ನಾನು ಸಹೋದರರನ್ನು ನಿಮ್ಮಲ್ಲಿಗೆ ಕಳುಹಿಸಿಕೊಡುತ್ತಿದ್ದೇನೆ. ನಿಮ್ಮ ಬಗ್ಗೆ ಈ ವಿಷಯದಲ್ಲಿ ಹೊಗಳಿದ್ದು ವ್ಯರ್ಥವಾಗುವುದು ನನಗೆ ಇಷ್ಟವಿಲ್ಲ. ನಾನು ಹೇಳಿಕೊಂಡಂತೆ ನೀವು ಸಿದ್ಧರಾಗಿರಬೇಕೆಂದು ಆಶಿಸುತ್ತೇನೆ.
ಒಂದುವೇಳೆ ಮಕೆದೋನಿಯದ ಜನರಲ್ಲಿ ಯಾರಾದರೂ ನನ್ನೊಂದಿಗೆ ಬಂದಾಗ ನೀವು ಸಿದ್ಧರಾಗಿಲ್ಲದಿದ್ದರೆ ನಾವು ನಾಚಿಕೆಗೆ ಗುರಿಯಾಗುತ್ತೇವೆ. ನಿಮ್ಮ ವಿಷಯದಲ್ಲಿ ನಾವು ಬಹಳ ಭರವಸೆ ಇಟ್ಟಿದ್ದರಿಂದ ನಾವು ನಾಚಿಕೆಗೆ ಗುರಿಯಾಗುವೆವು (ಮತ್ತು ನೀವೂ ಸಹ ನಾಚಿಕೆಗೆ ಗುರಿಯಾಗುವಿರಿ.)
ಆದ್ದರಿಂದ ನಾನು ಬರುವುದಕ್ಕಿಂತ ಮೊದಲು ನಿಮ್ಮ ಬಳಿಗೆ ಹೋಗುವಂತೆ ಈ ಸಹೋದರರನ್ನು ಕೇಳಿಕೊಳ್ಳಬೇಕೆಂದು ನಾನು ಆಲೋಚಿಸಿದೆನು. ನೀವು ವಾಗ್ದಾನ ಮಾಡಿದ ಸಹಾಯಧನವನ್ನು ಇವರು ಸಂಗ್ರಹಿಸುವರು. ಆಗ, ನಾವು ಬರುವಷ್ಟರಲ್ಲಿ ನಿಮ್ಮ ಸಹಾಯಧನವು ಸಿದ್ಧವಾಗಿರುವುದು. ಈ ಸಹಾಯಧನವು ನಿಮ್ಮ ಹೃತ್ಪೂರ್ವಕವಾದ ದಾನವೇ ಹೊರತು ಸಂಕಟದಿಂದ ಕೊಟ್ಟ ದಾನವಲ್ಲ.
ಪ್ರತಿಯೊಬ್ಬ ವ್ಯಕ್ತಿಯು ತನ್ನ ಹೃದಯದಲ್ಲಿ ಎಷ್ಟನ್ನು ನಿರ್ಧರಿಸಿಕೊಂಡಿದ್ದಾನೋ ಅಷ್ಟನ್ನೇ ಕೊಡಬೇಕು. ಯಾವನೂ ದುಃಖದಿಂದ ಕೊಡಬಾರದು. ಅಲ್ಲದೆ ಯಾವನೂ ಒತ್ತಾಯದ ದೆಸೆಯಿಂದ ಕೊಡಬಾರದು. ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿಸುತ್ತಾನೆ.
ಮತ್ತು ನಿಮಗೆ ಅಗತ್ಯವಾದದ್ದಕ್ಕಿಂತಲೂ ಹೆಚ್ಚು ಆಶೀರ್ವಾದಗಳನ್ನು ದೇವರು ಕೊಡಬಲ್ಲನು. ಆಗ ನಿಮ್ಮಲ್ಲಿ ನಿಮಗೆ ಅಗತ್ಯವಾದ ಪ್ರತಿಯೊಂದೂ ಯಾವಾಗಲೂ ಇರುವುದು. ಪ್ರತಿಯೊಂದು ಒಳ್ಳೆಯ ಕಾರ್ಯಕ್ಕೆ ಕೊಡಲು ನಿಮ್ಮಲ್ಲಿ ಸಾಕಷ್ಟು ಇರುವುದು.
ಬಿತ್ತುವವನಿಗೆ ಬೀಜವನ್ನು ಕೊಡುವವನು ದೇವರೇ. ಆತನು ಆಹಾರಕ್ಕಾಗಿ ರೊಟ್ಟಿಯನ್ನು ಕೊಡುವನು. ಅಂತೆಯೇ, ದೇವರು ಆತ್ಮಿಕ ಬೀಜವನ್ನು ಕೊಡುವನು ಮತ್ತು ನಿಮ್ಮ ಬೀಜವನ್ನು ಬೆಳೆಯಮಾಡುವನು. ನಿಮ್ಮ ಒಳ್ಳೆಯ ಕ್ರಿಯೆಯಿಂದ ಆತನು ಮಹಾ ಸುಗ್ಗಿಯನ್ನು ಉಂಟುಮಾಡುವನು.
ಯಾವಾಗಲೂ ಉದಾರವಾಗಿ ಕೊಡಬೇಕೆಂದು ದೇವರು ನಿಮ್ಮನ್ನು ಪ್ರತಿಯೊಂದು ವಿಷಯದಲ್ಲಿಯೂ ಶ್ರೀಮಂತರನ್ನಾಗಿ ಮಾಡುವನು. ನಮ್ಮ ಮೂಲಕವಾಗಿ ನೀವು ಕೊಡುವ ಸಹಾಯಧನದ ನಿಮಿತ್ತ ಜನರು ದೇವರಿಗೆ ಕೃತಜ್ಞತಾಸ್ತುತಿ ಮಾಡುವರು.
ನೀವು ಮಾಡುವ ಈ ಸೇವಾಕಾರ್ಯವು ನಿಮ್ಮ ನಂಬಿಕೆಗೆ ಸಾಕ್ಷಿಯಾಗಿದೆ. ಇದರ ನಿಮಿತ್ತವಾಗಿ ಜನರು ದೇವರಿಗೆ ಕೃತಜ್ಞತಾಸ್ತುತಿ ಮಾಡುವರು. ನೀವು ಕ್ರಿಸ್ತನ ಸುವಾರ್ತೆಯನ್ನು ಅನುಸರಿಸುವುದರಿಂದ ಅವರು ದೇವರಿಗೆ ಕೃತಜ್ಞತಾಸ್ತುತಿ ಮಾಡುವರು. ನೀವು ಹೇಳುವ ಸುವಾರ್ತೆಯನ್ನು ನೀವು ನಂಬಿದ್ದೀರಿ. ತಮ್ಮೊಂದಿಗೆ ಮತ್ತು ಎಲ್ಲರೊಂದಿಗೆ ನೀವು ಉದಾರವಾಗಿ ಹಂಚಿಕೊಂಡಿದ್ದರಿಂದ ಜನರು ದೇವರಿಗೆ ಕೃತಜ್ಞತಾಸ್ತುತಿ ಮಾಡುವರು.