ನಾವು ನಮ್ಮ ವಿಷಯವಾಗಿ ಮತ್ತೆ ಹೊಗಳಿಕೊಳ್ಳಲು ಆರಂಭಿಸಿದ್ದೇವೆಯೇ? ಇತರ ಕೆಲವು ಜನರಿಗೆ ಬೇಕಾಗುವಂತೆ ನಿಮ್ಮ ಬಳಿಗೆ ಬರಲು ನನಗೆ ಯೋಗ್ಯತಾಪತ್ರಗಳನ್ನು ತೆಗೆದು ಕೊಳ್ಳಬೇಕಾಗಿದೆಯೋ? ಅಥವಾ ಬೇರೆಡೆಗೆ ಹೋಗುವಾಗ ನಿಮ್ಮಿಂದ ಯೋಗ್ಯತಾ ಪತ್ರಗಳನ್ನು ತೆಗೆದುಕೊಳ್ಳಬೇಕಾಗಿದೆಯೋ?
ಕ್ರಿಸ್ತನು ನಮ್ಮ ಮೂಲಕವಾಗಿ ಕಳುಹಿಸಿದ ಕ್ರಿಸ್ತನ ಪತ್ರ ನೀವಾಗಿದ್ದೀರಿ. ಆ ಪತ್ರವನ್ನು ಬರೆದಿರುವುದು ಶಾಯಿಯಿಂದಲ್ಲ, ಜೀವಸ್ವರೂಪನಾದ ದೇವರ ಆತ್ಮನಿಂದ. ಇದನ್ನು ಕಲ್ಲುಹಲಿಗೆಗಳ ಮೇಲೆ ಬರೆದಿಲ್ಲ. ಇದನ್ನು ಮಾನವ ಹೃದಯಗಳ ಮೇಲೆ ಬರೆಯಲಾಗಿದೆ.
ದೇವರು ತನ್ನ ಜನರೊಂದಿಗೆ ಮಾಡಿಕೊಂಡ ಹೊಸ ಒಡಂಬಡಿಕೆಗೆ ಸೇವಕರಾಗಿರುವ ಸಾಮರ್ಥ್ಯವನ್ನು ದೇವರೇ ನಮಗೆ ಕೊಟ್ಟನು. ಈ ಹೊಸ ಒಡಂಬಡಿಕೆಯು ಲಿಖಿತ ರೂಪವಾದ ಧರ್ಮಶಾಸ್ತ್ರವಲ್ಲ. ಇದು ಪವಿತ್ರಾತ್ಮನದು. ಲಿಖಿತ ರೂಪವಾದ ಧರ್ಮಶಾಸ್ತ್ರವು ಮರಣವನ್ನು ತರುತ್ತದೆ, ಆದರೆ ಪವಿತ್ರಾತ್ಮನು ಜೀವವನ್ನು ಕೊಡುತ್ತಾನೆ.
ಮರಣವನ್ನು ವಿಧಿಸುವ ಸೇವೆಯು (ಧರ್ಮಶಾಸ್ತ್ರ) ಕಲ್ಲಿನ ಹಲಗೆಗಳ ಮೇಲೆ ಅಕ್ಷರಗಳಲ್ಲಿ ಬರೆಯಲ್ಪಟ್ಟಿತ್ತು. ಅದು ದೇವರ ಮಹಿಮೆಯೊಂದಿಗೆ ಬಂದಿತು. ಮೋಶೆಯ ಮುಖವು ಪ್ರಕಾಶಮಾನವಾಗಿ ಹೊಳೆಯುತ್ತಿದ್ದುದರಿಂದ ಇಸ್ರೇಲರು ಅವನ ಮುಖವನ್ನು ನೋಡಲಾರದೆ ಹೋದರು. ಆ ಬಳಿಕ ಆ ಮಹಿಮೆಯು ಕುಂದಿಹೋಯಿತು.
ಇದರರ್ಥವೇನೆಂದರೆ: ಆ ಸೇವೆಯು (ಧರ್ಮಶಾಸ್ತ್ರ) ಜನರನ್ನು ಅಪರಾಧಿಗಳೆಂದು ತೀರ್ಪು ನೀಡಿತು, ಆದರೆ ಅದು ಮಹಿಮೆಯನ್ನು ಹೊಂದಿತ್ತು. ಹೀಗಿರಲಾಗಿ, ನೀತಿಗೆ ಸಾಧನವಾಗಿರುವ ಸೇವೆಯು ಇನ್ನೂ ಹೆಚ್ಚಿನ ಮಹಿಮೆಯನ್ನು ಉಂಟುಮಾಡುವುದು ಎಷ್ಟೋ ನಿಶ್ಚಯವಾಗಿದೆ.
ಆದರೆ ಅವರ ಬುದ್ಧಿಗೆ ಮಂಕು ಕವಿದಿದ್ದರಿಂದ ಅವರು ಅರ್ಥಮಾಡಿಕೊಳ್ಳಲಾಗಲಿಲ್ಲ. ಅವರು ಹಳೆ ಒಡಂಬಡಿಕೆಯನ್ನು ಓದುವಾಗ ಇಂದಿಗೂ ಅದೇ ಮುಸುಕು ಅರ್ಥವನ್ನು ಮರೆಮಾಡುತ್ತದೆ. ಆ ಮುಸುಕನ್ನು ತೆಗೆದು ಹಾಕಲಿಲ್ಲ. ಏಕೆಂದರೆ ಕ್ರಿಸ್ತನ ಮೂಲಕವಾಗಿ ಮಾತ್ರ ಅದು ತೆಗೆದುಹಾಕಲ್ಪಡುತ್ತದೆ.