ಸೇರಿಬಂದ ಇಸ್ರೇಲ್ ಜನರೆಲ್ಲಾ ಆಕಾಶದಿಂದ ಬೆಂಕಿ ಬೀಳುವದನ್ನೂ ದೇವಾಲಯದಲ್ಲಿ ಯೆಹೋವನ ಮಹಿಮೆ ತುಂಬಿದ್ದನ್ನೂ ನೋಡಿ ನೆಲದ ಮೇಲೆ ಬೋರಲಬಿದ್ದು “ಯೆಹೋವನು ಒಳ್ಳೆಯವನು, ಅವನ ಕರುಣೆಯು ನಿರಂತರಕ್ಕೂ ಇರುವಂಥದ್ದು” ಎಂದು ಹೇಳುತ್ತಾ ದೇವರನ್ನು ಸುತ್ತಿಸಿ ಕೊಂಡಾಡಿದರು.
ಸೊಲೊಮೋನ ಅರಸನು ಇಪ್ಪತ್ತೆರಡು ಸಾವಿರ ಹೋರಿಗಳನ್ನೂ ಒಂದು ಲಕ್ಷ ಇಪ್ಪತ್ತು ಸಾವಿರ ಕುರಿಗಳನ್ನೂ ಯಜ್ಞವಾಗಿ ಸಮರ್ಪಿಸಿದನು. ಅರಸನೂ ಎಲ್ಲಾ ಜನರೂ ದೇವಾಲಯವನ್ನು ಆರಾಧನೆಗಾಗಿ ಪ್ರತಿಷ್ಠಿಸಿದರು.
ಯಾಜಕರು ತಮ್ಮ ಕೆಲಸಗಳನ್ನು ಮಾಡಲು ತಮ್ಮ ಸ್ಥಳಗಳಲ್ಲಿ ತಯಾರಾಗಿ ನಿಂತಿದ್ದರು. ಲೇವಿಕುಲದ ಗಾಯಕರು ತಮ್ಮ ವಾದ್ಯಗಳೊಂದಿಗೆ ದೇವರನ್ನು ಸ್ತುತಿಸಲು ನಿಂತಿದ್ದರು. ಆ ವಾದ್ಯಗಳನ್ನು ಅರಸನಾದ ದಾವೀದನು ದೇವರನ್ನು ಸ್ತುತಿಸುವದಕ್ಕೋಸ್ಕರ ತಯಾರಿಸಿದ್ದನು. ಯಾಜಕರೂ ಲೇವಿಯರೂ, “ದೇವರಾದ ಯೆಹೋವನ ಕೃಪೆಯು ನಿರಂತರವಾದದ್ದು” ಎಂದು ಹೇಳುತ್ತಿದ್ದರು. ಯಾಜಕರು ಲೇವಿಯರಿಗೆ ಎದುರಾಗಿ ನಿಂತುಕೊಂಡು ತುತ್ತೂರಿಯನ್ನು ಊದಿದರು. ಇಸ್ರೇಲರೆಲ್ಲರೂ ನಿಂತುಕೊಂಡರು.
ಆಲಯದ ಮುಂದೆ ಇದ್ದ ಅಂಗಳವನ್ನು ಸೊಲೊಮೋನನು ಶುದ್ಧೀಕರಿಸಿದನು. ಆ ಸ್ಥಳದಲ್ಲಿ ಸೊಲೊಮೋನನು ಸರ್ವಾಂಗಹೋಮವನ್ನೂ ಧಾನ್ಯನೈವೇದ್ಯಗಳನ್ನೂ ಸಮಾಧಾನಯಜ್ಞದ ಕೊಬ್ಬನ್ನೂ ಸಮರ್ಪಿಸಿದ್ದನು. ಯಾಕೆಂದರೆ ಸೊಲೊಮೋನನು ಮಾಡಿಸಿದ ತಾಮ್ರದ ಯಜ್ಞವೇದಿಕೆಯ ಮೇಲೆ ಇಷ್ಟೆಲ್ಲಾ ಸರ್ವಾಂಗಹೋಮಗಳನ್ನೂ ಧಾನ್ಯನೈವೇದ್ಯಗಳನ್ನೂ ಸಮರ್ಪಿಸಲು ಆಗದೆಹೋಯಿತು.
ಸೊಲೊಮೋನನೂ ಎಲ್ಲಾ ಇಸ್ರೇಲರೂ ಏಳು ದಿನಗಳ ತನಕ ಪರ್ಣಶಾಲೆಗಳ ಹಬ್ಬವನ್ನು ಆಚರಿಸಿದರು. ಸೊಲೊಮೋನನೊಂದಿಗೆ ಬಹುದೊಡ್ಡ ಇಸ್ರೇಲರ ಸಮೂಹವು ನೆರೆದು ಬಂದಿತ್ತು. ಹಮಾತಿನಿಂದ ಹಿಡಿದು ಈಜಿಪ್ಟಿನ ನದಿಯ ತನಕ ವಾಸಿಸುವವರೆಲ್ಲರೂ ಜೆರುಸಲೇಮಿಗೆ ಬಂದಿದ್ದರು.
ಏಳು ದಿನ ಹಬ್ಬದ ಆಚರಣೆಯ ಬಳಿಕ ಎಂಟನೆಯ ದಿನವನ್ನು ಪವಿತ್ರ ದಿನವನ್ನಾಗಿ ಆಚರಿಸಿದರು. ಅವರು ಯಜ್ಞವೇದಿಕೆಯನ್ನು ಯೆಹೋವನ ಆರಾಧನೆಗೋಸ್ಕರ ಪ್ರತಿಷ್ಠಿಸಿದರು. ಹಬ್ಬವನ್ನು ಏಳು ದಿನಗಳ ತನಕ ಆಚರಿಸಿದರು.
ಏಳನೆಯ ತಿಂಗಳಿನ ಇಪ್ಪತ್ತಮೂರನೆಯ ದಿನದಂದು ಸೊಲೊಮೋನನು ನೆರೆದು ಬಂದಿದ್ದ ಜನರನ್ನು ಅವರ ಮನೆಗಳಿಗೆ ಕಳುಹಿಸಿದನು. ದೇವರಾದ ಯೆಹೋವನು ದಾವೀದನಿಗೂ ಅವನ ಮಗನಾದ ಸೊಲೊಮೋನನಿಗೂ ಮತ್ತು ಎಲ್ಲಾ ಇಸ್ರೇಲರಿಗೂ ಕರುಣೆಯನ್ನು ತೋರಿಸಿದ್ದಕ್ಕಾಗಿ ಜನರೆಲ್ಲರೂ ಹರ್ಷಿಸುತ್ತಾ ತಮ್ಮತಮ್ಮ ಮನೆಗಳಿಗೆ ಹಿಂತಿರುಗಿದರು.
ಆ ಬಳಿಕ ಯೆಹೋವನು ರಾತ್ರಿಯಲ್ಲಿ ಸೊಲೊಮೋನನಿಗೆ ಕಾಣಿಸಿಕೊಂಡು, “ಸೊಲೊಮೋನನೇ, ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ. ನಾನು ಈ ಆಲಯವನ್ನು ಯಜ್ಞಾಲಯಕ್ಕಾಗಿ ಆರಿಸಿಕೊಂಡಿರುತ್ತೇನೆ.
ನನ್ನ ಹೆಸರಿನಿಂದ ಕರೆಯಲ್ಪಡುವ ನನ್ನ ಜನರು ದೀನತೆಯಿಂದ ಪ್ರಾರ್ಥಿಸಿ, ತಮ್ಮ ಪಾಪಗಳನ್ನು ಬಿಟ್ಟು ನನ್ನ ಕಡೆಗೆ ತಿರುಗಿದರೆ ನಾನು ಪರಲೋಕದಿಂದ ಅವರನ್ನು ಆಲೈಸಿ, ಅವರ ಪಾಪಗಳನ್ನು ಮನ್ನಿಸಿ ಅವರ ದೇಶವನ್ನು ಗುಣಪಡಿಸುವೆನು.
ನಾನು ನಿನ್ನನ್ನು ಬಲಿಷ್ಠನಾದ ಅರಸನನ್ನಾಗಿ ಮಾಡುವೆನು. ನಿನ್ನ ರಾಜ್ಯವು ಮಹಾರಾಜ್ಯವಾಗುವದು. ನಿನ್ನ ತಂದೆಯಾದ ದಾವೀದನಿಗೆ, ‘ದಾವೀದನೇ, ನಿನ್ನ ಕುಟುಂಬದವರಲ್ಲಿ ಒಬ್ಬನು ಯಾವಾಗಲೂ ಇಸ್ರೇಲಿನ ರಾಜನಾಗಿರುವನು’ ಎಂದು ನಾನು ವಾಗ್ದಾನ ಮಾಡಿದ್ದೇನೆ.
ನಾನು ಇಸ್ರೇಲರನ್ನು ಅವರಿಗೆ ಕೊಟ್ಟಿರುವ ದೇಶದಿಂದ ತೆಗೆದುಹಾಕುವೆನು; ನನ್ನ ಹೆಸರಿಗೋಸ್ಕರ ಪವಿತ್ರ ಮಾಡಿದ ಈ ದೇವಾಲಯವನ್ನು ತೊರೆದುಬಿಡುವೆನು. ಈ ದೇವಾಲಯದ ಬಗ್ಗೆ ಲೋಕದ ಜನರು ಗೇಲಿಮಾಡುವಂತೆ ಮಾಡುವೆನು.
ಆಗ ಜನರು, ‘ಯಾಕೆಂದರೆ ಇಸ್ರೇಲರು ತಮ್ಮ ಪೂರ್ವಿಕರ ದೇವರಾದ ಯೆಹೋವನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ಆತನು ಅವರನ್ನು ಈಜಿಪ್ಟಿನಿಂದ ಬಿಡಿಸಿ ಹೊರತಂದನು. ಆದರೆ ಅವರು ಬೇರೆ ದೇವರುಗಳನ್ನು ಪೂಜಿಸಿ ಅವುಗಳ ಸೇವೆಮಾಡಿದರು. ಆದ್ದರಿಂದಲೇ ಭಯಂಕರವಾದ ಈ ಸಂಕಟಗಳನ್ನೆಲ್ಲ ದೇವರು ಇಸ್ರೇಲರಿಗೆ ಬರಮಾಡಿದನು’ ಎಂದು ಹೇಳುವರು” ಅಂದನು.