ಅಬೀಯನ ಬಳಿ ನಾಲ್ಕು ಲಕ್ಷ ಮಂದಿ ವೀರ ಸೈನಿಕರಿದ್ದರು. ಅವನು ಸೈನ್ಯವನ್ನು ಯುದ್ಧದಲ್ಲಿ ಮುನ್ನಡೆಸಿದನು. ಯಾರೊಬ್ಬಾಮನ ಬಳಿಯಲ್ಲಿ ಎಂಟು ಲಕ್ಷ ಮಂದಿ ಸೈನಿಕರು ಇದ್ದರು. ಯಾರೊಬ್ಬಾಮನು ಅಬೀಯನ ಮೇಲೆ ಯುದ್ಧಕ್ಕೆ ತಯಾರಾದನು.
“ದಾವೀದನ ಮಕ್ಕಳು ಆಳುತ್ತಿರುವ ಯೆಹೋವನ ರಾಜ್ಯವನ್ನು ಸೋಲಿಸಲು ಈಗ ನೀವು ನಿರ್ಧರಿಸಿದ್ದೀರಿ. ನಿಮ್ಮಲ್ಲಿ ಅಧಿಕ ಸಂಖ್ಯೆಯ ಸೈನ್ಯವಿರಬಹುದು. ಯಾರೊಬ್ಬಾಮನು ನಿಮ್ಮ ದೇವರುಗಳಾಗಿ ಮಾಡಿಸಿದ ಬಂಗಾರದ ಬಸವ ನಿಮ್ಮಲ್ಲಿವೆ.
ನೀವು ಆರೋನನ ಸಂತತಿಯವರಾದ ಯೆಹೋವನ ಯಾಜಕರನ್ನು ಹೊರಡಿಸಿಬಿಟ್ಟರಿ. ನೀವು ಲೇವಿಯರನ್ನೂ ಹೊರಡಿಸಿಬಿಟ್ಟಿರಿ. ಅನ್ಯಜನಾಂಗದವರಂತೆ ನೀವು ನಿಮ್ಮಲ್ಲಿಂದಲೇ ಯಾಜಕರನ್ನು ಆರಿಸಿಕೊಂಡಿರಿ. ಯಾವನಾದರೂ ಏಳು ಟಗರುಗಳನ್ನೂ ಒಂದು ಎಳೇ ಹೋರಿಯನ್ನೂ ತಂದರೆ ನೀವು ಅವನನ್ನು ‘ದೇವರಲ್ಲದವುಗಳ’ ಸೇವೆಮಾಡಲು ಯಾಜಕನನ್ನಾಗಿ ಮಾಡುವಿರಿ.
“ನಮಗಾದರೋ ಯೆಹೋವನೇ ದೇವರು. ಯೆಹೂದ್ಯ ಪ್ರಾಂತ್ಯದವರಾದ ನಾವು ದೇವರ ಕಟ್ಟಳೆಗೆ ವಿಧೇಯರಾಗಲು ನಿರಾಕರಿಸಲಿಲ್ಲ. ನಾವು ಆತನನ್ನು ತೊರೆಯಲಿಲ್ಲ. ಆತನ ಸೇವೆಮಾಡಲು ಲೇವಿಯರು ಮತ್ತು ಆರೋನನ ಸಂತತಿಯವರಾದ ಯಾಜಕರು ಸಹಾಯ ಮಾಡುವರು.
ಅವರು ಪ್ರತಿದಿನವೂ ಮುಂಜಾನೆ ಸಾಯಂಕಾಲಗಳಲ್ಲಿ ಸರ್ವಾಂಗಹೋಮಗಳನ್ನೂ ಧೂಪಗಳನ್ನೂ ಅರ್ಪಿಸುವರು; ಮೇಜಿನ ಮೇಲೆ ನೈವೇದ್ಯದ ರೊಟ್ಟಿಗಳನ್ನಿಡುವರು. ಅವರು ಬಂಗಾರದ ದೀಪಸ್ತಂಭಗಳ ಮೇಲಿನ ಆರತಿಗಳನ್ನು ಸರಿಯಾಗಿ ನೋಡಿಕೊಳ್ಳುವುದರಿಂದ ಅವು ಹಗಲಿನಲ್ಲಿಯೂ ಸಾಯಂಕಾಲದಲ್ಲಿಯೂ ಪ್ರಕಾಶಮಾನವಾಗಿ ಉರಿಯುವವು. ನಾವು ಬಹಳ ಎಚ್ಚರಿಕೆಯಿಂದ ನಮ್ಮ ದೇವರ ಸೇವೆ ಮಾಡುತ್ತೇವೆ. ಆದರೆ ನೀವು ಆತನನ್ನು ತೊರೆದು ಬಿಟ್ಟಿದ್ದೀರಿ.
ದೇವರು ನಮ್ಮೊಂದಿಗಿದ್ದಾನೆ. ನಮ್ಮನ್ನು ಆಳುವವನು ಆತನೇ. ಅವನ ಯಾಜಕರು ನಮ್ಮೊಂದಿಗಿದ್ದಾರೆ. ದೇವರ ಯಾಜಕರು ತುತ್ತೂರಿಯನ್ನೂದಿ ನಿಮ್ಮನ್ನು ಆತನ ಬಳಿಗೆ ಬರಲು ಎಚ್ಚರಿಸುತ್ತಾರೆ. ಇಸ್ರೇಲರೇ, ನಿಮ್ಮ ಪೂರ್ವಿಕರ ದೇವರಾದ ಯೆಹೋವನ ಜನರೊಂದಿಗೆ ಕಾದಾಡಬೇಡಿರಿ. ನೀವು ಜಯ ಹೊಂದುವದಿಲ್ಲ” ಎಂದು ಹೇಳಿದನು.
ಆದರೆ ಯಾರೊಬ್ಬಾಮನು ತನ್ನ ಸೈನ್ಯದ ಒಂದು ಭಾಗವನ್ನು ಅಬೀಯನ ಸೈನ್ಯದ ಹಿಂಭಾಗಕ್ಕೆ ಅವನಿಗೆ ಗೊತ್ತಿಲ್ಲದಂತೆ ಕಳುಹಿಸಿದನು. ಯಾರೊಬ್ಬಾಮನ ಸೈನ್ಯವು ಅಬೀಯನ ಸೈನ್ಯಕ್ಕೆ ಎದುರಾಗಿತ್ತು. ಅಬೀಯನ ಹಿಂದೆ ಯಾರೊಬ್ಬಾಮನ ಸೈನ್ಯವು ಅಡಗಿಕೊಂಡಿತ್ತು.
ಆಗ ಅಬೀಯನ ಸೈನ್ಯದವರು ದೊಡ್ಡ ಆರ್ಭಟ ಮಾಡಿದರು. ಆರ್ಭಟಿಸುತ್ತಾ ಮುಂದೆ ಸಾಗಿದರು. ಯಾರೊಬ್ಬಾಮನ ಸೈನ್ಯವನ್ನು ಮತ್ತು ಎಲ್ಲಾ ಇಸ್ರೇಲರನ್ನು ಯೆಹೂದದ ಅಬೀಯನ ಸೈನ್ಯವು ಸೋಲಿಸುವಂತೆ ದೇವರು ಮಾಡಿದನು.
ಅಬೀಯನ ಸೈನಿಕರು ಯಾರೊಬ್ಬಾಮನ ಸೈನಿಕರನ್ನು ಓಡಿಸಿದರು. ಮತ್ತು ಅವರ ಪಟ್ಟಣಗಳಾದ ಬೇತೇಲ್, ಯೆಷಾನಾ ಮತ್ತು ಎಪ್ರೋನ್ಗಳನ್ನು ವಶಪಡಿಸಿಕೊಂಡರು. ಈ ಪಟ್ಟಣಗಳನ್ನೂ ಅವುಗಳ ಸುತ್ತಮುತ್ತಲಿದ್ದ ಹಳ್ಳಿಗಳನ್ನೂ ವಶಪಡಿಸಿಕೊಂಡರು.