“ನಾನು ನಿನ್ನನ್ನು ಪ್ರಾಮುಖ್ಯ ವ್ಯಕ್ತಿಯನ್ನಾಗಿ ಮಾಡಿದೆ. ಇಸ್ರೇಲಿನ ಜನರಿಗೆ ನಿನ್ನನ್ನು ರಾಜನನ್ನಾಗಿ ನಾನು ಮಾಡಿದೆ. ಆದರೆ ನೀನು ಯಾರೊಬ್ಬಾಮನ ಮಾರ್ಗವನ್ನೇ ಅನುಸರಿಸಿದೆ. ಇಸ್ರೇಲಿನ ನನ್ನ ಜನರು ಪಾಪಮಾಡುವಂತೆ ನೀನು ಪ್ರೇರೇಪಿಸಿದೆ. ಅವರು ತಮ್ಮ ಪಾಪಗಳಿಂದ ನನ್ನನ್ನು ಕೋಪಗೊಳಿಸಿದರು.
ನಿನ್ನ ಕುಟುಂಬದ ಜನರು ನಗರದ ಬೀದಿಗಳಲ್ಲಿ ಸಾಯುತ್ತಾರೆ; ಅವರ ದೇಹಗಳನ್ನು ನಾಯಿಗಳು ತಿನ್ನುತ್ತವೆ. ನಿನ್ನ ಕುಟುಂಬದ ಕೆಲವು ಜನರು ಹೊಲಗಳಲ್ಲಿ ಸಾಯುತ್ತಾರೆ. ಅವರ ದೇಹಗಳನ್ನು ಪಕ್ಷಿಗಳು ತಿನ್ನುತ್ತವೆ.”
ಯೆಹೋವನು ಪ್ರವಾದಿಯಾದ ಯೇಹುವಿಗೆ ಒಂದು ಸಂದೇಶವನ್ನು ನೀಡಿದನು. ಈ ಸಂದೇಶವು ಬಾಷನ ಮತ್ತು ಅವನ ಕುಟುಂಬದ ವಿರುದ್ಧವಾಗಿತ್ತು. ಬಾಷನು ಯೆಹೋವನ ವಿರುದ್ಧವಾಗಿ ದುರಾಚಾರವನ್ನೆಸಗಿದನು. ಇದು ಯೆಹೋವನಿಗೆ ಹೆಚ್ಚು ಕೋಪವನ್ನು ಉಂಟುಮಾಡಿತು. ಯಾರೊಬ್ಬಾಮನ ಕುಟುಂಬವು ಅವನಿಗಿಂತ ಮುಂಚೆ ಮಾಡಿದ ಕಾರ್ಯಗಳನ್ನೇ ಬಾಷನೂ ಮಾಡಿದನು. ಬಾಷನು ಯಾರೊಬ್ಬಾಮನ ಕುಟುಂಬದವರನ್ನೆಲ್ಲಾ ಕೊಂದುಹಾಕಿದ್ದಕ್ಕಾಗಿಯೂ ಯೆಹೋವನು ಕೋಪಗೊಂಡನು.
ಜಿಮ್ರಿಯು ಆ ಮನೆಯೊಳಕ್ಕೆ ಹೋಗಿ ರಾಜನಾದ ಏಲನನ್ನು ಕೊಂದುಹಾಕಿದನು. ಆಸನು ಯೆಹೂದದ ರಾಜನಾಗಿದ್ದ ಇಪ್ಪತ್ತೇಳನೆಯ ವರ್ಷದಲ್ಲಿ ಇದು ನಡೆಯಿತು. ಏಲನ ನಂತರ ಜಿಮ್ರಿಯು ಇಸ್ರೇಲಿನ ಹೊಸ ರಾಜನಾದನು.
ಬಾಷನ ಮತ್ತು ಅವನ ಮಗನಾದ ಏಲನ ಪಾಪಗಳೇ ಅದಕ್ಕೆ ಕಾರಣ. ಅವರು ಪಾಪಗಳನ್ನು ಮಾಡಿದರು ಮತ್ತು ಪಾಪಗಳನ್ನು ಮಾಡುವಂತೆ ಇಸ್ರೇಲಿನ ಜನರನ್ನು ಪ್ರೇರೇಪಿಸಿದರು. ಅವರಲ್ಲಿ ಅನೇಕ ವಿಗ್ರಹಗಳಿದ್ದುದರಿಂದ ಯೆಹೋವನು ಕೋಪಗೊಂಡನು.
ಆಸನು ಯೆಹೂದದ ರಾಜನಾದ ಇಪ್ಪತ್ತೇಳನೆಯ ವರ್ಷದಲ್ಲಿ ಜಿಮ್ರಿಯು ಇಸ್ರೇಲಿನ ರಾಜನಾದನು. ಜಿಮ್ರಿಯು ತಿರ್ಚದಲ್ಲಿ ಏಳು ದಿನ ಆಳಿದನು. ಆಗ ಸಂಭವಿಸಿದ್ದೇನೆಂದರೆ: ಇಸ್ರೇಲಿನ ಸೈನ್ಯವು ಫಿಲಿಷ್ಟಿಯರಿಗೆ ಸೇರಿದ್ದ ಗಿಬ್ಬೆತೋನಿನ ವಿರುದ್ಧ ಮುತ್ತಿಗೆ ಹಾಕಿದ್ದರು. ಅವರು ಯುದ್ಧಕ್ಕೆ ಸಿದ್ಧರಾಗಿದ್ದರು.
ರಾಜನ ವಿರುದ್ಧ ಜಿಮ್ರಿಯು ರಹಸ್ಯಯೋಜನೆಗಳನ್ನು ಮಾಡಿದ್ದಾನೆಂಬುದು ಪಾಳೆಯದಲ್ಲಿದ್ದ ಜನರಿಗೆ ತಿಳಿಯಿತು. ಅವನು ರಾಜನನ್ನು ಕೊಂದುಹಾಕಿದನೆಂಬುದು ಅವರಿಗೆ ತಿಳಿಯಿತು. ಆದ್ದರಿಂದ ಇಸ್ರೇಲರೆಲ್ಲರೂ ಆ ದಿನವೇ ಪಾಳೆಯದಲ್ಲಿ ಒಮ್ರಿಯನ್ನು ಇಸ್ರೇಲಿನ ರಾಜನನ್ನಾಗಿ ಮಾಡಿದರು. ಒಮ್ರಿಯು ಸೈನ್ಯದ ಅಧಿಪತಿಯಾಗಿದ್ದನು.
ಜಿಮ್ರಿಯು ತಾನು ಮಾಡಿದ ಪಾಪದ ಕಾರಣದಿಂದಲೇ ಸತ್ತುಹೋದನು. ಯೆಹೋವನು ತಪ್ಪೆಂದು ಹೇಳಿದ ಕಾರ್ಯಗಳನ್ನು ಜಿಮ್ರಿಯು ಮಾಡಿದನು. ಯಾರೊಬ್ಬಾಮನು ಪಾಪಮಾಡಿದಂತೆ ಅವನೂ ಪಾಪವನ್ನು ಮಾಡಿದನು. ಇಸ್ರೇಲಿನ ಜನರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು.
ಜಿಮ್ರಿಯ ರಹಸ್ಯಯೋಜನೆಗಳ ಕುರಿತಾಗಿಯೂ ಅವನು ಮಾಡಿದ ಇತರ ಕಾರ್ಯಗಳ ಕುರಿತಾಗಿಯೂ “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ, ಜಿಮ್ರಿಯು ರಾಜನಾದ ಏಲಾಗೆ ವಿರುದ್ಧವಾಗಿ ತಿರುಗಿಬಿದ್ದಾಗ ಸಂಭವಿಸಿದ ಘಟನೆಗಳನ್ನೂ ಆ ಪುಸ್ತಕದಲ್ಲಿ ಬರೆಯಲಾಗಿದೆ.
ಇಸ್ರೇಲಿನ ಜನರಲ್ಲಿ ಎರಡು ಪಕ್ಷಗಳಾದವು. ಗೀನತನ ಮಗನಾದ ತಿಬ್ನಿಯನ್ನು ಒಂದು ಪಕ್ಷದವರು ಅನುಸರಿಸಿ, ಅವನನ್ನು ತಮ್ಮ ರಾಜನನ್ನಾಗಿ ಮಾಡಲು ಅಪೇಕ್ಷೆಪಟ್ಟರು. ಮತ್ತೊಂದು ಪಕ್ಷದವರು ಒಮ್ರಿಯನ್ನು ಅನುಸರಿಸಿದರು.
ಆಸನು ಯೆಹೂದದ ರಾಜನಾಗಿದ್ದ ಮೂವತ್ತೊಂದನೇ ವರ್ಷದಲ್ಲಿ ಒಮ್ರಿಯು ಇಸ್ರೇಲಿನ ರಾಜನಾದನು. ಒಮ್ರಿಯು ಇಸ್ರೇಲನ್ನು ಹನ್ನೆರಡು ವರ್ಷ ಆಳಿದನು. ಆ ಹನ್ನೆರಡು ವರ್ಷಗಳಲ್ಲಿ ಆರು ವರ್ಷ ಅವನು ತಿರ್ಚದಲ್ಲಿ ಆಳಿದನು.
ಆದರೆ ಒಮ್ರಿಯು ಸಮಾರ್ಯ ಬೆಟ್ಟವನ್ನು ಶೆಮೆರನಿಂದ ಅರವತ್ತೆಂಟು ಕಿಲೋಗ್ರಾಂ ಬೆಳ್ಳಿಗೆ ಕೊಂಡುಕೊಂಡನು. ಒಮ್ರಿಯು ಆ ಬೆಟ್ಟದ ಮೇಲೆ ಒಂದು ನಗರವನ್ನು ಕಟ್ಟಿಸಿದನು. ಅವನು ಆ ನಗರಕ್ಕೆ ಸಮಾರ್ಯವೆಂದು ಅದರ ಒಡೆಯನಾದ ಶೆಮೆರನ ಹೆಸರನ್ನು ಇಟ್ಟನು.
ನೆಬಾಟನ ಮಗನಾದ ಯಾರೊಬ್ಬಾಮನು ಮಾಡಿದಂತಹ ಪಾಪಗಳನ್ನೇ ಅವನೂ ಮಾಡಿದನು, ಇಸ್ರೇಲಿನ ಜನರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು. ಆದ್ದರಿಂದ ಅವರು ಇಸ್ರೇಲಿನ ದೇವರಾದ ಯೆಹೋವನನ್ನು ಹೆಚ್ಚು ಕೋಪಗೊಳಿಸಿದರು. ಅವರು ನಿಷ್ಪ್ರಯೋಜಕವಾದ ವಿಗ್ರಹಗಳನ್ನು ಆರಾಧಿಸಿದ್ದರಿಂದ ಯೆಹೋವನು ಕೋಪಗೊಂಡನು.
ನೆಬಾಟನ ಮಗನಾದ ಯಾರೊಬ್ಬಾಮನು ಮಾಡಿದಂತಹ ಪಾಪಗಳನ್ನೇ ಅಹಾಬನು ಮಾಡಿದರೂ ಅವು ಅವನಿಗೆ ಸಾಕಾಗಲಿಲ್ಲ. ಆದ್ದರಿಂದ ಅಹಾಬನು ಎತ್ಬಾಳನ ಮಗಳಾದ ಈಜೆಬೆಲಳನ್ನು ಮದುವೆಯಾದನು. ಎತ್ಬಾಳನು ಚೀದೋನ್ಯರ ರಾಜನಾಗಿದ್ದನು. ನಂತರ ಅಹಾಬನು ಬಾಳ್ ದೇವರನ್ನು ಪೂಜಿಸಿ ಅದರ ಸೇವೆ ಮಾಡಲಾರಂಭಿಸಿದನು.
ಅಹಾಬನು ಅಶೇರ ದೇವತೆಯನ್ನು ಆರಾಧಿಸಲು ಒಂದು ವಿಶೇಷ ಸ್ತಂಭವನ್ನು ನೆಡಿಸಿದನು. ಹೀಗೆ ಎಷ್ಟೋ ಕೆಟ್ಟಕಾರ್ಯಗಳನ್ನು ಮಾಡಿ ತನ್ನ ಮುಂಚೆ ಇದ್ದ ಇಸ್ರೇಲ್ ರಾಜರುಗಳಿಗಿಂತಲೂ ಹೆಚ್ಚಾಗಿ ಇಸ್ರೇಲ್ ದೇವರಾದ ಯೆಹೋವನನ್ನು ರೇಗಿಸಿದನು.
ಅಹಾಬನ ಕಾಲದಲ್ಲಿ ಬೇತೇಲಿನ ಹೀಯೇಲನು ಜೆರಿಕೊ ಪಟ್ಟಣವನ್ನು ಮತ್ತೆ ನಿರ್ಮಿಸಿದನು. ಹೀಯೇಲನು ನಗರದಲ್ಲಿ ಈ ಕೆಲಸವನ್ನು ಮಾಡಲು ಆರಂಭಿಸಿದ ಕಾಲದಲ್ಲಿಯೇ ಅವನ ಹಿರಿಯ ಮಗನಾದ ಅಬೀರಾಮನು ಸತ್ತುಹೋದನು. ಹೀಯೇಲನು ನಗರದ ಬಾಗಿಲುಗಳನ್ನು ಕಟ್ಟಿಸಿದಾಗ, ಅವನ ಕಿರಿಯ ಮಗನಾದ ಸೆಗೂಬನು ಸತ್ತುಹೋದನು. ಯೆಹೋವನು ಹೇಳಿದಂತೆಯೇ ಇದು ಸಂಭವಿಸಿತು. ನೂನನ ಮಗನಾದ ಯೆಹೋಶುವನ ಮೂಲಕ ಯೆಹೋವನು ಇದನ್ನು ತಿಳಿಸಿದ್ದನು. [*ನೂನನ … ತಿಳಿಸಿದ್ದನು ಯೆಹೋಶುವನು ಜೆರಿಕೊವನ್ನು ನಾಶಗೊಳಿಸಿದಾಗ, ಈ ನಗರವನ್ನು ಯಾರೇ ಆಗಲಿ ಮತ್ತೆ ಕಟ್ಟಿದರೆ ಅವರು ತಮ್ಮ ಹಿರಿಯ ಮಗನನ್ನು ಮತ್ತು ಕಿರಿಯ ಮಗನನ್ನು ಕಳೆದುಕೊಳ್ಳುತ್ತಾರೆಂದು ಅವನು ಹೇಳಿದ್ದನು.]