ಯಾಬೇಚನು ತುಂಬ ಒಳ್ಳೆಯ ವ್ಯಕ್ತಿಯಾಗಿದ್ದನು. ಅವನು ತನ್ನ ಅಣ್ಣತಮ್ಮಂದಿರಿಗಿಂತ ಉತ್ತಮನಾಗಿದ್ದನು. ಅವನ ತಾಯಿ, “ನಾನು ಅವನನ್ನು ಹೆರುವಾಗ ತುಂಬಾ ನೋವನ್ನು ಅನುಭವಿಸಿದ್ದರಿಂದ ನಾನು ಅವನಿಗೆ ಯಾಬೇಚ ಎಂದು ಹೆಸರಿಟ್ಟೆನು” ಎಂದು ಹೇಳಿದಳು.
ಯಾಬೇಚನು ಇಸ್ರೇಲರ ದೇವರಿಗೆ ಹೀಗೆ ಪ್ರಾರ್ಥಿಸಿದನು: “ದೇವರೇ, ನೀನು ನನ್ನನ್ನು ನಿಜವಾಗಿಯೂ ಆಶೀರ್ವದಿಸು. ನನ್ನ ಪ್ರಾಂತ್ಯವನ್ನು ವಿಸ್ತರಿಸು. ನನ್ನ ಬಳಿಯಲ್ಲಿಯೇ ಇದ್ದು ನನಗಾರೂ ನೋವು ಮಾಡದಂತೆ ನೋಡಿಕೊಂಡು ನನ್ನನ್ನು ರಕ್ಷಿಸು” ಎಂಬ ಯಾಬೇಚನ ಕೋರಿಕೆಯನ್ನು ದೇವರು ಕೇಳಿದನು.
(21-22) ಶೇಲನು ಯೆಹೂದನ ಮಗನು. ಶೇಲನ ಮಕ್ಕಳು: ಏರ್, ಲದ್ದ, ಯೊಕೀವ್, ಕೋಜೇಬದ ಜನರು. ಯೋವಾಷ್ ಮತ್ತು ಸಾರಾಫ್. ಏರನ ಮಗನು ಲೇಕಾಹ್ಯ. ಲದ್ದನು ಮರೇಷನ ತಂದೆ ಮತ್ತು ಬೇತಷ್ಬೇಯದ, ಬಟ್ಟೆ ನೇಕಾರರ ಮೂಲಪಿತೃ. ಯೋವಾಷ್ ಮತ್ತು ಸಾರಾಫ್ ಮೋವಾಬ್ಯರ ಸ್ತ್ರೀಯರನ್ನು ಮದುವೆಮಾಡಿಕೊಂಡು ಬೆತ್ಲೆಹೇಮಿಗೆ ಹಿಂತಿರುಗಿದರು. ಈ ಕುಟುಂಬದ ಕುರಿತಾದ ಬರಹಗಳು ಪುರಾತನ ಕಾಲದ್ದು.
ಶಿಮ್ಮೀಗೆ ಹದಿನಾರು ಮಂದಿ ಗಂಡುಮಕ್ಕಳೂ ಆರು ಮಂದಿ ಹೆಣ್ಣುಮಕ್ಕಳೂ ಇದ್ದರು. ಶಿಮ್ಮೀಯ ಸಹೋದರರಿಗೆ ಹೆಚ್ಚು ಮಕ್ಕಳಿರಲಿಲ್ಲ. ಇವರ ಸಂತತಿಯವರ ಸಂಖ್ಯೆಯು ಯೆಹೂದದ ಸಂತತಿಯವರಷ್ಟು ಹೆಚ್ಚಾಗಿರಲಿಲ್ಲ.
ಯೆಹೂದದ ಅರಸನಾಗಿದ್ದ ಹಿಜ್ಕೀಯನ ಕಾಲದಲ್ಲಿ ಇದು ಆಯಿತು. ಇವರು ಗೆದೋರಿಗೆ ಬಂದು ಹಾಮನ ಸಂತತಿಯವರೊಂದಿಗೆ ಯುದ್ಧಮಾಡಿ ಅವರ ಗುಡಾರಗಳನ್ನು ನಾಶಮಾಡಿದರು. ಅಲ್ಲದೆ ಮೆಗೂನ್ಯರ ವಿರುದ್ಧವಾಗಿ ಯುದ್ಧಮಾಡಿ ಅಲ್ಲಿ ನೆಲೆಸಿದರು. ಇವರು ಮೆಗೂನ್ಯರನ್ನೆಲ್ಲಾ ನಾಶಮಾಡಿದರು. ಇಂದಿನವರೆಗೂ ಮೆಗೂನ್ಯರಲ್ಲಿ ಯಾರೂ ಉಳಿದಿಲ್ಲ. ಹೀಗೆ ಆ ಸ್ಥಳದಲ್ಲಿ ಅವರು ನೆಲೆಸಿದರು; ಯಾಕೆಂದರೆ ಅವರ ಪಶುಗಳಿಗೆ ಅಲ್ಲಿ ಸಾಕಷ್ಟು ಹುಲ್ಲಿತ್ತು.
ಸಿಮೆಯೋನನ ಕುಲದ ಐನೂರು ಮಂದಿ ಸೇಯೀರ್ ಬೆಟ್ಟಪ್ರಾಂತ್ಯಕ್ಕೆ ಹೋದರು. ಇಷ್ಷೀಯ ಗಂಡುಮಕ್ಕಳು ಈ ಗುಂಪಿನ ನಾಯಕರಾಗಿದ್ದರು. ಅವರು ಯಾರೆಂದರೆ: ಪೆಲಟ್ಯ, ನೆಗರ್ಯ, ರೆಫಾಯ ಮತ್ತು ಉಜ್ಜೀಯೇಲ್. ಅಲ್ಲಿ ವಾಸಿಸುವ ಜನರೊಂದಿಗೆ ಇವರು ಕಾದಾಡಿದರು.