ಆಗ ದೇವದೂತನು ನನಗೆ ಹೇಳಿದ್ದೇನೆಂದರೆ, “ಈ ಸುರುಳಿಯಲ್ಲಿ ಶಾಪವು ಬರೆಯಲ್ಪಟ್ಟಿದೆ. ಸುರುಳಿಯ ಒಂದು ಬದಿಯಲ್ಲಿ ಕದಿಯುವ ಜನರಿಗೆ ಶಾಪ ಬರೆಯಲ್ಪಟ್ಟಿದೆ. ಅದರ ಇನ್ನೊಂದು ಬದಿಯಲ್ಲಿ ವಾಗ್ದಾನ ಮಾಡಿಯೂ ಅದನ್ನು ಪಾಲಿಸದೆ ಸುಳ್ಳಾಡುವವರಿಗೆ ಶಾಪ ಬರೆಯಲ್ಪಟ್ಟಿದೆ.
ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, ‘ನಾನು ಆ ಸುರುಳಿಯನ್ನು ಕದಿಯುವವರ ಮನೆಗಳಿಗೂ ಮತ್ತು ನನ್ನ ಹೆಸರಿನ ಮೇಲೆ ಸುಳ್ಳಾಣೆಯಿಡುವವರ ಮನೆಗಳಿಗೂ ಕಳುಹಿಸುವೆನು. ಆ ಸುರುಳಿಯು ಅಲ್ಲಿಯೇ ಇದ್ದು ಆ ಮನೆಗಳನ್ನು ನಾಶಮಾಡುವುದು. ಮನೆಯ ಕಲ್ಲುಕಂಬಗಳನ್ನು, ಮರದ ತೊಲೆಗಳನ್ನು ನಾಶಮಾಡುವದು.’ ”
“ಅದು ಏನೋ ನನಗೆ ಗೊತ್ತಾಗುತ್ತಿಲ್ಲ. ಅದು ಏನಿರಬಹುದು?” ಎಂದು ನಾನು ವಿಚಾರಿಸಿದೆನು. ಅದಕ್ಕವನು, “ಅದು ಒಂದು ಅಳೆಯುವ ಬುಟ್ಟಿ, ಈ ಬುಟ್ಟಿಯು ಈ ದೇಶದ ಜನರ ಪಾಪವನ್ನು ಅಳೆಯುವ ಬುಟ್ಟಿಯಾಗಿದೆ” ಎಂದನು.
ಆ ಬಳಿಕ ನಾನು ಮೇಲಕ್ಕೆ ನೋಡಿದಾಗ ಕೊಕ್ಕರೆಯಂತೆ ರೆಕ್ಕೆಗಳಿರುವ ಎರಡು ಸ್ತ್ರೀಯರನ್ನು ಕಂಡೆನು. ಅವರು ಹಾರುತ್ತಾ ರೆಕ್ಕೆಗಳಲ್ಲಿಯ ಗಾಳಿಯ ಸಹಾಯದಿಂದ ಬುಟ್ಟಿಯನ್ನು ಎತ್ತಿಕೊಂಡು ಆಕಾಶದಲ್ಲಿ ಹಾರಿಕೊಂಡು ಹೋದರು.