ನನ್ನ ಪ್ರಿಯೇ, ನನ್ನ ವಧುವೇ, ನನ್ನ ತೋಟವನ್ನು ಪ್ರವೇಶಿಸಿದ್ದೇನೆ. ನನ್ನ ಸುಗಂಧದ್ರವ್ಯದೊಡನೆ ಗೋಲರಸವನ್ನು ಶೇಖರಿಸಿದ್ದೇನೆ. ನನ್ನ ಜೇನುಗೂಡನ್ನೂ ಜೇನುತುಪ್ಪವನ್ನೂ ತಿಂದಿದ್ದೇನೆ. ನನ್ನ ದ್ರಾಕ್ಷಾರಸವನ್ನೂ ಹಾಲನ್ನೂ ಕುಡಿದಿದ್ದೇನೆ. ಸ್ನೇಹಿತರೇ, ತಿನ್ನಿರಿ, ಕುಡಿಯಿರಿ! ಪ್ರೀತಿಯಿಂದ ಮತ್ತರಾಗಿ!
ನಾನು ನಿದ್ರೆಮಾಡುತ್ತಿರುವಾಗಲೂ ಹೃದಯ ಎಚ್ಚರವಾಗಿರುವುದು. ನನ್ನ ಪ್ರಿಯನು ಬಾಗಿಲು ತಟ್ಟುತ್ತಿರುವುದು ನನಗೆ ಕೇಳುತ್ತಿದೆ. “ನನ್ನ ಪ್ರಿಯಳೇ, ನನ್ನ ಕಾಂತಳೇ, ನನ್ನ ಪಾರಿವಾಳವೇ, ನನ್ನ ನಿರ್ಮಲೆಯೇ, ಬಾಗಿಲು ತೆರೆ! ನನ್ನ ತಲೆಯು ಇಬ್ಬನಿಯಿಂದ ತೇವವಾಗಿದೆ; ನನ್ನ ಕೂದಲು ರಾತ್ರಿ ಬೀಳುವ ಹನಿಗಳಿಂದ ತೇವವಾಗಿದೆ.”
“ನಾನು ನನ್ನ ಮೇಲಂಗಿಯನ್ನು ತೆಗೆದಿದ್ದೇನೆ; ಅದನ್ನು ಮತ್ತೆ ಹಾಕಿಕೊಳ್ಳಲು ನನಗೆ ಇಷ್ಟವಿಲ್ಲ. ನಾನು ನನ್ನ ಪಾದಗಳನ್ನು ತೊಳೆದಿದ್ದೇನೆ. ಅವುಗಳನ್ನು ಮತ್ತೆ ಕೊಳೆಮಾಡಲು ನನಗೆ ಇಷ್ಟವಿಲ್ಲ.”
ನಾನು ನನ್ನ ಪ್ರಿಯನಿಗಾಗಿ ಬಾಗಿಲನ್ನು ತೆರೆಯುವಷ್ಟರಲ್ಲಿ ನನ್ನ ಪ್ರಿಯನು ಹೊರಟುಹೋಗಿದ್ದನು! ಅವನು ಇಲ್ಲದಿರುವುದನ್ನು ಕಂಡು ನನ್ನ ಹೃದಯವು ಕುಸಿದುಹೋಯಿತು. ನಾನು ಅವನಿಗಾಗಿ ಹುಡುಕಿದರೂ ಅವನು ಸಿಕ್ಕಲಿಲ್ಲ. ನಾನು ಅವನಿಗಾಗಿ ಕೂಗಿದರೂ ಅವನು ಉತ್ತರಿಸಲಿಲ್ಲ.