ನನ್ನ ಪ್ರಿಯಳೇ, ನೀನು ಬಹಳ ಸುಂದರಿ! ನೀನು ರೂಪವತಿ! ಮುಸುಕಿನೊಳಗಿರುವ ನಿನ್ನ ಕಣ್ಣುಗಳು ಕೋಮಲವಾದ ಪಾರಿವಾಳಗಳಂತಿವೆ. ನಿನ್ನ ಕೂದಲು ಗಿಲ್ಯಾದ್ ಬೆಟ್ಟದ ಇಳಿಜಾರುಗಳಲ್ಲಿ ನೃತ್ಯವಾಡುತ್ತಿರುವ ಆಡುಮಂದೆಯಂತೆ ಬಳಕುತ್ತಿದೆ.
ನಿನ್ನ ಕೊರಳು ದಾವೀದನ ಗೋಪುರದಂತೆ ಉದ್ದವಾಗಿದೆ ಮತ್ತು ತೆಳುವಾಗಿದೆ. ಆ ಗೋಪುರದ ಗೋಡೆಗಳು ಸಾವಿರ ಗುರಾಣಿಗಳಿಂದಲೂ ಬಲಿಷ್ಠ ಸೈನಿಕರ ಗುರಾಣಿಗಳಿಂದಲೂ ಅಲಂಕೃತವಾಗಿವೆ. [*ನಿನ್ನ ಕೊರಳು … ಅಲಂಕೃತವಾಗಿವೆ ಅಥವಾ “ನಿನ್ನ ಕೊರಳು ಕಲ್ಲುಗಳ ಸಾಲುಗಳಿಂದ ಕಟ್ಟಲ್ಪಟ್ಟಿರುವ ದಾವೀದನ ಗೋಪುರದಂತಿದೆ.” ಇದರರ್ಥವೇನೆಂದರೆ, ಆಕೆ ಅನೇಕ ಕಂಠಹಾರಗಳನ್ನು ಒಂದರ ಮೇಲೊಂದು ಧರಿಸಿಕೊಂಡಿದ್ದರಿಂದ ಅವು ಗೋಪುರದ ಕಲ್ಲಿನ ಸಾಲುಗಳಂತೆ ಕಾಣಿಸಿತು.]
ನನ್ನ ಪ್ರಿಯಳೇ, ನನ್ನ ವಧುವೇ, ನಿನ್ನ ಪ್ರೀತಿಯು ಎಷ್ಟೋ ರಮ್ಯ! ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತಲೂ ಎಷ್ಟೋ ಉತ್ತಮ! ನಿನ್ನ ತೈಲದ ಪರಿಮಳವು ಸಕಲ ಬಗೆಯ ಸುಗಂಧ ದ್ರವ್ಯಗಳಿಗಿಂತಲೂ ಉತ್ತಮ!
ನನ್ನ ವಧುವೇ, ನಿನ್ನ ತುಟಿಗಳು ಜೇನುಗರೆಯುತ್ತವೆ; ಹಾಲೂ ಜೇನೂ ನಿನ್ನ ನಾಲಿಗೆಯೊಳಗಿವೆ. ನಿನ್ನ ಬಟ್ಟೆಗಳು ಪರಿಮಳದ್ರವ್ಯದಂತೆ [†ಪರಿಮಳದ್ರವ್ಯ ಅಥವಾ “ಲೆಬನೋನ್.”] ಸುವಾಸನೆಭರಿತವಾಗಿವೆ.
ಉತ್ತರದ ಗಾಳಿಯೇ, ಎಚ್ಚರವಾಗು! ದಕ್ಷಿಣದ ಗಾಳಿಯೇ, ಬಾ! ನನ್ನ ತೋಟದ ಮೇಲೆ ಬೀಸು. ಅದರ ಸುವಾಸನೆಯು ಹರಡಿಕೊಳ್ಳಲಿ. ನನ್ನ ಪ್ರಿಯನು ನನ್ನ ತೋಟವನ್ನು ಪ್ರವೇಶಿಸಲಿ. ಅವನು ಅದರ ರುಚಿಕರವಾದ ಹಣ್ಣನ್ನು ತಿನ್ನಲಿ.