Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Books

Ruth Chapters

Ruth 1 Verses

1 ನ್ಯಾಯಾಧೀಶರು ಆಳುತ್ತಿದ್ದಾಗ ದೇಶದಲ್ಲಿ ಬರಗಾಲ ಬಂತು. ಆಗ ಎಲೀಮೆಲೆಕನೆಂಬ ಒಬ್ಬ ಮನುಷ್ಯನು ತನ್ನ ಹೆಂಡತಿ ಮತ್ತು ಇಬ್ಬರು ಗಂಡುಮಕ್ಕಳೊಡನೆ ಯೆಹೂದಪ್ರಾಂತದ ಬೇತ್ಲೆಹೇಮ್ ನಗರವನ್ನು ಬಿಟ್ಟು ಮೋವಾಬ್ ಬೆಟ್ಟಪ್ರದೇಶಕ್ಕೆ ಹೋದನು.
2 ಅವನ ಹೆಂಡತಿಯ ಹೆಸರು ‘ನೊವೊಮಿ.’ ಅವನ ಇಬ್ಬರು ಗಂಡುಮಕ್ಕಳ ಹೆಸರುಗಳು: ಮಹ್ಲೋನ್ ಮತ್ತು ಕಿಲ್ಯೋನ್. ಅವರು ಯೆಹೂದಪ್ರಾಂತದ ಎಫ್ರಾತಿಗೆ ಸೇರಿದ ಬೇತ್ಲೆಹೇಮಿನ ನಿವಾಸಿಗಳು. ಇವರು ಮೋವಾಬ್ ಬೆಟ್ಟಪ್ರದೇಶಕ್ಕೆ ಹೋಗಿ ಅಲ್ಲಿಯೇ ನೆಲೆಸಿದರು.
3 ಕೆಲವು ದಿನಗಳಾದ ಮೇಲೆ ನೊವೊಮಿಯ ಗಂಡನಾದ ಎಲೀಮೆಲೆಕನು ಮರಣಹೊಂದಿದನು. ನೊವೊಮಿ ಮತ್ತು ಆಕೆಯ ಇಬ್ಬರು ಗಂಡುಮಕ್ಕಳು ಅಲ್ಲಿ ತಮ್ಮ ಜೀವನವನ್ನು ಮುಂದುವರಿಸಿದರು.
4 ಆಕೆಯ ಗಂಡುಮಕ್ಕಳು ಮೋವಾಬ್ ದೇಶದ ಸ್ತ್ರೀಯರನ್ನು ಮದುವೆಯಾದರು. ಒಬ್ಬನ ಹೆಂಡತಿಯ ಹೆಸರು ಒರ್ಫಾ, ಇನ್ನೊಬ್ಬನ ಹೆಂಡತಿಯ ಹೆಸರು ರೂತ್. ಅವರು ಮೋವಾಬ್‌ನಲ್ಲಿ ಸುಮಾರು ಹತ್ತು ವರ್ಷವಿದ್ದರು.
5 ಬಳಿಕ ಮಹ್ಲೋನ್ ಮತ್ತು ಕಿಲ್ಯೋನ್ ಸಹ ಸತ್ತುಹೋದರು. ಹೀಗಾಗಿ ನೊವೊಮಿಯು ತನ್ನ ಗಂಡನನ್ನೂ ಇಬ್ಬರು ಗಂಡುಮಕ್ಕಳನ್ನೂ ಕಳೆದುಕೊಂಡು ಒಬ್ಬಳೇ ಉಳಿದಳು.
6 ನೊವೊಮಿಯು ಮೋವಾಬ್ ಬೆಟ್ಟಪ್ರದೇಶದಲ್ಲಿದ್ದಾಗ ಯೆಹೋವನು ತನ್ನ ಜನರಿಗೆ ಕರುಣೆತೋರಿ ಆಹಾರವನ್ನು ಒದಗಿಸಿರುವ ಸುದ್ದಿಯು ನೊವೊಮಿಗೆ ತಿಳಿಯಿತು. ಆದುದರಿಂದ ಆಕೆಯು ಮೋವಾಬ್ ಬೆಟ್ಟಪ್ರದೇಶವನ್ನು ಬಿಟ್ಟು ತನ್ನ ಊರಿಗೆ ಹೋಗಲು ನಿರ್ಧರಿಸಿದಳು. ಅವಳ ಸೊಸೆಯಂದಿರು ಸಹ ಅವಳ ಸಂಗಡ ಹೋಗಲು ತೀರ್ಮಾನಿಸಿದರು.
7 ಅವಳು ಮತ್ತು ಅವಳ ಸೊಸೆಯಂದಿರು ತಾವು ಈವರೆಗೆ ಇದ್ದ ಸ್ಥಳವನ್ನು ಬಿಟ್ಟು ಯೆಹೂದ ಪ್ರಾಂತಕ್ಕೆ ಹೊರಟರು.
8 ಆಗ ನೊವೊಮಿ ತನ್ನ ಸೊಸೆಯಂದಿರಿಗೆ, “ನೀವಿಬ್ಬರೂ ನಿಮ್ಮ ತಂದೆತಾಯಿಗಳ ಮನೆಗೆ ಹೋಗಿ. ನೀವು ನನ್ನನ್ನೂ ಸತ್ತುಹೋದ ನನ್ನ ಇಬ್ಬರು ಮಕ್ಕಳನ್ನೂ ತುಂಬ ಪ್ರೀತಿಯಿಂದ ನೋಡಿಕೊಂಡಿದ್ದೀರಿ. ಯೆಹೋವನು ನಿಮಗೆ ಅಷ್ಟೇ ಕೃಪೆಯನ್ನೂ ಪ್ರೀತಿಯನ್ನೂ ತೋರಲಿ ಎಂದು ನಾನು ಪ್ರಾರ್ಥಿಸುತ್ತೇನೆ.
9 ನೀವಿಬ್ಬರೂ ಮದುವೆ ಮಾಡಿಕೊಂಡು ಒಳ್ಳೆಯ ಕುಟುಂಬವನ್ನು ಹೊಂದಿಕೊಳ್ಳಲು ಯೆಹೋವನು ನಿಮಗೆ ಸಹಾಯಮಾಡಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ಹೇಳಿ ತನ್ನ ಸೊಸೆಯಂದಿರಿಗೆ ಮುದ್ದಿಟ್ಟಳು. ಅವರೆಲ್ಲರೂ ಅಳತೊಡಗಿದರು.
10 ಅವಳ ಸೊಸೆಯಂದಿರು, “ನಾವು ನಿನ್ನ ಸಂಗಡ ಬಂದು ನಿನ್ನ ಜನರೊಡನೆ ಇರುತ್ತೇವೆ” ಎಂದರು.
11 ಆದರೆ ನೊವೊಮಿ, “ಬೇಡ ಮಕ್ಕಳೆ, ನಿಮ್ಮ ಮನೆಗಳಿಗೆ ಹಿಂತಿರುಗಿಹೋಗಿರಿ. ನನ್ನ ಸಂಗಡ ನೀವೇಕೆ ಬರಬೇಕು? ನಾನು ನಿಮಗೆ ಸಹಾಯ ಮಾಡಲಾರೆ. ನಿಮ್ಮನ್ನು ಮದುವೆಯಾಗುವಂಥ ಗಂಡುಮಕ್ಕಳು ನನ್ನಲ್ಲಿಲ್ಲ.
12 ನಿಮ್ಮ ತವರೂರಿಗೆ ಹೋಗಿರಿ! ನಾನು ಇನ್ನೊಂದು ಮದುವೆಯಾಗುವುದಕ್ಕೂ ಸಾಧ್ಯವಿಲ್ಲ. ನನಗೆ ತುಂಬಾ ವಯಸ್ಸಾಗಿದೆ. ನಾನು ನಿಮಗೆ ಸಹಾಯ ಮಾಡಲಾರೆ. ನಾನು ಇಂದು ರಾತ್ರಿಯೇ ಗರ್ಭಧರಿಸಿ ಇಬ್ಬರು ಗಂಡುಮಕ್ಕಳನ್ನು ಹೆತ್ತರೂ ನಿಮಗೆ ಅದರಿಂದ ಪ್ರಯೋಜನವಿಲ್ಲ.
13 ನೀವು ಅವರನ್ನು ಮದುವೆಯಾಗಬೇಕಾದರೆ ಅವರು ಬೆಳೆದು ಪ್ರಾಯಕ್ಕೆ ಬರುವವರೆಗೆ ಕಾದುಕೊಂಡಿರಬೇಕಾಗುತ್ತದೆ. ನೀವು ಗಂಡಂದಿರ ಸಲುವಾಗಿ ಅಷ್ಟುಕಾಲ ಕಾದುಕೊಂಡಿರುವುದು ನನಗಿಷ್ಟವಿಲ್ಲ. ಅದು ನನಗೆ ದುಃಖವನ್ನು ಉಂಟುಮಾಡುತ್ತದೆ. ನಿಮ್ಮ ಕುರಿತು ನಾನು ತುಂಬಾ ದುಃಖಪಡುತ್ತೇನೆ, ಯೆಹೋವನ ಹಸ್ತವು ನನಗೆ ವಿರುದ್ಧವಾಗಿದೆ” ಎಂದು ಹೇಳಿದಳು.
14 ಅವರೆಲ್ಲರೂ ಮತ್ತೊಮ್ಮೆ ಗಟ್ಟಿಯಾಗಿ ಅತ್ತರು. ಒರ್ಫಾಳು ನೊವೊಮಿಗೆ ಮುದ್ದಿಟ್ಟು ಹೊರಟುಹೋದಳು. ಆದರೆ ರೂತಳು ಅವಳನ್ನು ಮುದ್ದಿಟ್ಟು ಆಕೆಯೊಂದಿಗೆ ಉಳಿದುಕೊಂಡಳು.
15 ನೊವೊಮಿಯು ಆಕೆಗೆ, “ನೋಡು, ನಿನ್ನ ಓರಗಿತ್ತಿಯು ಮತ್ತೆ ತನ್ನ ಜನರ ಬಳಿಗೂ ತನ್ನ ದೇವತೆಗಳ ಬಳಿಗೂ ಹೋಗುತ್ತಿದ್ದಾಳೆ. ನೀನೂ ಹಾಗೆಯೇ ಮಾಡು” ಎಂದು ಹೇಳಿದಳು.
16 ಅದಕ್ಕೆ ರೂತಳು, “ನಿನ್ನನ್ನು ಬಿಟ್ಟು ಸ್ವಜನರ ಬಳಿಗೆ ಹಿಂದಿರುಗಿ ಹೋಗೆಂದು ನನಗೆ ಒತ್ತಾಯ ಮಾಡಬೇಡ. ನೀನು ಎಲ್ಲಿಗೆ ಹೋದರೂ ನಾನೂ ಅಲ್ಲಿಗೆ ಬರುವೆನು. ನೀನು ವಾಸಿಸುವಲ್ಲೇ ನಾನೂ ವಾಸಿಸುವೆನು. ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು.
17 ನೀನು ಸಾಯುವಲ್ಲೇ ನಾನೂ ಸಾಯುವೆನು; ಅಲ್ಲಿಯೇ ನನಗೆ ಸಮಾಧಿಯಾಗಬೇಕು. ಈ ಪ್ರತಿಜ್ಞೆಯನ್ನು ನಾನು ಪೂರ್ಣಗೊಳಿಸದಿದ್ದರೆ ನನ್ನನ್ನು ಶಿಕ್ಷಿಸು ಎಂದು ನಾನು ಯೆಹೋವನಲ್ಲಿ ಕೇಳಿಕೊಳ್ಳುತ್ತೇನೆ. ಮರಣವು ಮಾತ್ರ ನಮ್ಮಿಬ್ಬರನ್ನು ಅಗಲಿಸಬಲ್ಲದು” ಎಂದು ದೃಢವಾಗಿ ಹೇಳಿದಳು.
18 ರೂತಳು ತನ್ನ ಜೊತೆಗೆ ಬರಲು ದೃಢನಿಶ್ಚಯ ಮಾಡಿರುವುದು ನೊವೊಮಿಗೆ ತಿಳಿಯಿತು. ಆದ್ದರಿಂದ ನೊವೊಮಿಯು ರೂತಳೊಡನೆ ವಾದಮಾಡಲಿಲ್ಲ.
19 ಅವರಿಬ್ಬರೂ ಪ್ರಯಾಣ ಮಾಡಿ ಬೇತ್ಲೆಹೇಮ್ ಊರಿಗೆ ತಲುಪಿದರು. ಅವರಿಬ್ಬರನ್ನು ಕಂಡಾಗ ಬೇತ್ಲೆಹೇಮ್ ಪಟ್ಟಣದ ಜನರಿಗೆ ಆಶ್ಚರ್ಯವಾಯಿತು. “ಇವಳು ನೊವೊಮಿಯೇ?” ಎಂದು ಅವರು ಕೇಳಿದರು.
20 ಆದರೆ ನೊವೊಮಿಯು ಜನರಿಗೆ, “ನನ್ನನ್ನು ನೊವೊಮಿ ಎಂದು ಕರೆಯದೆ, ನನ್ನನ್ನು ಮಾರಾ ಎಂದು ಕರೆಯಿರಿ. ಏಕೆಂದರೆ ಸರ್ವಶಕ್ತನಾದ ದೇವರು ನನ್ನ ಜೀವನವನ್ನು ದುಃಖಕರವನ್ನಾಗಿ ಮಾಡಿದ್ದಾನೆ.
21 ಇಲ್ಲಿಂದ ಹೋಗುವಾಗ ಭಾಗ್ಯವಂತಳಾಗಿ ಹೋದೆನು; ಆದರೆ ಈಗ ಯೆಹೋವನು ನನ್ನನ್ನು ಬರಿಗೈಯಲ್ಲಿ ಮನೆಗೆ ಕರೆತಂದಿದ್ದಾನೆ. ಯೆಹೋವನು ನನ್ನನ್ನು ದುಃಖಿತಳನ್ನಾಗಿ ಮಾಡಿದ್ದಾನೆ. ಹೀಗಿರುವಾಗ ನೀವೇಕೆ ನನ್ನನ್ನು ‘ನೊವೊಮಿ’ ಎಂದು ಕರೆಯಬೇಕು? ಸರ್ವಶಕ್ತನಾದ ದೇವರು ನನಗೆ ಸಾಕಷ್ಟು ಕಷ್ಟ ಕೊಟ್ಟಿದ್ದಾನೆ” ಎಂದು ಹೇಳಿದಳು.
22 ಹೀಗೆ ನೊವೊಮಿ ಮತ್ತು ಅವಳ ಸೊಸೆ ಮೋವಾಬ್ಯಳಾದ ರೂತಳು ಮೋವಾಬ್ ಬೆಟ್ಟಪ್ರದೇಶದಿಂದ ಹಿಂದಿರುಗಿ ಬಂದರು. ಯೆಹೂದ ದೇಶದ ಬೇತ್ಲೆಹೇಮಿಗೆ ಇವರಿಬ್ಬರೂ ಜವೆಗೋಧಿಯ ಸುಗ್ಗಿಯ ಆರಂಭಕಾಲದಲ್ಲಿ ಬಂದರು.
×

Alert

×