ಯಾವ ಬಗೆಯ ಆಹಾರವನ್ನಾದರೂ ತಿನ್ನಬಹುದೆಂದು ನಂಬುವ ವ್ಯಕ್ತಿಯು ತರಕಾರಿಯನ್ನು ಮಾತ್ರ ತಿನ್ನುವ ವ್ಯಕ್ತಿಗಿಂತ ತನ್ನನ್ನು ಉತ್ತಮನೆಂದು ಭಾವಿಸಿಕೊಳ್ಳಕೂಡದು. ಅಂತೆಯೇ, ತರಕಾರಿಗಳನ್ನು ಮಾತ್ರ ತಿನ್ನುವ ವ್ಯಕ್ತಿಯು ಎಲ್ಲಾ ಆಹಾರಪದಾರ್ಥಗಳನ್ನು ತಿನ್ನುವ ವ್ಯಕ್ತಿಯನ್ನು ತಪ್ಪಿತಸ್ಥನೆಂದು ನಿರ್ಣಯಿಸಕೂಡದು. ದೇವರು ಆ ವ್ಯಕ್ತಿಯನ್ನೂ ಸ್ವೀಕರಿಸಿಕೊಂಡಿದ್ದಾನೆ.
ನೀನು ಮತ್ತೊಬ್ಬ ವ್ಯಕ್ತಿಯ ಸೇವಕನಿಗೆ ತೀರ್ಪು ಮಾಡಕೂಡದು. ಅವನು ಮಾಡುತ್ತಿರುವುದು ಸರಿಯೋ ತಪ್ಪೋ ಎಂಬುದನ್ನು ಅವನ ಸ್ವಂತ ಯಜಮಾನನೇ ನಿರ್ಣಯಿಸುವನು. ಪ್ರಭುವಿನ ಸೇವಕನು ನಿರ್ದೋಷಿಯಾಗಿರುತ್ತಾನೆ, ಏಕೆಂದರೆ ಪ್ರಭುವು ಅವನನ್ನು ನಿರ್ದೋಷಿಯನ್ನಾಗಿ ಮಾಡಲು ಶಕ್ತನಾಗಿದ್ದಾನೆ.
ಒಬ್ಬನು ಒಂದು ದಿನಕ್ಕಿಂತ ಮತ್ತೊಂದು ದಿನವನ್ನು ಹೆಚ್ಚು ಮುಖ್ಯವೆಂದು ನಂಬಬಹುದು. ಆದರೆ ಇನ್ನೊಬ್ಬನು ಎಲ್ಲಾ ದಿನಗಳು ಒಂದೇ ಎಂದು ನಂಬಬಹುದು. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ವಂತ ಮನಸ್ಸಿನಲ್ಲಿರುವ ತನ್ನ ಸ್ವಂತ ನಂಬಿಕೆಯ ಬಗ್ಗೆ ನಿಶ್ಚಯದಿಂದಿರಬೇಕು.
ಒಂದು ದಿನಕ್ಕಿಂತ ಮತ್ತೊಂದು ದಿನವನ್ನು ಮುಖ್ಯವೆಂದು ಯೋಚಿಸುವ ವ್ಯಕ್ತಿಯು ಪ್ರಭುವಿಗೋಸ್ಕರವಾಗಿಯೇ ಹಾಗೆ ಯೋಚಿಸುವವನಾಗಿದ್ದಾನೆ. ಅಂತೆಯೇ ಎಲ್ಲಾ ಬಗೆಯ ಆಹಾರಪದಾರ್ಥಗಳನ್ನು ತಿನ್ನುವ ವ್ಯಕ್ತಿಯು ಪ್ರಭುವಿಗೋಸ್ಕರವೇ ಅವುಗಳನ್ನು ತಿನ್ನುತ್ತಾನೆ. ಹೌದು, ಅವನು ಆ ಆಹಾರಕ್ಕಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾನೆ.
ಆದಕಾರಣ, ಮತ್ತೆ ಜೀವಿಸುವುದಕ್ಕಾಗಿಯೇ ಕ್ರಿಸ್ತನು ಸತ್ತು ಸಮಾಧಿಯೊಳಗಿಂದ ಜೀವಂತನಾಗಿ ಎದ್ದುಬಂದನು. ಸತ್ತುಹೋದ ಜನರಿಗೂ ಬದುಕಿರುವ ಜನರಿಗೂ ತಾನು ಪ್ರಭುವಾಗಿರಬೇಕೆಂದು ಆತನು ಹೀಗೆ ಮಾಡಿದನು.
ಹೀಗಿರಲು, ಕ್ರಿಸ್ತನಲ್ಲಿ ನಿನ್ನ ಸಹೋದರನಾಗಿರುವವನನ್ನು ನೀನು ಟೀಕಿಸುವುದೇಕೆ? ನೀನು ನಿನ್ನ ಸಹೋದರಿನಿಗಿಂತಲೂ ಉತ್ತಮನೆಂದು ಯೋಚಿಸುವುದೇಕೆ? ನಾವೆಲ್ಲರೂ ದೇವರ ಮುಂದೆ ನಿಂತುಕೊಳ್ಳುವೆವು, ಆಗ ಆತನು ನಮ್ಮೆಲ್ಲರಿಗೂ ತೀರ್ಪು ಕೊಡುವನು.
ಹೌದು, ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ: “ ‘ಪ್ರತಿಯೊಬ್ಬನೂ ನನಗೆ ಅಡ್ಡಬೀಳುವನು. ಪ್ರತಿಯೊಬ್ಬನೂ ನನ್ನನ್ನು ದೇವರೆಂದು ಹೇಳುವನು. ನನ್ನ ಜೀವದಾಣೆಯಾಗಿಯೂ ಈ ಸಂಗತಿಗಳು ನೆರವೇರುತ್ತವೆ’ ಎನ್ನುತ್ತಾನೆ ಪ್ರಭುವು.” ಯೆಶಾಯ 45:23
ಆದ್ದರಿಂದ, ನಾವು ಒಬ್ಬರಿಗೊಬ್ಬರು ತೀರ್ಪುಕೊಡುವುದನ್ನು ಬಿಟ್ಟುಬಿಡಬೇಕು. ನಮ್ಮ ಸಹೋದರನನ್ನಾಗಲಿ ಸಹೋದರಿಯನ್ನಾಗಲಿ ಬಲಹೀನಗೊಳಿಸುವಂಥ ಅಥವಾ ಪಾಪಕ್ಕೆ ಬೀಳಿಸುವಂಥ ಯಾವುದನ್ನೇ ಆಗಲಿ ಮಾಡದಂತೆ ನಾವು ನಿರ್ಧರಿಸಬೇಕು.
ನಾನು ಪ್ರಭುವಾದ ಯೇಸುವಿನಲ್ಲಿದ್ದೇನೆ. ಯಾವ ಆಹಾರಪದಾರ್ಥವನ್ನೇ ಆಗಲಿ ತಿನ್ನುವುದು ತಪ್ಪಲ್ಲವೆಂದು ನನಗೆ ಗೊತ್ತಿದೆ. ಒಬ್ಬನು ಯಾವುದಾದರೂ ಆಹಾರಪದಾರ್ಥವನ್ನು ತಿನ್ನುವುದು ತಪ್ಪೆಂದು ನಂಬಿದರೆ, ಆ ಆಹಾರಪದಾರ್ಥವು ಅವನಿಗೆ ಅಶುದ್ಧವಾಗುತ್ತದೆ.
ನೀನು ತಿನ್ನುವ ಒಂದು ಆಹಾರಪದಾರ್ಥದಿಂದ ನಿನ್ನ ಸಹೋದರನ ನಂಬಿಕೆಗೆ ನೀನು ತೊಂದರೆಯನ್ನು ಮಾಡಿದರೆ, ನೀನು ಪ್ರೀತಿಯ ಮಾರ್ಗವನ್ನು ನಿಜವಾಗಿಯೂ ಅನುಸರಿಸುತ್ತಿಲ್ಲ. ಒಬ್ಬನು ಯಾವುದಾದರೂ ಆಹಾರಪದಾರ್ಥವನ್ನು ತಿನ್ನುವುದು ತಪ್ಪೆಂದು ಭಾವಿಸಿಕೊಂಡಿರುವಾಗ, ನೀನು ಆ ಪದಾರ್ಥವನ್ನು ತಿಂದರೆ ಅವನ ನಂಬಿಕೆ ಹಾಳಾಗುವುದು. ಆದ್ದರಿಂದ ನೀನು ಹಾಗೆ ಮಾಡಕೂಡದು. ಕ್ರಿಸ್ತನು ಆ ವ್ಯಕ್ತಿಗಾಗಿಯೂ ಸತ್ತನು.
ಆದ್ದರಿಂದ ಸಮಾಧಾನವನ್ನು ಉಂಟುಮಾಡುವ ಕಾರ್ಯಗಳನ್ನು ನಮ್ಮಿಂದ ಸಾಧ್ಯವಾದಷ್ಟರ ಮಟ್ಟಿಗೆ ಮಾಡಲು ನಾವು ಪ್ರಯತ್ನಿಸೋಣ. ಪರಸ್ಪರ ಸಹಾಯಕವಾದ ಕಾರ್ಯಗಳನ್ನೇ ಮಾಡಲು ನಾವು ಪ್ರಯತ್ನಿಸೋಣ. ದೇವರ ಕಾರ್ಯವನ್ನು ನಾಶಪಡಿಸಲು ಆಹಾರಕ್ಕೆ ಅವಕಾಶ ಕೊಡಬೇಡಿ.
ಎಲ್ಲಾ ಆಹಾರಪದಾರ್ಥಗಳು ಶುದ್ಧವಾಗಿವೆ ಮತ್ತು ತಿನ್ನಲು ಯೋಗ್ಯವಾಗಿವೆ. ಆದರೆ ಒಬ್ಬನು ತಾನು ತಿನ್ನುವ ಆಹಾರಪದಾರ್ಥದ ಮೂಲಕ ಮತ್ತೊಬ್ಬ ವ್ಯಕ್ತಿಯನ್ನು ಪಾಪಕ್ಕೆ ಬೀಳಿಸುವುದಾಗಿದ್ದರೆ, ಅವನು ಆ ಪದಾರ್ಥವನ್ನು ತಿನ್ನುವುದೇ ತಪ್ಪು.
ನೀನು ಮಾಂಸ ತಿನ್ನುವುದು ಅಥವಾ ದ್ರಾಕ್ಷಾರಸ ಕುಡಿಯುವುದು, ನಿನ್ನ ಸಹೋದರನನ್ನಾಗಲಿ ಸಹೋದರಿಯನ್ನಾಗಲಿ ಪಾಪಕ್ಕೆ ಬೀಳಿಸುವುದಾಗಿದ್ದರೆ ಮಾಂಸವನ್ನು ತಿನ್ನದೆ, ದ್ರಾಕ್ಷಾರಸವನ್ನು ಕುಡಿಯದೇ ಇರುವುದು ಉತ್ತಮ. ನಿನ್ನ ಸಹೋದರನನ್ನಾಗಲಿ ಸಹೋದರಿಯನ್ನಾಗಲಿ ಪಾಪಕ್ಕೆ ಬೀಳಿಸುವಂಥದ್ದನ್ನು ಮಾಡದಿರುವುದೇ ಉತ್ತಮ.
ಆದರೆ ಒಬ್ಬನು ತಾನು ತಿನ್ನುವ ಪದಾರ್ಥದಲ್ಲಿ ದೋಷವಿಲ್ಲ ಎಂಬ ದೃಢನಂಭಿಕೆಯಿಲ್ಲದೆ ತಿಂದರೆ, ಅವನು ತನ್ನನ್ನೇ ತಪ್ಪಿತಸ್ಥನನಾಗಿ ಮಾಡಿಕೊಳ್ಳುತ್ತಾನೆ. ಏಕೆಂದರೆ ಅದು ದೋಷರಹಿತವಾದದ್ದು ಎಂಬ ನಂಬಿಕೆ ಅವನಲ್ಲಿಲ್ಲ. ನಂಬಿಕೆಯ ಆಧಾರವಿಲ್ಲದೆ ಮಾಡುವುದೆಲ್ಲವೂ ಪಾಪವೇ.