ಆದ್ದರಿಂದ ಸಹೋದರ ಸಹೋದರಿಯರೇ, ದೇವರ ಮಹಾಕನಿಕರವನ್ನು ನಿಮ್ಮ ನೆನಪಿಗೆ ತಂದು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ನಿಮ್ಮನ್ನೇ ದೇವರಿಗೆ ಮೀಸಲಾದ, ಮೆಚ್ಚುಗೆಯಾದ ಸಜೀವ ಯಜ್ಞಗಳಾಗಿ ಅರ್ಪಿಸಿರಿ. ಇದೇ ನೀವು ಸಲ್ಲಿಸಬೇಕಾದ ನಿಜವಾದ ಆರಾಧನೆ.
ಈ ಲೋಕದವರ ನಡವಳಿಕೆಯನ್ನು ಅನುಸರಿಸದೆ ಅಂತರಂಗದಲ್ಲಿ ಮಾರ್ಪಾಟನ್ನು ಹೊಂದಿದವರಾಗಿದ್ದು ಪರಲೋಕಭಾವದವರಾಗಿರಿ. ಆಗ ನೀವು ದೇವರ ಚಿತ್ತಾನುಸಾರ ಯಾವುದು ಉತ್ತಮವಾದುದು, ಯಾವುದು ಮೆಚ್ಚಿಕೆಯಾದುದು ಯಾವುದು ಉತ್ಕೃಷ್ಟವಾದುದು ಎಂಬುದನ್ನು ಅರಿತುಕೊಳ್ಳುವಿರಿ.
ದೇವರು ನನಗೆ ವಿಶೇಷವಾದ ಒಂದು ವರವನ್ನು ಕೊಟ್ಟಿದ್ದಾನೆ. ಆದಕಾರಣವೇ, ನಿಮ್ಮಲ್ಲಿರುವ ಪ್ರತಿಯೊಬ್ಬರಿಗೂ ಈ ಸಂಗತಿಗಳನ್ನು ತಿಳಿಸುತ್ತಿದ್ದೇನೆ. ನೀವು ನಿಮ್ಮ ನಿಜವಾದ ಯೋಗ್ಯತೆಗಿಂತಲೂ ಹೆಚ್ಚಾಗಿ ನಿಮ್ಮ ವಿಷಯದಲ್ಲಿ ಭಾವಿಸಿಕೊಳ್ಳಬೇಡಿ. ನೀವು ನಿಮ್ಮ ವಿಷಯದಲ್ಲಿ ಏನು ಭಾವಿಸಿಕೊಂಡರೂ ಆ ಭಾವನೆಯು ನಿಮ್ಮ ನಿಜವಾದ ಯೋಗ್ಯತೆಗೆ ಸರಿಸಮಾನವಾಗಿರಬೇಕು. ದೇವರು ನಿಮಗೆ ಎಂಥ ನಂಬಿಕೆಯನ್ನು ಕೊಟ್ಟಿದ್ದಾನೋ ಆ ನಂಬಿಕೆಗೆ ತಕ್ಕಂತೆ ನಿಮ್ಮ ವಿಷಯದಲ್ಲಿ ಭಾವಿಸಿಕೊಳ್ಳಿರಿ.
ನಾವೆಲ್ಲರೂ ಬೇರೆಬೇರೆ ವರಗಳನ್ನು ಹೊಂದಿದ್ದೇವೆ. ದೇವರು ನಮಗೆ ಕೊಟ್ಟಿರುವ ಕೃಪೆಯಿಂದಲೇ ಪ್ರತಿಯೊಂದು ವರವು ಬಂದಿದೆ. ಪ್ರವಾದಿಸುವ ವರವನ್ನು ಹೊಂದಿರುವವನು ತನಗಿರುವ ನಂಬಿಕೆಯೊಂದಿಗೆ ಆ ವರವನ್ನು ಉಪಯೋಗಿಸಬೇಕು.
ಉಪದೇಶಮಾಡುವ ವರವನ್ನು ಹೊಂದಿರುವವನು ಉಪದೇಶ ಮಾಡಬೇಕು. ಸಂತೈಸುವ ವರವನ್ನು ಹೊಂದಿರುವವನು ಬೇರೆಯವರನ್ನು ಸಂತೈಸಬೇಕು. ದಾನಮಾಡುವ ವರವನ್ನು ಹೊಂದಿರುವವನು ಉದಾರವಾಗಿ ಕೊಡಬೇಕು. ನಾಯಕತ್ವದ ವರವನ್ನು ಹೊಂದಿರುವವನು ನಾಯಕತ್ವವನ್ನು ವಹಿಸಿಕೊಂಡಿರುವಾಗ ಕಷ್ಟಪಟ್ಟು ದುಡಿಯಬೇಕು. ಕನಿಕರವನ್ನು ತೋರುವ ವರವನ್ನು ಹೊಂದಿರುವವನು ಆನಂದದಿಂದ ಆ ಕಾರ್ಯವನ್ನು ಮಾಡಬೇಕು.
ನೀವು ಒಬ್ಬರಿಗೊಬ್ಬರು ಸಮಾಧಾನದಿಂದ ಒಟ್ಟಾಗಿ ಜೀವಿಸಿರಿ. ಗರ್ವಪಡಬೇಡಿರಿ. ಸಮಾಜದಲ್ಲಿ ಗಣನೆಗೆ ಬಾರದ ಜನರೊಂದಿಗೆ ಸ್ನೇಹದಿಂದಿರಲು ಅಪೇಕ್ಷಿಸಿರಿ. ನಿಮ್ಮನ್ನು ನೀವೆ, ಬುದ್ಧಿವಂತರೆಂದು ಎಣಿಸಿಕೊಳ್ಳಬೇಡಿರಿ.
ನನ್ನ ಸ್ನೇಹಿತರೇ, ನಿಮಗೆ ಕೇಡುಮಾಡುವ ಜನರನ್ನು ದಂಡಿಸಲು ಪ್ರಯತ್ನಿಸಬೇಡಿ. ದೇವರು ತನ್ನ ಕೋಪದಿಂದ ಅವರನ್ನು ದಂಡಿಸುವವರೆಗೆ ಕಾದುಕೊಂಡಿರಿ. “ನಾನೇ ದಂಡಿಸುವವನು; ನಾನೇ ಜನರಿಗೆ ಮುಯ್ಯಿತೀರಿಸುವವನು ಎಂದು ಪ್ರಭುವು ಹೇಳುತ್ತಾನೆ” [✡ಉಲ್ಲೇಖನ: ಧರ್ಮೋಪದೇಶ. 32:35.] ಎಂಬುದಾಗಿ ಬರೆಯಲ್ಪಟ್ಟಿದೆ.
ನೀವು ಮಾಡಬೇಕಾದದ್ದೇನೆಂದರೆ, “ನಿಮ್ಮ ವೈರಿಯು ಹಸಿವೆಗೊಂಡಿದ್ದರೆ, ಅವನಿಗೆ ಊಟ ಕೊಡಿರಿ. ನಿಮ್ಮ ವೈರಿಯು ಬಾಯಾರಿದ್ದರೆ, ಅವನಿಗೆ ಕುಡಿಯಲು ನೀರು ಕೊಡಿರಿ. ನೀವು ಹೀಗೆ ಮಾಡಿದರೆ, ಅವನಿಗೆ ನಾಚಿಕೆಯಾಗುವುದು.”ಜ್ಞಾನೋಕ್ತಿಗಳು 25:21-22