ನಂತರ ನಾನು ನೋಡಿದಾಗ ನನ್ನ ಎದುರಿನಲ್ಲಿ ಪರಲೋಕದ ಬಾಗಿಲು ತೆರೆದಿರುವುದನ್ನು ಕಂಡೆನು. ನನ್ನ ಜೊತೆಯಲ್ಲಿ ಮೊದಲು ಮಾತನಾಡಿದ್ದ ಧ್ವನಿಯೇ ಮತ್ತೆ ನನ್ನೊಂದಿಗೆ ಮಾತಾಡಿತು. ಆ ಧ್ವನಿಯು ತುತೂರಿಯ ಧ್ವನಿಯಂತಿತ್ತು. ಆ ಧ್ವನಿಯು, “ಇಲ್ಲಿಗೆ ಹತ್ತಿ ಬಾ. ಮುಂದೆ ಸಂಭವಿಸುವುದನ್ನು ನಾನು ನಿನಗೆ ತೋರಿಸುತ್ತೇನೆ” ಎಂದು ಹೇಳಿತು.
ಇದಲ್ಲದೆ ಸಿಂಹಾಸನದ ಮುಂದೆ ಗಾಜಿನ ಸಮುದ್ರದಂತೆ ಕಾಣುವ ವಸ್ತುವೊಂದಿತ್ತು. ಅದು ಸ್ಫಟಿಕದಂತೆ ಸ್ಪಚ್ಛವಾಗಿತ್ತು. ಆ ಸಿಂಹಾಸನದ ಮುಂದೆ ಮತ್ತು ಅದರ ಪ್ರತಿಯೊಂದು ಮಗ್ಗುಲಿನಲ್ಲೂ ನಾಲ್ಕು ಜೀವಿಗಳಿದ್ದವು. ಈ ಜೀವಿಗಳ ಹಿಂಭಾಗದಲ್ಲೆಲ್ಲಾ ಮತ್ತು ಮುಂಭಾಗದಲ್ಲೆಲ್ಲಾ ಕಣ್ಣುಗಳು ತುಂಬಿದ್ದವು.
ಈ ನಾಲ್ಕು ಜೀವಿಗಳಲ್ಲಿ ಪ್ರತಿಯೊಂದಕ್ಕೂ ಆರು ರೆಕ್ಕೆಗಳಿದ್ದವು. ಈ ಜೀವಿಗಳ ಹೊರಭಾಗದಲ್ಲೆಲ್ಲಾ ಮತ್ತು ಒಳಭಾಗದಲ್ಲೆಲ್ಲಾ ಕಣ್ಣುಗಳಿದ್ದವು. ಈ ನಾಲ್ಕು ಜೀವಿಗಳು ಹಗಲಿರುಳು ಎಡಬಿಡದೆ ಹೀಗೆ ಹೇಳುತ್ತಿದ್ದವು: “ದೇವರಾದ ಪ್ರಭು, ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು; ಆತನು ಸರ್ವಶಕ್ತನು. ಆತನು ಭೂತಕಾಲದಲ್ಲಿ ಇದ್ದವನೂ ವರ್ತಮಾನಕಾಲದಲ್ಲಿ ಇರುವಾತನೂ ಮುಂದೆ ಬರುವಾತನೂ ಆಗಿದ್ದಾನೆ.”
ಇಪ್ಪತ್ತನಾಲ್ಕು ಮಂದಿ ಹಿರಿಯರು ತಮ್ಮ ಕಿರೀಟಗಳನ್ನು ತೆಗೆದು ಬದಿಗಿಟ್ಟು, ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಮೊಣಕಾಲೂರಿ ನಮಸ್ಕರಿಸಿ, ಯುಗಯುಗಾಂತರಗಳಲ್ಲಿಯೂ ಜೀವಿಸುವ ಆತನನ್ನು ಆರಾಧಿಸುತ್ತಾ ಇಂತೆಂದರು:
“ನಮ್ಮ ಪ್ರಭುವೇ, ನಮ್ಮ ದೇವರೇ! ನೀನು ಪ್ರಭಾವ, ಗೌರವ, ಅಧಿಕಾರಗಳನ್ನು ಪಡೆಯಲು ಯೋಗ್ಯನಾಗಿರುವೆ. ಎಲ್ಲವನ್ನೂ ನಿರ್ಮಿಸಿದಾತನು ನೀನೇ. ನಿನ್ನ ಚಿತ್ತದಂತೆಯೇ ಎಲ್ಲವೂ ಇದ್ದವು; ಎಲ್ಲವೂ ಸೃಷ್ಟಿಗೊಂಡವು.”