1
|
ನಂತರ ನಾನು ನೋಡಿದಾಗ, ನನ್ನ ಎದುರಿನಲ್ಲಿಯೇ ಕುರಿಮರಿಯಾದಾತನು ಇದ್ದನು. ಆತನು ಚೀಯೋನ್ ಪರ್ವತದ ಮೇಲೆ ನಿಂತಿದ್ದನು. ಆತನ ಜೊತೆಯಲ್ಲಿ 1,44,000 ಜನರಿದ್ದರು. ಅವರ ಹಣೆಗಳ ಮೇಲೆ ಆತನ ಹೆಸರನ್ನು ಮತ್ತು ಆತನ ತಂದೆಯ ಹೆಸರನ್ನು ಬರೆಯಲಾಗಿತ್ತು. |
2
|
ನಾನು ಪರಲೋಕದಿಂದ ಒಂದು ಶಬ್ದವನ್ನು ಕೇಳಿಸಿಕೊಂಡೆನು. ಅದು ನೀರಿನ ಪ್ರವಾಹದಂತೆ ಭೋರ್ಗರೆಯುವ ಶಬ್ದದಂತೆ ಮತ್ತು ಗುಡುಗಿನ ಧ್ವನಿಯಂತೆ ಇದ್ದಿತು. ಜನರು ತಮ್ಮ ತಂತಿವಾದ್ಯಗಳನ್ನು ಬಾರಿಸುತ್ತಿರುವರೋ ಎಂಬಂತೆ ಆ ಶಬ್ದವು ನನಗೆ ಕೇಳಿಸಿತು. |
3
|
ಜನರು ಸಿಂಹಾಸನದ, ನಾಲ್ಕು ಜೀವಿಗಳ ಮತ್ತು ಹಿರಿಯರ ಸನ್ನಿಧಿಯಲ್ಲಿ ಹೊಸ ಹಾಡನ್ನು ಹಾಡಿದರು. ಈ ಲೋಕದಿಂದ ಬಿಡುಗಡೆ ಹೊಂದಿದ್ದ 1,44,000 ಜನರು ಮಾತ್ರ ಈ ಹಾಡನ್ನು ಕಲಿಯಲು ಶಕ್ತರಾಗಿದ್ದರು. ಈ ಹಾಡನ್ನು ಬೇರೆ ಯಾರೂ ಕಲಿಯಲಾಗುತ್ತಿರಲಿಲ್ಲ. |
4
|
ಇವರು ಸ್ತ್ರೀ ಸಹವಾಸದಿಂದ ಮಲಿನರಾಗದೆ ಕನ್ನಿಕೆಯರಂತೆ ಉಳಿದಿದ್ದರು. ಕುರಿಮರಿಯಾದಾತನು ಹೋದಕಡೆಯಲ್ಲೆಲ್ಲಾ ಅವರು ಆತನನ್ನು ಹಿಂಬಾಲಿಸುತ್ತಾರೆ. ಭೂಲೋಕದ ಜನರ ಮಧ್ಯದಿಂದ ಬಿಡುಗಡೆ ಹೊಂದಿದವರೇ 1,44,000 ಮಂದಿ. ದೇವರಿಗೂ ಕುರಿಮರಿಯಾದಾತನಿಗೂ ಅರ್ಪಿತರಾದವರಲ್ಲಿ ಇವರೇ ಮೊದಲಿಗರಾಗಿದ್ದರು. |
5
|
ಈ ಜನರು ಸುಳ್ಳುಗಾರರಾಗಿರಲಿಲ್ಲ. ಇವರು ನಿರ್ದೋಷಿಗಳಾಗಿದ್ದರು. |
6
|
ನಂತರ ಇನ್ನೊಬ್ಬ ದೇವದೂತನು ವಾಯುಮಂಡಲದಲ್ಲಿ ಅತಿ ಎತ್ತರದಲ್ಲಿ ಹಾರುತ್ತಿರುವುದನ್ನು ನಾನು ನೋಡಿದೆನು. ಭೂಮಿಯ ಮೇಲೆ ವಾಸಿಸುವ ಸಕಲ ಜನಾಂಗ, ಕುಲ, ಪ್ರಜೆ, ಭಾಷೆಗಳ ಜನರಿಗೆಲ್ಲಾ ಬೋಧಿಸುವುದಕ್ಕೆ ನಿತ್ಯವಾದ ಸುವಾರ್ತೆಯು ಆ ದೇವದೂತನಲ್ಲಿತ್ತು. |
7
|
ಆ ದೇವದೂತನು ಗಟ್ಟಿಯಾದ ಧ್ವನಿಯಲ್ಲಿ, “ದೇವರಿಗೆ ಭಯಪಡಿರಿ. ಆತನನ್ನು ಸ್ತುತಿಸಿರಿ. ಜನರಿಗೆಲ್ಲ ದೇವರು ತೀರ್ಪು ನೀಡುವ ಸಮಯವು ಹತ್ತಿರ ಬಂದಿದೆ. ದೇವರನ್ನು ಆರಾಧಿಸಿರಿ. ಪರಲೋಕವನ್ನೂ ಭೂಮಿಯನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಸೃಷ್ಟಿಸಿದವನು ಆತನೇ” ಎಂದು ಹೇಳಿದನು. |
8
|
ನಂತರ ಎರಡನೆಯ ದೇವದೂತನು ಮೊದಲನೆಯ ದೇವದೂತನನ್ನು ಹಿಂಬಾಲಿಸುತ್ತಾ, “ಅವಳು ನಾಶವಾದಳು! ಬಾಬಿಲೋನ್ ಎಂಬ ನಗರಿಯು ನಾಶವಾದಳು! ಆಕೆಯು ಸಕಲ ಜನಾಂಗಗಳಿಗೆ ತನ್ನ ಜಾರತ್ವವೆಂಬ ಮತ್ತು ದೇವರ ಕೋಪವೆಂಬ ದ್ರಾಕ್ಷಾರಸವನ್ನು ಕುಡಿಸಿದಳು” ಎಂದು ಹೇಳಿದನು. |
9
|
ಮೂರನೆಯ ದೇವದೂತನು ಮೊದಲ ಇಬ್ಬರು ದೇವದೂತರನ್ನು ಹಿಂಬಾಲಿಸಿದನು. ಈ ಮೂರನೆಯ ದೇವದೂತನು ಗಟ್ಟಿಯಾದ ಧ್ವನಿಯಲ್ಲಿ ಹೀಗೆ ಹೇಳಿದನು: “ಮೃಗವನ್ನೂ ಮೃಗದ ವಿಗ್ರಹವನ್ನೂ ಆರಾಧಿಸುವವನಿಗೆ ಮತ್ತು ಮೃಗದ ಗುರುತನ್ನು ಹಣೆಯ ಮೇಲಾಗಲಿ ಇಲ್ಲವೆ ತನ್ನ ಕೈಗಳ ಮೇಲಾಗಲಿ ಹಾಕಿಸಿಕೊಳ್ಳುವವನಿಗೆ ಕೇಡಾಗುವುದು. |
10
|
ಅವನು ದೇವರ ಕೋಪವೆಂಬ ದ್ರಾಕ್ಷಾರಸವನ್ನು ಕುಡಿಯುತ್ತಾನೆ. ದೇವರ ಕೋಪವೆಂಬ ಬಟ್ಟಲಿನಲ್ಲಿ ಈ ದ್ರಾಕ್ಷಾರಸವನ್ನು ಅದರ ಪೂರ್ಣಶಕ್ತಿಯ ಸಮೇತವಾಗಿ ತಯಾರಿಸಲಾಗಿದೆ. ಅವನನ್ನು ಪರಿಶುದ್ಧ ದೇವದೂತರ ಮತ್ತು ಕುರಿಮರಿಯಾದಾತನ ಮುಂದೆ ಉರಿಯುವ ಗಂಧಕದಿಂದ ಯಾತನೆಪಡಿಸಲಾಗುವುದು. |
11
|
ಅವರ ಯಾತನೆಯೆಂಬ ಹೊಗೆಯು ಸದಾ ಏಳುತ್ತಲೇ ಇರುವುದು. ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವ ಮತ್ತು ಅದರ ಹೆಸರನ್ನು ಗುರುತು ಹಾಕಿಸಿಕೊಳ್ಳುವ ಜನರಿಗೆ ಹಗಲಲ್ಲೂ ರಾತ್ರಿಯಲ್ಲೂ ವಿಶ್ರಾಂತಿಯೆಂಬುದೇ ಇರುವುದಿಲ್ಲ.” |
12
|
ಈ ಪರಿಸ್ಥಿತಿಯಲ್ಲಿ, ದೇವರ ಪರಿಶುದ್ಧ ಜನರು ತಾಳ್ಮೆಯಿಂದಿರಬೇಕು. ಅವರು ದೇವರ ಆಜ್ಞೆಗಳಿಗೆ ವಿಧೇಯರಾಗಿರಬೇಕು ಮತ್ತು ಯೇಸುವಿನಲ್ಲಿ ನಂಬಿಕೆಯನ್ನಿಟ್ಟಿರಬೇಕು. |
13
|
ನಂತರ ನಾನು ಪರಲೋಕದಿಂದ ಒಂದು ಧ್ವನಿಯನ್ನು ಕೇಳಿದೆನು. ಆ ಧ್ವನಿಯು ಹೀಗೆ ಹೇಳಿತು: “ಇದನ್ನು ಬರೆ: ಇಂದಿನಿಂದ ಪ್ರಭುವಿನ ಭಕ್ತರಾಗಿದ್ದು ಸಾಯುವಂತಹ ಜನರು ಧನ್ಯರು.” “ಹೌದು, ಇದು ನಿಜ. ಆ ಜನರು ತಮ್ಮ ಪ್ರಯಾಸದ ಕೆಲಸವನ್ನು ಮುಗಿಸಿದವರಾಗಿ ವಿಶ್ರಾಂತಿ ಪಡೆಯುತ್ತಾರೆ. ಅವರು ಮಾಡಿದುದೆಲ್ಲವೂ ಅವರೊಂದಿಗೇ ಇರುತ್ತದೆ” ಎಂದು ಪವಿತ್ರಾತ್ಮನು ಹೇಳುತ್ತಾನೆ. |
14
|
ನಾನು ನೋಡಿದಾಗ ನನ್ನ ಎದುರಿನಲ್ಲಿ ಮನುಷ್ಯಕುಮಾರನಂತೆ ಕಾಣುತ್ತಿದ್ದವನು ಆ ಬಿಳಿಯ ಮೋಡದ ಮೇಲೆ ಕುಳಿತಿದ್ದನು. ಆತನ ತಲೆಯ ಮೇಲೆ ಚಿನ್ನದ ಕಿರೀಟವಿತ್ತು ಮತ್ತು ಆತನ ಕೈಯಲ್ಲಿ ಹರಿತವಾದ ಕುಡುಗೋಲಿತ್ತು. |
15
|
ಆಗ ಮತ್ತೊಬ್ಬ ದೇವದೂತನು ಆಲಯ ದಿಂದ ಹೊರಗೆ ಬಂದನು. ಈ ದೇವದೂತನು ಮೋಡದ ಮೇಲೆ ಕುಳಿತಿರುವಾತನಿಗೆ, “ನಿನ್ನ ಕುಡುಗೋಲನ್ನು ತೆಗೆದುಕೊಂಡು ಭೂಮಿಯಿಂದ ಒಟ್ಟುಗೂಡಿಸು. ಯಾಕೆಂದರೆ ಸುಗ್ಗೀಕಾಲವು ಬಂದಿದೆ. ಭೂಮಿಯ ಫಸಲು ಮಾಗಿದೆ” ಎಂದು ಹೇಳಿದನು. |
16
|
ಆದ್ದರಿಂದ ಮೋಡದ ಮೇಲೆ ಕುಳಿತಿದ್ದಾತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಬೀಸಿದನು. ಆಗ ಭೂಮಿಯ ಪೈರು ಕೊಯ್ಯಲ್ಪಟ್ಟಿತು. |
17
|
ನಂತರ ಮತ್ತೊಬ್ಬ ದೇವದೂತನು ಪರಲೋಕದ ಆಲಯದಿಂದ ಹೊರಗೆ ಬಂದನು. ಆ ದೇವದೂತನಲ್ಲಿಯೂ ಹರಿತವಾದ ಒಂದು ಕುಡುಗೋಲಿತ್ತು. |
18
|
ನಂತರ ಮತ್ತೊಬ್ಬ ದೇವದೂತನು ಯಜ್ಞವೇದಿಕೆಯಿಂದ ಬಂದನು. ಅವನಿಗೆ ಬೆಂಕಿಯ ಮೇಲೆ ಅಧಿಕಾರವಿತ್ತು. ಅವನು ಹರಿತವಾದ ಕುಡುಗೋಲಿದ್ದ ದೇವದೂತನನ್ನು ಕರೆದು, “ನಿನ್ನ ಹರಿತವಾದ ಕುಡುಗೋಲನ್ನು ತೆಗೆದುಕೊಂಡು, ಭೂಮಿಯ ದ್ರಾಕ್ಷಿತೋಟದಿಂದ ದ್ರಾಕ್ಷಿ ಗೊಂಚಲುಗಳನ್ನು ಒಟ್ಟುಗೂಡಿಸು. ಭೂಮಿಯ ದ್ರಾಕ್ಷಿಯೆಲ್ಲಾ ಮಾಗಿವೆ” ಎಂದು ಹೇಳಿದನು. |
19
|
ಆ ದೇವದೂತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಬೀಸಿ, ದ್ರಾಕ್ಷಿಯನ್ನೆಲ್ಲಾ ಒಟ್ಟುಗೂಡಿಸಿ, ದೇವರ ಕೋಪವೆಂಬ ದ್ರಾಕ್ಷಿಯ ಆಲೆಗೆ ಎಸೆದನು. |
20
|
ಆ ದ್ರಾಕ್ಷಿಯನ್ನು ನಗರದ ಹೊರಭಾಗದಲ್ಲಿದ್ದ ದ್ರಾಕ್ಷಿಯ ಆಲೆಯಲ್ಲಿ ಕಿವುಚಿ ಹಾಕಿದರು. ಆ ದ್ರಾಕ್ಷಿಯ ಆಲೆಯಿಂದ ರಕ್ತವು ಹೊರಕ್ಕೆ ಬಂದಿತು. ಅದು ಕುದುರೆಗಳ ತಲೆಗಳಷ್ಟು ಎತ್ತರಕ್ಕೆ ಏರಿ ಇನ್ನೂರು ಮೈಲಿಗಳಷ್ಟು ದೂರ ಹರಿಯಿತು. |
Revelation 14:13 Kannada Language Bible Words basic statistical display
COMING SOON ...