ನಂತರ ನಾನು ನೋಡಿದಾಗ, ನನ್ನ ಎದುರಿನಲ್ಲಿಯೇ ಕುರಿಮರಿಯಾದಾತನು ಇದ್ದನು. ಆತನು ಚೀಯೋನ್ ಪರ್ವತದ ಮೇಲೆ ನಿಂತಿದ್ದನು. ಆತನ ಜೊತೆಯಲ್ಲಿ 1,44,000 ಜನರಿದ್ದರು. ಅವರ ಹಣೆಗಳ ಮೇಲೆ ಆತನ ಹೆಸರನ್ನು ಮತ್ತು ಆತನ ತಂದೆಯ ಹೆಸರನ್ನು ಬರೆಯಲಾಗಿತ್ತು.
ನಾನು ಪರಲೋಕದಿಂದ ಒಂದು ಶಬ್ದವನ್ನು ಕೇಳಿಸಿಕೊಂಡೆನು. ಅದು ನೀರಿನ ಪ್ರವಾಹದಂತೆ ಭೋರ್ಗರೆಯುವ ಶಬ್ದದಂತೆ ಮತ್ತು ಗುಡುಗಿನ ಧ್ವನಿಯಂತೆ ಇದ್ದಿತು. ಜನರು ತಮ್ಮ ತಂತಿವಾದ್ಯಗಳನ್ನು ಬಾರಿಸುತ್ತಿರುವರೋ ಎಂಬಂತೆ ಆ ಶಬ್ದವು ನನಗೆ ಕೇಳಿಸಿತು.
ಜನರು ಸಿಂಹಾಸನದ, ನಾಲ್ಕು ಜೀವಿಗಳ ಮತ್ತು ಹಿರಿಯರ ಸನ್ನಿಧಿಯಲ್ಲಿ ಹೊಸ ಹಾಡನ್ನು ಹಾಡಿದರು. ಈ ಲೋಕದಿಂದ ಬಿಡುಗಡೆ ಹೊಂದಿದ್ದ 1,44,000 ಜನರು ಮಾತ್ರ ಈ ಹಾಡನ್ನು ಕಲಿಯಲು ಶಕ್ತರಾಗಿದ್ದರು. ಈ ಹಾಡನ್ನು ಬೇರೆ ಯಾರೂ ಕಲಿಯಲಾಗುತ್ತಿರಲಿಲ್ಲ.
ಇವರು ಸ್ತ್ರೀ ಸಹವಾಸದಿಂದ ಮಲಿನರಾಗದೆ ಕನ್ನಿಕೆಯರಂತೆ ಉಳಿದಿದ್ದರು. ಕುರಿಮರಿಯಾದಾತನು ಹೋದಕಡೆಯಲ್ಲೆಲ್ಲಾ ಅವರು ಆತನನ್ನು ಹಿಂಬಾಲಿಸುತ್ತಾರೆ. ಭೂಲೋಕದ ಜನರ ಮಧ್ಯದಿಂದ ಬಿಡುಗಡೆ ಹೊಂದಿದವರೇ 1,44,000 ಮಂದಿ. ದೇವರಿಗೂ ಕುರಿಮರಿಯಾದಾತನಿಗೂ ಅರ್ಪಿತರಾದವರಲ್ಲಿ ಇವರೇ ಮೊದಲಿಗರಾಗಿದ್ದರು.
ನಂತರ ಇನ್ನೊಬ್ಬ ದೇವದೂತನು ವಾಯುಮಂಡಲದಲ್ಲಿ ಅತಿ ಎತ್ತರದಲ್ಲಿ ಹಾರುತ್ತಿರುವುದನ್ನು ನಾನು ನೋಡಿದೆನು. ಭೂಮಿಯ ಮೇಲೆ ವಾಸಿಸುವ ಸಕಲ ಜನಾಂಗ, ಕುಲ, ಪ್ರಜೆ, ಭಾಷೆಗಳ ಜನರಿಗೆಲ್ಲಾ ಬೋಧಿಸುವುದಕ್ಕೆ ನಿತ್ಯವಾದ ಸುವಾರ್ತೆಯು ಆ ದೇವದೂತನಲ್ಲಿತ್ತು.
ಆ ದೇವದೂತನು ಗಟ್ಟಿಯಾದ ಧ್ವನಿಯಲ್ಲಿ, “ದೇವರಿಗೆ ಭಯಪಡಿರಿ. ಆತನನ್ನು ಸ್ತುತಿಸಿರಿ. ಜನರಿಗೆಲ್ಲ ದೇವರು ತೀರ್ಪು ನೀಡುವ ಸಮಯವು ಹತ್ತಿರ ಬಂದಿದೆ. ದೇವರನ್ನು ಆರಾಧಿಸಿರಿ. ಪರಲೋಕವನ್ನೂ ಭೂಮಿಯನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಸೃಷ್ಟಿಸಿದವನು ಆತನೇ” ಎಂದು ಹೇಳಿದನು.
ನಂತರ ಎರಡನೆಯ ದೇವದೂತನು ಮೊದಲನೆಯ ದೇವದೂತನನ್ನು ಹಿಂಬಾಲಿಸುತ್ತಾ, “ಅವಳು ನಾಶವಾದಳು! ಬಾಬಿಲೋನ್ ಎಂಬ ನಗರಿಯು ನಾಶವಾದಳು! ಆಕೆಯು ಸಕಲ ಜನಾಂಗಗಳಿಗೆ ತನ್ನ ಜಾರತ್ವವೆಂಬ ಮತ್ತು ದೇವರ ಕೋಪವೆಂಬ ದ್ರಾಕ್ಷಾರಸವನ್ನು ಕುಡಿಸಿದಳು” ಎಂದು ಹೇಳಿದನು.
ಮೂರನೆಯ ದೇವದೂತನು ಮೊದಲ ಇಬ್ಬರು ದೇವದೂತರನ್ನು ಹಿಂಬಾಲಿಸಿದನು. ಈ ಮೂರನೆಯ ದೇವದೂತನು ಗಟ್ಟಿಯಾದ ಧ್ವನಿಯಲ್ಲಿ ಹೀಗೆ ಹೇಳಿದನು: “ಮೃಗವನ್ನೂ ಮೃಗದ ವಿಗ್ರಹವನ್ನೂ ಆರಾಧಿಸುವವನಿಗೆ ಮತ್ತು ಮೃಗದ ಗುರುತನ್ನು ಹಣೆಯ ಮೇಲಾಗಲಿ ಇಲ್ಲವೆ ತನ್ನ ಕೈಗಳ ಮೇಲಾಗಲಿ ಹಾಕಿಸಿಕೊಳ್ಳುವವನಿಗೆ ಕೇಡಾಗುವುದು.
ಅವನು ದೇವರ ಕೋಪವೆಂಬ ದ್ರಾಕ್ಷಾರಸವನ್ನು ಕುಡಿಯುತ್ತಾನೆ. ದೇವರ ಕೋಪವೆಂಬ ಬಟ್ಟಲಿನಲ್ಲಿ ಈ ದ್ರಾಕ್ಷಾರಸವನ್ನು ಅದರ ಪೂರ್ಣಶಕ್ತಿಯ ಸಮೇತವಾಗಿ ತಯಾರಿಸಲಾಗಿದೆ. ಅವನನ್ನು ಪರಿಶುದ್ಧ ದೇವದೂತರ ಮತ್ತು ಕುರಿಮರಿಯಾದಾತನ ಮುಂದೆ ಉರಿಯುವ ಗಂಧಕದಿಂದ ಯಾತನೆಪಡಿಸಲಾಗುವುದು.
ಅವರ ಯಾತನೆಯೆಂಬ ಹೊಗೆಯು ಸದಾ ಏಳುತ್ತಲೇ ಇರುವುದು. ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವ ಮತ್ತು ಅದರ ಹೆಸರನ್ನು ಗುರುತು ಹಾಕಿಸಿಕೊಳ್ಳುವ ಜನರಿಗೆ ಹಗಲಲ್ಲೂ ರಾತ್ರಿಯಲ್ಲೂ ವಿಶ್ರಾಂತಿಯೆಂಬುದೇ ಇರುವುದಿಲ್ಲ.”
ನಂತರ ನಾನು ಪರಲೋಕದಿಂದ ಒಂದು ಧ್ವನಿಯನ್ನು ಕೇಳಿದೆನು. ಆ ಧ್ವನಿಯು ಹೀಗೆ ಹೇಳಿತು: “ಇದನ್ನು ಬರೆ: ಇಂದಿನಿಂದ ಪ್ರಭುವಿನ ಭಕ್ತರಾಗಿದ್ದು ಸಾಯುವಂತಹ ಜನರು ಧನ್ಯರು.” “ಹೌದು, ಇದು ನಿಜ. ಆ ಜನರು ತಮ್ಮ ಪ್ರಯಾಸದ ಕೆಲಸವನ್ನು ಮುಗಿಸಿದವರಾಗಿ ವಿಶ್ರಾಂತಿ ಪಡೆಯುತ್ತಾರೆ. ಅವರು ಮಾಡಿದುದೆಲ್ಲವೂ ಅವರೊಂದಿಗೇ ಇರುತ್ತದೆ” ಎಂದು ಪವಿತ್ರಾತ್ಮನು ಹೇಳುತ್ತಾನೆ.
ನಾನು ನೋಡಿದಾಗ ನನ್ನ ಎದುರಿನಲ್ಲಿ ಮನುಷ್ಯಕುಮಾರನಂತೆ [*ಮನುಷ್ಯಕುಮಾರ ಇದು ಯೇಸುಕ್ರಿಸ್ತನಿಗೆ ಕೊಡಲ್ಪಟ್ಟಿರುವ ಹೆಸರು. ಸಾಮಾನ್ಯವಾಗಿ ಯೇಸುಕ್ರಿಸ್ತನು ಸ್ವತಃ ತನ್ನನ್ನೇ ಕುರಿತು ಈ ಪದವನ್ನು ಉಪಯೋಗಿಸುತ್ತಾನೆ. ನೋಡಿರಿ: ದಾನಿಯೇಲನು 7:13-14.] ಕಾಣುತ್ತಿದ್ದವನು ಆ ಬಿಳಿಯ ಮೋಡದ ಮೇಲೆ ಕುಳಿತಿದ್ದನು. ಆತನ ತಲೆಯ ಮೇಲೆ ಚಿನ್ನದ ಕಿರೀಟವಿತ್ತು ಮತ್ತು ಆತನ ಕೈಯಲ್ಲಿ ಹರಿತವಾದ ಕುಡುಗೋಲಿತ್ತು.
ಆಗ ಮತ್ತೊಬ್ಬ ದೇವದೂತನು ಆಲಯದಿಂದ ಹೊರಗೆ ಬಂದನು. ಈ ದೇವದೂತನು ಮೋಡದ ಮೇಲೆ ಕುಳಿತಿರುವಾತನಿಗೆ, “ನಿನ್ನ ಕುಡುಗೋಲನ್ನು ತೆಗೆದುಕೊಂಡು ಭೂಮಿಯ ಫಸಲನ್ನು ಒಟ್ಟುಗೂಡಿಸು. ಯಾಕೆಂದರೆ ಸುಗ್ಗಿಕಾಲವು ಬಂದಿದೆ. ಭೂಮಿಯ ಫಸಲು ಮಾಗಿದೆ” ಎಂದು ಹೇಳಿದನು.
ನಂತರ ಮತ್ತೊಬ್ಬ ದೇವದೂತನು ಯಜ್ಞವೇದಿಕೆಯಿಂದ ಬಂದನು. ಅವನಿಗೆ ಬೆಂಕಿಯ ಮೇಲೆ ಅಧಿಕಾರವಿತ್ತು. ಅವನು ಹರಿತವಾದ ಕುಡುಗೋಲಿದ್ದ ದೇವದೂತನನ್ನು ಕರೆದು, “ನಿನ್ನ ಹರಿತವಾದ ಕುಡುಗೋಲನ್ನು ತೆಗೆದುಕೊಂಡು, ಭೂಮಿಯ ದ್ರಾಕ್ಷಿತೋಟದಿಂದ ದ್ರಾಕ್ಷಿಗೊಂಚಲುಗಳನ್ನು ಒಟ್ಟುಗೂಡಿಸು. ಭೂಮಿಯ ದ್ರಾಕ್ಷಿಯೆಲ್ಲಾ ಮಾಗಿವೆ” ಎಂದು ಹೇಳಿದನು.
ಆ ದ್ರಾಕ್ಷಿಯನ್ನು ನಗರದ ಹೊರಭಾಗದಲ್ಲಿದ್ದ ದ್ರಾಕ್ಷಿಯ ಆಲೆಯಲ್ಲಿ ಕಿವುಚಿ ಹಾಕಿದರು. ಆ ದ್ರಾಕ್ಷಿಯ ಆಲೆಯಿಂದ ರಕ್ತವು ಹೊರಕ್ಕೆ ಬಂದಿತು. ಅದು ಕುದುರೆಗಳ ತಲೆಗಳಷ್ಟು ಎತ್ತರಕ್ಕೆ ಏರಿ ಇನ್ನೂರು ಮೈಲಿಗಳಷ್ಟು ದೂರ ಹರಿಯಿತು.