1
|
ಇದು ಯೇಸು ಕ್ರಿಸ್ತನ ಪ್ರಕಟನೆ. ದೇವರು ಬೇಗನೆ ಸಂಭವಿಸಲಿರುವುದನ್ನು ತನ್ನ ಸೇವಕರಿಗೆ ತೋರ್ಪಡಿಸುವುದಕ್ಕಾಗಿ ಯೇಸುವಿಗೆ ಇವುಗಳನ್ನು ಪ್ರಕಟಿಸಿದನು. ಕ್ರಿಸ್ತನು ತನ್ನ ಸೇವಕನಾದ ಯೋಹಾನನಿಗೆ ಇವುಗಳನ್ನು ತೋರಿಸಲು ತನ್ನ ದೂತನನ್ನು ಕಳುಹಿಸಿದನು. |
2
|
ಯೋಹಾನನು ತಾನು ಕಂಡದ್ದೆಲ್ಲವನ್ನು ತಿಳಿಸಿದನು. ಇದು ಯೇಸು ಕ್ರಿಸ್ತನು ಅವನಿಗೆ ಹೇಳಿದ ಸತ್ಯ. ಇದು ದೇವರಿಂದ ಬಂದ ಸಂದೇಶ. |
3
|
ದೇವರಿಂದ ಬಂದ ಈ ಸಂದೇಶದ ವಾಕ್ಯಗಳನ್ನು ಓದುವವರೂ ಈ ಸಂದೇಶವನ್ನು ಕೇಳಿ ಅದನ್ನು ಕೈಕೊಂಡು ನಡೆಯುವವರೂ ಭಾಗ್ಯವಂತರಾಗಿದ್ದಾರೆ. ಏಕೆಂದರೆ ನೆರವೇರುವ ಕಾಲವು ಸಮೀಪವಾಗಿದೆ. |
4
|
ಏಷ್ಯಾ ಪ್ರದೇಶದಲ್ಲಿರುವ ಏಳು ಸಭೆಗಳಿಗೆ ಯೋಹಾನನು ಬರೆಯುವುದೇನೆಂದರೆ: ವರ್ತಮಾನ, ಭೂತ, ಭವಿಷ್ಯತ್ಕಾಲಗಳಲ್ಲಿರುವಾತನಿಂದ ಮತ್ತು ಆತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ ಮತ್ತು |
5
|
ಯೇಸು ಕ್ರಿಸ್ತನಿಂದ ನಿಮಗೆ ಕೃಪೆಯೂ ಶಾಂತಿಯೂ ಲಭಿಸಲಿ. ಯೇಸು ನಂಬಿಗಸ್ತ ಸಾಕ್ಷಿಯಾಗಿದ್ದಾನೆ. ಸತ್ತವರೊಳಗಿಂದ ಮೇಲೆದ್ದು ಬಂದವರಲ್ಲಿ ಆತನೇ ಮೊದಲಿಗನಾಗಿದ್ದಾನೆ. ಆತನು ಲೋಕದ ರಾಜರುಗಳಿಗೆ ಅಧಿಪತಿಯಾಗಿದ್ದಾನೆ. ಯೇಸು ನಮ್ಮನ್ನು ಪ್ರೀತಿಸುತ್ತಾನೆ. ಆತನು ತನ್ನ ರಕ್ತದಿಂದ (ಮರಣ) ನಮ್ಮ ಪಾಪಗಳನ್ನು ನಿವಾರಿಸಿ ಬಿಡುಗಡೆಗೊಳಿಸಿದನು; |
6
|
ನಮ್ಮನ್ನು ಒಂದು ರಾಜ್ಯವನ್ನಾಗಿ ಮಾಡಿ ನಮ್ಮನ್ನು ತನ್ನ ತಂದೆಯಾದ ದೇವರ ಸೇವೆ ಮಾಡುವ ಯಾಜಕರನ್ನಾಗಿ ಮಾಡಿದನು. ಯೇಸುವಿಗೆ ಎಂದೆಂದಿಗೂ ಮಹಿಮೆ ಪ್ರಭಾವಗಳಿರಲಿ! ಆಮೆನ್. |
7
|
ಇಗೋ, ಯೇಸು ಮೋಡಗಳ ಸಂಗಡ ಬರುತ್ತಿದ್ದಾನೆ. ಪ್ರತಿಯೊಬ್ಬರು ಆತನನ್ನು ನೋಡುವರು, ಆತನನ್ನು ಇರಿದವರು ಸಹ ನೋಡುವರು. ಆತನನ್ನು ಕಂಡು ಲೋಕದ ಜನರೆಲ್ಲರೂ ಎದೆಬಡಿದುಕೊಂಡು ಗೋಳಾಡುವರು. ಹೌದು, ಇದು ಸಂಭವಿಸುತ್ತದೆ! ಆಮೆನ್. |
8
|
ಪ್ರಭುವಾದ ದೇವರು ಹೇಳುವುದೇನೆಂದರೆ: “ನಾನೇ ಆದಿಯೂ ಅಂತ್ಯವೂ ಆಗಿದ್ದೇನೆ. ನಾನು ವರ್ತಮಾನ, ಭೂತ ಮತ್ತು ಭವಿಷ್ಯತ್ ಕಾಲಗಳಲ್ಲಿರುವಾತನು. ನಾನೇ ಸರ್ವಶಕ್ತನು.” |
9
|
ಯೋಹಾನನೆಂಬ ನಾನು ಕ್ರಿಸ್ತನಲ್ಲಿ ನಿಮ್ಮ ಸಹೋದರನಾಗಿದ್ದೇನೆ. ನಾವೆಲ್ಲರೂ ಒಟ್ಟಾಗಿ ಯೇಸುವಿನ ನಿಮಿತ್ತ ಸಂಕಟಗಳಲ್ಲಿಯೂ ರಾಜ್ಯದಲ್ಲಿಯೂ ತಾಳ್ಮೆಯಲ್ಲಿಯೂ ಪಾಲುಗಾರರಾಗಿದ್ದೇವೆ. ನಾನು ದೇವರ ಸಂದೇಶಕ್ಕೂ ಯೇಸುವಿನ ಸತ್ಯಕ್ಕೂ ನಂಬಿಗಸ್ತನಾಗಿದ್ದುದರಿಂದ ಪತ್ಮೊಸ್ ದ್ವೀಪದಲ್ಲಿದ್ದೆನು. |
10
|
ಪ್ರಭುವಿನ ದಿನದಂದು ಪವಿತ್ರಾತ್ಮನು ನನ್ನನ್ನು ವಶಪಡಿಸಿಕೊಂಡನು. ಆಗ ನನ್ನ ಹಿಂಭಾಗದಲ್ಲಿ ಒಂದು ಮಹಾಶಬ್ದವನ್ನು ಕೇಳಿದೆನು. ಆ ಶಬ್ದವು ತುತೂರಿಯ ಧ್ವನಿಯಂತಿತ್ತು. |
11
|
ಆ ಧ್ವನಿಯು, “ನೀನು ನೋಡುವುದನ್ನೆಲ್ಲ ಒಂದು ಪುಸ್ತಕದಲ್ಲಿ ಬರೆದು ಎಫೆಸ, ಸ್ಮುರ್ನ, ಪೆರ್ಗಮ, ಥುವತೈರ, ಸಾರ್ದಿಸ್, ಫಿಲದೆಲ್ಫಿಯ ಮತ್ತು ಲವೊದಿಕೀಯ ಎಂಬ ಏಳು ಸಭೆಗಳಿಗೆ ಕಳುಹಿಸು” ಎಂದು ಹೇಳಿತು. |
12
|
ನನ್ನ ಜೊತೆಯಲ್ಲಿ ಯಾರು ಮಾತನಾಡುತ್ತಿದ್ದಾರೆಂದು ನೋಡಲು ನಾನು ಹಿಂದಕ್ಕೆ ತಿರುಗಿದಾಗ, ಏಳು ಬಂಗಾರದ ದೀಪಸ್ತಂಭಗಳನ್ನು ಕಂಡೆನು. |
13
|
ಆ ದೀಪಸ್ತಂಭಗಳ ಮಧ್ಯದಲ್ಲಿ “ಮನುಷ್ಯಕುಮಾರ”ನಂತೆ ಇರುವಾತನನ್ನು ನಾನು ನೋಡಿದೆನು. ಆತನು ಉದ್ದನೆಯ ನಿಲುವಂಗಿಯನ್ನು ಧರಿಸಿದ್ದನು; ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು. |
14
|
ಆತನ ತಲೆಗೂದಲು ಮಂಜಿನಂತೆಯೂ ಉಣ್ಣೆಯಂತೆಯೂ ಬೆಳ್ಳಗಿದ್ದವು; ಕಣ್ಣುಗಳು ಬೆಂಕಿಯ ಜ್ವಾಲೆಯಂತಿದ್ದವು; |
15
|
ಪಾದಗಳು ಕುಲುಮೆಯಲ್ಲಿ ಕಾಯಿಸಿದ ತಾಮ್ರದಂತಿದ್ದವು; ಧ್ವನಿಯು ಹರಿಯುವ ನೀರಿನ ಘೋಷದಂತಿತ್ತು. |
16
|
ಆತನು ತನ್ನ ಬಲಗೈಯಲ್ಲಿ ಏಳು ನಕ್ಷತ್ರಗಳನ್ನು ಹಿಡಿದುಕೊಂಡಿದ್ದನು. ಆತನ ಬಾಯೊಳಗಿನಿಂದ ಹರಿತವಾದ ಇಬ್ಬಾಯಿಖಡ್ಗವು ಹೊರಬರುತ್ತಿತ್ತು. ಆತನ ಮುಖವು ಮಧ್ಯಾಹ್ನದಲ್ಲಿ ಪ್ರಕಾಶಿಸುವ ಸೂರ್ಯನಂತಿತ್ತು. |
17
|
ನಾನು ಆತನನ್ನು ನೋಡಿದಾಗ, ಆತನ ಪಾದಗಳ ಬಳಿ ಸತ್ತವನಂತೆ ಕುಸಿದುಬಿದ್ದೆನು. ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು, “ಹೆದರಬೇಡ! ನಾನೇ ಆದಿ ಮತ್ತು ಅಂತ್ಯ. |
18
|
ನಾನೇ ಜೀವಿಸುವಾತನು. ನಾನು ಸತ್ತೆನು, ಆದರೆ ಇಗೋ ನೋಡು, ನಾನು ಯುಗಯುಗಾಂತರಗಳಲ್ಲಿಯೂ ಜೀವಿಸುವವನಾಗಿದ್ದೇನೆ. ಮರಣದ ಮತ್ತು ಪಾತಾಳದ ಬೀಗದ ಕೈಗಳು ನನ್ನಲ್ಲಿವೆ. |
19
|
ಆದ್ದರಿಂದ ನೀನು ನೋಡಿದ ಸಂಗತಿಗಳನ್ನು ಬರೆ. ಈಗ ಸಂಭವಿಸುವ ಸಂಗತಿಗಳನ್ನು ಮತ್ತು ಮುಂದೆ ಸಂಭವಿಸಬೇಕಾದ ಸಂಗತಿಗಳನ್ನು ಬರೆ. |
20
|
ನನ್ನ ಬಲಗೈಯಲ್ಲಿ ನೀನು ನೋಡಿದ ಏಳು ನಕ್ಷತ್ರಗಳ ಮತ್ತು ನೀನು ಕಂಡ ಏಳು ಬಂಗಾರದ ದೀಪಸ್ತಂಭಗಳ ಗೂಢಾರ್ಥವು ಹೀಗಿದೆ: ಏಳು ನಕ್ಷತ್ರಗಳೆಂದರೆ ಏಳು ಸಭೆಗಳ ದೂತರು. ಏಳು ದೀಪಸ್ತಂಭಗಳೆಂದರೆ ಏಳು ಸಭೆಗಳು.” ಎಂದು ಹೇಳಿದನು. |
Revelation 1:10 Kannada Language Bible Words basic statistical display
COMING SOON ...