Bible Languages

Indian Language Bible Word Collections

Bible Versions

Books

Proverbs Chapters

Proverbs 23 Verses

Bible Versions

Books

Proverbs Chapters

Proverbs 23 Verses

1 ಅಧಿಪತಿಯೊಂದಿಗೆ ಕುಳಿತುಕೊಂಡು ಊಟ ಮಾಡುವಾಗ, ನೀನು ಯಾರೊಂದಿಗಿರುವೆ ಎಂಬುದನ್ನು ಜ್ಞಾಪಿಸಿಕೊ.
2 ನೀನು ತುಂಬ ಹಸಿವೆಗೊಂಡಿದ್ದರೂ ಅತಿಯಾಗಿ ತಿನ್ನಬೇಡ.
3 ಅವನು ಬಡಿಸುವ ಒಳ್ಳೆಯ ಆಹಾರವನ್ನು ಅತಿಯಾಗಿ ತಿನ್ನಬೇಡ. ಅದು ನಿನ್ನನ್ನು ಮೋಸಗೊಳಿಸುವ ಆಹಾರ.
4 ಐಶ್ವರ್ಯವಂತನಾಗಬೇಕೆಂಬ ಪ್ರಯತ್ನದಲ್ಲಿ ನಿನ್ನ ಆರೋಗ್ಯವನ್ನು ಕಳೆದುಕೊಳ್ಳಬೇಡ. ನೀನು ಜ್ಞಾನಿಯಾಗಿದ್ದರೆ ತಾಳ್ಮೆಯಿಂದಿರುವೆ.
5 ಪಕ್ಷಿಯಂತೆ ಹಾರಿಹೋಗುತ್ತದೊ ಎಂಬಂತೆ ಹಣವು ಬಹುಬೇಗನೆ ಇಲ್ಲವಾಗುವುದು.
6 ಸ್ವಾರ್ಥಿಯೊಂದಿಗೆ ಊಟಮಾಡಬೇಡ. ಅವನು ಇಷ್ಟಪಡುವ ಮೃಷ್ಠಾನ್ನದಿಂದ ದೂರವಿರು.
7 ಅವನು ವೆಚ್ಚದ ಬಗ್ಗೆ ಯೋಚಿಸುವಂಥವನು. ಅವನು ನಿನಗೆ, “ತಿನ್ನು, ಕುಡಿ” ಎಂದು ಹೇಳಿದರೂ ಅವನ ಉದ್ದೇಶವೇ ಬೇರೆ.
8 ನೀನು ಅವನ ಆಹಾರವನ್ನು ತಿಂದರೆ ವಾಂತಿಮಾಡುವೆ; ಆಗ ನಿನ್ನ ಸವಿಮಾತುಗಳೆಲ್ಲಾ ವ್ಯರ್ಥವಾಗುವುದು.
9 ಮೂಢನಿಗೆ ಉಪದೇಶಿಸಲು ಪ್ರಯತ್ನಿಸಬೇಡ. ಅವನು ನಿನ್ನ ಜ್ಞಾನದ ಮಾತುಗಳನ್ನು ಗೇಲಿಮಾಡುವನು.
10 ಜಮೀನಿನ ಮೇರೆಯನ್ನು ಎಂದಿಗೂ ಒತ್ತಬೇಡ. ಅನಾಥರಿಗೆ ಸೇರಿದ ಭೂಮಿಯನ್ನು ಎಂದಿಗೂ ಕಸಿದುಕೊಳ್ಳಬೇಡ.
11 ಇಲ್ಲವಾದರೆ ಯೆಹೋವನು ನಿನಗೆ ವಿರೋಧವಾಗುವನು; ಯೆಹೋವನು ಬಲಿಷ್ಠನೂ ಅನಾಥರ ಪರವಾಗಿ ವಾದಿಸುವವನೂ ಆಗಿದ್ದಾನೆ.
12 ನಿನ್ನ ಉಪದೇಶಕರಿಗೆ ಕಿವಿಗೊಟ್ಟು ನಿನ್ನಿಂದ ಸಾಧ್ಯವಾದಷ್ಟು ಕಲಿತುಕೋ.
13 ಅಗತ್ಯವೆನಿಸಿದರೆ ಮಗನನ್ನು ಬಾಲ್ಯದಲ್ಲಿಯೇ ದಂಡಿಸು. ನಿನ್ನ ಹೊಡೆತದಿಂದ ಅವನೇನೂ ಸಾಯುವುದಿಲ್ಲ.
14 ನಿನ್ನ ಹೊಡೆತವು ಅವನ ಜೀವವನ್ನು ಕಾಪಾಡಬಲ್ಲದು.
15 ನನ್ನ ಮಗನೇ, ನೀನು ಜ್ಞಾನಿಯಾಗಿದ್ದರೆ, ನನಗೆ ಬಹು ಸಂತೋಷ.
16 ನೀನು ಒಳ್ಳೆಯದನ್ನೇ ಹೇಳುವುದನ್ನು ಕೇಳುವಾಗ ನನ್ನ ಹೃದಯಕ್ಕೆ ಸಂತೋಷವಾಗುವುದು.
17 ಕೆಡುಕರ ಬಗ್ಗೆ ಹೊಟ್ಟೇಕಿಚ್ಚುಪಡಬೇಡ. ಆದರೆ ಯೆಹೋವನಲ್ಲಿ ಭಯಭಕ್ತಿಯಿಂದಿರಲು ನಿನ್ನಿಂದಾದಷ್ಟು ಪ್ರಯತ್ನಿಸು.
18 ಆಗ ನಿನಗೆ ಒಳ್ಳೆಯ ಭವಿಷ್ಯವಿರುವುದು; ನಿನ್ನ ನಿರೀಕ್ಷೆಯು ನಿರರ್ಥಕವಾಗದು.
19 ನನ್ನ ಮಗನೇ, ಕಿವಿಗೊಟ್ಟು ಕೇಳಿ ಜ್ಞಾನಿಯಾಗಿರು. ಯಾವಾಗಲೂ ಎಚ್ಚರಿಕೆಯಿಂದಿದ್ದು ನೀತಿಮಾರ್ಗದಲ್ಲಿ ಜೀವಿಸು.
20 ಕುಡುಕರ ಮತ್ತು ಹೊಟ್ಟೆಬಾಕರ ಸ್ನೇಹಿತನಾಗಿರಬೇಡ.
21 ಕುಡುಕರೂ ಹೊಟ್ಟೆಬಾಕರೂ ಬಡವರಾಗುವರು. ತಿಂದು ಕುಡಿದು ನಿದ್ರಿಸುವುದೇ ಅವರ ಕಾರ್ಯಗಳು. ಅವರು ಬಹು ಬೇಗನೆ ಬಡವರಾಗುವರು.
22 ನಿನ್ನ ತಂದೆಗೆ ಕಿವಿಗೊಡು. ಯಾಕೆಂದರೆ ನೀನು ಅವನ ಮಗನು. ಅವನು ನಿನ್ನ ತಂದೆ. ನಿನ್ನ ತಾಯಿ ವೃದ್ಧಳಾಗಿರುವಾಗಲೂ ಆಕೆಯನ್ನು ಗೌರವಿಸು.
23 ಸತ್ಯವನ್ನು ಕೊಂಡುಕೋ; ಅದನ್ನು ಮಾರಬೇಡ. ಜ್ಞಾನ, ಸುಶಿಕ್ಷೆ ಮತ್ತು ವಿವೇಕವನ್ನು ಕೊಂಡುಕೊ. ಇವು ಖರೀದಿಗೆ ಯೋಗ್ಯವಾದವುಗಳೂ ಮಾರಲಾಗದಷ್ಟು ಅಮೂಲ್ಯವಾದವುಗಳೂ ಆಗಿವೆ.
24 ಒಳ್ಳೆಯವನ ತಂದೆಗೆ ಬಹು ಸಂತೋಷ. ಜ್ಞಾನಿಯಾದ ಮಗನಿಂದ ಆನಂದ.
25 ನಿನ್ನ ತಂದೆತಾಯಿಗಳು ನಿನ್ನೊಂದಿಗೆ ಸಂತೋಷದಿಂದಿರಲಿ; ನಿನ್ನ ತಾಯಿಯು ಆನಂದಿಸಲಿ.
26 ನನ್ನ ಮಗನೇ, ನನ್ನ ಉಪದೇಶವನ್ನು ಗಮನವಿಟ್ಟು ಕೇಳು. ನನ್ನ ಜೀವಿತವು ನಿನಗೆ ಮಾದರಿಯಾಗಿರಲಿ.
27 ಸೂಳೆಯರು ಮತ್ತು ಕೆಟ್ಟಹೆಂಗಸರು ಬಲೆಯಂತಿದ್ದಾರೆ; ಮೇಲೇರಿ ಬರಲಾಗದ ಆಳವಾದ ಬಾವಿಯಂತಿದ್ದಾರೆ.
28 ಕೆಟ್ಟಹೆಂಗಸು ಕಳ್ಳನಂತೆ ನಿನಗಾಗಿ ಕಾದಿರುವಳು. ಅನೇಕ ಗಂಡಸರ ಪಾಪಕ್ಕೆ ಅವಳೇ ಕಾರಣ.
29 ಯಾರಿಗೆ ಆಪತ್ತಿದೆ? ಯಾರಿಗೆ ಯಾತನೆಯಿದೆ? ಯಾರಿಗೆ ಜಗಳಗಳಿವೆ? ಯಾರಿಗೆ ಉದ್ವೇಗವಿದೆ? ಯಾರಿಗೆ ನಿಷ್ಕಾರಣವಾದ ಬಾಸುಂಡೆಗಳಿವೆ? ಯಾರಿಗೆ ಕೆಂಪೇರಿದ ಕಣ್ಣುಗಳಿವೆ?
30 ಮದ್ಯವನ್ನು ಅತಿಯಾಗಿ ಕುಡಿಯುವವರಿಗೆ ಮತ್ತು ಮಿಶ್ರಣಗೊಂಡ ನಾನಾಬಗೆಯ ಮದ್ಯಗಳನ್ನು ಕುಡಿಯುವವರಿಗೆ!
31 ಆದ್ದರಿಂದ ಮದ್ಯದ ಬಗ್ಗೆ ಎಚ್ಚರಿಕೆಯಾಗಿರು. ಅದು ಅಂದವಾಗಿದ್ದು ಕೆಂಪಗೆ ಥಳಥಳಿಸುತ್ತದೆ. ನೀನು ಅದನ್ನು ಕುಡಿದಾಗ, ನಯವಾಗಿ ಇಳಿದುಹೋಗುತ್ತದೆ.
32 ಆದರೆ ಕೊನೆಯಲ್ಲಿ ಅದು ವಿಷದ ಹಲ್ಲುಳ್ಳ ಹಾವಿನಂತೆ ಕಚ್ಚುವುದು.
33 ಮದ್ಯವು ನಿನಗೆ ವಿಚಿತ್ರವಾದವುಗಳನ್ನು ಕಾಣಮಾಡುತ್ತದೆ. ನಿನ್ನ ಮನಸ್ಸನ್ನು ಗಲಿಬಿಲಿ ಮಾಡುತ್ತದೆ.
34 ನೀನು ಮಲಗಿಕೊಂಡಾಗ ಸಮುದ್ರದ ಅಲ್ಲೋಲಕಲ್ಲೋಲ ಅಲೆಗಳ ಮೇಲಿರುವಂತೆಯೂ ಹಡಗಿನ ಮೇಲೆ ಮಲಗಿಕೊಂಡಿರುವಂತೆಯೂ ನಿನಗನ್ನಿಸುವುದು.
35 “ಅವರು ನನಗೆ ಬಡಿದರೂ ಗೊತ್ತಾಗಲಿಲ್ಲ; ಅವರು ನನಗೆ ಹೊಡೆದರೂ ನನಗೆ ಬಡಿದರೂ ಅರಿವಾಗಲಿಲ್ಲ. ಈಗ ನಾನು ಎಚ್ಚರಗೊಳ್ಳಲಾರೆ. ನನಗೆ ಮತ್ತಷ್ಟು ದ್ರಾಕ್ಷಾರಸಬೇಕು” ಎಂದು ನೀನು ಹೇಳುವೆ.

Proverbs 23:31 Kannada Language Bible Words basic statistical display

COMING SOON ...

×

Alert

×