1
|
ಅಧಿಪತಿಯೊಂದಿಗೆ ಕುಳಿತುಕೊಂಡು ಊಟ ಮಾಡುವಾಗ, ನೀನು ಯಾರೊಂದಿಗಿರುವೆ ಎಂಬುದನ್ನು ಜ್ಞಾಪಿಸಿಕೊ. |
2
|
ನೀನು ತುಂಬ ಹಸಿವೆಗೊಂಡಿದ್ದರೂ ಅತಿಯಾಗಿ ತಿನ್ನಬೇಡ. |
3
|
ಅವನು ಬಡಿಸುವ ಒಳ್ಳೆಯ ಆಹಾರವನ್ನು ಅತಿಯಾಗಿ ತಿನ್ನಬೇಡ. ಅದು ನಿನ್ನನ್ನು ಮೋಸಗೊಳಿಸುವ ಆಹಾರ. |
4
|
ಐಶ್ವರ್ಯವಂತನಾಗಬೇಕೆಂಬ ಪ್ರಯತ್ನದಲ್ಲಿ ನಿನ್ನ ಆರೋಗ್ಯವನ್ನು ಕಳೆದುಕೊಳ್ಳಬೇಡ. ನೀನು ಜ್ಞಾನಿಯಾಗಿದ್ದರೆ ತಾಳ್ಮೆಯಿಂದಿರುವೆ. |
5
|
ಪಕ್ಷಿಯಂತೆ ಹಾರಿಹೋಗುತ್ತದೊ ಎಂಬಂತೆ ಹಣವು ಬಹುಬೇಗನೆ ಇಲ್ಲವಾಗುವುದು. |
6
|
ಸ್ವಾರ್ಥಿಯೊಂದಿಗೆ ಊಟಮಾಡಬೇಡ. ಅವನು ಇಷ್ಟಪಡುವ ಮೃಷ್ಠಾನ್ನದಿಂದ ದೂರವಿರು. |
7
|
ಅವನು ವೆಚ್ಚದ ಬಗ್ಗೆ ಯೋಚಿಸುವಂಥವನು. ಅವನು ನಿನಗೆ, “ತಿನ್ನು, ಕುಡಿ” ಎಂದು ಹೇಳಿದರೂ ಅವನ ಉದ್ದೇಶವೇ ಬೇರೆ. |
8
|
ನೀನು ಅವನ ಆಹಾರವನ್ನು ತಿಂದರೆ ವಾಂತಿಮಾಡುವೆ; ಆಗ ನಿನ್ನ ಸವಿಮಾತುಗಳೆಲ್ಲಾ ವ್ಯರ್ಥವಾಗುವುದು. |
9
|
ಮೂಢನಿಗೆ ಉಪದೇಶಿಸಲು ಪ್ರಯತ್ನಿಸಬೇಡ. ಅವನು ನಿನ್ನ ಜ್ಞಾನದ ಮಾತುಗಳನ್ನು ಗೇಲಿಮಾಡುವನು. |
10
|
ಜಮೀನಿನ ಮೇರೆಯನ್ನು ಎಂದಿಗೂ ಒತ್ತಬೇಡ. ಅನಾಥರಿಗೆ ಸೇರಿದ ಭೂಮಿಯನ್ನು ಎಂದಿಗೂ ಕಸಿದುಕೊಳ್ಳಬೇಡ. |
11
|
ಇಲ್ಲವಾದರೆ ಯೆಹೋವನು ನಿನಗೆ ವಿರೋಧವಾಗುವನು; ಯೆಹೋವನು ಬಲಿಷ್ಠನೂ ಅನಾಥರ ಪರವಾಗಿ ವಾದಿಸುವವನೂ ಆಗಿದ್ದಾನೆ. |
12
|
ನಿನ್ನ ಉಪದೇಶಕರಿಗೆ ಕಿವಿಗೊಟ್ಟು ನಿನ್ನಿಂದ ಸಾಧ್ಯವಾದಷ್ಟು ಕಲಿತುಕೋ. |
13
|
ಅಗತ್ಯವೆನಿಸಿದರೆ ಮಗನನ್ನು ಬಾಲ್ಯದಲ್ಲಿಯೇ ದಂಡಿಸು. ನಿನ್ನ ಹೊಡೆತದಿಂದ ಅವನೇನೂ ಸಾಯುವುದಿಲ್ಲ. |
14
|
ನಿನ್ನ ಹೊಡೆತವು ಅವನ ಜೀವವನ್ನು ಕಾಪಾಡಬಲ್ಲದು. |
15
|
ನನ್ನ ಮಗನೇ, ನೀನು ಜ್ಞಾನಿಯಾಗಿದ್ದರೆ, ನನಗೆ ಬಹು ಸಂತೋಷ. |
16
|
ನೀನು ಒಳ್ಳೆಯದನ್ನೇ ಹೇಳುವುದನ್ನು ಕೇಳುವಾಗ ನನ್ನ ಹೃದಯಕ್ಕೆ ಸಂತೋಷವಾಗುವುದು. |
17
|
ಕೆಡುಕರ ಬಗ್ಗೆ ಹೊಟ್ಟೇಕಿಚ್ಚುಪಡಬೇಡ. ಆದರೆ ಯೆಹೋವನಲ್ಲಿ ಭಯಭಕ್ತಿಯಿಂದಿರಲು ನಿನ್ನಿಂದಾದಷ್ಟು ಪ್ರಯತ್ನಿಸು. |
18
|
ಆಗ ನಿನಗೆ ಒಳ್ಳೆಯ ಭವಿಷ್ಯವಿರುವುದು; ನಿನ್ನ ನಿರೀಕ್ಷೆಯು ನಿರರ್ಥಕವಾಗದು. |
19
|
ನನ್ನ ಮಗನೇ, ಕಿವಿಗೊಟ್ಟು ಕೇಳಿ ಜ್ಞಾನಿಯಾಗಿರು. ಯಾವಾಗಲೂ ಎಚ್ಚರಿಕೆಯಿಂದಿದ್ದು ನೀತಿಮಾರ್ಗದಲ್ಲಿ ಜೀವಿಸು. |
20
|
ಕುಡುಕರ ಮತ್ತು ಹೊಟ್ಟೆಬಾಕರ ಸ್ನೇಹಿತನಾಗಿರಬೇಡ. |
21
|
ಕುಡುಕರೂ ಹೊಟ್ಟೆಬಾಕರೂ ಬಡವರಾಗುವರು. ತಿಂದು ಕುಡಿದು ನಿದ್ರಿಸುವುದೇ ಅವರ ಕಾರ್ಯಗಳು. ಅವರು ಬಹು ಬೇಗನೆ ಬಡವರಾಗುವರು. |
22
|
ನಿನ್ನ ತಂದೆಗೆ ಕಿವಿಗೊಡು. ಯಾಕೆಂದರೆ ನೀನು ಅವನ ಮಗನು. ಅವನು ನಿನ್ನ ತಂದೆ. ನಿನ್ನ ತಾಯಿ ವೃದ್ಧಳಾಗಿರುವಾಗಲೂ ಆಕೆಯನ್ನು ಗೌರವಿಸು. |
23
|
ಸತ್ಯವನ್ನು ಕೊಂಡುಕೋ; ಅದನ್ನು ಮಾರಬೇಡ. ಜ್ಞಾನ, ಸುಶಿಕ್ಷೆ ಮತ್ತು ವಿವೇಕವನ್ನು ಕೊಂಡುಕೊ. ಇವು ಖರೀದಿಗೆ ಯೋಗ್ಯವಾದವುಗಳೂ ಮಾರಲಾಗದಷ್ಟು ಅಮೂಲ್ಯವಾದವುಗಳೂ ಆಗಿವೆ. |
24
|
ಒಳ್ಳೆಯವನ ತಂದೆಗೆ ಬಹು ಸಂತೋಷ. ಜ್ಞಾನಿಯಾದ ಮಗನಿಂದ ಆನಂದ. |
25
|
ನಿನ್ನ ತಂದೆತಾಯಿಗಳು ನಿನ್ನೊಂದಿಗೆ ಸಂತೋಷದಿಂದಿರಲಿ; ನಿನ್ನ ತಾಯಿಯು ಆನಂದಿಸಲಿ. |
26
|
ನನ್ನ ಮಗನೇ, ನನ್ನ ಉಪದೇಶವನ್ನು ಗಮನವಿಟ್ಟು ಕೇಳು. ನನ್ನ ಜೀವಿತವು ನಿನಗೆ ಮಾದರಿಯಾಗಿರಲಿ. |
27
|
ಸೂಳೆಯರು ಮತ್ತು ಕೆಟ್ಟಹೆಂಗಸರು ಬಲೆಯಂತಿದ್ದಾರೆ; ಮೇಲೇರಿ ಬರಲಾಗದ ಆಳವಾದ ಬಾವಿಯಂತಿದ್ದಾರೆ. |
28
|
ಕೆಟ್ಟಹೆಂಗಸು ಕಳ್ಳನಂತೆ ನಿನಗಾಗಿ ಕಾದಿರುವಳು. ಅನೇಕ ಗಂಡಸರ ಪಾಪಕ್ಕೆ ಅವಳೇ ಕಾರಣ. |
29
|
ಯಾರಿಗೆ ಆಪತ್ತಿದೆ? ಯಾರಿಗೆ ಯಾತನೆಯಿದೆ? ಯಾರಿಗೆ ಜಗಳಗಳಿವೆ? ಯಾರಿಗೆ ಉದ್ವೇಗವಿದೆ? ಯಾರಿಗೆ ನಿಷ್ಕಾರಣವಾದ ಬಾಸುಂಡೆಗಳಿವೆ? ಯಾರಿಗೆ ಕೆಂಪೇರಿದ ಕಣ್ಣುಗಳಿವೆ? |
30
|
ಮದ್ಯವನ್ನು ಅತಿಯಾಗಿ ಕುಡಿಯುವವರಿಗೆ ಮತ್ತು ಮಿಶ್ರಣಗೊಂಡ ನಾನಾಬಗೆಯ ಮದ್ಯಗಳನ್ನು ಕುಡಿಯುವವರಿಗೆ! |
31
|
ಆದ್ದರಿಂದ ಮದ್ಯದ ಬಗ್ಗೆ ಎಚ್ಚರಿಕೆಯಾಗಿರು. ಅದು ಅಂದವಾಗಿದ್ದು ಕೆಂಪಗೆ ಥಳಥಳಿಸುತ್ತದೆ. ನೀನು ಅದನ್ನು ಕುಡಿದಾಗ, ನಯವಾಗಿ ಇಳಿದುಹೋಗುತ್ತದೆ. |
32
|
ಆದರೆ ಕೊನೆಯಲ್ಲಿ ಅದು ವಿಷದ ಹಲ್ಲುಳ್ಳ ಹಾವಿನಂತೆ ಕಚ್ಚುವುದು. |
33
|
ಮದ್ಯವು ನಿನಗೆ ವಿಚಿತ್ರವಾದವುಗಳನ್ನು ಕಾಣಮಾಡುತ್ತದೆ. ನಿನ್ನ ಮನಸ್ಸನ್ನು ಗಲಿಬಿಲಿ ಮಾಡುತ್ತದೆ. |
34
|
ನೀನು ಮಲಗಿಕೊಂಡಾಗ ಸಮುದ್ರದ ಅಲ್ಲೋಲಕಲ್ಲೋಲ ಅಲೆಗಳ ಮೇಲಿರುವಂತೆಯೂ ಹಡಗಿನ ಮೇಲೆ ಮಲಗಿಕೊಂಡಿರುವಂತೆಯೂ ನಿನಗನ್ನಿಸುವುದು. |
35
|
“ಅವರು ನನಗೆ ಬಡಿದರೂ ಗೊತ್ತಾಗಲಿಲ್ಲ; ಅವರು ನನಗೆ ಹೊಡೆದರೂ ನನಗೆ ಬಡಿದರೂ ಅರಿವಾಗಲಿಲ್ಲ. ಈಗ ನಾನು ಎಚ್ಚರಗೊಳ್ಳಲಾರೆ. ನನಗೆ ಮತ್ತಷ್ಟು ದ್ರಾಕ್ಷಾರಸಬೇಕು” ಎಂದು ನೀನು ಹೇಳುವೆ. |
Proverbs 23:15 Kannada Language Bible Words basic statistical display
COMING SOON ...