ಒಬ್ಬನು ಅದನ್ನು ಮೂರನೆಯ ದಿನದಲ್ಲಿ ತಿಂದರೆ ಅವನು ಪಾಪಮಾಡಿದ ದೋಷಿಯಾಗಿರುವನು. ಯಾಕೆಂದರೆ ಯೆಹೋವನಿಗೆ ಮೀಸಲಾದ ಪವಿತ್ರ ವಸ್ತುಗಳ ವಿಷಯದಲ್ಲಿ ಅವನಿಗೆ ಗೌರವವಿಲ್ಲ; ಆ ವ್ಯಕ್ತಿಯನ್ನು ಅವನ ಜನರಿಂದ ತೆಗೆದುಹಾಕಬೇಕು.
ನಿಮ್ಮ ದ್ರಾಕ್ಷಿತೋಟಗಳಲ್ಲಿರುವ ದ್ರಾಕ್ಷಿಗಳನ್ನೆಲ್ಲಾ ತೆಗೆದುಕೊಳ್ಳಬೇಡಿರಿ: ನೆಲದ ಮೇಲೆ ಬೀಳುವ ದ್ರಾಕ್ಷಿಹಣ್ಣುಗಳನ್ನು ಹೆಕ್ಕಿಕೊಳ್ಳಬಾರದು. ಯಾಕೆಂದರೆ ನೀವು ಅವುಗಳನ್ನು ಬಡವರಿಗಾಗಿಯೂ ನಿಮ್ಮ ದೇಶದಲ್ಲಿ ವಾಸಿಸಲು ಬಂದ ಪರದೇಶಸ್ಥರಿಗಾಗಿಯೂ ಬಿಡಬೇಕು. ನಾನೇ ನಿಮ್ಮ ದೇವರಾದ ಯೆಹೋವನು!
“ನೀವು ಕೊಡುವ ತೀರ್ಪು ನ್ಯಾಯವಾಗಿರಬೇಕು. ಬಡವರ ಬಡತನವನ್ನಾಗಲಿ ಪ್ರಾಮುಖ್ಯರ ದೊಡ್ಡಸ್ತಿಕೆಯನ್ನಾಗಲಿ ಗಮನಿಸದೆ ಪಕ್ಷಪಾತವಿಲ್ಲದೆ ತೀರ್ಪುಕೊಡಬೇಕು. ನೀವು ನಿಮ್ಮ ನೆರೆಯವನಿಗೆ ತೀರ್ಪುಮಾಡುವಾಗ ನ್ಯಾಯದ ತೀರ್ಪುಕೊಡಿರಿ.
“ನೀವು ನಿಮ್ಮ ಸಹೋದರನನ್ನು ಮನಸ್ಸಿನಲ್ಲಿ ದ್ವೇಷಿಸಬಾರದು. ನಿಮ್ಮ ಸಹೋದರನು ಏನಾದರೂ ತಪ್ಪುಮಾಡಿದರೆ, ಅವನೊಡನೆ ಅದರ ಕುರಿತು ಮಾತಾಡು. ಅವನ ಅಪರಾಧದಲ್ಲಿ ನೀವು ಪಾಲುಹೊಂದದಂತೆ ನೇರವಾಗಿ ಗದರಿಸಿ. ಆಗ ನೀವು ಅವನನ್ನು ಕ್ಷಮಿಸಬಹುದು.
ಜನರು ನಿಮಗೆ ಮಾಡುವ ಕೆಟ್ಟಕಾರ್ಯಗಳನ್ನು ಮರೆತುಬಿಡಿರಿ. ನಿಮ್ಮ ಜನರಲ್ಲಿ ಒಬ್ಬನಾಗಿರುವವನ ಮೇಲೆ ಸೇಡನ್ನು ತೀರಿಸಿಕೊಳ್ಳಲು ಪ್ರಯತ್ನಿಸಬೇಡಿರಿ; ದ್ವೇಷವನ್ನೂ ಇಟ್ಟುಕೊಳ್ಳಬೇಡಿ. ನಿಮ್ಮ ನೆರೆಯವನನ್ನು ನಿಮ್ಮಂತೆಯೇ ಪ್ರೀತಿಸಿರಿ. ನಾನೇ ಯೆಹೋವನು!
“ನೀವು ನನ್ನ ಕಟ್ಟಳೆಗಳಿಗೆ ವಿಧೇಯರಾಗಿರಬೇಕು. ಎರಡು ಬೇರೆ ಜಾತಿಯ ಪಶುಗಳನ್ನು ಒಟ್ಟಿಗೆ ಸೇರಿಸಿ ಈಯಿಸಬಾರದು. ನಿಮ್ಮ ಹೊಲಗಳಲ್ಲಿ ಎರಡು ವಿಧದ ಬೀಜಗಳನ್ನು ಬಿತ್ತಬಾರದು. ಎರಡು ವಿಧದ ದಾರಗಳನ್ನು ಸೇರಿಸಿ ಮಾಡಿದ ಬಟ್ಟೆಯನ್ನು ಧರಿಸಿಕೊಳ್ಳಬಾರದು.
“ಇನ್ನೊಬ್ಬನ ದಾಸಿಯಾಗಿರುವ ಸ್ತ್ರೀಯೊಡನೆ ಒಬ್ಬನು ಲೈಂಗಿಕ ಸಂಬಂಧವಿಟ್ಟುಕೊಂಡಿದ್ದರೆ, ಈ ದಾಸಿಯು ಹಣದಿಂದಾಗಲಿ ಉಚಿತವಾಗಿಯಾಗಲಿ ಬಿಡುಗಡೆಯಾಗಲು ಸಾಧ್ಯವಿಲ್ಲದಿದ್ದರೆ ಅವರಿಬ್ಬರಿಗೆ ಶಿಕ್ಷೆ ವಿಧಿಸಬೇಕು. ಆದರೆ ಅವರಿಗೆ ಮರಣ ಶಿಕ್ಷೆಯಾಗಬಾರದು. ಯಾಕೆಂದರೆ ಸ್ತ್ರೀಯು ಸ್ವತಂತ್ರಳಾಗಿಲ್ಲ.
ಯಾಜಕನು ಅವನನ್ನು ಶುದ್ಧಿಮಾಡುವ ಕಾರ್ಯಗಳನ್ನು ಮಾಡುವನು. ಯಾಜಕನು ಯೆಹೋವನ ಸನ್ನಿಧಿಯಲ್ಲಿ ಟಗರನ್ನು ದೋಷಪರಿಹಾರಕ ಯಜ್ಞವಾಗಿ ಅರ್ಪಿಸುವನು. ಅದು ಆ ಪುರುಷನು ಮಾಡಿದ ಪಾಪಗಳ ಪರಿಹಾರಕ್ಕಾಗಿರುವುದು. ಆಗ ಅವನಿಗೆ ಕ್ಷಮಾಪಣೆಯಾಗುವುದು.
“ಮುಂದೆ ನೀವು ನಿಮ್ಮ ದೇಶವನ್ನು ಪ್ರವೇಶಿಸುವಿರಿ. ಆ ಸಮಯದ ಆಹಾರಕ್ಕಾಗಿ ಅನೇಕ ವಿಧಗಳ ಮರಗಳನ್ನು ನೆಡುವಿರಿ. ಸಸಿಯನ್ನು ನೆಟ್ಟನಂತರ, ನೀವು ಆ ಮರದಿಂದ ಹಣ್ಣನ್ನು ಉಪಯೋಗಿಸುವುದಕ್ಕೆ ಮೂರು ವರ್ಷಗಳು ಕಾಯಬೇಕು. ನೀವು ಆ ಹಣ್ಣನ್ನು ಉಪಯೋಗಿಸಬಾರದು.
“ನಿಮ್ಮ ಮುಖದ ಪಾರ್ಶ್ವದಲ್ಲಿ ಬೆಳೆಯುವ ಕೂದಲನ್ನು ನೀವು ಕತ್ತರಿಸಬಾರದು. ನಿಮ್ಮ ಮುಖದ ಪಾರ್ಶ್ವದಲ್ಲಿರುವ ಗಡ್ಡವನ್ನು ಕತ್ತರಿಸಿಕೊಳ್ಳುವುದರ ಮೂಲಕ ನೀವು ನಿಮ್ಮ ಗಡ್ಡವನ್ನು ವಿಕಾರ ಮಾಡಿಕೊಳ್ಳಬಾರದು.
“ಮಗಳನ್ನು ಸೂಳೆಯನ್ನಾಗಿ ಮಾಡಬಾರದು. ಇದರಿಂದ ಸೂಳೆಗಾರಿಕೆ ಹೆಚ್ಚಾಗುತ್ತದೆ. ನಿಮ್ಮ ದೇಶದಲ್ಲಿ ಸೂಳೆಗಾರಿಕೆ ಇರದಂತೆ ನೋಡಿಕೊಳ್ಳಿರಿ. ಇಂಥ ಪಾಪದಿಂದ ನಿಮ್ಮ ದೇಶವು ತುಂಬಿಹೋಗಲು ಬಿಡಬೇಡಿರಿ.
ನಿಮ್ಮ ಸ್ವಂತ ದೇಶದವರೊಡನೆ ವರ್ತಿಸುವ ಪ್ರಕಾರ ಪರದೇಶಸ್ಥರೊಡನೆ ವರ್ತಿಸಿರಿ. ನಿಮ್ಮನ್ನು ಪ್ರೀತಿಸುವಂತೆ ಪರದೇಶಸ್ಥರನ್ನು ಪ್ರೀತಿಸಿರಿ. ಯಾಕೆಂದರೆ ನೀವು ಸಹ ಒಂದು ಕಾಲದಲ್ಲಿ ಈಜಿಪ್ಟಿನಲ್ಲಿದ್ದಾಗ ಪರದೇಶಸ್ಥರಾಗಿದ್ದಿರಿ. ನಾನೇ ನಿಮ್ಮ ದೇವರಾದ ಯೆಹೋವನು!
ನಿಮ್ಮ ಪುಟ್ಟಿಗಳು ಸರಿಯಾದ ಪ್ರಮಾಣದ್ದಾಗಿರಬೇಕು. ನಿಮ್ಮ ಕೊಳಗಗಳು ದ್ರವಪದಾರ್ಥಗಳನ್ನು ಸರಿಯಾದ ಪ್ರಮಾಣದಲ್ಲಿ ಹಿಡಿಸಿಕೊಳ್ಳುವಂತವುಗಳಾಗಿರಬೇಕು. ನಿಮ್ಮ ತೂಕದ ಕಲ್ಲುಗಳು ಮತ್ತು ತಕ್ಕಡಿಗಳು ವಸ್ತುಗಳನ್ನು ಸರಿಯಾಗಿ ತೂಕ ಮಾಡುವಂಥವುಗಳಾಗಿರಬೇಕು. ನಾನೇ ನಿಮ್ಮ ದೇವರಾದ ಯೆಹೋವನು! ನಾನು ನಿಮ್ಮನ್ನು ಈಜಿಪ್ಟಿನಿಂದ ಹೊರತಂದೆನು.