ಅವನು ಆ ಪ್ರಾಣಿಯನ್ನು ದೇವದರ್ಶನಗುಡಾರದ ಬಾಗಿಲಿಗೆ ತರಬೇಕು. ಅವನು ಆ ಪಶುವಿನ ಒಂದು ಭಾಗವನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು. ಅವನು ರಕ್ತವನ್ನು ಸುರಿಸಿದ್ದರಿಂದ ತನ್ನ ಕಾಣಿಕೆಯನ್ನು ಯೆಹೋವನ ಪವಿತ್ರ ಗುಡಾರದೊಳಗೆ ತೆಗೆದುಕೊಂಡು ಹೋಗಬೇಕು. ಅವನು ಪ್ರಾಣಿಯ ಒಂದು ಭಾಗವನ್ನು ಯೆಹೋವನಿಗೆ ಉಡುಗೊರೆಯಾಗಿ ತೆಗೆದುಕೊಂಡು ಹೋಗದಿದ್ದರೆ, ಅವನನ್ನು ಅವನ ಜನರಿಂದ ಬಹಿಷ್ಕರಿಸಬೇಕು.
ಸಮಾಧಾನಯಜ್ಞರೂಪವಾಗಿ ಇದನ್ನು ಯೆಹೋವನಿಗೆ ಅರ್ಪಿಸುವ ಯಜ್ಞಕ್ಕೆ ಇದೇ ನಿಯಮ. ಇಸ್ರೇಲರು ಹೊಲಗಳಲ್ಲಿ ಕೊಲ್ಲುವ ತಮ್ಮ ಪ್ರಾಣಿಗಳನ್ನು ದೇವದರ್ಶನಗುಡಾರದ ಬಾಗಿಲಿಗೆ ಅಂದರೆ ಯೆಹೋವನ ಸನ್ನಿಧಿಯಲ್ಲಿರುವ ಯಾಜಕರ ಬಳಿಗೆ ತರಬೇಕು.
ಬಳಿಕ ಯಾಜಕನು ಆ ಪಶುಗಳ ರಕ್ತವನ್ನು ದೇವದರ್ಶನಗುಡಾರದ ಬಾಗಿಲಿನ ಹತ್ತಿರವಿರುವ ಯೆಹೋವನ ಯಜ್ಞವೇದಿಕೆಗೆ ಚೆಲ್ಲುವನು ಮತ್ತು ಅವುಗಳ ಕೊಬ್ಬನ್ನು ಯಜ್ಞವೇದಿಕೆಯ ಮೇಲೆ ಹೋಮಮಾಡುವನು. ಅದರ ಸುವಾಸನೆಯು ಯೆಹೋವನಿಗೆ ಪ್ರಿಯವಾಗಿದೆ.
“ರಕ್ತವನ್ನು ತಿನ್ನುವ ಪ್ರತಿಯೊಬ್ಬನಿಗೂ ನಾನು ವಿರುದ್ಧವಾಗಿರುವೆನು. ಅವನು ನಿಮ್ಮ ಮಧ್ಯದಲ್ಲಿ ವಾಸವಾಗಿರುವ ಇಸ್ರೇಲನಾಗಲಿ ಪರದೇಶಸ್ಥನಾಗಲಿ ಆಗಿರಬಹುದು. ನಾನು ಆ ವ್ಯಕ್ತಿಯನ್ನು ಅವನ ಜನರಿಂದ ತೆಗೆದುಹಾಕುವೆನು.
ಯಾಕೆಂದರೆ ದೇಹದ ಜೀವ ರಕ್ತದಲ್ಲಿದೆ. ನೀವು ನಿಮಗೋಸ್ಕರವಾಗಿ ಯಜ್ಞವೇದಿಕೆಯ ಮೇಲೆ ಪ್ರಾಯಶ್ಚಿತ್ತ ಮಾಡಲಿ ಎಂದು ನಾನು ಅದನ್ನು ನಿಮಗೆ ಕೊಟ್ಟಿದ್ದೇನೆ. ನೀವು ನಿಮಗೋಸ್ಕರವಾಗಿ ಪ್ರಾಯಶ್ಚಿತ್ತ ಮಾಡಲು ಈ ನಿಯಮಗಳನ್ನು ಉಪಯೋಗಿಸಬೇಕು. ಒಬ್ಬನ ಜೀವಕ್ಕೆ ರಕ್ತವೇ ಪ್ರಾಯಶ್ಚಿತ್ತವಾಗಿದೆ. ಜೀವಿಯೊಂದನ್ನು ಕೊಂದಿದ್ದರ ಬೆಲೆಯಾಗಿ ನೀವು ನನಗೆ ಆ ರಕ್ತವನ್ನು ಕೊಡಬೇಕು.
“ಯಾವನಾದರೂ ಒಂದು ಪ್ರಾಣಿಯನ್ನು ಬೇಟೆಯಾಡಿದರೆ ಅಥವಾ ಪಕ್ಷಿಯನ್ನು ಹಿಡಿದರೆ, ಅವನು ಅದರ ರಕ್ತವನ್ನು ನೆಲದ ಮೇಲೆ ಸುರಿದು ಅದನ್ನು ಮಣ್ಣಿನಿಂದ ಮುಚ್ಚಿಬಿಡಬೇಕು. ಅವನು ಇಸ್ರೇಲನಾದರೂ ನಿಮ್ಮ ಮಧ್ಯದಲ್ಲಿ ವಾಸಿಸುವ ಪರದೇಶಸ್ಥನಾದರೂ ಹಾಗೆಯೇ ಮಾಡಬೇಕು.
ನೀವು ಇದನ್ನು ಯಾಕೆ ಮಾಡಬೇಕೆಂದರೆ, ಮಾಂಸದಲ್ಲಿ ರಕ್ತವು ಇನ್ನೂ ಇದ್ದರೆ, ಅದರ ಪ್ರಾಣವು ಇನ್ನೂ ಮಾಂಸದಲ್ಲಿ ಇದೆ. ಆದ್ದರಿಂದ ನಾನು ಇಸ್ರೇಲರಿಗೆ ಈ ಅಪ್ಪಣೆಯನ್ನು ಕೊಡುತ್ತೇನೆ. ರಕ್ತದಿಂದ ಕೂಡಿರುವ ಮಾಂಸವನ್ನು ತಿನ್ನಬಾರದು. ಯಾವನಾದರೂ ರಕ್ತ ಭೋಜನ ಮಾಡಿದರೆ, ಅವನು ತನ್ನ ಜನರಿಂದ ತೆಗೆದುಹಾಕಲ್ಪಡಬೇಕು.
“ಅಲ್ಲದೆ ಯಾವನಾದರೂ ತನ್ನಷ್ಟಕ್ಕೆ ಸತ್ತ ಪ್ರಾಣಿಯನ್ನು ತಿಂದರೆ ಅಥವಾ ಬೇರೆ ಪ್ರಾಣಿಯಿಂದ ಕೊಲ್ಲಲ್ಪಟ್ಟ ಪ್ರಾಣಿಯನ್ನು ತಿಂದರೆ, ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಿಕೊಳ್ಳಬೇಕು. ಅವನು ಇಸ್ರೇಲನಾಗಿದ್ದರೂ ನಿಮ್ಮ ಮಧ್ಯದಲ್ಲಿ ವಾಸಿಸುವ ಪರದೇಶಸ್ಥನಾಗಿದ್ದರೂ ಹಾಗೆಯೇ ಮಾಡಬೇಕು.