“ಒಬ್ಬ ಮನುಷ್ಯನ ಮೇಲೆ ಊತವಾಗಲಿ ಗುಳ್ಳೆಯಾಗಲಿ ಹೊಳೆಯುವ ಮಚ್ಚೆಯಾಗಲಿ ಉಂಟಾಗಿ ಮಚ್ಚೆಯು ಕುಷ್ಠರೋಗದಂತೆ ಕಂಡುಬಂದರೆ, ಅವನನ್ನು ಯಾಜಕನಾದ ಆರೋನನ ಬಳಿಗೆ ಅಥವಾ ಯಾಜಕರಾದ ಅವನ ಪುತ್ರರಲ್ಲಿ ಒಬ್ಬನ ಬಳಿಗೆ ಕರೆದುಕೊಂಡು ಬರಬೇಕು.
ಯಾಜಕನು ಅವನ ಚರ್ಮದಲ್ಲಿರುವ ಮಚ್ಚೆಯನ್ನು ನೋಡಬೇಕು. ಮಚ್ಚೆಯಲ್ಲಿರುವ ರೋಮವು ಬೆಳ್ಳಗಾಗಿದ್ದರೆ ಮತ್ತು ಮಚ್ಚೆಯು ಅವನ ಚರ್ಮಕ್ಕಿಂತ ತಗ್ಗಾಗಿದ್ದರೆ ಅದು ಕುಷ್ಠರೋಗವಾಗಿದೆ. ಯಾಜಕನು ಅವನನ್ನು ಪರೀಕ್ಷಿಸಿದ ನಂತರ ಆ ವ್ಯಕ್ತಿಯನ್ನು ಅಶುದ್ಧನೆಂದು ಪ್ರಕಟಿಸಬೇಕು.
“ಕೆಲವು ಬಾರಿ ಒಬ್ಬ ವ್ಯಕ್ತಿಯ ಚರ್ಮದ ಮೇಲೆ ಬಿಳಿ ಮಚ್ಚೆ ಇರುತ್ತದೆ. ಆದರೆ ಮಚ್ಚೆಯು ಚರ್ಮಕ್ಕಿಂತ ತಗ್ಗಾಗಿರದಿದ್ದರೆ ಮತ್ತು ಅದರ ರೋಮ ಬೆಳ್ಳಗಾಗಿಲ್ಲದಿದ್ದರೆ ಯಾಜಕನು ಅವನನ್ನು ಬೇರೆ ಜನರಿಂದ ಏಳು ದಿನಗಳವರೆಗೆ ಪ್ರತ್ಯೇಕಿಸಬೇಕು.
ಏಳನೆಯ ದಿನದಲ್ಲಿ ಯಾಜಕನು ಅವನನ್ನು ಪರೀಕ್ಷಿಸಬೇಕು. ಮಚ್ಚೆಯು ಬದಲಾಗದೆ ಚರ್ಮದ ಮೇಲೆ ಹರಡಲಿಲ್ಲವೆಂದು ಯಾಜಕನು ಕಂಡರೆ, ಯಾಜಕನು ಅವನನ್ನು ಇನ್ನೂ ಏಳು ದಿನಗಳವರೆಗೆ ಇತರ ಜನರಿಂದ ಪ್ರತ್ಯೇಕಿಸಬೇಕು.
ಏಳು ದಿನಗಳ ನಂತರ ಯಾಜಕನು ಮತ್ತೆ ಅವನನ್ನು ನೋಡಬೇಕು. ಮಚ್ಚೆಯು ಮೊಬ್ಬಾಗಿ ಚರ್ಮದಲ್ಲಿ ಹರಡದೆ ಇದ್ದರೆ, ಆಗ ಯಾಜಕನು ಅವನನ್ನು ಶುದ್ಧನೆಂದು ಪ್ರಕಟಿಸಬೇಕು. ಯಾಕೆಂದರೆ ಮಚ್ಚೆಯು ಕೇವಲ ಗುಳ್ಳೆಯಾಗಿದೆ. ಆ ವ್ಯಕ್ತಿ ತನ್ನ ಬಟ್ಟೆಗಳನ್ನು ಒಗೆದುಕೊಂಡು ತಿರುಗಿ ಶುದ್ಧನಾಗುವನು.
ಅದು ಬಹಳ ಕಾಲದಿಂದ ಅವನ ಚರ್ಮದಲ್ಲಿರುವ ಕುಷ್ಠರೋಗವಾಗಿದೆ. ಯಾಜಕನು ಅವನನ್ನು ಅಶುದ್ಧನೆಂದು ಪ್ರಕಟಿಸಬೇಕು. ಯಾಜಕನು ಅವನನ್ನು ಪರೀಕ್ಷಿಸುವುದಕ್ಕಾಗಿ ಸ್ವಲ್ಪ ಸಮಯದವರೆಗೆ ಜನರಿಂದ ಪ್ರತ್ಯೇಕಿಸುವುದಿಲ್ಲ. ಯಾಕೆಂದರೆ ಆ ವ್ಯಕ್ತಿಯು ಈಗಾಗಲೇ ಅಶುದ್ಧನಾಗಿದ್ದಾನೆ.
ಯಾಜಕನು ಅದನ್ನು ಪರೀಕ್ಷಿಸಬೇಕು. ಅದು ಚರ್ಮಕ್ಕಿಂತ ತಗ್ಗಾಗಿದ್ದರೆ ಮತ್ತು ಅದರ ಮೇಲಿರುವ ರೋಮವು ಬೆಳ್ಳಗಾಗಿದ್ದರೆ, ಯಾಜಕನು ಅವನನ್ನು ಅಶುದ್ಧನೆಂದು ಪ್ರಕಟಿಸಬೇಕು. ಆ ಕಲೆಯು ಕುಷ್ಠದ ಸೋಂಕಾಗಿದೆ. ಹುಣ್ಣಿನಿಂದ ಕುಷ್ಠ ಬಂದಿದೆ.
ಆದರೆ ಯಾಜಕನು ಮಚ್ಚೆಯನ್ನು ನೋಡಿದಾಗ ಅದರಲ್ಲಿ ಬಿಳಿರೋಮಗಳು ಇಲ್ಲದಿದ್ದರೆ, ಮಚ್ಚೆಯು ಚರ್ಮಕ್ಕಿಂತ ತಗ್ಗಾಗಿಲ್ಲದೆ ಮೊಬ್ಬಾಗಿ ಹೋಗಿದ್ದರೆ, ಆಗ ಯಾಜಕನು ಆ ವ್ಯಕ್ತಿಯನ್ನು ಏಳು ದಿನಗಳವರೆಗೆ ಪ್ರತ್ಯೇಕಿಸಬೇಕು.
(24-25) “ಒಬ್ಬನ ದೇಹದ ಚರ್ಮದಲ್ಲಿ ಬೆಂಕಿಯಿಂದ ಸುಟ್ಟಗಾಯ ಉಂಟಾಗಬಹುದು. ಹಸಿಯಾದ ಚರ್ಮವು ಬೆಳ್ಳಗಾಗಿದ್ದರೆ, ಕೆಂಪುಬಿಳುಪು ಮಿಶ್ರವಾದ ಮಚ್ಚೆಯುಳ್ಳದ್ದಾಗಿದ್ದರೆ, ಯಾಜಕನು ಅದನ್ನು ಪರೀಕ್ಷಿಸಬೇಕು. ಆ ಬಿಳಿ ಕಲೆ ಚರ್ಮಕ್ಕಿಂತ ತಗ್ಗಾಗಿದ್ದರೆ ಮತ್ತು ಆ ಕಲೆಯಲ್ಲಿನ ರೋಮವು ಬೆಳ್ಳಗಾಗಿದ್ದರೆ, ಅದು ಕುಷ್ಠರೋಗವಾಗಿದೆ. ಆ ಕುಷ್ಠವು ಸುಟ್ಟಗಾಯದಲ್ಲಿ ಹುಟ್ಟಿದ್ದಾಗಿದೆ. ಆಗ ಯಾಜಕನು ಆ ವ್ಯಕ್ತಿಯನ್ನು ಅಶುದ್ಧನೆಂದು ಪ್ರಕಟಿಸಬೇಕು. ಅದು ಕುಷ್ಠರೋಗವಾಗಿದೆ.
ಆದರೆ ಯಾಜಕನು ಮಚ್ಚೆಯನ್ನು ನೋಡಲಾಗಿ ಹೊಳೆಯುವ ಮಚ್ಚೆಯಲ್ಲಿ ಬಿಳಿರೋಮವಿಲ್ಲದೆ ಮತ್ತು ಮಚ್ಚೆಯು ಚರ್ಮಕ್ಕಿಂತ ತಗ್ಗಾಗಿಲ್ಲದೆ ಮೊಬ್ಬಾಗಿ ಹೋಗುತ್ತಿದ್ದರೆ, ಯಾಜಕನು ಆ ವ್ಯಕ್ತಿಯನ್ನು ಏಳು ದಿನಗಳವರೆಗೆ ಪ್ರತ್ಯೇಕವಾಗಿ ಇರಿಸಬೇಕು.
ಏಳನೆಯ ದಿನದಲ್ಲಿ ಯಾಜಕನು ಮತ್ತೆ ಆ ವ್ಯಕ್ತಿಯನ್ನು ಪರೀಕ್ಷಿಸಬೇಕು. ಮಚ್ಚೆಯು ಚರ್ಮದ ಮೇಲೆ ಹರಡಿದ್ದರೆ, ಯಾಜಕನು ಆ ವ್ಯಕ್ತಿಯನ್ನು ಅಶುದ್ಧನೆಂದು ಪ್ರಕಟಿಸಬೇಕು. ಅದು ಕುಷ್ಠರೋಗವಾಗಿದೆ.
ಯಾಜಕನು ಆ ಕಲೆಯನ್ನು ನೋಡಬೇಕು. ಸೋಂಕಿನ ಕಲೆಯು ಚರ್ಮಕ್ಕಿಂತ ತಗ್ಗಾಗಿದ್ದರೆ ಮತ್ತು ಅದರಲ್ಲಿರುವ ರೋಮವು ತೆಳ್ಳಗಾಗಿಯೂ ಹಳದಿಯಾಗಿಯೂ ಇದ್ದರೆ, ಯಾಜಕನು ಆ ವ್ಯಕ್ತಿಯನ್ನು ಅಶುದ್ಧನೆಂದು ಪ್ರಕಟಿಸಬೇಕು. ಅದು ತಲೆಯ ಅಥವಾ ಗಡ್ಡದ ಕೆಟ್ಟ ಚರ್ಮರೋಗವಾಗಿದೆ.
ಏಳನೆಯ ದಿನದಲ್ಲಿ ಯಾಜಕನು ಸೋಂಕು ತಗಲಿದ ಜಾಗವನ್ನು ಪರೀಕ್ಷಿಸಬೇಕು. ರೋಗವು ಹರಡಿಕೊಳ್ಳದೆ ಇದ್ದರೆ ಮತ್ತು ಅದು ಇರುವ ಕಡೆ ಹಳದಿಬಣ್ಣದ ಕೂದಲು ಬೆಳೆಯುತ್ತಿಲ್ಲವಾಗಿದ್ದರೆ ಮತ್ತು ರೋಗವು ಉಳಿದ ಚರ್ಮಕ್ಕಿಂತ ತಗ್ಗಾಗಿ ತೋರದಿದ್ದರೆ,
ಆಗ ಆ ವ್ಯಕ್ತಿಯು ಕ್ಷೌರ ಮಾಡಿಸಿಕೊಳ್ಳಬೇಕು. ಆದರೆ ಅವನು ರೋಗ ಇರುವ ಜಾಗದಲ್ಲಿ ಕ್ಷೌರ ಮಾಡಿಸಿಕೊಳ್ಳಬಾರದು. ಯಾಜಕನು ಆ ವ್ಯಕ್ತಿಯನ್ನು ಇನ್ನೂ ಏಳು ದಿನಗಳವರೆಗೆ ಪ್ರತ್ಯೇಕವಾಗಿ ಇರಿಸಬೇಕು.
ಏಳನೆಯ ದಿನದಲ್ಲಿ ಯಾಜಕನು ರೋಗವನ್ನು ಪರೀಕ್ಷಿಸಬೇಕು. ರೋಗವು ಚರ್ಮದಲ್ಲಿ ಹರಡಿಕೊಳ್ಳದಿದ್ದರೆ ಮತ್ತು ಅದು ಚರ್ಮಕ್ಕಿಂತ ತಗ್ಗಾಗಿ ತೋರದಿದ್ದರೆ ಆಗ ಯಾಜಕನು ಆ ವ್ಯಕ್ತಿಯನ್ನು ಶುದ್ಧನೆಂದು ಪ್ರಕಟಿಸಬೇಕು. ಅವನು ತನ್ನ ಬಟ್ಟೆಗಳನ್ನು ತೊಳೆದುಕೊಂಡು ಶುದ್ಧನಾಗುವನು.
ಯಾಜಕನು ಆ ವ್ಯಕ್ತಿಯನ್ನು ಮತ್ತೆ ಪರೀಕ್ಷಿಸಬೇಕು. ರೋಗವು ಚರ್ಮದಲ್ಲಿ ಹರಡಿಕೊಂಡಿದ್ದರೆ, ಯಾಜಕನು ಹಳದಿ ಬಣ್ಣದ ಕೂದಲು ಇದೆಯೋ ಇಲ್ಲವೋ ಎಂದು ನೋಡಬೇಕಾದ ಅಗತ್ಯವಿಲ್ಲ. ಅವನು ಅಶುದ್ಧನಾಗಿದ್ದಾನೆ.
ಆದರೆ ರೋಗವು ನಿಂತುಹೋಗಿ, ಕಪ್ಪಾದ ಕೂದಲು ಆ ಜಾಗದಲ್ಲಿ ಬೆಳೆಯುತ್ತಿದ್ದರೆ, ರೋಗವು ವಾಸಿಯಾಗಿದೆ ಎಂದರ್ಥ. ಆ ವ್ಯಕ್ತಿಯು ಶುದ್ಧನಾಗಿದ್ದಾನೆ. ಯಾಜಕನು ಅವನನ್ನು ಶುದ್ಧನೆಂದು ಪ್ರಕಟಿಸಬೇಕು.
ಯಾಜಕನು ಆ ಕಲೆಗಳನ್ನು ಪರೀಕ್ಷಿಸಬೇಕು. ಆ ವ್ಯಕ್ತಿಯ ಚರ್ಮದ ಮೇಲಿರುವ ಕಲೆಗಳು ಬರೀ ಮೊಬ್ಬಾದ ಬಿಳೀ ಬಣ್ಣದವುಗಳಾಗಿದ್ದರೆ, ಆಗ ರೋಗವು ಕೇವಲ ಚರ್ಮದಲ್ಲಿ ಹುಟ್ಟಿದ ಚಿಬ್ಬಾಗಿದೆ. ಆ ವ್ಯಕ್ತಿಯು ಶುದ್ಧನಾಗಿದ್ದಾನೆ.
“ಒಬ್ಬನಿಗೆ ಕುಷ್ಠರೋಗವಿದ್ದರೆ, ಅವನು ಬೇರೆ ಜನರಿಗೆ ಎಚ್ಚರಿಕೆ ಕೊಡಬೇಕು. ‘ನಾನು ಅಶುದ್ಧನು, ಅಶುದ್ಧನು’ ಎಂದು ಅವನು ಕೂಗಿಕೊಳ್ಳಬೇಕು. ಆ ವ್ಯಕ್ತಿಯು ತನ್ನ ಬಟ್ಟೆಗಳನ್ನು ಹರಿದುಕೊಂಡಿರಬೇಕು; ತನ್ನ ಕೂದಲನ್ನು ಕೆದರಿಕೊಂಡಿರಬೇಕು; ತನ್ನ ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಂಡಿರಬೇಕು.
(47-48) “ಕೆಲವು ಬಟ್ಟೆಗಳಲ್ಲಿ ಬೂಷ್ಟು ಇರಬಹುದು. ಅದು ನಾರಿನ ಬಟ್ಟೆಯಾಗಲಿ ಉಣ್ಣೆ ಬಟ್ಟೆಯಾಗಲಿ ಆಗಿರಬಹುದು. ಅದು ಹೆಣೆದ ಅಥವಾ ಹೊಲಿದ ಬಟ್ಟೆಯಾಗಿರಬಹುದು. ಚರ್ಮದಿಂದ ಮಾಡಿದ ವಸ್ತುವಿನ ಮೇಲೂ ಬೂಷ್ಟು ಇರಬಹುದು.
(51-52) ಏಳನೆಯ ದಿನದಲ್ಲಿ ಯಾಜಕನು ಬೂಷ್ಟನ್ನು ಪರೀಕ್ಷಿಸಬೇಕು. ಅದು ಚರ್ಮದ ಮೇಲಾಗಲಿ ಬಟ್ಟೆಯ ಮೇಲಾಗಲಿ ನೇಯ್ದ ಅಥವಾ ಹೆಣೆದ ಬಟ್ಟೆಯ ಮೇಲಾಗಲಿ ಇದ್ದರೆ ಅದನ್ನು ಪರೀಕ್ಷಿಸಬೇಕು. ಬೂಷ್ಟು ಹರಡಿದ್ದರೆ, ಆ ಬಟ್ಟೆ ಅಥವಾ ತೊಗಲು ಅಶುದ್ಧವಾಗಿದೆ. ಯಾಜಕನು ಅದನ್ನು ಸುಟ್ಟುಹಾಕಬೇಕು.
ಆ ಸಮಯದನಂತರ ಯಾಜಕನು ಅದನ್ನು ತಿರುಗಿ ಪರೀಕ್ಷಿಸಬೇಕು. ಬೂಷ್ಟು ಇನ್ನೂ ಹಾಗೆಯೇ ಇರುವಂತೆ ಕಂಡರೆ, ಆಗ ಆ ವಸ್ತು ಅಶುದ್ಧವಾಗಿದೆ. ಅದು ಹರಡಲಿಲ್ಲವಾದರೂ ನೀವು ಬಟ್ಟೆಯನ್ನು ಅಥವಾ ತೊಗಲನ್ನು ಸುಟ್ಟುಹಾಕಬೇಕು.
“ಆದರೆ ಯಾಜಕನು ತೊಗಲನ್ನಾಗಲಿ ಬಟ್ಟೆಯನ್ನಾಗಲಿ ನೋಡಿದಾಗ, ತೊಳೆದನಂತರ ಬೂಷ್ಟು ಮೊಬ್ಬಾಗಿರುವುದನ್ನು ಕಂಡರೆ, ಆಗ ಯಾಜಕನು ಕಲೆ ಇರುವ ಆ ಬಟ್ಟೆಯ ಅಥವಾ ತೊಗಲಿನ ಭಾಗವನ್ನು ಕತ್ತರಿಸಿಹಾಕಬೇಕು. (ಅದು ನೇಯ್ದ ಬಟ್ಟೆಯಾಗಿದ್ದರೂ ಸರಿ, ಹೆಣೆದ ಬಟ್ಟೆಯಾಗಿದ್ದರೂ ಸರಿ.)
ಚರ್ಮದ ವಸ್ತುಗಳ ಮೇಲಾಗಲಿ ಬಟ್ಟೆಯ ಮೇಲಾಗಲಿ (ಅದು ಉಣ್ಣೆಯದ್ದಾಗಿರಲಿ ನಾರಿನದ್ದಾಗಿರಲಿ ನೇಯ್ದದ್ದಾಗಿರಲಿ ಅಥವಾ ಹೆಣೆದದ್ದಾಗಿರಲಿ) ಕಂಡು ಬರುವ ಬೂಷ್ಟಿನ ವಿಷಯದಲ್ಲಿ ಅನುಸರಿಸಬೇಕಾದ ನಿಯಮಗಳು ಇವೇ. ಶುದ್ಧವಾದವುಗಳೋ ಅಶುದ್ಧವಾದವುಗಳೋ ಎಂದು ನಿರ್ಧಾರ ಮಾಡಲು ಇದೇ ನಿಯಮಗಳನ್ನು ಅನುಸರಿಸಬೇಕು.