ಅಲ್ಲಿ ಯೌವನಸ್ಥನಾದ ಎಲೀಹು ಸಹ ಇದ್ದನು. ಎಲೀಹು ಬರಕೇಲನ ಮಗನು. ಬರಕೇಲನು ಬೂಜ್ ಕುಲದವನು. ಎಲೀಹು, ರಾಮ್ ಸಂತಾನಕ್ಕೆ ಸೇರಿದವನು. ಎಲೀಹುವಿಗೆ ಯೋಬನ ಮೇಲೆ ಬಹು ಕೋಪಬಂದಿತು. ಯಾಕೆಂದರೆ ಯೋಬನು ತಾನು ದೇವರಿಗಿಂತಲೂ ನೀತಿವಂತನೆಂದು ಪ್ರತಿಪಾದಿಸುತ್ತಿದ್ದನು.
ಎಲೀಹುವಿಗೆ ಯೋಬನ ಮೂವರ ಸ್ನೇಹಿತರ ಮೇಲೆಯೂ ಬಹು ಕೋಪಬಂದಿತು. ಯಾಕೆಂದರೆ ಯೋಬನ ಪ್ರಶ್ನೆಗಳಿಗೆ ಪರಿಣಾಮಕಾರಿಯಾದ ಉತ್ತರವನ್ನು ಕೊಟ್ಟು ಯೋಬನೇ ತಪ್ಪಿತಸ್ಥನೆಂದು ನಿರೂಪಿಸಲು ಯೋಬನ ಮೂವರು ಗೆಳೆಯರಿಗೆ ಗೊತ್ತಿರಲಿಲ್ಲ. ಆದಕಾರಣ, ದೇವರೇ ತಪ್ಪಿತಸ್ಥನೆಂದು ತೋರಿತು.
ಆದ್ದರಿಂದ ಬೂಜ್ ಕುಲಕ್ಕೆ ಸೇರಿದ ಬರಕೇಲನ ಮಗನಾದ ಎಲೀಹು ಮಾತಾಡಲಾರಂಭಿಸಿ ಹೀಗೆಂದನು: “ನಾನು ವಯಸ್ಸಿನಲ್ಲಿ ಚಿಕ್ಕವನು, ನೀವು ವೃದ್ಧರು. ಆದಕಾರಣ, ನನ್ನ ಅಭಿಪ್ರಾಯವನ್ನು ನಿಮಗೆ ತಿಳಿಸಲು ಹಿಂಜರಿದೆನು ಮತ್ತು ಹೆದರಿಕೊಂಡಿದ್ದೆನು.
ನಾನು ನಿಮ್ಮ ಮಾತುಗಳನ್ನು ಬಹಳ ಎಚ್ಚರಿಕೆಯಿಂದ ಗಮನವಿಟ್ಟು ಕೇಳಿದೆನು. ಆದರೆ ಯೋಬನು ತಪ್ಪಿತಸ್ಥನೆಂಬುದನ್ನು ನೀವು ನಿರೂಪಿಸಲಿಲ್ಲ. ನಿಮ್ಮಲ್ಲಿ ಒಬ್ಬರೂ ಯೋಬನ ವಾದಗಳಿಗೆ ಉತ್ತರಕೊಡಲಿಲ್ಲ.