ನಿಮ್ಮ ಸಭೆಗೆ ಒಬ್ಬನು ಬರುತ್ತಾನೆಂದು ನೆನೆಸಿರಿ. ಅವನು ಒಳ್ಳೆಯ ವಸ್ತ್ರಗಳನ್ನೂ ಬಂಗಾರದ ಉಂಗುರವನ್ನೂ ಧರಿಸಿರುತ್ತಾನೆ. ಅದೇ ಸಮಯಕ್ಕೆ ಕೊಳೆಯಾದ ಮತ್ತು ಹಳೆಯದಾದ ವಸ್ತ್ರಗಳನ್ನು ಧರಿಸಿರುವ ಒಬ್ಬ ಬಡವನೂ ಬರುತ್ತಾನೆ.
ಒಳ್ಳೆಯ ವಸ್ತ್ರಗಳನ್ನು ಧರಿಸಿರುವವನಿಗೆ ವಿಶೇಷ ಗಮನವನ್ನು ನೀಡುವಿರಿ. “ಉತ್ತಮವಾದ ಈ ಸ್ಥಳದಲ್ಲಿ ನೀವು ಕುಳಿತುಕೊಳ್ಳಿ” ಎಂದು ಅವನಿಗೆ ಹೇಳುವಿರಿ. ಆದರೆ ಆ ಬಡ ಮನುಷ್ಯನಿಗೆ “ಅಲ್ಲೇ ನಿಂತುಕೊ!” ಎಂದಾಗಲಿ, “ನಮ್ಮ ಪಾದಗಳ ಬಳಿ ನೆಲದ ಮೇಲೆ ಕುಳಿತುಕೊ!” ಎಂದಾಗಲಿ ಹೇಳುವಿರಿ.
ನನ್ನ ಪ್ರಿಯ ಸಹೋದರ ಸಹೋದರಿಯರೇ, ಕೇಳಿರಿ! ಈ ಲೋಕದಲ್ಲಿ ಬಡವರು ನಂಬಿಕೆಯಲ್ಲಿ ಶ್ರೀಮಂತರಾಗಿರಲೆಂದು ದೇವರು ಅವರನ್ನು ಆರಿಸಿಕೊಂಡಿದ್ದಾನೆ. ತನ್ನನ್ನು ಪ್ರೀತಿಸುವ ಜನರಿಗೆ ದೇವರು ವಾಗ್ದಾನಮಾಡಿದ ರಾಜ್ಯವನ್ನು ಹೊಂದಿಕೊಳ್ಳಲು ಆತನು ಅವರನ್ನು ಆರಿಸಿಕೊಂಡಿದ್ದಾನೆ.
ಆದರೆ ಬಡವನಿಗೆ ನೀವು ಗೌರವವನ್ನೇ ತೋರುವುದಿಲ್ಲ. ಶ್ರೀಮಂತ ಜನರು ಯಾವಾಗಲೂ ನಿಮ್ಮ ಬದುಕನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆಂಬುದು ನಿಮಗೆ ತಿಳಿದಿದೆ. ನಿಮ್ಮನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವವರು ಅವರೇ.
ಆದರೆ ನೀವು ಒಬ್ಬನನ್ನು ಇನ್ನೊಬ್ಬನಿಗಿಂತ ಮುಖ್ಯನೆಂದು ಪರಿಗಣಿಸಿ ಪಕ್ಷಪಾತ ಮಾಡಿದರೆ ಪಾಪವನ್ನು ಮಾಡುವವರಾಗಿದ್ದೀರಿ. ದೇವರ ಧರ್ಮಶಾಸ್ತ್ರವನ್ನು ಉಲ್ಲಂಘಿಸಿ ದೋಷಿಗಳಾಗಿದ್ದೀರೆಂದು ಆ ರಾಜಾಜ್ಞೆಯು ನಿರೂಪಿಸುತ್ತದೆ.
ಒಬ್ಬನು ದೇವರ ಎಲ್ಲಾ ಆಜ್ಞೆಗಳನ್ನು ಅನುಸರಿಸುತ್ತಿರಬಹುದು. ಆದರೆ ಅವನು ಒಂದು ಆಜ್ಞೆಗೆ ಅವಿಧೇಯನಾದರೆ ಅವನು ಧರ್ಮಶಾಸ್ತ್ರದ ಎಲ್ಲಾ ಆಜ್ಞೆಗಳನ್ನು ಮೀರಿದನೆಂಬ ಅಪರಾಧಕ್ಕೆ ಗುರಿಯಾಗುವನು.
“ವ್ಯಭಿಚಾರ ಮಾಡಬಾರದು” [✡ಉಲ್ಲೇಖನ: ವಿಮೋಚನ. 20:14; ಧರ್ಮೋಪದೇಶ. 5:18.] ಎಂದು ದೇವರು ಹೇಳಿದನು. “ಕೊಲ್ಲಬಾರದು” [✡ಉಲ್ಲೇಖನ: ವಿಮೋಚನ. 20:13; ಧರ್ಮೋಪದೇಶ. 5:17.] ಎಂದೂ ಅದೇ ದೇವರು ಹೇಳಿದನು. ಹೀಗಿರಲಾಗಿ, ನೀವು ವ್ಯಭಿಚಾರವನ್ನು ಮಾಡದಿದ್ದರೂ ಯಾರನ್ನೇ ಆಗಲಿ ಕೊಂದರೆ, ದೇವರ ಇಡೀ ಧರ್ಮಶಾಸ್ತ್ರವನ್ನೇ ಉಲ್ಲಂಘಿಸಿದವರಾಗಿದ್ದೀರಿ.
ನನ್ನ ಸಹೋದರ ಸಹೋದರಿಯರೇ, ಒಬ್ಬ ವ್ಯಕ್ತಿಯು ತನ್ನಲ್ಲಿ ನಂಬಿಕೆಯಿದೆಯೆಂದು ಹೇಳಿಕೊಂಡರೂ ಅದನ್ನು ಕಾರ್ಯರೂಪಕ್ಕೆ ತರದಿದ್ದರೆ, ಅವನ ನಂಬಿಕೆಯಿಂದ ಪ್ರಯೋಜನವೇನೂ ಇಲ್ಲ. ಆ ರೀತಿಯ ನಂಬಿಕೆಯು ಅವನನ್ನು ರಕ್ಷಿಸಬಲ್ಲದೇ? ಇಲ್ಲ!
ಆದರೆ ನೀವು ಆ ವ್ಯಕ್ತಿಗೆ, “ದೇವರು ನಿನ್ನೊಂದಿಗಿರಲಿ! ಚಳಿಕಾಯಿಸಿಕೊಂಡು ತೃಪ್ತಿಯಾಗುವಷ್ಟು ಊಟ ಮಾಡು” ಎಂಬುದಾಗಿ ಹೇಳಿ ಬೇಕಾದವುಗಳನ್ನು ಅವನಿಗೆ ಕೊಡದೆ ಹೋದರೆ ನಿಮ್ಮ ಮಾತುಗಳಿಗೆ ಯಾವ ಬೆಲೆಯೂ ಇಲ್ಲ.
ಆದರೆ ಯಾವನಾದರೂ, “ನಿನ್ನಲ್ಲಿ ನಂಬಿಕೆಯಿದೆ; ನನ್ನಲಿ ಕ್ರಿಯೆಗಳಿವೆ” ಎಂದು ವಾದಿಸಬಹುದು. ಅದಕ್ಕೆ ನನ್ನ ಉತ್ತರವೇನೆಂದರೆ ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆಯನ್ನು ತೋರಿಸಲಾರೆ. ನಾನಾದರೊ ನನ್ನ ಒಳ್ಳೆಯ ಕಾರ್ಯಗಳ ಮೂಲಕ ನನ್ನ ನಂಬಿಕೆಯನ್ನು ನಿನಗೆ ತೋರಿಸುವೆ ಎಂದು ಹೇಳಬಹುದು.
ಹೀಗೆ ಪವಿತ್ರಗ್ರಂಥದ ಈ ಮಾತುಗಳು ನೆರವೇರಿದವು: “ಅಬ್ರಹಾಮನು ದೇವರನ್ನು ನಂಬಿದನು. ದೇವರು ಅಬ್ರಹಾಮನ ನಂಬಿಕೆಯನ್ನು ಒಪ್ಪಿಕೊಂಡು ಅವನನ್ನು ನೀತಿವಂತನೆಂದು ಪರಿಗಣಿಸಿದನು.” [✡ಉಲ್ಲೇಖನ: ಆದಿಕಾಂಡ 15:6.] ಅಬ್ರಹಾಮನನ್ನು “ದೇವರ ಸ್ನೇಹಿತ” [✡2 ಉಲ್ಲೇಖನ: ಪೂರ್ವಕಾಲವೃತ್ತಾಂತ 20:7; ಯೆಶಾಯ 41:8.] ನೆಂದು ಕರೆಯಲಾಯಿತು.
ರಹಾಬಳು ಮತ್ತೊಬ್ಬ ಉದಾಹರಣೆಯಾಗಿದ್ದಾಳೆ. ಆಕೆ ಒಬ್ಬ ವೇಶ್ಯೆ. ಆದರೆ ಅವಳು ತನ್ನ ಕ್ರಿಯೆಗಳಿಂದಲೇ ನೀತಿವಂತಳಾದಳು. ಅವಳು ದೇವರ ಜನರಿಗೋಸ್ಕರ ಗೂಢಚಾರರನ್ನು ತನ್ನ ಮನೆಗೆ ಬರಮಾಡಿಕೊಂಡು, ಬೇರೊಂದು ರಸ್ತೆಯಲ್ಲಿ ತಪ್ಪಿಸಿಕೊಂಡು ಹೋಗಲು ಅವರಿಗೆ ಸಹಾಯ ಮಾಡಿದಳು. [*ರಹಾಬಳು … ಮಾಡಿದಳು ಯೆಹೋಶುವನು 2:1-21 ರಲ್ಲಿದೆ.]