Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Books

Isaiah Chapters

Isaiah 2 Verses

1 ಆಮೋಚನ ಮಗನಾದ ಯೆಶಾಯನು ಯೆಹೂದ ಮತ್ತು ಜೆರುಸಲೇಮಿನ ಬಗ್ಗೆ ನೋಡಿದ ದರ್ಶನ.
2 ಕೊನೆಯ ದಿನಗಳಲ್ಲಿ ಯೆಹೋವನಾಲಯದ ಪರ್ವತವು ಎಲ್ಲಾ ಬೆಟ್ಟಗಳಿಗಿಂತಲೂ ಮಹೋನ್ನತವಾದ ಪರ್ವತವಾಗಿರುವುದು.
3 ಅಲ್ಲಿಗೆ ಎಲ್ಲಾ ದೇಶಗಳಿಂದ ಜನರು ಸತತವಾಗಿ ತೊರೆಗಳಂತೆ ಬರುವರು. ಹೊರಟುಬಂದ ಆ ಜನರು, “ಬನ್ನಿರಿ, ನಾವು ಯೆಹೋವನ ಪರ್ವತಕ್ಕೆ ಹೋಗೋಣ. ಯಾಕೋಬನ ದೇವರ ಆಲಯಕ್ಕೆ ಹೋಗೋಣ. ಆತನು ನಮಗೆ ಜೀವಮಾರ್ಗವನ್ನು ಅಲ್ಲಿ ಬೋಧಿಸುವನು. ನಾವು ಆತನನ್ನು ಹಿಂಬಾಲಿಸೋಣ” ಎಂದು ಹೇಳುವರು. ಯೆಹೋವನ ಸಂದೇಶ, ಬೋಧನೆಗಳು ಜೆರುಸಲೇಮಿನಲ್ಲಿರುವ ಚೀಯೋನ್ ಪರ್ವತದಿಂದ ಪ್ರಾರಂಭವಾಗಿ ಇಡೀ ಪ್ರಪಂಚಕ್ಕೆ ಹರಡುವದು.
4 ಈಗ ಎಲ್ಲಾ ದೇಶಗಳಿಗೆ ದೇವರೇ ನ್ಯಾಯಧೀಶನಾಗಿರುವನು. ಅನೇಕ ಜನರ ತರ್ಕಗಳನ್ನು ದೇವರು ಕೊನೆಗಾಣಿಸುವನು. ಆ ಜನರು ಯುದ್ಧಕ್ಕಾಗಿ ಆಯುಧಗಳನ್ನು ಉಪಯೋಗಿಸುವದನ್ನು ನಿಲ್ಲಿಸುವರು; ತಮ್ಮ ಖಡ್ಗಗಳಿಂದ ಅವರು ನೇಗಿಲುಗಳನ್ನು ತಯಾರಿಸುವರು; ತಮ್ಮ ಬರ್ಜಿಗಳಿಂದ ಸಸಿಗಳನ್ನು ಕೊಯ್ಯುವ ಕುಡುಗೋಲುಗಳನ್ನು ಮಾಡುವರು. ಪರಸ್ಪರ ಹೊಡೆದಾಡಿಕೊಳ್ಳುವದನ್ನು ಜನಾಂಗಗಳು ನಿಲ್ಲಿಸುವರು. ಇನ್ನೆಂದಿಗೂ ಜನಾಂಗಗಳು ಯುದ್ಧಾಭ್ಯಾಸ ತರಬೇತಿಯನ್ನು ಹೊಂದುವುದಿಲ್ಲ.
5 ಯಾಕೋಬನ ಮನೆತನದವರೇ, ನೀವು ಯೆಹೋವನ ಬೆಳಕನ್ನು ಹಿಂಬಾಲಿಸುವವರಾಗಬೇಕು.
6 ನೀವು ನಿಮ್ಮ ಜನರನ್ನು ತೊರೆದದ್ದರಿಂದ ನಾನು ನಿಮಗೆ ಹೀಗೆ ಹೇಳಿದೆನು. ಪೂರ್ವದೇಶದ ಜನರಿಗಿರುವ ತಪ್ಪು ತಿಳುವಳಿಕೆಯು ನಿಮ್ಮ ಜನರಲ್ಲಿ ತುಂಬಿಹೋಯಿತು. ಫಿಲಿಷ್ಟಿಯರಂತೆ ನಿಮ್ಮ ಜನರು ಭವಿಷ್ಯ ಹೇಳಲು ಪ್ರಯತ್ನಿಸಿ ಆ ತಪ್ಪು ತಿಳುವಳಿಕೆಗೆ ಮಾರುಹೋದರು.
7 ನಿಮ್ಮ ದೇಶವು ಬೆಳ್ಳಿಬಂಗಾರಗಳಿಂದಲೂ ಮಿತಿಯಿಲ್ಲದ ನಿಕ್ಷೇಪಗಳಿಂದಲೂ ಕುದುರೆಗಳಿಂದಲೂ ಅಸಂಖ್ಯಾತವಾದ ರಥಗಳಿಂದಲೂ ತುಂಬಿಹೋಯಿತು.
8 ನಿಮ್ಮ ದೇಶವು ಕೈಯಿಂದ ಮಾಡಿದ ವಿಗ್ರಹಗಳಿಂದ ತುಂಬಿದ್ದು ಜನರು ಅವುಗಳನ್ನು ಆರಾಧಿಸುತ್ತಾರೆ.
9 ಜನರು ಕೆಟ್ಟದಾರಿಯಲ್ಲಿ ಹೋಗುತ್ತಿದ್ದಾರೆ; ಹೀನಸ್ಥಿತಿಯಲ್ಲಿ ಮುಂದುವರಿಯುತ್ತಿದ್ದಾರೆ. ದೇವರೇ, ನೀನು ಅವರನ್ನು ಖಂಡಿತವಾಗಿಯೂ ಕ್ಷಮಿಸಬೇಡ.
10 ಬಂಡೆಗಳ ಹಿಂಬದಿಯಲ್ಲಿಯೂ ಹೊಲಸಿನಲ್ಲಿಯೂ ಅವಿತುಕೊಳ್ಳಿರಿ. ನೀವು ಯೆಹೋವನಿಗೆ ಭಯಪಟ್ಟು ಆತನ ಮಹಾಶಕ್ತಿಗೆ ಮರೆಯಾಗಿ ಅವಿತುಕೊಳ್ಳಬೇಕು.
11 ಗರ್ವಿಷ್ಠರ ಗರ್ವವು ಕುಗ್ಗಿಸಲ್ಪಡುವುದು; ಅಹಂಕಾರಿಗಳ ಅಹಂಕಾರವು ತಗ್ಗಿಸಲ್ಪಡುವುದು. ಆ ಸಮಯದಲ್ಲಿ ಯೆಹೋವನೊಬ್ಬನೇ ಉನ್ನತೋನ್ನತವಾಗಿರುವನು.
12 ಸರ್ವಶಕ್ತನಾದ ಯೆಹೋವನು ಒಂದು ವಿಶೇಷ ದಿನವನ್ನು ಯೋಜಿಸಿರುತ್ತಾನೆ. ಆ ದಿನದಲ್ಲಿ ಯೆಹೋವನು ಅಹಂಕಾರಿಗಳನ್ನೂ ಜಂಬ ಕೊಚ್ಚಿಕೊಳ್ಳುವವರನ್ನೂ ಶಿಕ್ಷಿಸುವನು. ಆಗ ಆ ಅಹಂಕಾರಿಗಳನ್ನು ಜನರು ದೊಡ್ಡಜನರೆಂದು ಪರಿಗಣಿಸುವುದಿಲ್ಲ.
13 ಆ ಅಹಂಕಾರದ ಜನರು ಲೆಬನೋನಿನ ದೇವದಾರು ಮರಗಳಂತಿರುವರು. ಬಾಷಾನಿನ ಮಹಾದೇವದಾರು ಮರಗಳಂತಿರುವರು. ಆದರೆ ಯೆಹೋವನು ಅವರನ್ನು ಶಿಕ್ಷಿಸುವನು.
14 ಆ ಅಹಂಕಾರಿಗಳು ಉನ್ನತವಾದ ಪರ್ವತಗಳಂತೆಯೂ, ಎತ್ತರವಾದ ಬೆಟ್ಟಗಳಂತೆಯೂ ಇದ್ದಾರೆ.
15 ಅವರು ಎತ್ತರವಾದ ಬುರುಜುಗಳಂತೆಯೂ ಬಲಿಷ್ಠವಾದ ಕೋಟೆಗೋಡೆಯಂತೆಯೂ ಇರುವರು. ಆದರೆ ದೇವರು ಅವರನ್ನು ಶಿಕ್ಷಿಸುವನು.
16 ಆ ಅಹಂಕಾರಿಗಳು ತಾರ್ಷೀಷಿನ ದೊಡ್ಡ ಹಡಗುಗಳಂತಿದ್ದಾರೆ. ಈ ಹಡಗುಗಳಲ್ಲಿ ಶ್ರೇಷ್ಠವಾದ ವಸ್ತುಗಳು ತುಂಬಿವೆ. ಆದರೆ ದೇವರು ಆ ಅಹಂಕಾರಿಗಳನ್ನು ಶಿಕ್ಷಿಸುವನು.
17 ಆ ಸಮಯದಲ್ಲಿ ಜನರು ತಮ್ಮ ಅಹಂಕಾರವನ್ನು ತೋರಿಸುವುದಿಲ್ಲ. ಈಗ ಅಹಂಕಾರಿಗಳಾಗಿರುವವರು ನೆಲದತನಕ ಬಗ್ಗಿಹೋಗುವರು. ಆ ಸಮಯದಲ್ಲಿ ಯೆಹೋವನೊಬ್ಬನೇ ಉನ್ನತೋನ್ನತವಾಗಿರುವನು.
18 ಎಲ್ಲಾ ವಿಗ್ರಹಗಳು ಇಲ್ಲವಾಗುವವು.
19 ಜನರು ಬಂಡೆಗಳ ಸಂದುಗಳಲ್ಲಿಯೂ ನೆಲದ ಬಿರುಕುಗಳಲ್ಲಿಯೂ ಅಡಗಿಕೊಳ್ಳುವರು. ಜನರು ಯೆಹೋವನಿಗೂ ಆತನ ಪರಾಕ್ರಮಕ್ಕೂ ಭಯಪಡುವರು. ಯೆಹೋವನು ಎದ್ದು ಈ ಪ್ರಪಂಚವನ್ನು ಅಲುಗಾಡಿಸುವಾಗ ಇವೆಲ್ಲಾ ಸಂಭವಿಸುವವು.
20 ಆ ಸಮಯದಲ್ಲಿ ಜನರು ತಮ್ಮ ಬೆಳ್ಳಿಬಂಗಾರಗಳ ವಿಗ್ರಹಗಳನ್ನೆತ್ತಿ ಬಿಸಾಡಿಬಿಡುವರು. ಈ ವಿಗ್ರಹಗಳನ್ನು ಜನರು ಪೂಜಿಸುವದಕ್ಕಾಗಿ ಮಾಡಿಕೊಂಡರು. ಬಾವಲಿಗಳೂ, ಇಲಿಗಳೂ ವಾಸಿಸುವ ಸಂದುಗಳಲ್ಲಿ ಈ ವಿಗ್ರಹಗಳನ್ನು
21 ಜನರು ಬಿಸಾಡಿ, ಸಂದುಗೊಂದುಗಳಲ್ಲಿ ಅಡಗಿಕೊಳ್ಳುವರು. ಯೆಹೋವನಿಗೂ ಆತನ ಮಹಾಶಕ್ತಿಗೂ ಹೆದರಿ ಅವರು ಹಾಗೆ ಮಾಡುವರು. ಯೆಹೋವನು ಎದ್ದು ಭೂಮಿಯನ್ನು ಅಲುಗಾಡಿಸುವ ಸಮಯದಲ್ಲಿ ಇವೆಲ್ಲಾ ಸಂಭವಿಸುವವು.
22 ನಿಮ್ಮ ರಕ್ಷಣೆಗಾಗಿ ನೀವು ಇತರರ ಮೇಲೆ ನಂಬಿಕೆ ಇಡಕೂಡದು. ಅವರು ಕೇವಲ ಸಾಯುವ ಮನುಷ್ಯರಷ್ಟೇ. ಆದುದರಿಂದ ಅವರನ್ನು ನೀವು ದೇವರಂತೆ ಬಲಿಷ್ಠರೆಂದು ನೆನಸಬಾರದು.
×

Alert

×