ಆದ್ದರಿಂದ ನನ್ನ ಸಹೋದರ ಸಹೋದರಿಯರೇ, ಪರಿಶುದ್ಧ ಜನರಾಗುವುದಕ್ಕಾಗಿ ದೇವರಿಂದ ಕರೆಯಲ್ಪಟ್ಟವರಾದ ನೀವು ಯೇಸುವನ್ನೇ ಕುರಿತು ಆಲೋಚಿಸಿರಿ. ದೇವರು ಆತನನ್ನು ನಮ್ಮ ಬಳಿಗೆ ಕಳುಹಿಸಿದನು. ಆತನೇ ನಮ್ಮ ನಂಬಿಕೆಯ ಪ್ರಧಾನಯಾಜಕನು.
ಯೇಸುವನ್ನು ದೇವರು ನಮ್ಮ ಬಳಿಗೆ ಕಳುಹಿಸಿ, ಆತನನ್ನು ನಮ್ಮ ಪ್ರಧಾನಯಾಜಕನನ್ನಾಗಿ ಮಾಡಿದನು. ಆತನು ಮೋಶೆಯಂತೆ ದೇವರಿಗೆ ನಂಬಿಗಸ್ತನಾಗಿದ್ದನು. ದೇವರ ಮನೆಯಲ್ಲಿ ದೇವರ ಇಷ್ಟಕ್ಕನುಗುಣವಾಗಿ ಮಾಡಬೇಕಾದುದನ್ನೆಲ್ಲ ಆತನು ಮಾಡಿದನು.
ಕ್ರಿಸ್ತನಾದರೋ ಮಗನಾಗಿ ದೇವರ ಮನೆಯನ್ನು ಆಳುವುದರಲ್ಲಿ ನಂಬಿಗಸ್ತನಾಗಿದ್ದಾನೆ. ವಿಶ್ವಾಸಿಗಳಾದ ನಾವು ನಮಗಿರುವ ಮಹಾ ನಿರೀಕ್ಷೆಯಲ್ಲಿ ದೃಢವಾಗಿಯೂ ಹೆಮ್ಮೆಯಿಂದಲೂ ಇರುವುದಾಗಿದ್ದರೆ ದೇವರ ಮನೆಯವರಾಗಿದ್ದೇವೆ.
ಆದರೆ ಒಬ್ಬರನ್ನೊಬ್ಬರು ಪ್ರತಿದಿನವೂ ಸಂತೈಸಿರಿ. “ಈ ದಿನ”ವು ಇನ್ನೂ ಇರುವಾಗಲೇ ಇದನ್ನೆಲ್ಲ ಮಾಡಿರಿ. ಪಾಪದಿಂದಾಗಲಿ ಪಾಪವು ಮೋಸಗೊಳಿಸುವ ರೀತಿಯಿಂದಾಗಲಿ ನಿಮ್ಮಲ್ಲಿ ಯಾರೂ ಕಠಿಣರಾಗದಂತೆ ಒಬ್ಬರಿಗೊಬ್ಬರು ಸಹಾಯ ಮಾಡಿರಿ.
ಪವಿತ್ರ ಗ್ರಂಥವು ಹೇಳುವುದೇನೆಂದರೆ: “ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ, ಪೂರ್ವಕಾಲದಲ್ಲಿ ನಿಮ್ಮ ಹಿರಿಯರು ದೇವರಿಗೆ ವಿರುದ್ಧವಾಗಿದ್ದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.” ಕೀರ್ತನೆ 95:7-8