Bible Languages

Indian Language Bible Word Collections

Bible Versions

Books

Genesis Chapters

Genesis 45 Verses

Bible Versions

Books

Genesis Chapters

Genesis 45 Verses

1 ಯೋಸೇಫನು ಇದನ್ನು ಕೇಳಿ ತನ್ನ ಎದುರಿನಲ್ಲಿದ್ದವರ ಮುಂದೆ ತಾಳಿಕೊಳ್ಳಲಾರದೆ, “ಇಲ್ಲಿರುವ ಎಲ್ಲರನ್ನೂ ಹೊರಗೆ ಕಳುಹಿಸಿರಿ” ಎಂದು ಅಪ್ಪಣೆಕೊಟ್ಟನು. ಅಲ್ಲಿದ್ದವರು ಹೊರಗೆ ಹೋದರು; ಸಹೋದರರು ಮಾತ್ರ ಯೋಸೇಫನೊಡನೆ ಇದ್ದರು.
2 ಆಮೇಲೆ ಯೋಸೇಫನು ಗಟ್ಟಿಯಾಗಿ ಅತ್ತನು. ಫರೋಹನ ಮನೆಯಲ್ಲಿದ್ದ ಈಜಿಪ್ಟಿನವರೆಲ್ಲ ಅದನ್ನು ಕೇಳಿಸಿಕೊಂಡರು.
3 ಯೋಸೇಫನು ತನ್ನ ಸಹೋದರರಿಗೆ, “ನಾನು ನಿಮ್ಮ ತಮ್ಮನಾದ ಯೋಸೇಫ. ನನ್ನ ತಂದೆ ಚೆನ್ನಾಗಿದ್ದಾನೆಯೇ?” ಎಂದು ಕೇಳಿದನು. ಆದರೆ ಸಹೋದರರು ಅವನಿಗೆ ಉತ್ತರಿಸಲಿಲ್ಲ. ಅವರಿಗೆ ಭಯವಾಗಿತ್ತು ಮತ್ತು ಗಲಿಬಿಲಿಗೊಂಡಿದ್ದರು.
4 ಯೋಸೇಫನು ಮತ್ತೆ ತನ್ನ ಸಹೋದರರಿಗೆ, “ನನ್ನ ಬಳಿಗೆ ಬನ್ನಿ. ನನ್ನ ಹತ್ತಿರ ಬನ್ನಿ ಎಂದು ಬೇಡಿಕೊಳ್ಳುತ್ತೇನೆ” ಎಂದು ಹೇಳಿದನು. ಆದ್ದರಿಂದ ಸಹೋದರರು ಯೋಸೇಫನ ಹತ್ತಿರ ಹೋದರು. ಯೋಸೇಫನು ಅವರಿಗೆ, “ನಾನು ನಿಮ್ಮ ತಮ್ಮನಾದ ಯೋಸೇಫ. ನೀವು ಈಜಿಪ್ಟಿನವರಿಗೆ ಯಾವನನ್ನು ಗುಲಾಮನನ್ನಾಗಿ ಮಾರಿದಿರೋ ಅವನೇ ನಾನು.
5 ಈಗ ಚಿಂತಿಸಬೇಡಿ, ನೀವು ಮಾಡಿದ್ದಕ್ಕೆ ದುಃಖವನ್ನೂ ಪಡಬೇಡಿ. ನಾನು ಇಲ್ಲಿಗೆ ಬರಬೇಕೆಂಬುದು ದೇವರ ಯೋಜನೆಯಾಗಿತ್ತು. ನಾನು ನಿಮ್ಮನ್ನು ರಕ್ಷಿಸಲು ಇಲ್ಲಿಗೆ ಬಂದಿದ್ದೇನೆ.
6 ಈ ಭೀಕರವಾದ ಬರಗಾಲವು ಆರಂಭವಾಗಿ ಈಗಾಗಲೇ ಎರಡು ವರ್ಷಗಳಾಯಿತು. ಇನ್ನೂ ಐದು ವರ್ಷಗಳವರೆಗೆ ಬಿತ್ತನೆ ಇರುವುದಿಲ್ಲ; ಸುಗ್ಗಿಯೂ ಇರುವುದಿಲ್ಲ.
7 ಆದ್ದರಿಂದ ಈ ದೇಶದಲ್ಲಿ ತನ್ನ ಜನರನ್ನು ಕಾಪಾಡಲು ದೇವರು ನನ್ನನ್ನು ನಿಮಗಿಂತ ಮೊದಲೇ ಇಲ್ಲಿಗೆ ಕಳುಹಿಸಿದ್ದಾನೆ.
8 ನನ್ನನ್ನು ಇಲ್ಲಿಗೆ ಕಳುಹಿಸಿದ್ದು ನಿಮ್ಮ ತಪ್ಪಲ್ಲ. ಅದು ದೇವರ ಯೋಜನೆ. ದೇವರು ನನ್ನನ್ನು ಫರೋಹನ ಅತ್ಯುನ್ನತವಾದ ಅಧಿಕಾರಿಯನ್ನಾಗಿ ಮಾಡಿದ್ದಾನೆ. ನಾನು ಅವನ ಮನೆಗೆಲ್ಲಾ ಮತ್ತು ಈಜಿಪ್ಟಿಗೆಲ್ಲಾ ರಾಜ್ಯಪಾಲನಾಗಿದ್ದೇನೆ” ಎಂದು ಹೇಳಿದನು.
9 ಬಳಿಕ ಯೋಸೇಫನು, “ನನ್ನ ತಂದೆಯ ಬಳಿಗೆ ಬೇಗನೆ ಹೋಗಿ ಅವನಿಗೆ, ನಿನ್ನ ಮಗನಾದ ಯೋಸೇಫನು ಈ ಸಂದೇಶವನ್ನು ಕಳುಹಿಸಿದ್ದಾನೆ: ‘ದೇವರು ನನ್ನನ್ನು ಈಜಿಪ್ಟ್ ದೇಶಕ್ಕೆಲ್ಲಾ ರಾಜ್ಯಪಾಲನನ್ನಾಗಿ ಮಾಡಿದ್ದಾನೆ. ತಡಮಾಡದೆ ನನ್ನ ಬಳಿಗೆ ಬಾ.
10 ನೀನು ಗೋಷೆನ್ ಪ್ರಾಂತ್ಯದಲ್ಲಿ ನನ್ನೊಂದಿಗೆ ವಾಸಿಸುವೆ. ನೀನೂ ನಿನ್ನ ಮಕ್ಕಳೂ ನಿನ್ನ ಮೊಮ್ಮಕ್ಕಳೂ ನಿಮ್ಮ ಎಲ್ಲಾ ಪಶುಗಳೊಡನೆ ಇಲ್ಲಿ ನೆಲೆಸಬಹುದು.
11 ಮುಂದಿನ ಐದು ವರ್ಷಗಳ ಬರಗಾಲದಲ್ಲಿ ನಾನು ನಿಮ್ಮನ್ನು ಪೋಷಿಸುವೆನು. ಆಗ ನಿನಗಾಗಲಿ ನಿನ್ನ ಕುಟುಂಬದವರಿಗಾಗಲಿ ಬಡತನವಿರುವುದಿಲ್ಲ’ ಎಂಬುದಾಗಿ ತಿಳಿಸಿರಿ” ಎಂದು ಹೇಳಿದನು.
12 ಯೋಸೇಫನು ತನ್ನ ಸಹೋದರರೊಂದಿಗೆ ಮಾತನ್ನು ಮುಂದುವರಿಸಿ, “ನಾನೇ ಯೋಸೇಫನೆಂದು ನಿಮಗೆ ಈಗ ಗೊತ್ತಾಗಿದೆ; ನಿಮ್ಮ ತಮ್ಮನಾದ ಬೆನ್ಯಾಮೀನನಿಗೂ ಗೊತ್ತಾಗಿದೆ.
13 ಆದ್ದರಿಂದ ಈಜಿಪ್ಪಿನಲ್ಲಿರುವ ಮಹಾ ಐಶ್ವರ್ಯವನ್ನೂ ನೀವು ಇಲ್ಲಿ ನೋಡಿರುವ ಪ್ರತಿಯೊಂದನ್ನೂ ನನ್ನ ತಂದೆಗೆ ತಿಳಿಸಿ ಬೇಗನೆ ಅವನನ್ನು ಕರೆದುಕೊಂಡು ಬನ್ನಿ” ಎಂದು ಹೇಳಿದನು.
14 ಆಮೇಲೆ ಯೋಸೇಫನು ತನ್ನ ತಮ್ಮನಾದ ಬೆನ್ಯಾಮೀನನನ್ನು ಅಪ್ಪಿಕೊಂಡು ಅತ್ತನು. ಬೆನ್ಯಾಮೀನನು ಸಹ ಅತ್ತನು.
15 ಆಮೇಲೆ ಯೋಸೇಫನು ತನ್ನ ಎಲ್ಲಾ ಸಹೋದರರಿಗೂ ಮುದ್ದಿಟ್ಟು ಅತ್ತನು. ಇದಾದ ಮೇಲೆ ಆ ಸಹೋದರರು ಅವನೊಂದಿಗೆ ಮಾತಾಡತೊಡಗಿದರು.
16 ಯೋಸೇಫನ ಸಹೋದರರು ಅವನ ಬಳಿಗೆ ಬಂದಿರುವುದು ತಿಳಿದಾಗ ಫರೋಹನಿಗೂ ಅವನ ಮನೆಯವರಿಗೂ ತುಂಬ ಸಂತೋಷವಾಯಿತು.
17 ಆದ್ದರಿಂದ ಫರೋಹನು ಯೋಸೇಫನಿಗೆ, “ತಮಗೆ ಬೇಕಾದ ಎಲ್ಲಾ ಆಹಾರವನ್ನು ತೆಗೆದುಕೊಂಡು ಕಾನಾನ್ ದೇಶಕ್ಕೆ ಹಿಂತಿರುಗಿ ಹೋಗಿ
18 ನಿನ್ನ ತಂದೆಯನ್ನೂ ತಮ್ಮ ಕುಟುಂಬಗಳನ್ನೂ ನನ್ನ ಬಳಿಗೆ ಕರೆದುಕೊಂಡು ಬರಲಿ. ಅವರು ಈಜಿಪ್ಟಿನ ಒಳ್ಳೆಯ ಪ್ರದೇಶದಲ್ಲಿ ವಾಸಿಸಲಿ. ಇಲ್ಲಿರುವ ಉತ್ತಮವಾದ ಆಹಾರವನ್ನು ಅವರು ಊಟಮಾಡಲಿ,
19 ಅವರು ನಮ್ಮ ಶ್ರೇಷ್ಠವಾದ ರಥಗಳನ್ನು ತೆಗೆದುಕೊಂಡು ಕಾನಾನ್ ದೇಶಕ್ಕೆ ಹೋಗಿ ನಿನ್ನ ತಂದೆಯನ್ನೂ ಎಲ್ಲಾ ಸ್ತ್ರೀಯರನ್ನೂ ಮಕ್ಕಳನ್ನೂ ಕರೆದುಕೊಂಡು ಬರಲಿ.
20 ಅವರ ಸ್ವತ್ತುಗಳ ಬಗ್ಗೆ ಚಿಂತಿಸುವುದು ಬೇಡ; ಈಜಿಪ್ಟಿನಲ್ಲಿ ನಮಗಿರುವ ಉತ್ತಮವಾದವುಗಳನ್ನು ಅವರಿಗೆ ಕೊಡೋಣ” ಎಂದು ಹೇಳಿದನು.
21 ಅಂತೆಯೇ ಇಸ್ರೇಲನ ಮಕ್ಕಳು ಮಾಡಿದರು. ಫರೋಹನು ಹೇಳಿದಂತೆಯೇ ಯೋಸೇಫನು ತನ್ನ ಸಹೋದರರಿಗೆ ಒಳ್ಳೆಯ ರಥಗಳನ್ನೂ ಪ್ರಯಾಣಕ್ಕೆ ಬೇಕಾಗುವಷ್ಟು ಆಹಾರವನ್ನೂ ಕೊಟ್ಟನು.
22 ಯೋಸೇಫನು ಪ್ರತಿಯೊಬ್ಬ ಸಹೋದರನಿಗೂ ಒಂದೊಂದು ಜೊತೆ ಸುಂದರವಾದ ಉಡುಪುಗಳನ್ನು ಕೊಟ್ಟನು. ಆದರೆ ಬೆನ್ಯಾಮೀನನಿಗೆ ಮಾತ್ರ ಐದು ಜೊತೆ ಸುಂದರವಾದ ಉಡುಪುಗಳನ್ನೂ ಮುನ್ನೂರು ಬೆಳ್ಳಿಯ ನಾಣ್ಯಗಳನ್ನೂ ಕೊಟ್ಟನು.
23 ಯೋಸೇಫನು ತನ್ನ ತಂದೆಗೂ ಉಡುಗೊರೆಗಳನ್ನು ಕಳುಹಿಸಿದನು. ಅವನು ಈಜಿಪ್ಟಿನ ಶ್ರೇಷ್ಠವಾದ ವಸ್ತುಗಳನ್ನು ಹತ್ತು ಕತ್ತೆಗಳ ಮೇಲೆ ಕಳುಹಿಸಿದನು. ತನ್ನ ತಂದೆಯ ಮರುಪ್ರಯಾಣಕ್ಕೆ ಬೇಕಾದ ಕಾಳು, ರೊಟ್ಟಿ ಮತ್ತು ಇತರ ಆಹಾರ ಪದಾರ್ಥಗಳನ್ನೂ ಹತ್ತು ಹೆಣ್ಣುಕತ್ತೆಗಳ ಮೇಲೆ ಹೊರಿಸಿ ಕಳುಹಿಸಿದನು.
24 ಅವರು ಹೊರಡುವಾಗ ಯೋಸೇಫನು, “ನೇರವಾಗಿ ಮನೆಗೆ ಹೋಗಿ. ದಾರಿಯಲ್ಲಿ ಜಗಳ ಮಾಡಬೇಡಿ” ಎಂದು ಹೇಳಿದನು.
25 ಆದ್ದರಿಂದ ಸಹೋದರರು ಈಜಿಪ್ಟನ್ನು ಬಿಟ್ಟು, ತಮ್ಮ ತಂದೆಯಿರುವ ಕಾನಾನ್ ದೇಶಕ್ಕೆ ಹೋದರು.
26 ಸಹೋದರರು ತಮ್ಮ ತಂದೆಗೆ, “ಅಪ್ಪಾ, ಯೋಸೇಫನು ಇನ್ನೂ ಬದುಕಿದ್ದಾನೆ; ಅವನು ಈಜಿಪ್ಟ್ ದೇಶಕ್ಕೆಲ್ಲಾ ರಾಜ್ಯಪಾಲನಾಗಿದ್ದಾನೆ” ಎಂದು ಹೇಳಿದರು. ಅವರ ತಂದೆಗೆ ಆಶ್ಚರ್ಯವಾಯಿತು. ಆತನು ಅವರನ್ನು ನಂಬಲಿಲ್ಲ.
27 ಆದರೆ ಯೋಸೇಫನು ತಮಗೆ ಹೇಳಿದ್ದೆಲ್ಲವನ್ನು ಸಹೋದರರು ತಮ್ಮ ತಂದೆಗೆ ಹೇಳಿದರು. ಆಮೇಲೆ ತನ್ನನ್ನು ಈಜಿಪ್ಟಿಗೆ ಕರೆದುಕೊಂಡು ಬರಲು ಯೋಸೇಫನು ಕಳುಹಿಸಿದ್ದ ರಥಗಳನ್ನು ಯಾಕೋಬನು ನೋಡಿ ಉಲ್ಲಾಸಪಟ್ಟನು.
28 ಇಸ್ರೇಲನು, “ಈಗ ನಾನು ನಿಮ್ಮನ್ನು ನಂಬುತ್ತೇನೆ. ನನ್ನ ಮಗನಾದ ಯೋಸೇಫನು ಇನ್ನೂ ಬದುಕಿದ್ದಾನೆ. ನಾನು ಸಾಯುವ ಮೊದಲು ಅವನನ್ನು ನೋಡುತ್ತೇನೆ” ಎಂದು ಹೇಳಿದನು. ದೇವರು ಇಸ್ರೇಲನಿಗೆ ಕೊಟ್ಟ ಭರವಸೆ

Genesis 45:18 Kannada Language Bible Words basic statistical display

COMING SOON ...

×

Alert

×