Bible Languages

Indian Language Bible Word Collections

Bible Versions

Books

Genesis Chapters

Genesis 31 Verses

Bible Versions

Books

Genesis Chapters

Genesis 31 Verses

1 ಒಂದು ದಿನ ಲಾಬಾನನ ಗಂಡುಮಕ್ಕಳು ಮಾತಾಡುತ್ತಿರುವುದನ್ನು ಯಾಕೋಬನು ಕೇಳಿಸಿಕೊಂಡನು. ಅವರು, “ನಮ್ಮ ತಂದೆ ಹೊಂದಿದ್ದ ಪ್ರತಿಯೊಂದನ್ನೂ ಯಾಕೋಬನು ತೆಗೆದುಕೊಂಡು ಐಶ್ವರ್ಯವಂತನಾಗಿದ್ದಾನೆ; ಅವನು ನಮ್ಮ ತಂದೆಯ ಐಶ್ವರ್ಯವನ್ನೆಲ್ಲ ತೆಗೆದುಕೊಂಡಿದ್ದಾನೆ” ಎಂದು ಹೇಳುತ್ತಿದ್ದರು.
2 ಲಾಬಾನನು ಮೊದಲಿನಂತೆ ಸ್ನೇಹದಿಂದ ಇಲ್ಲದಿರುವುದನ್ನು ಸಹ ಯಾಕೋಬನು ಗಮನಿಸಿದನು.
3 ಯೆಹೋವನು ಯಾಕೋಬನಿಗೆ, “ನಿನ್ನ ಪೂರ್ವಿಕರು ವಾಸಿಸಿದ ನಿನ್ನ ಸ್ವಂತ ಸ್ಥಳಕ್ಕೆ ಹಿಂತಿರುಗಿ ಹೋಗು. ನಾನು ನಿನ್ನ ಸಂಗಡವಿರುತ್ತೇನೆ” ಎಂದು ಹೇಳಿದನು.
4 ಆದ್ದರಿಂದ ಯಾಕೋಬನು ರಾಹೇಲಳಿಗೆ ಮತ್ತು ಲೇಯಳಿಗೆ ತನ್ನ ಆಡುಕುರಿಗಳು ಮೇಯುತ್ತಿರುವ ಹೊಲದಲ್ಲಿ ತನ್ನನ್ನು ಭೇಟಿಯಾಗಬೇಕೆಂದು ಹೇಳಿದನು.
5 ಯಾಕೋಬನು, ರಾಹೇಲಳಿಗೆ ಮತ್ತು ಲೇಯಾಳಿಗೆ, “ನಿಮ್ಮ ತಂದೆ ನನ್ನ ಮೇಲೆ ಕೋಪದಿಂದಿರುವುದನ್ನು ನಾನು ಗಮನಿಸಿದ್ದೇನೆ. ಮೊದಲು ಅವನು ನನ್ನೊಂದಿಗೆ ಸ್ನೇಹದಿಂದಿದ್ದನು. ಆದರೆ ಈಗ ಅವನು ಸ್ನೇಹದಿಂದಿಲ್ಲ. ಆದರೆ ನನ್ನ ತಂದೆಯ ದೇವರು ನನ್ನೊಂದಿಗಿದ್ದಾನೆ.
6 ನಿಮ್ಮಿಬ್ಬರಿಗೂ ತಿಳಿದಿರುವಂತೆ, ನಾನು ನಿಮ್ಮ ತಂದೆಗಾಗಿ ನನ್ನಿಂದಾದಷ್ಟು ಕಷ್ಟಪಟ್ಟು ದುಡಿದಿದ್ದೇನೆ.
7 ಆದರೆ ನಿಮ್ಮ ತಂದೆ ನನಗೆ ಮೋಸ ಮಾಡಿದನು. ನಿಮ್ಮ ತಂದೆ ನನ್ನ ಸಂಬಳವನ್ನು ಹತ್ತು ಸಲ ಬದಲಾಯಿಸಿದನು. ಆದರೆ ಆ ಸಮಯದಲ್ಲೆಲ್ಲ ದೇವರು ನನ್ನನ್ನು ಲಾಬಾನನ ಎಲ್ಲಾ ಮೋಸಗಳಿಂದ ಕಾಪಾಡಿದನು.
8 “ಒಂದು ಸಲ ಲಾಬಾನನು, ‘ಚುಕ್ಕೆಯಿರುವ ಆಡುಕುರಿಗಳನ್ನೆಲ್ಲ ನೀನು ಇಟ್ಟುಕೊಳ್ಳಬಹುದು. ಇದೇ ನಿನಗೆ ಸಂಬಳ’ ಎಂದು ಹೇಳಿದನು. ಅವನು ಹೀಗೆ ಹೇಳಿದ ಮೇಲೆ ಎಲ್ಲಾ ಆಡುಕುರಿಗಳು ಚುಕ್ಕೆಯಿರುವ ಮರಿಗಳನ್ನು ಈಯ್ದವು. ಆದ್ದರಿಂದ ಅವೆಲ್ಲ ನನ್ನದಾದವು. ಆಗ ಲಾಬಾನನು, ‘ನಾನು ಚುಕ್ಕೆಯಿರುವ ಆಡುಕುರಿಗಳನ್ನು ತೆಗೆದುಕೊಳ್ಳುವೆ. ನೀನು ಮಚ್ಚೆಯಿರುವ ಆಡುಕುರಿಗಳನ್ನು ತೆಗೆದುಕೊಳ್ಳಬಹುದು. ಅದೇ ನಿನಗೆ ಸಂಬಳ’ ಎಂದು ಹೇಳಿದನು. ಅವನು ಹೀಗೆ ಹೇಳಿದ ಮೇಲೆ, ಎಲ್ಲಾ ಆಡುಕುರಿಗಳು ಮಚ್ಚೆಯಿರುವ ಮರಿಗಳನ್ನು ಈಯ್ದವು.
9 ಹೀಗೆ ದೇವರು ನಿಮ್ಮ ತಂದೆಯಿಂದ ಆಡುಕುರಿಗಳನ್ನು ತೆಗೆದುಕೊಂಡು ಅವುಗಳನ್ನು ನನಗೆ ಕೊಟ್ಟನು.
10 “ಪ್ರಾಣಿಗಳು ಸಂಗಮಿಸುವಾಗ ನನಗೆ ಒಂದು ಕನಸಾಯಿತು. ಸಂಗಮಿಸುತ್ತಿದ್ದ ಹೋತಗಳೆಲ್ಲ ಚುಕ್ಕೆಗಳನ್ನು ಮತ್ತು ಮಚ್ಚೆಗಳನ್ನು ಹೊಂದಿದ್ದವು.
11 ದೇವದೂತನು ಕನಸಿನಲ್ಲಿ ನನ್ನ ಚೊತೆ ಮಾತಾಡಿ ‘ಯಾಕೋಬನೇ’ ಎಂದು ಕರೆದನು. “ನಾನು ‘ಇಗೋ ಇದ್ದೇನೆ’ ಎಂದು ಉತ್ತರಿಸಿದೆ.
12 “ದೇವದೂತನು ನನಗೆ, ‘ನೋಡು ಚುಕ್ಕೆಮಚ್ಚೆಗಳಿರುವ ಆಡುಕುರಿಗಳು ಮಾತ್ರ ಸಂಗಮಿಸುತ್ತವೆ. ಹೀಗಾಗುವಂತೆ ನಾನೇ ಮಾಡಿರುವೆನು. ನಿನಗೆ ಲಾಬಾನನು ಮಾಡುತ್ತಿರುವ ಅನ್ಯಾಯಗಳನ್ನೆಲ್ಲ ನಾನು ನೋಡಿರುವೆನು. ಆದ್ದರಿಂದ ಹುಟ್ಟುವ ಮರಿಗಳೆಲ್ಲ ನಿನ್ನದಾಗುವಂತೆ ನಾನೇ ಮಾಡಿದ್ದೇನೆ.
13 ಬೇತೇಲಿನಲ್ಲಿ ನಿನ್ನ ಬಳಿಗೆ ಬಂದಿದ್ದ ದೇವರು ನಾನೇ. ಆ ಸ್ಥಳದಲ್ಲಿ ನೀನು ಒಂದು ಯಜ್ಞವೇದಿಕೆಯನ್ನು ಕಟ್ಟಿದೆ. ನೀನು ಯಜ್ಞವೇದಿಕೆಯ ಮೇಲೆ ಆಲಿವ್ ಎಣ್ಣೆಯನ್ನು ಸುರಿದು ನನಗೆ ಒಂದು ಪ್ರಮಾಣವನ್ನು ಮಾಡಿದೆ. ಈಗ ನೀನು ನಿನ್ನ ಹುಟ್ಟುಸ್ಥಳಕ್ಕೆ ಹಿಂತಿರುಗಿ ಹೋಗಬೇಕೆಂಬುದು ನನ್ನ ಅಪೇಕ್ಷೆ’ ಎಂದು ತಿಳಿಸಿದನು” ಎಂಬುದಾಗಿ ಹೇಳಿದನು.
14 ರಾಹೇಲಳು ಮತ್ತು ಲೇಯಳು ಯಾಕೋಬನಿಗೆ, “ನಮ್ಮ ತಂದೆ ಸಾಯುವಾಗ ನಮಗೆ ಕೊಡಲು ಅವನಲ್ಲಿ ಏನೂ ಇಲ್ಲ.
15 ಅವನು ನಮ್ಮನ್ನು ಅನ್ಯರಂತೆ ಕಂಡನು; ಅವನು ನಮ್ಮನ್ನು ನಿನಗೆ ಮಾರಿದ್ದಾನೆ; ನಮ್ಮ ಐಶ್ವರ್ಯವನ್ನೆಲ್ಲ ಅವನು ಉಪಯೋಗಿಸಿದನು.
16 ದೇವರು ಈ ಐಶ್ವರ್ಯವನ್ನೆಲ್ಲ ನಮ್ಮ ತಂದೆಯಿಂದ ತೆಗೆದುಕೊಂಡಿದ್ದಾನೆ. ಈಗ ಅದು ನಮಗೂ ನಮ್ಮ ಮಕ್ಕಳಿಗೂ ಸೇರಿದೆ. ಆದ್ದರಿಂದ ದೇವರು ನಿನಗೆ ಹೇಳಿದಂತೆಯೇ ಮಾಡು” ಅಂದರು.
17 ಆದ್ದರಿಂದ ಯಾಕೋಬನು ತನ್ನ ಪ್ರಯಾಣಕ್ಕಾಗಿ ಸಿದ್ಧತೆ ಮಾಡಿದನು. ಅವನು ತನ್ನ ಗಂಡುಮಕ್ಕಳನ್ನು ಮತ್ತು ಹೆಂಡತಿಯರನ್ನು ಒಂಟೆಗಳ ಮೇಲೆ ಕುಳ್ಳಿರಿಸಿದನು.
18 ನಂತರ ಅವರೆಲ್ಲರೂ, ಯಾಕೋಬನ ತಂದೆ ವಾಸಿಸಿದ ಸ್ಥಳವಾದ ಕಾನಾನಿಗೆ ಮರಳಿ ಪ್ರಯಾಣ ಬೆಳೆಸಿದರು. ಯಾಕೋಬನು ಹೊಂದಿದ್ದ ಎಲ್ಲಾ ಆಡುಕುರಿಗಳ ಮಂದೆಗಳು ಅವರ ಮುಂದೆ ನಡೆದವು. ಅವನು ಪದ್ದನ್‌ಅರಾಮಿನಲ್ಲಿದ್ದಾಗ ಹೊಂದಿಕೊಂಡಿದ್ದ ಪ್ರತಿಯೊಂದನ್ನೂ ಅವರು ತೆಗೆದುಕೊಂಡು ಹೋದರು.
19 ಆ ಸಮಯದಲ್ಲಿ ಲಾಬಾನನು ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸಲು ಹೋಗಿದ್ದನು. ಅವನು ಇಲ್ಲದಿದ್ದಾಗ, ರಾಹೇಲಳು ಅವನ ಮನೆಯೊಳಗೆ ಹೋಗಿ, ತನ್ನ ತಂದೆಯ ವಿಗ್ರಹಗಳನ್ನು ಕದ್ದುಕೊಂಡಳು.
20 ಅರಾಮ್ಯನಾದ ಲಾಬಾನನಿಗೆ ಯಾಕೋಬನು ಮೋಸ ಮಾಡಿದನು. ತಾನು ಹೋಗುತ್ತಿರುವುದಾಗಿ ಯಾಕೋಬನು ಅವನಿಗೆ ತಿಳಿಸಲಿಲ್ಲ.
21 ಯಾಕೋಬನು ತನ್ನ ಕುಟುಂಬವನ್ನು ಕರೆದುಕೊಂಡು, ತನ್ನ ಪ್ರತಿಯೊಂದು ಸ್ವತ್ತನ್ನು ತೆಗೆದುಕೊಂಡು ಬೇಗನೆ ಅಲ್ಲಿಂದ ಹೊರಟನು. ಅವರು ಯೂಫ್ರೇಟೀಸ್ ಮಹಾನದಿಯನ್ನು ದಾಟಿ, ಬೆಟ್ಟಗಳ ಸೀಮೆಯಿಂದ ಗಿಲ್ಯಾದ್ ದೇಶದ ಕಡೆಗೆ ಪ್ರಯಾಣ ಮಾಡಿದರು.
22 ಯಾಕೋಬನು ಓಡಿಹೋದದ್ದು ಮೂರು ದಿನಗಳಾದ ಮೇಲೆ ಲಾಬಾನನಿಗೆ ತಿಳಿಯಿತು.
23 ಆದ್ದರಿಂದ ಲಾಬಾನನು ತನ್ನ ಜನರನ್ನು ಕರೆದುಕೊಂಡು ಯಾಕೋಬನನ್ನು ಬೆನ್ನಟ್ಟಿದನು. ಏಳು ದಿನಗಳಾದ ಮೇಲೆ ಲಾಬಾನನು ಯಾಕೋಬನನ್ನು ಬೆಟ್ಟದ ಸೀಮೆಯಾದ ಗಿಲ್ಯಾದಿನಲ್ಲಿ ಕಂಡನು.
24 ಆ ರಾತ್ರಿ ದೇವರು ಲಾಬಾನನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ಎಚ್ಚರಿಕೆಯಾಗಿರು; ನೀನು ಯಾಕೋಬನಿಗೆ ಹೇಳುವ ಪ್ರತಿಯೊಂದು ಮಾತಿನ ಬಗ್ಗೆ ಎಚ್ಚರಿಕೆಯಾಗಿರು” ಎಂದು ಹೇಳಿದನು.
25 ಮರುದಿನ ಮುಂಜಾನೆ ಲಾಬಾನನು ಯಾಕೋಬನನ್ನು ಸಂಧಿಸಿದನು. ಯಾಕೋಬನು ಬೆಟ್ಟದ ಮೇಲೆ ಪಾಳೆಯ ಮಾಡಿಕೊಂಡಿದ್ದನು. ಆದ್ದರಿಂದ ಲಾಬಾನನು ಮತ್ತು ಅವನ ಜನರೆಲ್ಲರು ಬೆಟ್ಟದ ಸೀಮೆಯಾದ ಗಿಲ್ಯಾದಿನಲ್ಲಿ ಪಾಳೆಯ ಮಾಡಿಕೊಂಡರು.
26 ಲಾಬಾನನು ಯಾಕೋಬನಿಗೆ, “ನೀನು ನನಗೇಕೆ ಮೋಸ ಮಾಡಿದೆ? ಯುದ್ಧದಲ್ಲಿ ಸೆರೆ ಒಯ್ಯುವ ಸ್ತ್ರೀಯರಂತೆ, ನೀನು ನನ್ನ ಹೆಣ್ಣುಮಕ್ಕಳನ್ನು ಕರೆದುಕೊಂಡು ಬಂದದ್ದೇಕೆ?
27 ನೀನು ನನಗೆ ಹೇಳದೆ ಓಡಿಬಂದದ್ದೇಕೆ? ನೀನು ನನ್ನನ್ನು ಕೇಳಿದ್ದರೆ ನಾನು ನಿನಗಾಗಿ ಒಂದು ಔತಣಕೂಟವನ್ನೇರ್ಪಡಿಸುತ್ತಿದ್ದೆ. ಅಲ್ಲಿ ಗಾಯನ, ನೃತ್ಯ ಮತ್ತು ವಾದ್ಯಗೋಷ್ಠಿಗಳಿರುತ್ತಿದ್ದವು.
28 ನಾನು ನನ್ನ ಮೊಮ್ಮಕ್ಕಳಿಗೆ ಮುದ್ದಿಡುವುದಕ್ಕೂ ನನ್ನ ಹೆಣ್ಣುಮಕ್ಕಳನ್ನು ಬೀಳ್ಕೊಡುವುದಕ್ಕೂ ನೀನು ನನಗೆ ಅವಕಾಶ ಕೊಡಲಿಲ್ಲ. ನಿನ್ನ ಮೂಢತನದಿಂದ ಹೀಗೆ ಮಾಡಿರುವೆ.
29 ನಿನಗೆ ಕೇಡು ಮಾಡಲು ನನಗೆ ಶಕ್ತಿಯಿದೆ. ಆದರೆ ಕಳೆದ ರಾತ್ರಿ ನಿನ್ನ ತಂದೆಯ ದೇವರು ಕನಸಿನಲ್ಲಿ ನನಗೆ ಕಾಣಿಸಿಕೊಂಡು, ನಿನಗೆ ಕೇಡುಮಾಡಕೂಡದೆಂದು ನನಗೆ ಎಚ್ಚರಿಕೆ ಕೊಟ್ಟನು.
30 ನೀನು ನಿನ್ನ ಮನೆಗೆ ಹಿಂತಿರುಗಿ ಹೋಗಬೇಕೆಂಬುದು ನಿನ್ನ ಅಪೇಕ್ಷೆ ಎಂದು ನನಗೆ ತಿಳಿದಿದೆ. ಆದ್ದರಿಂದಲೇ ನೀನು ಹೊರಟು ಬಂದೆ. ಆದರೆ ನೀನು ನನ್ನ ಮನೆಯಿಂದ ವಿಗ್ರಹಗಳನ್ನು ಕದ್ದುಕೊಂಡು ಬಂದದ್ದೇಕೆ? ಎಂದು ಹೇಳಿದನು.
31 ಯಾಕೋಬನು, “ನಾನು ನಿನಗೆ ಹೇಳದೆ ಹೊರಟು ಬಂದೆ. ಯಾಕೆಂದರೆ ನನಗೆ ಭಯವಾಗಿತ್ತು; ನೀನು ನಿನ್ನ ಹೆಣ್ಣುಮಕ್ಕಳನ್ನು ನನ್ನಿಂದ ತೆಗೆದುಕೊಳ್ಳಬಹುದೆಂದು ನಾನು ಭಾವಿಸಿದೆ.
32 ಆದರೆ ನಾನು ನಿನ್ನ ವಿಗ್ರಹಗಳನ್ನು ಕದ್ದುಕೊಳ್ಳಲಿಲ್ಲ. ನಿನ್ನ ವಿಗ್ರಹಗಳನ್ನು ತೆಗೆದುಕೊಂಡಿರುವ ಯಾವ ವ್ಯಕ್ತಿಯನ್ನಾದರೂ ಇಲ್ಲಿ ಕಂಡರೆ ಆ ವ್ಯಕ್ತಿಯನ್ನು ಕೊಲ್ಲಲಾಗುವುದು. ನಿನ್ನ ಜನರೇ ನನಗೆ ಸಾಕ್ಷಿಗಳು. ನಿನಗೆ ಸೇರಿದ ಏನಾದರೂ ಇದೆಯೋ ಎಂದು ನೀನೇ ನೋಡಬಹುದು. ನಿನಗೆ ಸೇರಿದ ಯಾವುದಾದರೂ ಇದ್ದರೆ ತೆಗೆದುಕೊ” ಎಂದು ಹೇಳಿದನು. (ಲಾಬಾನನ ವಿಗ್ರಹಗಳನ್ನು ರಾಹೇಲಳು ಕದ್ದುಕೊಂಡಿರುವುದು ಯಾಕೋಬನಿಗೆ ತಿಳಿದಿರಲಿಲ್ಲ.)
33 ಆದ್ದರಿಂದ ಲಾಬಾನನು ಹೋಗಿ ಯಾಕೋಬನ ಪಾಳೆಯದಲ್ಲಿಯೂ ಗುಡಾರದಲ್ಲಿಯೂ ಲೇಯಳ ಗುಡಾರದಲ್ಲಿಯೂ ಹುಡುಕಿದನು. ಬಳಿಕ ಇಬ್ಬರು ಸೇವಕಿಯರಿದ್ದ ಗುಡಾರಕ್ಕೂ ಹೋಗಿ ಹುಡುಕಿದನು; ಅಲ್ಲಿಯೂ ಅವನಿಗೆ ಅವನ ವಿಗ್ರಹಗಳು ಸಿಕ್ಕಲಿಲ್ಲ. ಅಲ್ಲಿಂದ ರಾಹೇಲಳ ಗುಡಾರಕ್ಕೆ ಹೋದನು.
34 ರಾಹೇಲಳು ಆ ವಿಗ್ರಹಗಳನ್ನು ತನ್ನ ಒಂಟೆಯ ಸಬರದೊಳಗಿಟ್ಟು ಅದರ ಮೇಲೆ ಕುಳಿತುಕೊಂಡಿದ್ದಳು. ಲಾಬಾನನು ಇಡೀ ಗುಡಾರವನ್ನು ಹುಡುಕಿದರೂ ತನ್ನ ವಿಗ್ರಹಗಳನ್ನು ಕಂಡುಕೊಳ್ಳಲಿಲ್ಲ.
35 ಆಗ ರಾಹೇಲಳು ತನ್ನ ತಂದೆಗೆ, “ಅಪ್ಪಾ, ನನ್ನ ಮೇಲೆ ಕೋಪಗೊಳ್ಳಬೇಡ. ನಿನ್ನ ಮುಂದೆ ನಿಂತುಕೊಳ್ಳಲು ನನಗೆ ಸಾಧ್ಯವಿಲ್ಲ. ಯಾಕೆಂದರೆ ನಾನು ಮುಟ್ಟಾಗಿದ್ದೇನೆ” ಎಂದು ಹೇಳಿದಳು. ಲಾಬಾನನು ಪಾಳೆಯದಲ್ಲೆಲ್ಲಾ ಹುಡುಕಿದರೂ ತನ್ನ ವಿಗ್ರಹಗಳನ್ನು ಕಂಡುಕೊಳ್ಳಲಾಗಲಿಲ್ಲ.
36 ಆಗ ಯಾಕೋಬನು ತುಂಬಾ ಕೋಪಗೊಂಡು, “ನಾನು ಯಾವ ತಪ್ಪು ಮಾಡಿದೆ? ಯಾವ ನಿಯಮವನ್ನು ನಾನು ಉಲ್ಲಂಘಿಸಿರುವೆ? ನನ್ನನ್ನು ಬೆನ್ನಟ್ಟಿಕೊಂಡು ಬಂದು ತಡೆಯಲು ನಿನಗೆ ಯಾವ ಹಕ್ಕಿದೆ?
37 ನಾನು ಹೊಂದಿರುವ ಪ್ರತಿಯೊಂದನ್ನು ನೀನು ಪರೀಕ್ಷಿಸಿ ನೋಡಿದರೂ ನಿನಗೆ ಸೇರಿರುವ ಯಾವುದೂ ನಿನಗೆ ಸಿಕ್ಕಲಿಲ್ಲ. ನಿನಗೆ ಅಂಥದ್ದೇನಾದರೂ ಸಿಕ್ಕಿದರೆ ತೋರಿಸು. ನನ್ನ ಜನರಿಗೆಲ್ಲ ಕಾಣಿಸುವಂತೆ ಅದನ್ನು ಇಲ್ಲಿಡು. ನಮ್ಮಲ್ಲಿ ಯಾರು ಸರಿಯಾದವರೆಂದು ನಮ್ಮ ಜನರೇ ನಿರ್ಣಯಿಸಲಿ.
38 ನಾನು ನಿನಗೋಸ್ಕರ ಇಪ್ಪತ್ತು ವರ್ಷ ದುಡಿದೆ. ಆ ಸಮಯದಲ್ಲೆಲ್ಲ. ಯಾವ ಕುರಿಮರಿಯಾಗಲಿ ಆಡಾಗಲಿ ಹುಟ್ಟುವಾಗ ಸಾಯಲಿಲ್ಲ; ನಿನ್ನ ಮಂದೆಗಳಲ್ಲಿನ ಯಾವ ಟಗರನ್ನಾಗಲಿ ನಾನು ತಿಂದುಬಿಡಲಿಲ್ಲ.
39 ಕ್ರೂರ ಮೃಗಗಳು ಕುರಿಯನ್ನು ಕೊಂದಾಗಲೆಲ್ಲಾ ಅದಕ್ಕೆ ಬದಲಾಗಿ ನನ್ನ ಕುರಿಯನ್ನು ನಿನಗೆ ಕೊಟ್ಟೆನು. ಸತ್ತುಹೋದ ಪಶುವನ್ನು ನಿನ್ನ ಮುಂದೆ ತಂದು, ‘ಇದು ನನ್ನ ತಪ್ಪಲ್ಲ’ ಎಂದು ನಿನಗೆ ಹೇಳಲಿಲ್ಲ. ಕಳುವು ಹಗಲಲ್ಲಾಗಿದ್ದರೂ ರಾತ್ರಿಯಲ್ಲಾಗಿದ್ದರೂ ಕಳುವಾದ ಪಶುಗಳಿಗೆ ಪ್ರತಿಯಾಗಿ ಪಶುಗಳನ್ನು ನೀನು ನನ್ನಿಂದ ವಸೂಲಿ ಮಾಡಿದೆ.
40 ಹಗಲಿನಲ್ಲಿ ಸೂರ್ಯನಿಂದ ನನ್ನ ಶಕ್ತಿಯನ್ನು ಕುಂದಿಸಿದೆ; ರಾತ್ರಿಯಲ್ಲಿ ಚಳಿಯಿಂದ ನನಗೆ ನಿದ್ರೆಯು ಬರಲಿಲ್ಲ.
41 ನಾನು ಇಪ್ಪತ್ತು ವರ್ಷ ನಿನಗೆ ಗುಲಾಮನಂತೆ ಸೇವೆ ಮಾಡಿದೆನು. ಮೊದಲ ಹದಿನಾಲ್ಕು ವರ್ಷಗಳಲ್ಲಿ ನಿನ್ನ ಇಬ್ಬರು ಹೆಣ್ಣುಮಕ್ಕಳನ್ನು ಪಡೆದುಕೊಳ್ಳುವುದಕ್ಕಾಗಿ ದುಡಿದೆನು. ಕಡೆಯ ಆರು ವರ್ಷಗಳಲ್ಲಿ ನಿನ್ನ ಪಶುಗಳನ್ನು ಪಡೆದುಕೊಳ್ಳುವುದಕ್ಕಾಗಿ ದುಡಿದೆನು. ಆ ಅವಧಿಯಲ್ಲಿ ನೀನು ನನ್ನ ಸಂಬಳವನ್ನು ಹತ್ತು ಸಲ ಬದಲಾಯಿಸಿದೆ.
42 ಆದರೆ ನನ್ನ ಪೂರ್ವಿಕರ ದೇವರೂ ಅಬ್ರಹಾಮನ ದೇವರೂ ಇಸಾಕನು ಭಯಪಡುವ ದೇವರೂ ನನ್ನ ಸಂಗಡವಿದ್ದನು. ದೇವರು ನನ್ನ ಜೊತೆಯಲ್ಲಿ ಇಲ್ಲದಿದ್ದರೆ ನೀನು ನನ್ನನ್ನು ಬರಿಗೈಲಿ ಕಳುಹಿಸಿಬಿಡುತ್ತಿದ್ದೆ. ಆದರೆ ನನ್ನ ಕಷ್ಟವನ್ನೂ ನಾನು ಮಾಡಿದ ಕೆಲಸವನ್ನೂ ದೇವರು ನೋಡಿದನು. ನಿನ್ನೆಯ ರಾತ್ರಿ ನಾನು ತಪ್ಪಿತಸ್ಥನಲ್ಲವೆಂದು ದೇವರು ನಿನಗೆ ತೋರಿಸಿಕೊಟ್ಟಿದ್ದಾನೆ” ಎಂದು ಹೇಳಿದನು.
43 ಲಾಬಾನನು ಯಾಕೋಬನಿಗೆ, “ಈ ಸ್ತ್ರೀಯರು ನನ್ನ ಮಕ್ಕಳು. ಅವರ ಮಕ್ಕಳು ನನಗೆ ಸೇರಿದವರು; ಈ ಪಶುಗಳು ನನ್ನವು. ನೀನು ಇಲ್ಲಿ ನೋಡುವ ಪ್ರತಿಯೊಂದೂ ನನಗೆ ಸೇರಿದ್ದು. ಆದರೆ ನನ್ನ ಹೆಣ್ಣುಮಕ್ಕಳನ್ನಾಗಲಿ ಅವರ ಮಕ್ಕಳನ್ನಾಗಲಿ ತೆಗೆದುಕೊಳ್ಳಲು ಸಾಧ್ಯವಿಲ್ಲ.
44 ಆದ್ದರಿಂದ ನಿನ್ನೊಡನೆ ಒಂದು ಒಪ್ಪಂದ ಮಾಡಿಕೊಳ್ಳಲು ಸಿದ್ಧನಾಗಿದ್ದೇನೆ. ನಮ್ಮ ಒಪ್ಪಂದಕ್ಕೆ ಸಾಕ್ಷಿಯಾಗಿ ಕಲ್ಲುಗಳ ಒಂದು ಕುಪ್ಪೆಯನ್ನು ಮಾಡೋಣ” ಎಂದು ಹೇಳಿದನು.
45 ಅಂತೆಯೇ ಯಾಕೋಬನು ಮಾಡಿಕೊಂಡ ಒಪ್ಪಂದಕ್ಕೆ ಸಾಕ್ಷಿಯಾಗಿ ಒಂದು ದೊಡ್ಡ ಕಲ್ಲನ್ನು ತೆಗೆದುಕೊಂಡು ಬಂದು ಅಲ್ಲಿಟ್ಟನು.
46 ಅವನು ತನ್ನ ಜನರಿಗೆ ಮತ್ತಷ್ಟು ಕಲ್ಲುಗಳನ್ನು ತೆಗೆದುಕೊಂಡು ಬಂದು ಕಲ್ಲಿನ ಕುಪ್ಪೆ ಮಾಡುವಂತೆ ಹೇಳಿದನು. ಬಳಿಕ ಅವರು ಆ ಕುಪ್ಪೆಯ ಬಳಿಯಲ್ಲಿ ಊಟಮಾಡಿದರು.
47 ಲಾಬಾನನು ಆ ಸ್ಥಳಕ್ಕೆ ಯಗರ್‌ಸಾಹದೂತ ಎಂದು ಹೆಸರಿಟ್ಟನು. ಆದರೆ ಯಾಕೋಬನು ಆ ಸ್ಥಳಕ್ಕೆ ಗಲೀದ್ ಎಂದು ಹೆಸರಿಟ್ಟನು.
48 ಲಾಬಾನನು ಯಾಕೋಬನಿಗೆ, “ಈ ಕಲ್ಲುಗಳ ಕುಪ್ಪೆಯು ನಮ್ಮಿಬ್ಬರಿಗೂ ನಮ್ಮ ಒಪ್ಪಂದವನ್ನು ಜ್ಞಾಪಕಕ್ಕೆ ತರುತ್ತದೆ” ಎಂದು ಹೇಳಿದನು. ಆದಕಾರಣ ಯಾಕೋಬನು ಆ ಸ್ಥಳಕ್ಕೆ ಗಲೀದ್ ಎಂದು ಹೆಸರಿಟ್ಟನು.
49 ಲಾಬಾನನು, “ನಾವು ಒಬ್ಬರನ್ನೊಬ್ಬರು ಅಗಲಿರುವಾಗ ಯೆಹೋವನೇ ನಮ್ಮನ್ನು ನೋಡಿಕೊಳ್ಳಲಿ” ಎಂದು ಹೇಳಿದನು. ಆದ್ದರಿಂದ ಆ ಸ್ಥಳಕ್ಕೆ ಮಿಚ್ಪಾ ಎಂದೂ ಹೆಸರಿಡಲಾಯಿತು.
50 ಆಮೇಲೆ ಲಾಬಾನನು “ನೀನು ನನ್ನ ಹೆಣ್ಣುಮಕ್ಕಳನ್ನು ನೋಯಿಸಿದರೆ, ದೇವರು ನಿನ್ನನ್ನು ದಂಡಿಸುವನು ಎಂಬುದನ್ನು ನೆನಪು ಮಾಡಿಕೊ. ನೀನು ಬೇರೆ ಸ್ತ್ರೀಯರನ್ನು ಮದುವೆ ಮಾಡಿಕೊಂಡರೆ, ದೇವರು ನಿನ್ನನ್ನು ನೋಡುತ್ತಿದ್ದಾನೆ ಎಂಬುದನ್ನು ನೆನಪು ಮಾಡಿಕೊ.
51 ನಮ್ಮಿಬ್ಬರ ಮಧ್ಯದಲ್ಲಿ ನಾನಿಟ್ಟಿರುವ ಈ ಕಲ್ಲುಗಳು ಇಲ್ಲಿವೆ; ನಾವು ಒಪ್ಪಂದ ಮಾಡಿಕೊಂಡಿದ್ದೇವೆ ಎಂಬುದನ್ನು ಸೂಚಿಸುವ ವಿಶೇಷವಾದ ಕಲ್ಲೂ ಇಲ್ಲಿದೆ.
52 ಈ ಕಲ್ಲುಗಳ ಕುಪ್ಪೆಯೂ ವಿಶೇಷವಾದ ಈ ಕಲ್ಲೂ ನಮ್ಮ ಒಪ್ಪಂದವನ್ನು ನೆನಪುಮಾಡಿಕೊಳ್ಳಲು ನಮ್ಮಿಬ್ಬರಿಗೂ ಸಹಾಯ ಮಾಡುತ್ತವೆ. ನಾನು ನಿನಗೆ ವಿರೋಧವಾಗಿ ಹೋರಾಡುವುದಕ್ಕಾಗಿ ಈ ಕಲ್ಲುಗಳನ್ನು ದಾಟಿ ಬರುವುದಿಲ್ಲ. ನೀನು ನನಗೆ ವಿರೋಧವಾಗಿ ಈ ಕಲ್ಲುಗಳನ್ನು ದಾಟಿ ನನ್ನ ಕಡೆಗೆ ಬರಕೂಡದು.
53 ನಾವು ಈ ಒಪ್ಪಂದವನ್ನು ಮುರಿದುಹಾಕಿದರೆ, ನಮ್ಮಲ್ಲಿ ಅಪರಾಧಿಯಾದವನಿಗೆ ಅಬ್ರಹಾಮನ ದೇವರು, ನಾಹೋರನ ದೇವರು ಮತ್ತು ಅವರ ಪೂರ್ವಿಕರ ದೇವರು ನ್ಯಾಯತೀರಿಸಲಿ” ಎಂದು ಹೇಳಿದನು. ಅದೇ ರೀತಿಯಲ್ಲಿ ಯಾಕೋಬನು ತನ್ನ ತಂದೆಯಾದ ಇಸಾಕನು ಭಯಭಕ್ತಿಯಿಂದ ಸೇವೆಮಾಡುವ ದೇವರ ಮೇಲೆ ಆಣೆಯಿಟ್ಟು ಪ್ರಮಾಣಮಾಡಿದನು.
54 ಆಮೇಲೆ ಯಾಕೋಬನು ಒಂದು ಪಶುವನ್ನು ಕೊಂದು ಅದನ್ನು ಬೆಟ್ಟದ ಮೇಲೆ ಯಜ್ಞವಾಗಿ ಅರ್ಪಿಸಿದನು; ತನ್ನ ಜನರನ್ನು ಊಟಕ್ಕೆ ಆಹ್ವಾನಿಸಿದನು. ಅವರು ಊಟ ಮಾಡಿದ ಮೇಲೆ, ಆ ರಾತ್ರಿ ಬೆಟ್ಟದ ಮೇಲೆ ಇದ್ದರು.
55 ಮರುದಿನ ಮುಂಜಾನೆ ಲಾಬಾನನು ತನ್ನ ಮೊಮ್ಮಕ್ಕಳಿಗೂ ಹೆಣ್ಣುಮಕ್ಕಳಿಗೂ ಮುದ್ದಿಟ್ಟು ಆಶೀರ್ವದಿಸಿ ತನ್ನ ಮನೆಗೆ ಹಿಂತಿರುಗಿದನು.

Genesis 31:9 Kannada Language Bible Words basic statistical display

COMING SOON ...

×

Alert

×