1
|
ಇಸಾಕನು ಯಾಕೋಬನನ್ನು ಕರೆದು ಅವನನ್ನು ಆಶೀರ್ವದಿಸಿ ಅವನಿಗೆ, “ನೀನು ಕಾನಾನಿನ ಸ್ತ್ರೀಯನ್ನು ಮದುವೆಯಾಗಕೂಡದು. |
2
|
ಆದ್ದರಿಂದ ಈ ಸ್ಥಳವನ್ನು ಬಿಟ್ಟು ಪದ್ದನ್ಅರಾಮಿಗೆ ಹೊರಟು ನಿನ್ನ ತಾಯಿಯ ತಂದೆಯಾದ ಬೆತೂವೇಲನ ಮನೆಗೆ ಹೋಗು. ನಿನ್ನ ತಾಯಿಯ ಅಣ್ಣನಾದ ಲಾಬಾನನು ಅಲ್ಲಿ ವಾಸಿಸುತ್ತಿದ್ದಾನೆ. ಅವನ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆ ಮಾಡಿಕೊ. |
3
|
ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಿ, ನಿನಗೆ ಅನೇಕ ಮಕ್ಕಳನ್ನು ಕೊಡುವಂತೆಯೂ ನೀನು ಮಹಾಜನಾಂಗದ ತಂದೆಯಾಗುವಂತೆಯೂ ನಾನು ಪ್ರಾರ್ಥಿಸುವೆನು. |
4
|
ದೇವರು ಅಬ್ರಹಾಮನನ್ನು ಆಶೀರ್ವದಿಸಿದ ರೀತಿಯಲ್ಲಿ ನಿನ್ನನ್ನೂ ನಿನ್ನ ಮಕ್ಕಳನ್ನೂ ಆಶೀರ್ವದಿಸುವಂತೆಯೂ ನೀನು ವಾಸಿಸುವ ಸ್ಥಳದಲ್ಲಿ ಸ್ವಂತ ಭೂಮಿಯನ್ನು ಪಡೆದುಕೊಳ್ಳುವಂತೆಯೂ ನಾನು ಪ್ರಾರ್ಥಿಸುವೆನು. ದೇವರು ಅಬ್ರಹಾಮನಿಗೆ ಕೊಟ್ಟ ಭೂಮಿಯೇ ಅದು” ಎಂದು ಹೇಳಿ ಕಳುಹಿಸಿಕೊಟ್ಟನು. |
5
|
ಅಂತೆಯೇ ಯಾಕೋಬನು ಪದ್ದನ್ಅರಾಮಿಗೆ ಹೊರಟು ರೆಬೆಕ್ಕಳ ಅಣ್ಣನಾದ ಲಾಬಾನನ ಬಳಿಗೆ ಹೋದನು. ಬೆತೂವೇಲನು ಲಾಬಾನನ ಮತ್ತು ರೆಬೆಕ್ಕಳ ತಂದೆ. ರೆಬೆಕ್ಕಳು ಯಾಕೋಬನ ಮತ್ತು ಏಸಾವನ ತಾಯಿ. |
6
|
ತನ್ನ ತಂದೆಯಾದ ಇಸಾಕನು ಯಾಕೋಬನನ್ನು ಆಶೀರ್ವದಿಸಿದ್ದೂ, ಮದುವೆ ಮಾಡಿಕೊಳ್ಳಲು ಪದ್ದನ್ಅರಾಮಿಗೆ ಕಳುಹಿಸಿದ್ದೂ, ಕಾನಾನಿನ ಸ್ತ್ರೀಯನ್ನು ಮದುವೆಯಾಗಕೂಡದೆಂದು ಯಾಕೋಬನಿಗೆ ಆಜ್ಞಾಪಿಸಿರುವುದೂ ಏಸಾವನಿಗೆ ತಿಳಿಯಿತು. |
7
|
ಇದಲ್ಲದೆ ಯಾಕೋಬನು ತನ್ನ ತಂದೆತಾಯಿಗಳಿಗೆ ವಿಧೇಯನಾಗಿ ಪದ್ದನ್ಅರಾಮಿಗೆ ಹೋದದ್ದೂ ಏಸಾವನಿಗೆ ಗೊತ್ತಾಯಿತು. |
8
|
ತನ್ನ ತಂದೆಗೆ ತನ್ನ ಗಂಡುಮಕ್ಕಳು ಕಾನಾನಿನ ಸ್ತ್ರೀಯರನ್ನು ಮದುವೆಯಾಗುವುದು ಇಷ್ಟವಿಲ್ಲವೆಂಬುದೂ ಏಸಾವನಿಗೆ ತಿಳಿಯಿತು. |
9
|
ಏಸಾವನಿಗೆ ಈಗಾಗಲೇ ಇಬ್ಬರು ಹೆಂಡತಿಯರಿದ್ದರು. ಆದರೂ ಅವನು ಇಷ್ಮಾಯೇಲನ ಬಳಿಗೆ ಹೋಗಿ ಅವನ ಮಗಳಾದ ಮಹಲತ್ ಎಂಬಾಕೆಯನ್ನು ಮದುವೆ ಮಾಡಿಕೊಂಡನು. ಇಷ್ಮಾಯೇಲನು ಅಬ್ರಹಾಮನ ಮಗನು. ಮಹಲತಳು ನೆಬಾಯೋತನ ತಂಗಿ. |
10
|
ಯಾಕೋಬನು ಬೇರ್ಷೆಬವನ್ನು ಬಿಟ್ಟು ಹಾರಾನಿಗೆ ಹೋದನು. |
11
|
ಯಾಕೋಬನು ಪ್ರಯಾಣ ಮಾಡುತ್ತಿರುವಾಗ ಸೂರ್ಯಾಸ್ತವಾಯಿತು. ಆದ್ದರಿಂದ ಯಾಕೋಬನು ಆ ರಾತ್ರಿ ಇಳಿದುಕೊಳ್ಳಲು ಒಂದು ಸ್ಥಳಕ್ಕೆ ಹೋದನು. ಯಾಕೋಬನು ಆ ಸ್ಥಳದಲ್ಲಿ ಒಂದು ಕಲ್ಲನ್ನು ಕಂಡು ಅದರ ಮೇಲೆ ತಲೆಯಿಟ್ಟು ಮಲಗಿಕೊಂಡನು. |
12
|
ಯಾಕೋಬನಿಗೆ ಒಂದು ಕನಸಾಯಿತು. ಆ ಕನಸಿನಲ್ಲಿ ಒಂದು ಏಣಿ ನೆಲದ ಮೇಲೆ ನಿಂತಿತ್ತು, ಅದರ ತುದಿ ಆಕಾಶವನ್ನು ಮುಟ್ಟಿತ್ತು. ದೇವದೂತರು ಅದರಲ್ಲಿ ಮೇಲೆರುತ್ತಾ ಕೆಳಗಿಳಿಯುತ್ತಾ ಇರುವುದನ್ನು ಯಾಕೋಬನು ಕಂಡನು. |
13
|
ಯೆಹೋವನು ಏಣಿಯ ತುದಿಯಲ್ಲಿ ನಿಂತಿರುವುದನ್ನು ಯಾಕೋಬನು ಕಂಡನು. ಯೆಹೋವನು ಅವನಿಗೆ, “ನಿನ್ನ ತಾತನಾದ ಅಬ್ರಹಾಮನ ದೇವರಾಗಿರುವ ಯೆಹೋವನೇ ನಾನು. ನಾನು ಇಸಾಕನ ದೇವರು. ಈಗ ನೀನು ಮಲಗಿಕೊಂಡಿರುವ ದೇಶವನ್ನು ನಾನು ನಿನಗೆ ಕೊಡುವೆನು. ನಾನು ಈ ದೇಶವನ್ನು ನಿನಗೂ ನಿನ್ನ ಮಕ್ಕಳಿಗೂ ಕೊಡುವೆನು. |
14
|
ಭೂಮಿಯ ಮೇಲೆ ಧೂಳಿನ ಕಣಗಳಿರುವಂತೆ ನಿನಗೆ ಅನೇಕಾನೇಕ ಸಂತತಿಗಳಿರುವರು. ಅವರು ಪೂರ್ವಪಶ್ಚಿಮಗಳಿಗೂ ಉತ್ತರದಕ್ಷಿಣಗಳಿಗೂ ಹರಡಿಕೊಳ್ಳುವರು. ನಿನ್ನ ಮೂಲಕವೂ ನಿನ್ನ ಸಂತತಿಯವರ ಮೂಲಕವೂ ಭೂಮಿಯ ಮೇಲಿರುವ ಎಲ್ಲಾ ಕುಲಗಳವರು ಆಶೀರ್ವಾದ ಹೊಂದುವರು. |
15
|
“ನಾನು ನಿನ್ನ ಸಂಗಡವಿದ್ದು ನೀನು ಹೋಗುವ ಪ್ರತಿಯೊಂದು ಸ್ಥಳದಲ್ಲಿಯೂ ನಿನ್ನನ್ನು ಕಾಪಾಡುವೆನು; ನಿನ್ನನ್ನು ಈ ಸ್ಥಳಕ್ಕೆ ಮತ್ತೆ ಕರೆದುಕೊಂಡು ಬರುವೆನು. ನಾನು ವಾಗ್ದಾನ ಮಾಡಿದ್ದನ್ನು ನೆರವೇರಿಸುವ ತನಕ ನಾನು ನಿನ್ನನ್ನು ಬಿಟ್ಟು ಹೋಗುವುದಿಲ್ಲ” ಎಂದು ಹೇಳಿದನು. |
16
|
ಆಗ ಯಾಕೋಬನು ನಿದ್ರೆಯಿಂದ ಎಚ್ಚೆತ್ತು, “ಖಂಡಿತವಾಗಿಯೂ ಈ ಸ್ಥಳದಲ್ಲಿ ದೇವರಿದ್ದಾನೆ, ಆದರೆ ಅದು ನನಗೆ ಗೊತ್ತಿರಲಿಲ್ಲ” ಎಂದು ಹೇಳಿದನು. |
17
|
ಯಾಕೋಬನಿಗೆ ಭಯವಾಗಿತ್ತು. ಅವನು, “ಇದು ತುಂಬ ಮಹತ್ವವಾದ ಸ್ಥಳ. ಇದು ದೇವರ ಮನೆ. ಇದು ಸ್ವರ್ಗಕ್ಕೆ ಬಾಗಿಲು” ಎಂದು ಹೇಳಿದನು. |
18
|
ಯಾಕೋಬನು ಮರುದಿನ ಮುಂಜಾನೆ ಬೇಗನೆ ಎದ್ದು, ತಾನು ಮಲಗಿಕೊಂಡಿದ್ದ ಕಲ್ಲನ್ನು ತೆಗೆದುಕೊಂಡು ಅದನ್ನು ಕಂಬವಾಗಿ ನೆಲದಲ್ಲಿ ನಿಲ್ಲಿಸಿದನು. ನಂತರ ಆ ಕಲ್ಲಿನ ಮೇಲೆ ಎಣ್ಣೆಯನ್ನು ಸುರಿದನು. ಹೀಗೆ ಅವನು ಆ ಕಲ್ಲನ್ನು ದೇವರ ನೆನಪಿಗಾಗಿ ಪ್ರತಿಷ್ಠಿಸಿದನು. |
19
|
ಆ ಸ್ಥಳದ ಹೆಸರು ಲೂಜ್. ಆದರೆ ಯಾಕೋಬನು ಅದಕ್ಕೆ ಬೇತೇಲ್ ಎಂದು ಹೆಸರಿಟ್ಟನು. |
20
|
ನಂತರ ಯಾಕೋಬನು ಈ ಪ್ರಮಾಣವನ್ನು ಮಾಡಿದನು: “ದೇವರು ನನ್ನ ಸಂಗಡವಿದ್ದು ನಾನು ಹೋದಲ್ಲೆಲ್ಲ ನನ್ನನ್ನು ಕಾಪಾಡಿ ಊಟಕ್ಕೆ ಆಹಾರವನ್ನೂ, ಉಡಲು ಬಟ್ಟೆಗಳನ್ನೂ ಕೊಟ್ಟು, |
21
|
ನಾನು ಸಮಾಧಾನದಿಂದ ನನ್ನ ತಂದೆಯ ಮನೆಗೆ ಹಿಂತಿರುಗಿ ಬರುವಂತೆ ಮಾಡಿದರೆ ಯೆಹೋವನೇ ನನ್ನ ದೇವರಾಗಿರುವನು. |
22
|
ನಾನು ಕಲ್ಲನ್ನು ನೆಟ್ಟಿರುವ ಈ ಸ್ಥಳವು ದೇವರ ಪವಿತ್ರಸ್ಥಳವಾಗುವುದು. ಇದಲ್ಲದೆ ದೇವರು ನನಗೆ ಕೊಡುವುದರಲ್ಲೆಲ್ಲಾ ಹತ್ತನೆಯ ಒಂದು ಭಾಗವನ್ನು ನಾನು ಆತನಿಗೆ ಕೊಡುತ್ತೇನೆ.” |
Genesis 28:20 Kannada Language Bible Words basic statistical display
COMING SOON ...