1
|
ಅಬ್ರಹಾಮನ ಕಾಲದಲ್ಲಿ ಬಂದಿದ್ದ ಕ್ಷಾಮದಂತೆ ಮತ್ತೊಂದು ಕ್ಷಾಮವು ಕಾನಾನ್ ದೇಶಕ್ಕೆ ಬಂದಿತು. ಆದ್ದರಿಂದ ಇಸಾಕನು ಫಿಲಿಷ್ಟಿಯರ ರಾಜನಾದ ಅಬೀಮೆಲೆಕನ ಬಳಿಗೆ ಹೋದನು. ಅಬೀಮೆಲೆಕನು ಗೆರಾರ್ ನಗರದಲ್ಲಿದ್ದನು. |
2
|
ಯೆಹೋವನು ಇಸಾಕನಿಗೆ ಪ್ರತ್ಯಕ್ಷನಾಗಿ, “ನೀನು ಈಜಿಪ್ಟಿಗೆ ಹೋಗಬೇಡ. ನೀನು ಯಾವ ಪ್ರದೇಶದಲ್ಲಿರಬೇಕೆಂದು ನಾನು ಆಜ್ಞಾಪಿಸಿದೆನೋ ಆ ಪ್ರದೇಶದಲ್ಲಿ ವಾಸಿಸು. |
3
|
ನಾನು ನಿನ್ನ ಸಂಗಡವಿದ್ದು ನಿನ್ನನ್ನು ಆಶೀರ್ವದಿಸಿ ನಿನಗೂ ನಿನ್ನ ಕುಟುಂಬಕ್ಕೂ ಈ ಪ್ರದೇಶಗಳನ್ನೆಲ್ಲ ಕೊಡುವೆನು. ನಾನು ನಿನ್ನ ತಂದೆಯಾದ ಅಬ್ರಹಾಮನಿಗೆ ಪ್ರಮಾಣ ಮಾಡಿದ್ದನ್ನು ನೆರವೇರಿಸುವೆನು. |
4
|
ನಾನು ನಿನ್ನ ಸಂತಾನವನ್ನು ಆಕಾಶದಲ್ಲಿನ ನಕ್ಷತ್ರಗಳಷ್ಟು ಹೆಚ್ಚಿಸಿ ಅವರಿಗೆ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ಭೂಮಿಯ ಮೇಲಿರುವ ಎಲ್ಲಾ ಜನಾಂಗಗಳವರು ನಿನ್ನ ಸಂತತಿಯಿಂದ ಆಶೀರ್ವಾದ ಹೊಂದುವರು. |
5
|
ನಾನೇ ಇದನ್ನು ನೆರವೇರಿಸುವೆನು; ಯಾಕೆಂದರೆ ನಿನ್ನ ತಂದೆಯಾದ ಅಬ್ರಹಾಮನು ನನ್ನ ಮಾತುಗಳಿಗೆ ವಿಧೇಯನಾಗಿ ನಾನು ಹೇಳಿದಂತೆ ಮಾಡಿ ನನ್ನ ಆಜ್ಞೆಗಳನ್ನು, ಕಟ್ಟಳೆಗಳನ್ನು, ನಿಯಮಗಳನ್ನು ಕೈಕೊಂಡು ನಡೆದನು” ಎಂದು ಹೇಳಿದನು. |
6
|
ಆದ್ದರಿಂದ ಇಸಾಕನು ಗೆರಾರಿನಲ್ಲಿ ಇಳಿದುಕೊಂಡು ವಾಸಿಸಿದನು. |
7
|
ಇಸಾಕನ ಹೆಂಡತಿಯಾದ ರೆಬೆಕ್ಕಳು ತುಂಬ ಸೌಂದರ್ಯವತಿಯಾಗಿದ್ದಳು. ಆ ಸ್ಥಳದ ಗಂಡಸರು ರೆಬೆಕ್ಕಳ ಬಗ್ಗೆ ಇಸಾಕನನ್ನು ಕೇಳಿದರು. ಇಸಾಕನು ಅವರಿಗೆ, “ಆಕೆ ನನ್ನ ತಂಗಿ” ಎಂದು ಹೇಳಿದನು. ರೆಬೆಕ್ಕಳು ತನಗೆ ಹೆಂಡತಿಯಾಗಬೇಕೆಂದು ಅವರಿಗೆ ತಿಳಿದರೆ ಆಕೆಯನ್ನು ತೆಗೆದುಕೊಳ್ಳಲು ಅವರು ತನ್ನನ್ನು ಕೊಲ್ಲಬಹುದೆಂಬ ಹೆದರಿಕೆಯಿಂದ ಇಸಾಕನು ಹಾಗೆ ಹೇಳಿದನು. |
8
|
ಅಲ್ಲಿ ಇಸಾಕನು ಇದ್ದು ಬಹುಕಾಲವಾಗಿತ್ತು. ಒಮ್ಮೆ ಫಿಲಿಷ್ಟಿಯರ ರಾಜನಾದ ಅಬೀಮೆಲೆಕನು ತನ್ನ ಕಿಟಕಿಯಿಂದ ನೋಡಿದಾಗ, ಇಸಾಕನು ಮತ್ತು ಅವನ ಹೆಂಡತಿ ಸರಸವಾಡುತ್ತಿರುವುದನ್ನು ಕಂಡನು. |
9
|
ಅಬೀಮೆಲೆಕನು ಇಸಾಕನನ್ನು ಕರೆದು, “ಈ ಸ್ತ್ರೀಯು ನಿನ್ನ ಹೆಂಡತಿ. ಅವಳು ನಿನ್ನ ತಂಗಿಯೆಂದು ಯಾಕೆ ನಮಗೆ ಹೇಳಿದೆ?” ಎಂದು ಕೇಳಿದನು. ಇಸಾಕನು ಅವನಿಗೆ, “ನೀನು ಆಕೆಯನ್ನು ತೆಗೆದುಕೊಳ್ಳಲು ನನ್ನನ್ನು ಕೊಲ್ಲಬಹುದೆಂಬ ಭಯದಿಂದ ಹಾಗೆ ಹೇಳಿದೆ” ಅಂದನು. |
10
|
ಅಬೀಮೆಲೆಕನು ಅವನಿಗೆ, “ನೀನು ನಮಗೆ ಕೆಟ್ಟದ್ದನ್ನು ಮಾಡಿದೆ. ನಮ್ಮಲ್ಲಿರುವ ಯಾವ ಗಂಡಸಾದರೂ ನಿನ್ನ ಹೆಂಡತಿಯೊಡನೆ ಮಲಗಿಕೊಳ್ಳಲು ನೀನೇ ಆಸ್ಪದ ಮಾಡಿಕೊಟ್ಟಿದ್ದೆ. ಅಂಥದ್ದೇನಾದರೂ ನಡೆದಿದ್ದರೆ ಮಹಾ ಅಪರಾಧವಾಗುತ್ತಿತ್ತು” ಎಂದು ಹೇಳಿದನು. |
11
|
ಬಳಿಕ ಅಬೀಮೆಲೆಕನು ತನ್ನ ಪ್ರಜೆಗಳಿಗೆ, “ಈ ಮನುಷ್ಯನಿಗಾಗಲಿ ಇವನ ಹೆಂಡತಿಗಾಗಲಿ ಯಾರೂ ಕೇಡುಮಾಡಕೂಡದು. ಇವರಿಗೆ ಕೇಡುಮಾಡುವವನನ್ನು ಕೊಲ್ಲಲಾಗುವುದು” ಎಂದು ಆಜ್ಞಾಪಿಸಿದನು. |
12
|
ಇಸಾಕನು ಆ ಪ್ರದೇಶದಲ್ಲಿ ಬೀಜ ಬಿತ್ತಿದನು; ಅವನಿಗೆ ಅದೇ ವರ್ಷದಲ್ಲಿ ಮಹಾ ಸುಗ್ಗಿಯಾಯಿತು. ಯೆಹೋವನು ಅವನನ್ನು ಹೆಚ್ಚಾಗಿ ಆಶೀರ್ವದಿಸಿದನು. |
13
|
ಅವನ ಐಶ್ವರ್ಯವು ಹೆಚ್ಚುತ್ತಾ ಬಂದದ್ದರಿಂದ ಅವನು ಬಹು ಐಶ್ವರ್ಯವಂತನಾದನು. |
14
|
ಅವನಿಗೆ ಅನೇಕ ದನಕುರಿಗಳ ಮಂದೆಗಳೂ ಪ್ರಾಣಿಗಳ ಹಿಂಡೂಗಳೂ ಇದ್ದವು. ಇದಲ್ಲದೆ ಅವನಿಗೆ ಅನೇಕ ಸೇವಕರು ಇದ್ದರು. ಇದನ್ನು ಕಂಡು ಫಿಲಿಷ್ಟಿಯರು ಅವನ ಬಗ್ಗೆ ಅಸೂಯೆಪಡುತ್ತಿದ್ದರು. |
15
|
ಆದ್ದರಿಂದ ಅನೇಕ ವರ್ಷಗಳ ಹಿಂದೆ ಅಬ್ರಹಾಮ ಮತ್ತು ಅವನ ಸೇವಕರು ತೋಡಿದ್ದ ಬಾವಿಗಳಿಗೆ ಫಿಲಿಷ್ಟಿಯರು ಮಣ್ಣುಹಾಕಿ ಮುಚ್ಚಿದ್ದರು. |
16
|
ಅಬೀಮೆಲೆಕನು ಇಸಾಕನಿಗೆ, “ನಮ್ಮ ದೇಶವನ್ನು ಬಿಟ್ಟುಹೋಗು. ನೀನು ನಮಗಿಂತಲೂ ತುಂಬ ಬಲಿಷ್ಠನಾದೆ” ಎಂದು ಹೇಳಿದನು. |
17
|
ಆದ್ದರಿಂದ ಇಸಾಕನು ಆ ಸ್ಥಳದಿಂದ ಹೊರಟು ಗೆರಾರಿನ ಚಿಕ್ಕಹೊಳೆಯ ಸಮೀಪದಲ್ಲಿ ಪಾಳೆಯ ಮಾಡಿಕೊಂಡನು. ಇಸಾಕನು ಅಲ್ಲಿ ಇಳಿದುಕೊಂಡು ವಾಸಿಸಿದನು. |
18
|
ಇದಕ್ಕೂ ಬಹುಕಾಲದ ಹಿಂದೆ, ಅಬ್ರಹಾಮನು ಅನೇಕ ಬಾವಿಗಳನ್ನು ತೋಡಿಸಿದ್ದನು. ಅಬ್ರಹಾಮನು ಸತ್ತುಹೋದ ಮೇಲೆ, ಫಿಲಿಷ್ಟಿಯರು ಆ ಬಾವಿಗಳಿಗೆ ಮಣ್ಣುಹಾಕಿ ಮುಚ್ಚಿದ್ದರು. ಇಸಾಕನು ಆ ಬಾವಿಗಳನ್ನು ಮತ್ತೆ ತೋಡಿಸಿ, ತನ್ನ ತಂದೆ ಕೊಟ್ಟಿದ್ದ ಹೆಸರುಗಳನ್ನೇ ಅವುಗಳಿಗೆ ಕೊಟ್ಟನು. |
19
|
ಇಸಾಕನ ಸೇವಕರು ಚಿಕ್ಕ ಹೊಳೆಯ ಸಮೀಪದಲ್ಲಿ ಒಂದು ಬಾವಿಯನ್ನು ತೋಡಿದರು. ಆ ಬಾವಿಯಲ್ಲಿ ನೀರಿನ ಸೆಲೆ ಸಿಕ್ಕಿತು. |
20
|
ಆದರೆ ಗೆರಾರಿನ ಕಣಿವೆಯಲ್ಲಿ ಕುರಿಕಾಯುತ್ತಿದ್ದ ಜನರು ಇಸಾಕನ ಸೇವಕರೊಡನೆ ವಾದಮಾಡಿ, “ಈ ನೀರು ನಮ್ಮದು” ಎಂದು ಹೇಳಿದರು. ಆದ್ದರಿಂದ ಇಸಾಕನು ಆ ಬಾವಿಗೆ ‘ಏಸೆಕ್’ ಎಂದು ಹೆಸರಿಟ್ಟನು. |
21
|
ಆಮೇಲೆ ಇಸಾಕನ ಸೇವಕರು ಮತ್ತೊಂದು ಬಾವಿಯನ್ನು ತೋಡಿದರು. ಅಲ್ಲಿಯ ಜನರೂ ಆ ಬಾವಿಗಾಗಿ ವಾದಮಾಡಿದರು. ಆದ್ದರಿಂದ ಇಸಾಕನು ಆ ಬಾವಿಗೆ ‘ಸಿಟ್ನಾ’ ಎಂದು ಹೆಸರಿಟ್ಟನು. |
22
|
ಇಸಾಕನು ಅಲ್ಲಿಂದ ಹೊರಟು ಮತ್ತೊಂದು ಬಾವಿಯನ್ನು ತೋಡಿಸಿದನು. ಆ ಬಾವಿಯ ಕುರಿತು ವಾದಮಾಡಲು ಯಾರೂ ಬರಲಿಲ್ಲ. ಆದ್ದರಿಂದ ಇಸಾಕನು, “ಈಗ ಯೆಹೋವನು ನಮಗೋಸ್ಕರ ಒಂದು ಸ್ಥಳವನ್ನು ತೋರಿಸಿದ್ದಾನೆ. ನಾವು ಈ ಸ್ಥಳದಲ್ಲಿ ಅಭಿವೃದ್ಧಿಯಾಗೋಣ” ಎಂದು ಹೇಳಿ ಆ ಬಾವಿಗೆ ‘ರೆಹೋಬೋತ್’ ಎಂದು ಹೆಸರಿಟ್ಟನು. |
23
|
ಇಸಾಕನು ಆ ಸ್ಥಳದಿಂದ ಬೇರ್ಷೆಬಕ್ಕೆ ಹೋದನು. |
24
|
ಆ ರಾತ್ರಿ ಯೆಹೋವನು ಇಸಾಕನಿಗೆ ಪ್ರತ್ಯಕ್ಷನಾಗಿ, “ನಾನು ನಿನ್ನ ತಂದೆಯಾದ ಅಬ್ರಹಾಮನ ದೇವರು. ಭಯಪಡಬೇಡ, ನಾನು ನಿನ್ನ ಸಂಗಡವಿದ್ದೇನೆ. ನಾನು ನಿನ್ನನ್ನು ಆಶೀರ್ವದಿಸುವೆನು. ನಾನು ನಿನ್ನ ಕುಟುಂಬವನ್ನು ಉನ್ನತ ಸ್ಥಿತಿಗೆ ತರುವೆನು. ನನ್ನ ಸೇವಕನಾದ ಅಬ್ರಹಾಮನಿಗಾಗಿಯೇ ಇದನ್ನು ಮಾಡುತ್ತೇನೆ” ಎಂದು ಹೇಳಿದನು. |
25
|
ಆದ್ದರಿಂದ ಆ ಸ್ಥಳದಲ್ಲಿ ಇಸಾಕನು ಯಜ್ಞವೇದಿಕೆಯನ್ನು ಕಟ್ಟಿ ಯೆಹೋವನನ್ನು ಆರಾಧಿಸಿದನು. ಇಸಾಕನು ಆ ಸ್ಥಳದಲ್ಲಿ ಪಾಳೆಯಮಾಡಿಕೊಂಡನು; ಅವನ ಸೇವಕರು ಅಲ್ಲಿ ಒಂದು ಬಾವಿಯನ್ನು ತೋಡಿದರು. |
26
|
ಅಬೀಮೆಲೆಕನು ಇಸಾಕನನ್ನು ಕಾಣಲು ಗೆರಾರಿನಿಂದ ಬಂದನು. ಅಬೀಮೆಲೆಕನು ತನ್ನ ಸಲಹೆಗಾರನಾದ ಅಹುಜ್ಜತನನ್ನು ಮತ್ತು ಸೇನಾಪತಿಯಾದ ಫೀಕೋಲನನ್ನು ತನ್ನೊಡನೆ ಕರೆದುಕೊಂಡು ಬಂದಿದ್ದನು. |
27
|
ಇಸಾಕನು, “ನೀನು ನನ್ನನ್ನು ನೋಡಲು ಬಂದದ್ದೇಕೆ? ಮೊದಲು, ನೀನು ನನ್ನೊಡನೆ ಸ್ನೇಹದಿಂದ ಇರಲಿಲ್ಲ. ಅಲ್ಲದೆ ನಿನ್ನ ದೇಶವನ್ನು ಬಿಟ್ಟುಹೋಗುವಂತೆ ನೀನು ನನ್ನನ್ನು ಬಲವಂತ ಮಾಡಿದೆ” ಎಂದು ಹೇಳಿದನು. |
28
|
ಅವರು ಅವನಿಗೆ, “ನಿನ್ನ ಜೊತೆಯಲ್ಲಿ ಯೆಹೋವನು ಇದ್ದಾನೆಂಬುದು ಈಗ ನಮಗೆ ತಿಳಿಯಿತು. ನಾವು ಒಂದು ಒಪ್ಪಂದ ಮಾಡಿಕೊಳ್ಳಬೇಕೆಂಬುದು ನಮ್ಮ ಆಲೋಚನೆ. ನೀನು ನಮಗೆ ಒಂದು ಪ್ರಮಾಣ ಮಾಡಬೇಕಾಗಿದೆ. |
29
|
ನಾವು ನಿನಗೆ ಕೇಡುಮಾಡಲಿಲ್ಲ. ಅದೇ ರೀತಿಯಲ್ಲಿ ಈಗ ನೀನೂ ನಮಗೆ ಕೇಡುಮಾಡುವುದಿಲ್ಲವೆಂದು ಪ್ರಮಾಣಮಾಡಬೇಕು. ನಾವು ನಿನ್ನನ್ನು ದೂರ ಕಳುಹಿಸಿದರೂ ಸಮಾಧಾನದಿಂದ ಕಳುಹಿಸಿಕೊಟ್ಟೆವು. ಯೆಹೋವನು ನಿನ್ನನ್ನು ಆಶೀರ್ವದಿಸಿದ್ದಾನೆ ಎಂಬುದು ಈಗ ಸ್ಪಷ್ಟವಾಗಿದೆ” ಎಂದು ಹೇಳಿದರು. |
30
|
ಆದ್ದರಿಂದ ಇಸಾಕನು ಅವರಿಗಾಗಿ ಒಂದು ಔತಣವನ್ನು ಮಾಡಿಸಿದನು. ಅವರೆಲ್ಲರೂ ಸಮೃದ್ಧಿಯಾಗಿ ಊಟಮಾಡಿದರು. |
31
|
ಮರುದಿನ ಮುಂಜಾನೆ, ಅವರು ಒಬ್ಬರಿಗೊಬ್ಬರು ಪ್ರಮಾಣ ಮಾಡಿಕೊಂಡು, ಸಮಾಧಾನದಿಂದ ಹೊರಟುಹೋದರು. |
32
|
ಆ ದಿನ, ಇಸಾಕನ ಸೇವಕರು ಬಂದು, ತಾವು ತೋಡಿದ್ದ ಬಾವಿಯ ಬಗ್ಗೆ ಹೇಳುತ್ತಾ, “ಬಾವಿಯಲ್ಲಿ ನಮಗೆ ನೀರಿನ ಸೆಲೆ ಸಿಕ್ಕಿತು” ಎಂದು ಹೇಳಿದರು. |
33
|
ಆದ್ದರಿಂದ ಇಸಾಕನು ಆ ಬಾವಿಗೆ ಷಿಬಾ ಎಂದು ಹೆಸರಿಟ್ಟನು. ಇಂದಿಗೂ ಆ ನಗರಕ್ಕೆ ಬೇರ್ಷೆಬ ಎಂದು ಕರೆಯುತ್ತಾರೆ. |
34
|
ಏಸಾವನಿಗೆ ನಲವತ್ತು ವರ್ಷಗಳಾಗಿದ್ದಾಗ ಅವನು ಹಿತ್ತಿಯರ ಇಬ್ಬರು ಸ್ತ್ರೀಯರನ್ನು ಮದುವೆ ಮಾಡಿಕೊಂಡನು. ಒಬ್ಬಳು ಬೇರಿಯನ ಮಗಳಾದ ಯೆಹೂದೀತಳು, ಮತ್ತೊಬ್ಬಳು ಏಲೋನನ ಮಗಳಾದ ಬಾಸೆಮತಳು. |
35
|
ಈ ಮದುವೆಗಳಿಂದ ಇಸಾಕ ಮತ್ತು ರೆಬೆಕ್ಕಳಿಗೆ ತುಂಬ ದುಃಖವಾಯಿತು. |
Genesis 26:14 Kannada Language Bible Words basic statistical display
COMING SOON ...