ನಾನು ನಿನ್ನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ಈ ಒಡಂಬಡಿಕೆಯು ನಿನ್ನ ಎಲ್ಲಾ ಸಂತತಿಯವರಿಗೆ ಶಾಶ್ವತವಾಗಿ ಅನ್ವಯಿಸುವುದು. ನಾನೇ ನಿನಗೂ ನಿನ್ನ ಎಲ್ಲಾ ಸಂತತಿಯವರಿಗೂ ದೇವರಾಗಿರುವೆನು.
ಅಬ್ರಹಾಮನು ದೇವರಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. ಆದರೆ ಅವನು ಮನಸ್ಸಿನಲ್ಲಿ ನಗುತ್ತಾ, “ನನಗೆ ನೂರು ವರ್ಷ ವಯಸ್ಸಾಗಿರುವುದರಿಂದ ಮಗನನ್ನು ಪಡೆಯಲು ನನಗೂ ಸಾಧ್ಯವಿಲ್ಲ. ಸಾರಾಳಿಗೆ ತೊಂಭತ್ತು ವರ್ಷ ವಯಸ್ಸಾಗಿರುವುದರಿಂದ ಮಗನನ್ನು ಪಡೆಯಲು ಆಕೆಗೂ ಸಾಧ್ಯವಿಲ್ಲ” ಅಂದುಕೊಂಡನು.
ಅದಕ್ಕೆ ದೇವರು ಅವನಿಗೆ, “ಇಲ್ಲ! ನಿನ್ನ ಹೆಂಡತಿಯಾದ ಸಾರಳಿಗೆ ಒಬ್ಬ ಮಗನು ಹುಟ್ಟುವನು. ನೀನು ಅವನಿಗೆ, “ಇಸಾಕ” ಎಂದು ಹೆಸರಿಡಬೇಕು. ನಾನು ಒಂದು ಒಡಂಬಡಿಕೆಯನ್ನು ಅವನೊಡನೆ ಮಾಡಿಕೊಳ್ಳುವೆನು. ಆ ಒಡಂಬಡಿಕೆಯು ಅವನ ಎಲ್ಲಾ ಸಂತತಿಯವರಲ್ಲಿಯೂ ಶಾಶ್ವತವಾಗಿರುವುದು.
“ನೀನು ಇಷ್ಮಾಯೇಲನ ಬಗ್ಗೆ ಮಾಡಿದ ಬಿನ್ನಹವನ್ನು ಕೇಳಿದ್ದೇನೆ. ನಾನು ಅವನನ್ನು ಆಶೀರ್ವದಿಸುವೆನು. ಅವನು ಅನೇಕ ಮಕ್ಕಳನ್ನು ಪಡೆದುಕೊಳ್ಳುವನು. ಹನ್ನೆರಡು ಮಹಾನಾಯಕರುಗಳಿಗೆ ಅವನು ತಂದೆಯಾಗುವನು. ಅವನ ಸಂತತಿಯು ಮಹಾಜನಾಂಗವಾಗುವುದು.
ಅದೇ ದಿನದಲ್ಲಿ ಅಬ್ರಹಾಮನು ಇಷ್ಮಾಯೇಲನಿಗೂ ತನ್ನ ಮನೆಯಲ್ಲಿದ್ದ ಸೇವಕರಿಗೆ ಹುಟ್ಟಿದ ಗಂಡುಮಕ್ಕಳಿಗೂ ಪರದೇಶಿಯರಿಂದ ಕೊಂಡುತಂದಿದ್ದ ಸೇವಕರಿಗೂ ದೇವರು ಹೇಳಿದಂತೆಯೇ ಸುನ್ನತಿ ಮಾಡಿಸಿದನು.