ನಾನು ನಿನ್ನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು. ಈ ಒಡಂಬಡಿಕೆಯು ನಿನ್ನ ಎಲ್ಲಾ ಸಂತತಿಯವರಿಗೆ ಶಾಶ್ವತವಾಗಿ ಅನ್ವಯಿಸುವುದು. ನಾನೇ ನಿನಗೂ ನಿನ್ನ ಎಲ್ಲಾ ಸಂತತಿಯವರಿಗೂ ದೇವರಾಗಿರುವೆನು.
(11-12) ಇಂದಿನಿಂದ ನಿಮ್ಮಲ್ಲಿ ಗಂಡುಮಗು ಹುಟ್ಟಿ ಎಂಟು ದಿನಗಳಾದ ಮೇಲೆ ಆ ಮಗುವಿಗೆ ಸುನ್ನತಿ ಮಾಡಿಸಬೇಕು; ಈ ನಿಯಮವು ನಿಮ್ಮ ಮನೆಯಲ್ಲಿ ಹುಟ್ಟಿದ ಸೇವಕರಿಗೂ, ಪರದೇಶದಿಂದ ಕೊಂಡುತಂದ ಸೇವಕರಿಗೂ ಸಹ ಅನ್ವಯಿಸುತ್ತದೆ. ನನಗೂ ನಿನಗೂ ಆದ ಒಡಂಬಡಿಕೆಗೆ ಇದು ಗುರುತಾಗಿರುವುದು.
(13-14) ಹೀಗೆ ಪ್ರತಿಯೊಬ್ಬನಿಗೂ ಸುನ್ನತಿಯಾಗಲೇಬೇಕು. ನಾನು ನಿನ್ನೊಂದಿಗೆ ಮಾಡಿಕೊಂಡ ಒಡಂಬಡಿಕೆಯು ಶಾಶ್ವತವಾದದ್ದು ಎಂಬುದಕ್ಕೆ ಈ ಸುನ್ನತಿಯೇ ದೈಹಿಕ ಗುರುತಾಗಿದೆ. ಸುನ್ನತಿಯಾಗಿಲ್ಲದ ಪುರುಷನು ನನ್ನ ಒಡಂಬಡಿಕೆಗೆ ವಿಧೇಯನಾಗದ ಕಾರಣ ಅವನನ್ನು ಕುಲದಿಂದ ತೆಗೆದುಹಾಕಲ್ಪಡಬೇಕು” ಎಂದು ಹೇಳಿದನು.
ಅಬ್ರಹಾಮನು ದೇವರಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. ಆದರೆ ಅವನು ಮನಸ್ಸಿನಲ್ಲಿ ನಗುತ್ತಾ, “ನನಗೆ ನೂರು ವರ್ಷ ವಯಸ್ಸಾಗಿರುವುದರಿಂದ ಮಗನನ್ನು ಪಡೆಯಲು ನನಗೂ ಸಾಧ್ಯವಿಲ್ಲ. ಸಾರಳಿಗೆ ತೊಂಭತ್ತು ವರ್ಷ ವಯಸ್ಸಾಗಿರುವುದರಿಂದ ಮಗನನ್ನು ಪಡೆಯಲು ಆಕೆಗೂ ಸಾಧ್ಯವಿಲ್ಲ” ಅಂದುಕೊಂಡನು.
ಅದಕ್ಕೆ ದೇವರು ಅವನಿಗೆ, “ಇಲ್ಲ! ನಿನ್ನ ಹೆಂಡತಿಯಾದ ಸಾರಳಿಗೆ ಒಬ್ಬ ಮಗನು ಹುಟ್ಟುವನು. ನೀನು ಅವನಿಗೆ, ‘ಇಸಾಕ’ ಎಂದು ಹೆಸರಿಡಬೇಕು. ನಾನು ಒಂದು ಒಡಂಬಡಿಕೆಯನ್ನು ಅವನೊಡನೆ ಮಾಡಿಕೊಳ್ಳುವೆನು. ಆ ಒಡಂಬಡಿಕೆಯು ಅವನ ಎಲ್ಲಾ ಸಂತತಿಯವರಲ್ಲಿಯೂ ಶಾಶ್ವತವಾಗಿರುವುದು.
“ನೀನು ಇಷ್ಮಾಯೇಲನ ಬಗ್ಗೆ ಮಾಡಿದ ಬಿನ್ನಹವನ್ನು ಕೇಳಿದ್ದೇನೆ. ನಾನು ಅವನನ್ನು ಆಶೀರ್ವದಿಸುವೆನು. ಅವನು ಅನೇಕ ಮಕ್ಕಳನ್ನು ಪಡೆದುಕೊಳ್ಳುವನು. ಹನ್ನೆರಡು ಮಹಾನಾಯಕರುಗಳಿಗೆ ಅವನು ತಂದೆಯಾಗುವನು. ಅವನ ಸಂತತಿಯು ಮಹಾಜನಾಂಗವಾಗುವುದು.
ಅದೇ ದಿನದಲ್ಲಿ ಅಬ್ರಹಾಮನು ಇಷ್ಮಾಯೇಲನಿಗೂ ತನ್ನ ಮನೆಯಲ್ಲಿದ್ದ ಸೇವಕರಿಗೆ ಹುಟ್ಟಿದ ಗಂಡುಮಕ್ಕಳಿಗೂ ಪರದೇಶಿಯರಿಂದ ಕೊಂಡುತಂದಿದ್ದ ಸೇವಕರಿಗೂ ದೇವರು ಹೇಳಿದಂತೆಯೇ ಸುನ್ನತಿ ಮಾಡಿಸಿದನು.