English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Genesis Chapters

Genesis 13 Verses

1 ಅಬ್ರಾಮನು ಈಜಿಪ್ಟಿನಿಂದ ಹೊರಟನು. ಅಬ್ರಾಮನು ತನ್ನ ಹೆಂಡತಿಯನ್ನು ಕರೆದುಕೊಂಡು ತನ್ನವುಗಳನ್ನೆಲ್ಲಾ ತೆಗೆದುಕೊಂಡು ನೆಗೆವ್ ಮೂಲಕ ಪ್ರಯಾಣ ಮಾಡಿದನು. ಲೋಟನು ಸಹ ಅವರೊಡನೆ ಇದ್ದನು.
2 ಆಗ ಅಬ್ರಾಮನು ತುಂಬ ಐಶ್ವರ್ಯವಂತನಾಗಿದ್ದನು. ಅವನಿಗೆ ಅನೇಕ ಪಶುಗಳಿದ್ದವು; ಬಹಳ ಬೆಳ್ಳಿಬಂಗಾರಗಳಿದ್ದವು.
3 ಅಬ್ರಾಮನು ತನ್ನ ಪ್ರಯಾಣವನ್ನು ಮುಂದುವರಿಸಿ ನೆಗೆವ್‌ವನ್ನು ಬಿಟ್ಟು ಬೇತೇಲಿಗೆ ಹಿಂತಿರುಗಿಹೋದನು. ಅವನು ಬೇತೇಲ್‌ ನಗರಕ್ಕೂ ಆಯಿ ನಗರಕ್ಕೂ ಮಧ್ಯದಲ್ಲಿರುವ ಸ್ಥಳಕ್ಕೆ ಹೋದನು. ಅಬ್ರಾಮನು ಮತ್ತು ಅವನ ಕುಟುಂಬದವರು ಇಳಿದುಕೊಂಡಿದ್ದ ಸ್ಥಳವೇ ಇದು.
4 ಅಬ್ರಾಮನು ಯಜ್ಞವೇದಿಕೆಯನ್ನು ಕಟ್ಟಿದ್ದು ಈ ಸ್ಥಳದಲ್ಲೇ. ಅಬ್ರಾಮನು ಯೆಹೋವನನ್ನು ಆರಾಧಿಸಿದ್ದು ಈ ಸ್ಥಳದಲ್ಲೇ.
5 ಈ ಕಾಲದಲ್ಲಿ ಲೋಟನು ಸಹ ಅಬ್ರಾಮನೊಡನೆ ಪ್ರಯಾಣಮಾಡುತ್ತಿದ್ದನು. ಲೋಟನಿಗೂ ಸಹ ಕುರಿಮಂದೆಗಳೂ ಪಶುಹಿಂಡುಗಳೂ ಗುಡಾರಗಳೂ ಇದ್ದವು.
6 ಅಬ್ರಾಮನಿಗೂ ಲೋಟನಿಗೂ ಬಹಳ ಪಶುಗಳಿದ್ದುದರಿಂದ ಅವುಗಳ ಪೋಷಣೆಗೆ ಆ ಸ್ಥಳವು ಸಾಕಾಗಲಿಲ್ಲ.
7 ಅಬ್ರಾಮನ ಮಂದೆಕಾಯುವವರು ಮತ್ತು ಲೋಟನ ಮಂದೆಕಾಯುವವರು ವಾದ ಮಾಡಲಾರಂಭಿಸಿದರು. ಆ ಕಾಲದಲ್ಲಿ ಕಾನಾನ್ಯರು ಮತ್ತು ಪೆರಿಜೀಯರು ಸಹ ಆ ಸ್ಥಳದಲ್ಲಿ ವಾಸವಾಗಿದ್ದರು.
8 ಆದ್ದರಿಂದ ಅಬ್ರಾಮನು ಲೋಟನಿಗೆ, “ನಿನಗೂ ನನಗೂ ಯಾವ ವಾಗ್ವಾದವೂ ಇರಬಾರದು. ನಿನ್ನ ಜನರೂ ನನ್ನ ಜನರೂ ವಾಗ್ವಾದ ಮಾಡಬಾರದು; ನಾವೆಲ್ಲರೂ ಸಹೋದರರಾಗಿದ್ದೇವೆ.
9 ನಾವು ಪ್ರತ್ಯೇಕವಾಗೋಣ. ನಿನಗೆ ಬೇಕಾದ ಸ್ಥಳವನ್ನು ನೀನು ಆರಿಸಿಕೊ. ನೀನು ಎಡಗಡೆಗೆ ಹೋಗುವುದಾದರೆ, ನಾನು ಬಲಗಡೆಗೆ ಹೋಗುತ್ತೇನೆ. ನೀನು ಬಲಗಡೆಗೆ ಹೋಗುವುದಾದರೆ, ನಾನು ಎಡಗಡೆಗೆ ಹೋಗುತ್ತೇನೆ” ಎಂದು ಹೇಳಿದನು.
10 ಲೋಟನು ಕಣ್ಣೆತ್ತಿ ನೋಡಿದಾಗ ಜೋರ್ಡನ್ ಕಣಿವೆಯೆಲ್ಲಾ ಕಾಣಿಸಿತು. ಅಲ್ಲಿ ಬೇಕಾದಷ್ಟು ನೀರಿರುವುದನ್ನು ಲೋಟನು ನೋಡಿದನು. (ಆ ಕಾಲದಲ್ಲಿ ಸೊದೋಮ್ ಮತ್ತು ಗೊಮೋರ ಪಟ್ಟಣಗಳು ಯೆಹೋವನಿಂದ ನಾಶವಾಗಿರಲಿಲ್ಲ. ಆ ಕಾಲದಲ್ಲಿ ಜೋರ್ಡನ್ ಕಣಿವೆಯು ಚೋಗರ್ ತನಕ ಯೆಹೋವನ ತೋಟದಂತಿತ್ತು. ಅದು ಈಜಿಪ್ಟಿನ ಭೂಮಿಯಂತೆ ಫಲವತ್ತಾಗಿತ್ತು.)
11 ಆದ್ದರಿಂದ ಲೋಟನು ಜೋರ್ಡನ್ ಕಣಿವೆಯನ್ನೆಲ್ಲಾ ತನಗಾಗಿ ಆರಿಸಿಕೊಂಡನು. ಅವರಿಬ್ಬರೂ ಪ್ರತ್ಯೇಕವಾದರು. ಲೋಟನು ಪೂರ್ವದ ಕಡೆಗೆ ಪ್ರಯಾಣ ಮಾಡಿದನು.
12 ಅಬ್ರಾಮನು ಕಾನಾನ್ ಪ್ರದೇಶದಲ್ಲಿ ಉಳಿದುಕೊಂಡನು. ಲೋಟನು ಕಣಿವೆಯಲ್ಲಿದ್ದ ಪಟ್ಟಣಗಳ ಮಧ್ಯದಲ್ಲಿ ವಾಸಿಸಿದನು; ದಕ್ಷಿಣದಲ್ಲಿದ್ದ ಸೊದೋಮಿನವರೆಗೂ ಗುಡಾರಗಳನ್ನು ಹಾಕಿಕೊಂಡು ಪಾಳೆಯಮಾಡಿಕೊಂಡನು.
13 ಸೊದೋಮಿನ ಜನರು ತುಂಬ ಕೆಟ್ಟವರಾಗಿದ್ದರು. ಅವರು ಯಾವಾಗಲೂ ಯೆಹೋವನಿಗೆ ವಿರೋಧವಾಗಿ ಪಾಪಮಾಡುತ್ತಿದ್ದರು.
14 ಲೋಟನು ಹೊರಟುಹೋದ ಮೇಲೆ ಯೆಹೋವನು ಅಬ್ರಾಮನಿಗೆ, “ಸುತ್ತಲೂ ನೋಡು, ಉತ್ತರದಕ್ಷಿಣಗಳ ಕಡೆಗೂ ಪೂರ್ವಪಶ್ಚಿಮಗಳ ಕಡೆಗೂ ನೋಡು.
15 ನೀನು ನೋಡುವ ಈ ದೇಶವನ್ನೆಲ್ಲಾ ನಿನಗೂ ನಿನ್ನ ನಂತರ ಜೀವಿಸುವ ನಿನ್ನ ಸಂತತಿಯವರಿಗೂ ಕೊಡುತ್ತೇನೆ. ಇದು ಎಂದೆಂದಿಗೂ ನಿನ್ನದಾಗಿರುವುದು.
16 ನಾನು ನಿನ್ನ ಜನರನ್ನು ಭೂಮಿಯ ಮೇಲಿರುವ ಧೂಳಿನಷ್ಟು ಹೆಚ್ಚಿಸುವೆನು. ಯಾವನಾದರೂ ಭೂಮಿಯ ಮೇಲಿರುವ ಧೂಳಿನ ಕಣಗಳನ್ನು ಲೆಕ್ಕಮಾಡಬಹುದಾದರೆ ನಿನ್ನ ಸಂತತಿಯವರ ಸಂಖ್ಯೆಯು ಅದರಷ್ಟೇ ಇರುವುದು.
17 ಆದ್ದರಿಂದ ಹೋಗು, ನಿನ್ನ ಭೂಮಿಯಲ್ಲೆಲ್ಲಾ ತಿರುಗಾಡು. ಅದರ ಉದ್ದಗಲಗಳಲ್ಲೆಲ್ಲಾ ತಿರುಗಾಡು; ಯಾಕೆಂದರೆ ನಾನು ಅದನ್ನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.
18 ಆದ್ದರಿಂದ ಅಬ್ರಾಮನು ತನ್ನ ಗುಡಾರಗಳನ್ನು ಕೀಳಿಸಿ, ದೊಡ್ಡ ಮರಗಳಿರುವ ಮಮ್ರೆಯ ಸಮೀಪಕ್ಕೆ ಹೋಗಿ ವಾಸಿಸತೊಡಗಿದನು. ಇದು ಹೆಬ್ರೋನ್ ನಗರಕ್ಕೆ ಸಮೀಪದಲ್ಲಿತ್ತು. ಆ ಸ್ಥಳದಲ್ಲಿ ಅಬ್ರಾಮನು ಯೆಹೋವನನ್ನು ಆರಾಧಿಸುವುದಕ್ಕಾಗಿ ಯಜ್ಞವೇದಿಕೆಯನ್ನು ಕಟ್ಟಿದನು.
×

Alert

×