ಸಹೋದರ ಸಹೋದರಿಯರೇ, ನಿಮ್ಮ ಸಭೆಯಲ್ಲಿ ಯಾವನಾದರೂ ತಪ್ಪು ಮಾಡಿದರೆ, ಆತ್ಮಿಕರಾದ ನೀವು ಅವನ ಬಳಿಗೆ ಹೋಗಿ ಸೌಮ್ಯತೆಯಿಂದ ಅವನನ್ನು ತಿದ್ದಿ ಸರಿಪಡಿಸಬೇಕು. ಆದರೆ ಎಚ್ಚರಿಕೆಯಿಂದಿರಿ! ನೀವು ಸಹ ಶೋಧನೆಗೊಳಗಾಗಿ ಪಾಪಕ್ಕೆ ಬೀಳುವ ಸಾಧ್ಯವಿದೆ.
ಯಾವನಾದರೂ ತಾನು ಪ್ರಾಮುಖ್ಯನಲ್ಲದಿದ್ದರೂ ತನ್ನನ್ನು ಪ್ರಾಮುಖ್ಯನೆಂದು ಭಾವಿಸಿಕೊಂಡರೆ ಅವನು ತನ್ನನ್ನೇ ಮೋಸಪಡಿಸಿಕೊಳ್ಳುತ್ತಾನೆ. ಒಬ್ಬನು ತನ್ನನ್ನು ಮತ್ತೊಬ್ಬನೊಡನೆ ಹೋಲಿಸಿಕೊಳ್ಳಕೂಡದು.
ಒಬ್ಬನು ತನ್ನ ಶರೀರಭಾವವನ್ನು ತೃಪ್ತಿಪಡಿಸುವುದಕ್ಕಾಗಿ ಪಾಪ ಕಾರ್ಯಗಳನ್ನು ಮಾಡಿದರೆ ಆ ಶರೀರಭಾವವು ಅವನಿಗೆ ನಿತ್ಯನಾಶವನ್ನು ಬರಮಾಡುತ್ತದೆ. ಆದರೆ ಒಬ್ಬನು ಪವಿತ್ರಾತ್ಮನನ್ನು ಮೆಚ್ಚಿಸುವುದಕ್ಕಾಗಿ ಒಳ್ಳೆಯ ಕಾರ್ಯಗಳನ್ನು ಮಾಡುವುದಾಗಿದ್ದರೆ, ಅವನು ಪವಿತ್ರಾತ್ಮನಿಂದ ನಿತ್ಯಜೀವವನ್ನು ಹೊಂದಿಕೊಳ್ಳುವನು.
ನಾವು ಒಳ್ಳೆಯ ಕಾರ್ಯ ಮಾಡುವುದರಲ್ಲಿ ಬೇಸರಗೊಳ್ಳಬಾರದು. ತಕ್ಕ ಸಮಯದಲ್ಲಿ ನಾವು ನಿತ್ಯಜೀವವೆಂಬ ಸುಗ್ಗಿಯನ್ನು ಪಡೆಯುವೆವು. ಆದ್ದರಿಂದ ಒಳ್ಳೆಯ ಕಾರ್ಯ ಮಾಡುವುದನ್ನು ನಾವು ಬಿಟ್ಟುಬಿಡಬಾರದು.
ನೀವು ಸುನ್ನತಿ ಮಾಡಿಸಿಕೊಳ್ಳಬೇಕೆಂದು ಕೆಲವರು ನಿಮ್ಮನ್ನು ಒತ್ತಾಯಿಸುತ್ತಿದ್ದಾರೆ. ತಮ್ಮನ್ನು (ಯೆಹೂದ್ಯರು) ಸ್ವೀಕರಿಸಿಕೊಳ್ಳಲಿ ಎಂಬುದೇ ಅವರ ಉದ್ದೇಶ. ಕ್ರಿಸ್ತನ ಶಿಲುಬೆಯ ದೆಸೆಯಿಂದ ತಾವು ಹಿಂಸೆಗೆ ಒಳಗಾಗಬಹುದೆಂಬ ಭಯದಿಂದ ಅವರು ಹೀಗೆ ಮಾಡುತ್ತಾರೆ.
ಅಂಥ ವಿಷಯಗಳ ಬಗ್ಗೆ ನಾನು ಹೆಚ್ಚಳಪಡುವುದೇ ಇಲ್ಲ. ನಾನು ಹೆಮ್ಮೆಪಡಲು ನನಗಿರುವ ಒಂದೇ ಕಾರಣವೇನೆಂದರೆ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಶಿಲುಬೆಯೊಂದೇ. ಶಿಲುಬೆಯ ಮೇಲೆ ಯೇಸುವಿಗಾದ ಮರಣದ ಮೂಲಕ ಲೋಕವು ನನ್ನ ಪಾಲಿಗೆ ಸತ್ತುಹೋಯಿತು. ನಾನು ಸಹ ಲೋಕದ ಪಾಲಿಗೆ ಸತ್ತುಹೋದೆನು.