ಏಕೆಂದರೆ ಅವನಿನ್ನೂ ಬಾಲಕನಾಗಿರುವಾಗ ಪರಿಪಾಲಕರಿಗೆ ಮತ್ತು ನಿರ್ವಾಹಕರಿಗೆ ವಿಧೇಯನಾಗಿರಬೇಕು. ಆದರೆ ತನ್ನ ತಂದೆಯು ಗೊತ್ತುಪಡಿಸಿದ ವಯಸ್ಸನ್ನು ತಲುಪಿದಾಗ ಆ ಬಾಲಕನು ಸ್ವತಂತ್ರನಾಗುವನು.
ಈಗಲಾದರೋ ಸತ್ಯದೇವರನ್ನು ತಿಳಿದಿದ್ದೀರಿ. ನಿಜವಾಗಿ ಹೇಳಬೇಕಾದರೆ, ನಿಮ್ಮನ್ನು ತಿಳಿದಿರುವಾತನು ದೇವರೇ. ಹೀಗಿರಲಾಗಿ ಮೊದಲು ನೀವು ಅನುಸರಿಸುತ್ತಿದ್ದ ಬಲಹೀನವೂ ನಿರುಪಯುಕ್ತವೂ ಆದ ನಿಯಮಗಳಿಗೆ ನೀವು ಯಾಕೆ ಹಿಂತಿರುಗಬೇಕು? ಅವುಗಳಿಗೆ ಮತ್ತೆ ಗುಲಾಮರಾಗಬೇಕೆಂದಿದ್ದೀರೋ?
ಮೊದಲು ನೀವು ನನಗೆ ಬಹು ಒಳ್ಳೆಯವರಾಗಿದ್ದಿರಿ. ನಾನು ನಿಮ್ಮ ಬಳಿಗೆ ಮೊದಲನೆ ಸಲ ಬಂದದ್ದು ನನ್ನ ಅನಾರೋಗ್ಯದ ನಿಮಿತ್ತವೆಂದು ನಿಮಗೆ ಗೊತ್ತಿದೆ. ನಾನು ನಿಮಗೆ ಸುವಾರ್ತೆಯನ್ನು ತಿಳಿಸಿದ್ದು ಆವಾಗಲೇ.
ನನ್ನ ಅನಾರೋಗ್ಯವು ನಿಮಗೆ ಹೊರೆಯಾಗಿತ್ತು. ಆದರೆ ನೀವು ನನ್ನ ವಿಷಯದಲ್ಲಿ ಬೇಸರಮಾಡಿಕೊಳ್ಳಲಿಲ್ಲ. ನೀವು ನನ್ನನ್ನು ಕಳುಹಿಸಿಬಿಡಲಿಲ್ಲ. ದೇವದೂತನೋ ಎಂಬಂತೆ ನೀವು ನನ್ನನ್ನು ಸ್ವಾಗತಿಸಿದಿರಿ; ಸ್ವತಃ ಯೇಸು ಕ್ರಿಸ್ತನೋ ಎಂಬಂತೆ ನನ್ನನ್ನು ಸ್ವೀಕರಿಸಿಕೊಂಡಿರಿ.
ಆಗ ನೀವು ಬಹು ಸಂತೋಷವುಳ್ಳವರಾಗಿದ್ದಿರಿ. ಆ ಆನಂದವು ಈಗ ಎಲ್ಲಿದೆ? ನನಗೆ ಸಹಾಯ ಮಾಡಲು ನೀವು ಏನು ಬೇಕಾದರೂ ಮಾಡುವುದಕ್ಕೆ ಸಿದ್ಧರಾಗಿದ್ದಿರೆಂಬುದು ನನ್ನ ನೆನಪಿನಲ್ಲಿದೆ. ಸಾಧ್ಯವಾಗಿದ್ದರೆ ನಿಮ್ಮ ಕಣ್ಣುಗಳನ್ನೇ ಕಿತ್ತು ನನಗೆ ಕೊಟ್ಟುಬಿಡುತ್ತಿದ್ದಿರಿ.
ನಿಮ್ಮನ್ನು ಒತ್ತಾಯಪಡಿಸುವುದಕ್ಕಾಗಿ ಆ ಜನರು ಪ್ರಯಾಸ ಪಟ್ಟು ಕೆಲಸ ಮಾಡುತ್ತಿದ್ದಾರೆ. ಆದರೆ ಒಳ್ಳೆಯ ಉದ್ದೇಶದಿಂದಲ್ಲ. ನೀವು ನಮಗೆ ವಿರುದ್ಧವಾಗಿ ತಿರುಗಿಬೀಳಬೇಕೆಂದು ಅವರು ನಿಮ್ಮನ್ನು ಒತ್ತಾಯಪಡಿಸುತ್ತಿದ್ದಾರೆ. ನೀವು ಅವರನ್ನೇ ಹೊರತು ಬೇರೆ ಯಾರನ್ನೂ ಅನುಸರಿಸಬಾರದೆಂಬುದು ಅವರ ಅಪೇಕ್ಷೆ. ನಿಮ್ಮ ವಿಷಯದಲ್ಲಿ ಜನರು ಆಸಕ್ತಿ ತೋರಿಸುವುದೇನೋ ಒಳ್ಳೆಯದು.
ಈ ಸಂಗತಿಗಳು ನಮಗೆ ಉಪಮಾನವಾಗಿವೆ. ದೇವರ ಮತ್ತು ಮನುಷ್ಯರ ನಡುವೆ ಆದ ಎರಡು ಒಡಂಬಡಿಕೆಗಳಿಗೆ ಈ ಇಬ್ಬರು ಸ್ತ್ರೀಯರು ಸಂಕೇತವಾಗಿದ್ದಾರೆ. ಸೀನಾಯಿ ಪರ್ವತದ ಮೇಲೆ ದೇವರು ಕೊಟ್ಟ ಧರ್ಮಶಾಸ್ತ್ರವೇ ಮೊದಲನೆ ಒಡಂಬಡಿಕೆ. ಈ ಒಡಂಬಡಿಕೆಯ ಅಧೀನದಲ್ಲಿದ್ದ ಜನರು ಗುಲಾಮರಂತಿದ್ದರು. ತಾಯಿಯಾದ ಹಾಗರಳು ಆ ಒಡಂಬಡಿಕೆಯಂತಿದ್ದಳು.
ಆದ್ದರಿಂದ ಹಾಗರಳು ಅರೇಬಿಯಾದಲ್ಲಿರುವ ಸೀನಾಯಿ ಪರ್ವತದಂತಿದ್ದಾಳೆ. ಯೆಹೂದ್ಯರ ನಗರವಾದ ಜೆರುಸಲೇಮಿಗೆ ಆಕೆಯು ಅನುರೂಪವಾಗಿದ್ದಾಳೆ. ಈ ನಗರವು ಗುಲಾಮಗಿರಿಯಲ್ಲಿದೆ ಮತ್ತು ಅದರ ಜನರೆಲ್ಲರೂ ಧರ್ಮಶಾಸ್ತ್ರಕ್ಕೆ ಗುಲಾಮರಾಗಿದ್ದಾರೆ.
(28-29) ಅಬ್ರಹಾಮನ ಒಬ್ಬ ಮಗನು ಮಾನವ ಸಹಜವಾದ ರೀತಿಯಲ್ಲಿ ಜನಿಸಿದನು. ಅಬ್ರಹಾಮನ ಮತ್ತೊಬ್ಬ ಮಗನು ದೇವರ ವಾಗ್ದಾನದ ಫಲವಾಗಿ ದೇವರಾತ್ಮನ ಶಕ್ತಿಯಿಂದ ಜನಿಸಿದನು. ನನ್ನ ಸಹೋದರ ಸಹೋದರಿಯರೇ, ನೀವು ಸಹ ಇಸಾಕನಂತೆ ವಾಗ್ದಾನದ ಮಕ್ಕಳಾಗಿದ್ದೀರಿ. ಮಾನವ ಸಹಜವಾದ ರೀತಿಯಲ್ಲಿ ಜನಿಸಿದ್ದ ಮಗನು ಮತ್ತೊಬ್ಬ ಮಗನನ್ನು ಹಿಂಸೆಪಡಿಸಿದನು. ಇದೇ ಈಗಲೂ ನಡೆಯುತ್ತಿದೆ.
ಆದರೆ ಪವಿತ್ರ ಗ್ರಂಥವು ಏನು ಹೇಳುತ್ತದೆ? “ದಾಸಿಯನ್ನು ಮತ್ತು ಅವಳ ಮಗನನ್ನು ಹೊರಗೆ ಹಾಕು; ಸ್ವತಂತ್ರಳಾದ ಸ್ತ್ರೀಯ ಮಗನು ತನ್ನ ತಂದೆಯು ಹೊಂದಿರುವ ಪ್ರತಿಯೊಂದನ್ನು ಪಡೆದುಕೊಳ್ಳುವನು. ಆದರೆ ದಾಸಿಗೆ ಏನೂ ದೊರೆಯುವುದಿಲ್ಲ.” [✡ಉಲ್ಲೇಖನ: ಆದಿಕಾಂಡ 21:10.]