Bible Languages

Indian Language Bible Word Collections

Bible Versions

Books

Ezra Chapters

Ezra 7 Verses

Bible Versions

Books

Ezra Chapters

Ezra 7 Verses

1 ಇವೆಲ್ಲವೂ ಕಳೆದ ಬಳಿಕ, ಪರ್ಶಿಯ ರಾಜನಾದ ಅರ್ತಷಸ್ತನ ಆಳ್ವಿಕೆಯ ಕಾಲದಲ್ಲಿ ಎಜ್ರನು ಬಾಬಿಲೋನಿನಿಂದ ಜೆರುಸಲೇಮಿಗೆ ಬಂದನು. ಎಜ್ರನು ಸೆರಾಯನ ಮಗನು; ಸೆರಾಯನು ಅಜರ್ಯನ ಮಗನು; ಅಜರ್ಯನು ಹಿಲ್ಕೀಯನ ಮಗನು.
2 ಹಿಲ್ಕೀಯನು ಶಲ್ಲೂಮನ ಮಗನು. ಶಲ್ಲೂಮನು ಚಾದೋಕನ ಮಗನು; ಚಾದೋಕನು ಅಹೀಟೂಬನ ಮಗನು.
3 ಅಹೀಟೂಬನು ಅಮರ್ಯನ ಮಗನು; ಅಮರ್ಯನು ಅಜರ್ಯನ ಮಗನು. ಅಜರ್ಯನು ಮೆರಾಯೋತನ ಮಗನು;
4 ಮೆರಾಯೋತನು ಜೆರಹ್ಯನ ಮಗನು; ಜೆರಹ್ಯನು ಉಜ್ಜೀಯನ ಮಗನು; ಉಜ್ಜೀಯನು ಬುಕ್ಕೀಯ ಮಗನು.
5 ಬುಕ್ಕೀಯು ಅಬೀಷೂವನ ಮಗನು; ಅಬೀಷೂವನು ಫೀನೆಹಾಸನ ಮಗನು; ಫೀನೆಹಾಸನು ಎಲ್ಲಾಜಾರನ ಮಗನು. ಎಲ್ಲಾಜಾರನು ಪ್ರಧಾನ ಯಾಜಕನಾದ ಆರೋನನ ಮಗನು.
6 ಎಜ್ರನು ಬಾಬಿಲೋನಿನಿಂದ ಜೆರುಸಲೇಮಿಗೆ ಬಂದನು. ಅವನು ವಿದ್ವಾಂಸನಾಗಿದ್ದನು. ಇಸ್ರೇಲರ ದೇವರಾದ ಯೆಹೋವನು ಮೋಶೆಗೆ ಕೊಟ್ಟಿದ್ದ ಧರ್ಮಶಾಸ್ತ್ರವನ್ನು ಅವನು ಚೆನ್ನಾಗಿ ಬಲ್ಲವನಾಗಿದ್ದನು. ಯೆಹೋವನು ಎಜ್ರನೊಂದಿಗಿದ್ದುದರಿಂದ ಅವನು ಕೇಳಿದ್ದೆಲ್ಲವನ್ನು ಅರ್ತಷಸ್ತ ರಾಜನು ಅವನಿಗೆ ಕೊಟ್ಟನು.
7 ಎಜ್ರನೊಂದಿಗೆ ಇಸ್ರೇಲರ ಬಹುಮಂದಿ ಜೆರುಸಲೇಮಿಗೆ ಬಂದರು. ಅವರಲ್ಲಿ ಯಾಜಕರೂ ಲೇವಿಯರೂ ಗಾಯಕರೂ ದ್ವಾರಪಾಲಕರೂ ದೇವಾಲಯದ ಸೇವಕರೂ ಇದ್ದರು. ಅರಸನಾದ ಅರ್ತಷಸ್ತನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಅವರು ಜೆರುಸಲೇಮಿಗೆ ಬಂದು ತಲುಪಿದರು.
8 ಅರ್ತಷಸ್ತನ ಆಳ್ವಿಕೆಯ ಏಳನೆಯ ವರ್ಷದ ಐದನೆಯ ತಿಂಗಳಲ್ಲಿ ಎಜ್ರನು ಜೆರುಸಲೇಮನ್ನು ತಲುಪಿದನು.
9 ಅವರು ಬಾಬಿಲೋನನ್ನು ಮೊದಲನೆಯ ತಿಂಗಳಿನ ಮೊದಲನೆಯ ದಿನದಂದು ಬಿಟ್ಟು ಐದನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಜೆರುಸಲೇಮನ್ನು ಸೇರಿದರು. ದೇವರಾದ ಯೆಹೋವನು ಎಜ್ರನ ಸಂಗಡವಿದ್ದನು.
10 ಧರ್ಮಶಾಸ್ತ್ರವನ್ನು ಓದಲೂ, ಅಭ್ಯಾಸಿಸಲೂ ಮತ್ತು ಅದಕ್ಕೆ ವಿಧೇಯನಾಗಲು ಎಜ್ರನು ತನ್ನ ಸಮಯವನ್ನೆಲ್ಲಾ ವಿನಿಯೋಗಿಸಿದನು. ಯೆಹೋವನ ಆಜ್ಞೆಗಳನ್ನು, ವಿಧಿನಿಯಮಗಳನ್ನು ಇಸ್ರೇಲ್ ಜನರಿಗೆ ಕಲಿಸಬೇಕೆಂಬ ಇಚ್ಫೆ ಅವನಲ್ಲಿತ್ತು. ಯೆಹೋವನ ಕಟ್ಟಳೆಗಳಿಗೆ ವಿಧೇಯರಾಗುವಂತೆ ಇಸ್ರೇಲರೆಲ್ಲರಿಗೆ ಸಹಾಯ ಮಾಡಬೇಕೆಂಬ ಅಭಿಲಾಷೆಯು ಅವನಲ್ಲಿತ್ತು.
11 ಎಜ್ರನು ಯಾಜಕನೂ ಬೋಧಕನೂ ಆಗಿದ್ದನು. ಯೆಹೋವನು ಇಸ್ರೇಲರಿಗೆ ಕೊಟ್ಟಿರುವ ಕಟ್ಟಳೆಗಳನ್ನು, ವಿಧಿಗಳನ್ನು ಅವನು ಚೆನ್ನಾಗಿ ಅಭ್ಯಾಸ ಮಾಡಿಕೊಂಡಿದ್ದನು. ರಾಜನಾದ ಅರ್ತಷಸ್ತನು ಅವನಿಗೆ ಕೊಟ್ಟಿದ್ದ ಪತ್ರದಲ್ಲಿ ಹೀಗೆ ಬರೆದಿತ್ತು:
12 “ಅರಸನಾದ ಅರ್ತಷಸ್ತನಿಂದ: ಪರಲೋಕದ ದೇವರ ಕಟ್ಟಳೆಗಳ ಬೋಧಕನೂ ಯಾಜಕನೂ ಆಗಿರುವ ಎಜ್ರನಿಗೆ ವಂದನೆಗಳು.
13 ಈ ಆಜ್ಞೆಯನ್ನು ಕೊಡುವ ನಾನು ತಿಳಿಸುವುದೇನಂದರೆ, ನನ್ನ ಸಾಮ್ರಾಜ್ಯದಲ್ಲಿರುವ ಇಸ್ರೇಲರ ಯಾಜಕರು, ಲೇವಿಯರು, ಜನರೆಲ್ಲರೂ ಎಜ್ರನೊಂದಿಗೆ ಜೆರುಸಲೇಮಿಗೆ ಹೋಗಲು ಇಚ್ಛಿಸುವುದಾದರೆ ಅವರು ಹೋಗಬಹುದು.
14 ಎಜ್ರನೇ, ನಾನೂ ನನ್ನ ಏಳು ಮಂದಿ ಸಲಹೆಗಾರರೂ ನಿನ್ನನ್ನು ಯೆಹೂದಕ್ಕೆ ಮತ್ತು ಜೆರುಸಲೇಮಿಗೆ ಕಳುಹಿಸುತ್ತೇವೆ. ಅಲ್ಲಿ ನೀನೂ ನಿನ್ನ ಜನರೂ ದೇವರ ಕಟ್ಟಳೆಗಳಿಗೆ ವಿಧೇಯರಾಗಿರುವಂತೆ ನೋಡಿಕೊ. ಆ ಕಟ್ಟಳೆಗಳು ನಿನ್ನ ಬಳಿಯಲ್ಲಿ ಇವೆ.
15 ನಾನೂ ನನ್ನ ಸಲಹೆಗಾರರೂ ಜೆರುಸಲೇಮಿನಲ್ಲಿರುವ ಇಸ್ರೇಲಿನ ದೇವರಿಗೆ ಬೆಳ್ಳಿಬಂಗಾರಗಳನ್ನು ಅರ್ಪಿಸುತ್ತೇವೆ. ನೀನು ಹೋಗುವಾಗ ಅವುಗಳನ್ನು ತೆಗೆದುಕೊಂಡು ಹೋಗಬೇಕು.
16 ದಾರಿಯಲ್ಲಿ ಬಾಬಿಲೋನ್ ಸಾಮ್ರಾಜ್ಯದ ಎಲ್ಲಾ ಸಂಸ್ಥಾನಗಳನ್ನು ಸಂದರ್ಶಿಸಬೇಕು. ಅಲ್ಲಿ ವಾಸಿಸುವ ನಿನ್ನ ಜನರಿಂದಲೂ ಯಾಜಕರಿಂದಲೂ ಲೇವಿಯರಿಂದಲೂ ಬೆಳ್ಳಿಬಂಗಾರಗಳನ್ನು ಕಾಣಿಕೆಯಾಗಿ ಸ್ವೀಕರಿಸು. ಆ ಕಾಣಿಕೆಗಳು ಜೆರುಸಲೇಮಿನಲ್ಲಿರುವ ದೇವಾಲಯಕ್ಕಾಗಿರುವುದು.
17 ಆ ಹಣದಿಂದ ಹೋರಿಗಳನ್ನು, ಟಗರುಗಳನ್ನು, ಗಂಡು ಕುರಿಗಳನ್ನು ಖರೀದಿಸಲು ಉಪಯೋಗಿಸು. ಪಾನಾರ್ಪಣೆಗಳಿಗೆ ಮತ್ತು ಧಾನ್ಯಸಮರ್ಪಣೆಗಳಿಗೆ ಬೇಕಾಗುವ ಗೋಧಿಯನ್ನೂ ದ್ರಾಕ್ಷಾರಸವನ್ನೂ ತೆಗೆದುಕೊಂಡು ಜೆರುಸಲೇಮಿನ ಯಜ್ಞವೇದಿಕೆಯ ಮೇಲೆ ನಿನ್ನ ದೇವರಿಗೆ ಸಮರ್ಪಿಸು.
18 ಉಳಿದ ಬೆಳ್ಳಿಬಂಗಾರಗಳನ್ನು ನಿನಗೂ ನಿನ್ನೊಂದಿಗಿರುವ ಇತರರಿಗೂ ಸರಿತೋರುವ ರೀತಿಯಲ್ಲಿ ವಿನಿಯೋಗಿಸಿರಿ. ಅದು ದೇವರಿಗೆ ಮೆಚ್ಚಿಕೆಯಾಗುವಂತೆ ಉಪಯೋಗಿಸಿರಿ.
19 ಅವೆಲ್ಲವುಗಳನ್ನು ಜೆರುಸಲೇಮಿನ ದೇವರ ಬಳಿಗೆ ತೆಗೆದುಕೊಂಡು ಹೋಗಿ ಆತನನ್ನು ಆರಾಧಿಸಲು ಅವುಗಳನ್ನು ಉಪಯೋಗಿಸಿರಿ.
20 ಜೆರುಸಲೇಮಿನ ದೇವಾಲಯಕ್ಕೆ ಇನ್ನೂ ವಸ್ತುಗಳು ಬೇಕಾಗಿದ್ದಲ್ಲಿ ರಾಜನ ಖಜಾನೆಯಿಂದ ಹಣ ತೆಗೆದುಕೊಂಡು ಅವುಗಳನ್ನು ಖರೀದಿಮಾಡು.
21 ಅರಸನಾದ ಅರ್ತಷಸ್ತನೆಂಬ ನಾನು ಈ ರಾಜಾಜ್ಞೆಯನ್ನು ಹೊರಡಿಸುತ್ತಿದ್ದೇನೆ: ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯದಲ್ಲಿ ರಾಜಧನವನ್ನು ಇಟ್ಟುಕೊಂಡಿರುವ ಎಲ್ಲಾ ಸಂಸ್ಥಾನಾಧಿಕಾರಿಗಳಿಗೆ ನನ್ನ ಆಜ್ಞೆ ಏನೆಂದರೆ, ಎಜ್ರನಿಗೆ ಬೇಕಾದುದನ್ನು ಅವರು ಒದಗಿಸಬೇಕು. ಎಜ್ರನು ಪರಲೋಕದ ದೇವರ ಯಾಜಕನೂ ಆತನ ಕಟ್ಟಳೆಗಳ ಬೋಧಕನೂ ಆಗಿದ್ದಾನೆ. ನನ್ನ ಈ ಆಜ್ಞೆಗೆ ಸಂಪೂರ್ಣವಾಗಿಯೂ ತ್ವರಿತವಾಗಿಯೂ ವಿಧೇಯರಾಗಬೇಕು.
22 ಇವುಗಳನ್ನು ನೀವು ಎಜ್ರನಿಗೆ ಕೊಡಬೇಕು: ಮೂರು ಸಾವಿರದ ನಾನೂರು ಕಿಲೋಗ್ರಾಂ ಬೆಳ್ಳಿ, ಇಪ್ಪತ್ತೆರಡು ಸಾವಿರ ಕಿಲೋಗ್ರಾಂ ಗೋಧಿ, ಎರಡು ಸಾವಿರದ ಇನ್ನೂರು ಲೀಟರ್ ದ್ರಾಕ್ಷಾರಸ, ಎರಡು ಸಾವಿರದ ಇನ್ನೂರು ಲೀಟರ್ ಆಲಿವ್ ಎಣ್ಣೆ ಮತ್ತು ಬೇಕಾಗುವಷ್ಟು ಉಪ್ಪು.
23 ಪರಲೋಕದ ದೇವರು ಯಾವಯಾವ ವಸ್ತುಗಳಿಗಾಗಿ ಎಜ್ರನಿಗೆ ಆಜ್ಞಾಪಿಸಿರುವನೊ ಅವುಗಳನ್ನೆಲ್ಲ ನೀವು ಎಜ್ರನಿಗೆ ಸಂಪೂರ್ಣವಾಗಿಯೂ ಶೀಘ್ರವಾಗಿಯೂ ಒದಗಿಸಬೇಕು. ಇವುಗಳನ್ನು ಪರಲೋಕದ ದೇವರ ಆಲಯಕ್ಕಾಗಿ ಮಾಡಿರಿ. ನನ್ನ ರಾಜ್ಯದ ಮೇಲಾಗಲಿ ನನ್ನ ಮಕ್ಕಳ ಮೇಲಾಗಲಿ ದೇವರು ಸಿಟ್ಟುಗೊಳ್ಳುವುದು ನಮಗೆ ಇಷ್ಟವಿಲ್ಲ.
24 ನಾನು ನಿಮಗೆ ತಿಳಿಯಪಡಿಸುವುದೇನಂದರೆ: ಯಾಜಕರಿಂದ, ಲೇವಿಯರಿಂದ, ಗಾಯಕರಿಂದ, ದ್ವಾರಪಾಲಕರಿಂದ ಮತ್ತು ದೇವಾಲಯದ ಸೇವಕರಿಂದ ತೆರಿಗೆ ವಸೂಲಿ ಮಾಡುವುದು ನ್ಯಾಯಬಾಹಿರವಾದದ್ದು. ಅವರು ಯಾವ ರೀತಿಯ ತೆರಿಗೆಯನ್ನಾಗಲೀ ಸುಂಕವನ್ನಾಗಲೀ ಕಪ್ಪವನ್ನಾಗಲೀ ಅರಸನಿಗೆ ಸಲ್ಲಿಸಬೇಕಿಲ್ಲ.
25 ಎಜ್ರನೇ, ನಿನ್ನ ದೇವರು ನಿನಗೆ ಕೊಟ್ಟಿರುವ ಜ್ಞಾನಶಕ್ತಿಯನ್ನು ಉಪಯೋಗಿಸಿ ನ್ಯಾಯಾಧೀಶರನ್ನೂ ನ್ಯಾಯಶಾಸ್ತ್ರಿಗಳನ್ನೂ ಆರಿಸಿ ನೇಮಿಸಲು ನಿನಗೆ ಅಧಿಕಾರ ಕೊಟ್ಟಿದ್ದೇನೆ. ಯೂಫ್ರೇಟೀಸ್ ನದಿಯ ಪಶ್ಚಿಮ ಪ್ರಾಂತ್ಯಗಳಲ್ಲಿ ವಾಸಮಾಡುವ ಜನರಿಗೆಲ್ಲಾ ಅವರು ನ್ಯಾಯ ತೀರಿಸುವರು. ನಿನ್ನ ದೇವರ ಕಟ್ಟಳೆಗಳನ್ನು ಅರಿತವರಿಗೆಲ್ಲಾ ಅವರು ನ್ಯಾಯತೀರಿಸುವರು. ಯಾರಿಗಾದರೂ ದೇವರ ಕಟ್ಟಳೆ ಗೊತ್ತಿಲ್ಲದಿದ್ದಲ್ಲಿ ಆ ನ್ಯಾಯಶಾಸ್ತ್ರಿಗಳು ಅವರಿಗೆ ಕಲಿಸಬೇಕು.
26 ದೇವರ ಕಟ್ಟಳೆಗಳಿಗಾಗಲೀ ಅರಸನ ಆಜ್ಞೆಗಳಿಗಾಗಲೀ ಅವಿಧೇಯನಾಗುವವನಿಗೆ ದಂಡನೆಯಾಗಬೇಕು. ಅವರವರ ಅಪರಾಧಗಳ ಪ್ರಕಾರ ಮರಣಶಿಕ್ಷೆಯಿಂದಾಗಲೀ ಗಡಿಪಾರಿನಿಂದಾಗಲೀ ಅವರ ಆಸ್ತಿಪಾಸ್ತಿಗಳ ಜಪ್ತಿಯಿಂದಾಗಲೀ ಸೆರೆಮನೆವಾಸದಿಂದಾಗಲೀ ಅವರಿಗೆ ದಂಡನೆಯಾಗಬೇಕು.
27 ನಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ! ಜೆರುಸಲೇಮಿನಲ್ಲಿರುವ ದೇವಾಲಯವನ್ನು ಗೌರವಿಸುವ ಮನಸ್ಸನ್ನು ರಾಜನ ಹೃದಯದಲ್ಲಿರಿಸಿದ್ದಕ್ಕೆ ಆತನಿಗೆ ಸ್ತೋತ್ರ!
28 ರಾಜನ, ಅವನ ಮುಖ್ಯಾಧಿಕಾರಿಗಳ ಮತ್ತು ಅವನ ಸಲಹೆಗಾರರ ಸಮ್ಮುಖದಲ್ಲಿ ಯೆಹೋವನು ನನ್ನ ಮೇಲಿಟ್ಟಿರುವ ಅಗಾಧ ಪ್ರೀತಿಯನ್ನು ಪ್ರಕಟಪಡಿಸಿದನು. ದೇವರಾದ ಯೆಹೋವನು ನನ್ನ ಸಂಗಡವಿದ್ದುದರಿಂದ ನಾನು ಧೈರ್ಯಗೊಂಡೆನು. ನನ್ನೊಂದಿಗೆ ಜೆರುಸಲೇಮಿಗೆ ಹೋಗಲು ಮನಸ್ಸುಳ್ಳ ಇಸ್ರೇಲ್ ನಾಯಕರನ್ನು ನಾನು ಒಟ್ಟುಗೂಡಿಸಿದೆನು.

Ezra 7:9 Kannada Language Bible Words basic statistical display

COMING SOON ...

×

Alert

×