ಅವನೊಂದಿಗೆ ಕೆಲಸ ಮಾಡಲು ನಾನು ಒಹೊಲೀಯಾಬನನ್ನು ಆರಿಸಿಕೊಂಡಿದ್ದೇನೆ. ಒಹೊಲೀಯಾಬನು ದಾನ್ ಕುಲದ ಅಹೀಸಾಮಾಕನ ಮಗನು. ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನೂ ಮಾಡುವುದಕ್ಕೆ ಬೇರೆ ಕೆಲಸಗಾರರಿಗೆಲ್ಲಾ ನಿಪುಣತೆಯನ್ನು ಅನುಗ್ರಹಿಸಿದ್ದೇನೆ:
“ಇದನ್ನು ಇಸ್ರೇಲರಿಗೆ ಹೇಳು: ‘ನೀವು ನನ್ನ ವಿಶೇಷವಾದ ಸಬ್ಬತ್ ದಿನವನ್ನು ಖಂಡಿತವಾಗಿ ಆಚರಿಸಬೇಕು. ಯೆಹೋವನಾದ ನಾನು ನಿಮ್ಮನ್ನು ನನ್ನ ವಿಶೇಷ ಜನರನ್ನಾಗಿ ಮಾಡಿರುವುದಕ್ಕೆ ಇದು ಗುರುತಾಗಿದೆ.
“ ‘ಸಬ್ಬತ್ ದಿನವನ್ನು ವಿಶೇಷ ದಿನವೆಂದು ಪರಿಗಣಿಸಿ ಆಚರಿಸಿರಿ. ಆ ದಿನವನ್ನು ಬೇರೆ ದಿನದಂತೆ ಪರಿಗಣಿಸಿ ನಡೆಯುವವನಿಗೆ ಮರಣದಂಡನೆಯಾಗಬೇಕು. ಸಬ್ಬತ್ ದಿನದಲ್ಲಿ ಯಾವನಾದರೂ ಕೆಲಸಮಾಡಿದರೆ ಅವನನ್ನು ಬಹಿಷ್ಕರಿಸಬೇಕು.
ಕೆಲಸ ಮಾಡುವುದಕ್ಕೆ ವಾರದಲ್ಲಿ ಬೇರೆ ಆರು ದಿನಗಳಿವೆ. ಆದರೆ ಏಳನೆಯ ದಿನವು ವಿಶ್ರಾಂತಿಯ ಬಹು ವಿಶೇಷವಾದ ದಿನವಾಗಿದೆ. ಯೆಹೋವನನ್ನು ಸನ್ಮಾನಿಸಲು ಅದೊಂದು ವಿಶೇಷ ದಿನವಾಗಿದೆ. ಸಬ್ಬತ್ತಿನ ಸಮಯದಲ್ಲಿ ಕೆಲಸಮಾಡುವವನು ಕೊಲ್ಲಲ್ಪಡಬೇಕು.
ಸಬ್ಬತ್ ನನಗೂ ಮತ್ತು ಇಸ್ರೇಲರಿಗೂ ನಡುವೆ ಎಂದೆಂದೂ ಇರುವ ಸೂಚನೆಯಾಗಿರುವುದು.’ ” ಯೆಹೋವನು ಆರು ದಿನಗಳಲ್ಲಿ ಕೆಲಸಮಾಡಿ ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು. ಏಳನೆಯ ದಿನದಲ್ಲಿ ಕೆಲಸ ಮಾಡದೆ ವಿಶ್ರಮಿಸಿಕೊಂಡನು.
ಹೀಗೆ, ಯೆಹೋವನು ಮೋಶೆಯೊಡನೆ ಸೀನಾಯಿ ಬೆಟ್ಟದಲ್ಲಿ ಮಾತಾಡುವುದನ್ನು ಮುಗಿಸಿದನು. ಬಳಿಕ ಯೆಹೋವನು ಒಡಂಬಡಿಕೆ ಬರೆಯಲ್ಪಟ್ಟಿದ್ದ ಎರಡು ಕಲ್ಲಿನ ಹಲಿಗೆಗಳನ್ನು ಮೋಶೆಗೆ ಕೊಟ್ಟನು. ಅವು ದೇವರ ಬೆರಳಿನಿಂದ ಲಿಖಿತವಾಗಿತ್ತು.