English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Exodus Chapters

Exodus 18 Verses

1 ಮೋಶೆಯ ಮಾವನಾದ ಇತ್ರೋನನು ಮಿದ್ಯಾನಿನಲ್ಲಿ ಯಾಜಕನಾಗಿದ್ದನು. ಮೋಶೆಗೆ ಮತ್ತು ಇಸ್ರೇಲರಿಗೆ ದೇವರು ಅನೇಕ ರೀತಿಗಳಲ್ಲಿ ಸಹಾಯ ಮಾಡಿದ್ದರ ಬಗ್ಗೆ, ಯೆಹೋವನು ಇಸ್ರೇಲರನ್ನು ಈಜಿಪ್ಟಿನಿಂದ ಹೊರಗೆ ನಡಿಸಿದ್ದರ ಬಗ್ಗೆ ಇತ್ರೋನನು ಕೇಳಿದನು.
2 ಆದ್ದರಿಂದ ಅವನು ಮೋಶೆಯ ಹೆಂಡತಿಯಾದ ಚಿಪ್ಪೋರಳನ್ನು ಕರೆದುಕೊಂಡು ಬಂದನು. (ಚಿಪ್ಪೋರಳನ್ನು ಮೋಶೆಯು ಮನೆಗೆ ಕಳುಹಿಸಿದ್ದರಿಂದ ಆಕೆಯು ಮೋಶೆಯ ಸಂಗಡ ಇರಲಿಲ್ಲ.)
3 ಇತ್ರೋನನು ಮೋಶೆಯ ಇಬ್ಬರು ಗಂಡುಮಕ್ಕಳನ್ನೂ ಕರೆದುಕೊಂಡು ಬಂದನು. ಮೊದಲಿನ ಮಗನ ಹೆಸರು ಗೇರ್ಷೋಮ್. ಅವನು ಹುಟ್ಟಿದಾಗ ಮೋಶೆಯು, “ನಾನು ಪರದೇಶದಲ್ಲಿ ಅಪರಿಚಿತನಾಗಿದ್ದೇನೆ” ಎಂದು ಹೇಳಿ ಆ ಹೆಸರನ್ನು ಇಟ್ಟನು.
4 ಇನ್ನೊಬ್ಬ ಮಗನ ಹೆಸರು ಎಲೀಯೆಜೆರ್. ಇವನು ಹುಟ್ಟಿದಾಗ ಮೋಶೆಯು, “ನನ್ನ ತಂದೆಯ ದೇವರು ನನಗೆ ಸಹಾಯ ಮಾಡಿ ಈಜಿಪ್ಟಿನ ಅರಸನಿಂದ ರಕ್ಷಿಸಿದನು” ಎಂದು ಹೇಳಿ ಆ ಹೆಸರನ್ನು ಇಟ್ಟನು.
5 ಆದ್ದರಿಂದ ಮೋಶೆಯು ಮರುಭೂಮಿಯಲ್ಲಿ ದೇವರ ಬೆಟ್ಟವಾದ ಸೀನಾಯ್ ಬೆಟ್ಟದ ಬಳಿ ತಂಗಿದ್ದಾಗ ಇತ್ರೋನನು ಮೋಶೆಯ ಬಳಿಗೆ ಹೋದನು. ಇತ್ರೋನನ ಜೊತೆಯಲ್ಲಿ ಮೋಶೆಯ ಹೆಂಡತಿ ಮತ್ತು ಅವನ ಇಬ್ಬರು ಗಂಡುಮಕ್ಕಳು ಇದ್ದರು.
6 ಇತ್ರೋನನು ಮೋಶೆಗೆ, “ನಾನು ನಿನ್ನ ಮಾವನಾದ ಇತ್ರೋನ. ನಾನು ನಿನ್ನ ಹೆಂಡತಿಯನ್ನು ಮತ್ತು ಆಕೆಯ ಇಬ್ಬರು ಗಂಡುಮಕ್ಕಳನ್ನು ನಿನ್ನ ಬಳಿಗೆ ಕರೆದುಕೊಂಡು ಬರುತ್ತಿದ್ದೇನೆ” ಎಂಬ ಸಂದೇಶವನ್ನು ಕಳುಹಿಸಿದನು.
7 ಆದ್ದರಿಂದ ಮೋಶೆ ತನ್ನ ಮಾವನನ್ನು ಭೇಟಿಯಾಗಲು ಹೊರಗೆ ಹೋದನು. ಮೋಶೆ ಅವನ ಮುಂದೆ ತಲೆಬಾಗಿ ಅವನಿಗೆ ಮುದ್ದಿಟ್ಟನು. ಅವರಿಬ್ಬರು ಪರಸ್ಪರ ಕ್ಷೇಮ ಸಮಾಚಾರವನ್ನು ವಿಚಾರಿಸಿಕೊಂಡರು. ಬಳಿಕ ಅವರು ಹೆಚ್ಚು ಮಾತಾಡಲು ಮೋಶೆಯ ಡೇರೆಯೊಳಕ್ಕೆ ಹೋದರು.
8 ಯೆಹೋವನು ಇಸ್ರೇಲರಿಗೆ ಮಾಡಿದ ಪ್ರತಿಯೊಂದು ಸಂಗತಿಯನ್ನು ಮೋಶೆ ಇತ್ರೋನನಿಗೆ ಹೇಳಿದನು. ಯೆಹೋವನು ಫರೋಹನಿಗೆ ಮತ್ತು ಈಜಿಪ್ಟಿನವರಿಗೆ ಮಾಡಿದ ಸಂಗತಿಗಳ ಬಗ್ಗೆ ಮೋಶೆಯು ಹೇಳಿದನು. ದಾರಿಯ ಉದ್ದಕ್ಕೂ ತಮಗೆ ಬಂದೊದಗಿದ ಎಲ್ಲಾ ಸಮಸ್ಯೆಗಳ ಬಗ್ಗೆ ಮತ್ತು ತೊಂದರೆ ಬಂದೊದಗಿದ ಪ್ರತಿ ಸಾರಿಯೂ ಯೆಹೋವನು ಇಸ್ರೇಲರನ್ನು ಹೇಗೆ ರಕ್ಷಿಸಿದನೆಂಬುದನ್ನು ಮೋಶೆಯು ತನ್ನ ಮಾವನಿಗೆ ತಿಳಿಸಿದನು.
9 ಯೆಹೋವನು ಇಸ್ರೇಲರಿಗೆ ಮಾಡಿದ ಒಳ್ಳೆಯ ಸಂಗತಿಗಳಿಗಾಗಿಯೂ ಈಜಿಪ್ಟಿನವರಿಂದ ಇಸ್ರೇಲರನ್ನು ಯೆಹೋವನು ಬಿಡುಗಡೆಗೊಳಿಸಿದ್ದಕ್ಕಾಗಿಯೂ ಇತ್ರೋನನು ಬಹಳ ಸಂತೋಷಪಟ್ಟನು.
10 ಇತ್ರೋನನು, “ಯೆಹೋವನನ್ನು ಸ್ತುತಿಸಿರಿ! ಆತನು ನಿಮ್ಮನ್ನು ಫರೋಹನಿಂದಲೂ ಈಜಿಪ್ಟಿನಿಂದಲೂ ರಕ್ಷಿಸಿದನು.
11 ಈಜಿಪ್ಟಿನವರು ತಾವು ಇಸ್ರೇಲರಿಗಿಂತಲೂ ಉತ್ತಮರೆಂದು ಭಾವಿಸಿಕೊಂಡಿದ್ದರು. ಆದರೆ ಯೆಹೋವನು ಅವರನ್ನು ತಗ್ಗಿಸಿದ್ದರಿಂದ ಎಲ್ಲಾ ದೇವರುಗಳಲ್ಲಿ ಆತನೇ ದೊಡ್ಡವನೆಂದು ಈಗ ನಾನು ತಿಳಿದುಕೊಂಡೆನು” ಎಂದು ಹೇಳಿದನು.
12 ಇತ್ರೋನನು ದೇವರಿಗೆ ಯಜ್ಞಗಳನ್ನು, ಕಾಣಿಕೆಗಳನ್ನು ಕೊಟ್ಟನು. ಆಗ ಆರೋನನು ಮತ್ತು ಇಸ್ರೇಲರ ಎಲ್ಲಾ ಹಿರಿಯರು ಮೋಶೆಯ ಮಾವನಾದ ಇತ್ರೋನನೊಡನೆ ದೇವರ ಸನ್ನಿಧಿಯಲ್ಲಿ ಊಟಮಾಡಲು ಬಂದರು.
13 ಮರುದಿನ ಮೋಶೆಯು ಜನರಿಗೆ ನ್ಯಾಯನಿರ್ಣಯ ಮಾಡಲು ತನ್ನ ಆಸನದ ಮೇಲೆ ಕುಳಿತುಕೊಂಡನು. ಅಲ್ಲಿ ಬಹಳ ಜನರಿದ್ದರು, ಆದ್ದರಿಂದ ಅವರು ಮುಂಜಾನೆಯಿಂದ ಸಾಯಂಕಾಲದವರೆಗೆ ಅವನ ಸುತ್ತಲೂ ನಿಂತುಕೊಂಡಿದ್ದರು.
14 ಮೋಶೆಯು ಜನರ ನ್ಯಾಯತೀರಿಸುವುದನ್ನು ಇತ್ರೋನನು ನೋಡಿ, “ನೀನು ಯಾಕೆ ಹೀಗೆ ಮಾಡುತ್ತಿರುವೆ? ನೀನೊಬ್ಬನೇ ಯಾಕೆ ನ್ಯಾಯತೀರಿಸಬೇಕು? ಜನರು ದಿನವೆಲ್ಲಾ ನಿನ್ನ ಬಳಿಗೆ ಯಾಕೆ ಬರಬೇಕು?” ಎಂದು ಕೇಳಿದನು.
15 ಆಗ ಮೋಶೆ ತನ್ನ ಮಾವನಿಗೆ, “ಜನರು ನನ್ನ ಬಳಿಗೆ ಬಂದು ದೇವರ ತೀರ್ಮಾನವನ್ನು ಕೇಳಬಯಸುತ್ತಾರೆ.
16 ಅವರೊಳಗೆ ವ್ಯಾಜ್ಯವಿದ್ದರೆ ಅವರು ನನ್ನ ಬಳಿಗೆ ಬರುತ್ತಾರೆ. ಯಾವನು ನ್ಯಾಯವಂತನೆಂದು ನಾನು ತೀರ್ಮಾನಿಸುತ್ತೇನೆ. ಈ ರೀತಿಯಾಗಿ ನಾನು ದೇವರ ಕಟ್ಟಳೆಗಳನ್ನು ಮತ್ತು ಬೋಧನೆಗಳನ್ನು ಜನರಿಗೆ ಬೋಧಿಸುತ್ತೇನೆ” ಅಂದನು.
17 ಆದರೆ ಮೋಶೆಯ ಮಾವನು ಅವನಿಗೆ, “ನೀನು ಹೀಗೆ ಮಾಡುತ್ತಿರುವುದು ಒಳ್ಳೆಯದಲ್ಲ.
18 ಈ ಕೆಲಸ ನೀನೊಬ್ಬನೇ ಮಾಡುವುದು ಬಹಳ ಪ್ರಯಾಸಕರ. ಇದು ನಿನ್ನನ್ನೂ ಆಯಾಸಗೊಳಿಸುತ್ತದೆ; ಜನರನ್ನೂ ಆಯಾಸಗೊಳಿಸುತ್ತದೆ. ನಿನ್ನೊಬ್ಬನಿಂದಲೇ ಈ ಕೆಲಸವನ್ನು ಮಾಡಲಾಗದು.
19 ಕೇಳು, ನಾನು ನಿನಗೆ ಕೆಲವು ಸಲಹೆಗಳನ್ನು ಕೊಡುವೆನು. ಯೆಹೋವನು ನಿನ್ನೊಡನೆ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನೀನು ಮಾಡಬೇಕಾದದ್ದು ಇವೇ: ಜನರ ವ್ಯಾಜ್ಯಗಳನ್ನು ನೀನು ಕೇಳುವುದನ್ನು ಮುಂದುವರಿಸಬೇಕು; ಈ ಸಂಗತಿಗಳ ಬಗ್ಗೆ ನೀನು ದೇವರೊಂದಿಗೆ ಮಾತಾಡುವುದನ್ನೂ ಮುಂದುವರಿಸಬೇಕು;
20 ನೀನು ದೇವರ ಕಟ್ಟಳೆಗಳನ್ನು ಮತ್ತು ಬೋಧನೆಗಳನ್ನು ಜನರಿಗೆ ಬೋಧಿಸಬೇಕು; ನಿಬಂಧನೆಗಳನ್ನು ಉಲ್ಲಂಘಿಸದಂತೆ ಅವರನ್ನು ಎಚ್ಚರಿಸಬೇಕು; ಜೀವಿಸಲು ಸರಿಯಾದ ಮಾರ್ಗವನ್ನು ಅವರಿಗೆ ಬೋಧಿಸಬೇಕು; ಅವರು ಮಾಡಬೇಕಾದದ್ದನ್ನು ಅವರಿಗೆ ತಿಳಿಸಬೇಕು.
21 ಆದರೆ ನೀನು ಜನರೊಳಗೆ ದೇವಭಕ್ತರೂ ಲಂಚಮುಟ್ಟದವರೂ ಆಗಿರುವವರನ್ನು ಆರಿಸಿಕೊಳ್ಳಬೇಕು. ಅವರನ್ನು ಸಾವಿರ ಜನರ ಮೇಲೆಯೂ ನೂರು ಜನರ ಮೇಲೆಯೂ ಐವತ್ತು ಜನರ ಮೇಲೆಯೂ ಹತ್ತು ಜನರ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಬೇಕು.
22 ಈ ಅಧಿಕಾರಿಗಳು ಜನರಿಗೆ ನ್ಯಾಯತೀರಿಸಲಿ. ಬಹಳ ಪ್ರಾಮುಖ್ಯವಾದ ವ್ಯಾಜ್ಯವಿದ್ದರೆ, ತೀರ್ಮಾನಕ್ಕಾಗಿ ಅವರು ನಿನ್ನ ಬಳಿಗೆ ಬರಬಹುದು. ಆದರೆ ಇತರ ವ್ಯಾಜ್ಯಗಳನ್ನು ಅವರೇ ತೀರ್ಮಾನಿಸಿಕೊಳ್ಳಬಹುದು. ಈ ರೀತಿಯಾಗಿ ಮಾಡಿದರೆ, ಅದು ನಿನಗೆ ಸುಲಭವಾಗುವುದು. ಮಾತ್ರವಲ್ಲದೆ, ಈ ಜನರು ನಿನ್ನ ಕೆಲಸವನ್ನು ತಮ್ಮೊಳಗೆ ಹಂಚಿಕೊಳ್ಳುವರು.
23 ನೀನು ಈ ಸಂಗತಿಗಳನ್ನು ಮಾಡಿದರೆ, ಯೆಹೋವನ ಚಿತ್ತವಿದ್ದರೆ, ನೀನು ನಿನ್ನ ಕೆಲಸವನ್ನು ಮಾಡುತ್ತಾ ಮುಂದುವರಿಯಲು ಶಕ್ತನಾಗುವೆ ಮತ್ತು ಅದೇ ಸಮಯದಲ್ಲಿ ಜನರೆಲ್ಲರೂ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಂಡು ಮನೆಗೆ ಹೋಗಬಹುದು” ಎಂದು ಹೇಳಿದನು.
24 ಮೋಶೆಯು ತನ್ನ ಮಾವನಾದ ಇತ್ರೋನನು ಹೇಳಿದಂತೆ ಮಾಡಿದನು.
25 ಮೋಶೆಯು ಇಸ್ರೇಲರೊಳಗಿಂದ ನೀತಿವಂತರನ್ನು ಆರಿಸಿಕೊಂಡು ಅವರನ್ನು ಹೀಗೆ ಸಾವಿರ ಜನರ ಮೇಲೆಯೂ ನೂರು ಜನರ ಮೇಲೆಯೂ ಐವತ್ತು ಜನರ ಮೇಲೆಯೂ ಹತ್ತು ಜನರ ಮೇಲೆಯೂ ಅಧಿಕಾರಿಗಳನ್ನಾಗಿ ಮಾಡಿದನು.
26 ಈ ಅಧಿಕಾರಿಗಳು ಜನರ ನ್ಯಾಯಾಧಿಪತಿಗಳಾಗಿದ್ದರು. ಜನರು ತಮ್ಮ ವ್ಯಾಜ್ಯಗಳನ್ನು ಈ ಅಧಿಕಾರಿಗಳ ಬಳಿಗೆ ಯಾವಾಗಲೂ ತರಬಹುದಾಗಿತ್ತು. ಮೋಶೆಯು ಬಹು ಪ್ರಾಮುಖ್ಯವಾದ ವ್ಯಾಜ್ಯಗಳನ್ನು ಮಾತ್ರ ತೀರ್ಮಾನಿಸುತ್ತಿದ್ದನು.
27 ಸ್ವಲ್ಪ ಸಮಯದ ನಂತರ ಮೋಶೆಯು ತನ್ನ ಮಾವನಾದ ಇತ್ರೋನನನ್ನು ಬೀಳ್ಕೊಟ್ಟನು; ಇತ್ರೋನನು ತನ್ನ ಸ್ವದೇಶಕ್ಕೆ ಹಿಂತಿರುಗಿಹೋದನು.
×

Alert

×