Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Books

Exodus Chapters

Exodus 10 Verses

1 ಯೆಹೋವನು ಮೋಶೆಗೆ, “ಫರೋಹನ ಬಳಿಗೆ ಹೋಗು. ನಾನು ಅದ್ಭುತಕಾರ್ಯಗಳನ್ನು ತೋರಿಸಲು ಅವಕಾಶವಾಗಲೆಂದು ಫರೋಹನ ಮತ್ತು ಅವನ ಅಧಿಕಾರಿಗಳ ಹೃದಯಗಳನ್ನು ಕಠಿಣಪಡಿಸಿದ್ದೇನೆ.
2 ನಾನು ಈಜಿಪ್ಟಿನಲ್ಲಿ ಮಾಡಿದ ಸೂಚಕಕಾರ್ಯಗಳನ್ನೂ ಇತರ ಅದ್ಭುತಕಾರ್ಯಗಳನ್ನೂ ನೀವು ನಿಮ್ಮ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ವಿವರಿಸಿ, ‘ಯೆಹೋವನು ಈಜಿಪ್ಟಿನವರನ್ನು ತನಗೆ ಇಷ್ಟ ಬಂದಂತೆ ಶಿಕ್ಷಿಸಿದನು’ ಎಂಬುದಾಗಿ ತಿಳಿಸಬೇಕೆಂದು ನಾನು ಫರೋಹನ ಮತ್ತು ಅವನ ಅಧಿಕಾರಿಗಳ ಹೃದಯಗಳನ್ನು ಕಠಿಣಪಡಿಸಿದ್ದೇನೆ. ಇದಲ್ಲದೆ ಈ ಮಹತ್ಕಾರ್ಯಗಳ ಮೂಲಕ ನಾನೇ ಯೆಹೋವನೆಂದು ತಿಳಿದುಕೊಳ್ಳುವಿರಿ” ಎಂದು ಹೇಳಿದನು.
3 ಆದ್ದರಿಂದ ಮೋಶೆ ಆರೋನರು ಫರೋಹನ ಬಳಿಗೆ ಹೋಗಿ, “ಇಬ್ರಿಯರ ದೇವರಾದ ಯೆಹೋವನು ಹೀಗೆನ್ನುತ್ತಾನೆ: ‘ನೀನು ಎಲ್ಲಿಯವರೆಗೆ ನನಗೆ ವಿಧೇಯನಾಗುವುದಿಲ್ಲ? ನನ್ನನ್ನು ಆರಾಧಿಸಲು ನನ್ನ ಜನರನ್ನು ಕಳುಹಿಸಿಕೊಡು!
4 ನೀನು ನನ್ನ ಜನರನ್ನು ಕಳುಹಿಸಿಕೊಡದಿದ್ದರೆ, ನಾಳೆಯೇ ನಿನ್ನ ದೇಶದೊಳಗೆ ಮಿಡತೆಗಳನ್ನು ತರುವೆನು.
5 ಮಿಡತೆಗಳು ಬಂದು ಭೂಮಿಯನ್ನು ಮುಚ್ಚಿಕೊಳ್ಳುವವು; ನೆಲವೇ ಕಾಣಿಸದೆ ಹೋಗುವುದು. ಆಲಿಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿರುವುದನ್ನು ಮಿಡತೆಗಳು ತಿಂದುಬಿಡುತ್ತವೆ; ಹೊಲದಲ್ಲಿರುವ ಎಲ್ಲಾ ಮರಗಳ ಎಲೆಗಳನ್ನು ತಿಂದುಬಿಡುತ್ತವೆ.
6 ಅವು ನಿನ್ನ ಮನೆಗಳಲ್ಲಿಯೂ ನಿನ್ನ ಅಧಿಕಾರಿಗಳ ಮನೆಗಳಲ್ಲಿಯೂ ಈಜಿಪ್ಟಿನ ಎಲ್ಲಾ ಮನೆಗಳಲ್ಲಿಯೂ ತುಂಬಿರುತ್ತವೆ. ನಿನ್ನ ತಂದೆತಾತಂದಿರೂ ನೋಡಿಲ್ಲದಷ್ಟು ಮಿಡತೆಗಳಿರುತ್ತವೆ”‘ ಎಂದು ಹೇಳಿದರು. ಬಳಿಕ ಅವರು ಫರೋಹನ ಬಳಿಯಿಂದ ಹೊರಟುಹೋದರು.
7 ಅಧಿಕಾರಿಗಳು ಫರೋಹನಿಗೆ, “ಈ ಜನರಿಂದ ಇನ್ನೆಷ್ಟು ಕಾಲ ನಾವು ಬಳಲಬೇಕು? ಇವರು ಹೋಗಿ ತಮ್ಮ ದೇವರಾದ ಯೆಹೋವನನ್ನು ಆರಾಧಿಸಲಿ. ಈಜಿಪ್ಟ್ ನಾಶವಾಗುತ್ತಿದೆ ಎಂಬುದು ನಿನಗಿನ್ನೂ ಮನವರಿಕೆಯಾಗಿಲ್ಲವೇ?” ಅಂದರು.
8 ಆದ್ದರಿಂದ ಫರೋಹನು ಮೋಶೆ ಆರೋನರನ್ನು ತನ್ನ ಬಳಿಗೆ ಕರೆಯಿಸಿ, “ಹೋಗಿ ನಿಮ್ಮ ದೇವರಾದ ಯೆಹೋವನನ್ನು ಆರಾಧಿಸಿರಿ. ಆದರೆ ಹೋಗುವವರು ಯಾರೆಂಬುದನ್ನು ನನಗೆ ತಿಳಿಸಿ” ಅಂದನು.
9 ಮೋಶೆಯು, “ಯೌವನಸ್ಥರು, ಮುದುಕರು, ಎಲ್ಲರೂ ಹೋಗುತ್ತೇವೆ. ನಮ್ಮ ಗಂಡು ಹೆಣ್ಣುಮಕ್ಕಳನ್ನೂ ನಮ್ಮ ದನಕುರಿಗಳನ್ನೂ ತೆಗೆದುಕೊಂಡು ಹೋಗುತ್ತೇವೆ. ಯಾಕೆಂದರೆ ಇದು ಯೆಹೋವನ ಜಾತ್ರೆ” ಎಂದು ಉತ್ತರಕೊಟ್ಟನು.
10 ಫರೋಹನು ಅವರಿಗೆ, “ಯೆಹೋವನಾಣೆ, ನೀವು ನಿಮ್ಮ ಸ್ತ್ರೀಯರನ್ನೂ ಮಕ್ಕಳನ್ನೂ ಕರೆದುಕೊಂಡು ಹೋಗಲು ನಾನು ಅನುಮತಿ ಕೊಡುವುದೇ ಇಲ್ಲ.
11 ನೀವು ನನಗೆ ವಿರೋಧವಾಗಿ ಸಂಚುಮಾಡುತ್ತಿರುವುದು ಈಗ ಸ್ಪಷ್ಟವಾಯಿತು” ಎಂದು ಹೇಳಿದನು. ಬಳಿಕ ಫರೋಹನು ಮೋಶೆ ಆರೋನರನ್ನು ಕಳುಹಿಸಿಬಿಟ್ಟನು.
12 ಯೆಹೋವನು ಮೋಶೆಗೆ, “ಈಜಿಪ್ಟ್ ದೇಶದ ಮೇಲೆ ನಿನ್ನ ಕೈಯನ್ನೆತ್ತು. ಆಗ ಮಿಡತೆಗಳು ಬರುವವು! ಮಿಡತೆಗಳು ಈಜಿಪ್ಟ್ ದೇಶದಲ್ಲೆಲ್ಲಾ ಹರಡಿಕೊಳ್ಳುವವು. ಆಲಿಕಲ್ಲಿನ ಮಳೆಯಿಂದ ನಾಶವಾಗದೆ ಉಳಿದುಕೊಂಡ ಪೈರುಗಳನ್ನೆಲ್ಲಾ ಮಿಡತೆಗಳು ತಿಂದುಬಿಡುವವು” ಎಂದು ಹೇಳಿದನು.
13 ಅಂತೆಯೇ ಮೋಶೆ ಈಜಿಪ್ಟ್ ದೇಶದ ಮೇಲೆ ಕೈ ಚಾಚಿದನು. ಆಗ ಯೆಹೋವನು ಪೂರ್ವದಿಂದ ಬಲವಾದ ಗಾಳಿ ಬೀಸುವಂತೆ ಮಾಡಿದನು. ಗಾಳಿಯು ಹಗಲಿರುಳು ಬೀಸಿತು. ಮುಂಜಾನೆಯಾದಾಗ ಆ ಗಾಳಿಯಿಂದ ಈಜಿಪ್ಟ್ ದೇಶಕ್ಕೆ ಮಿಡತೆಗಳು ಬಂದವು.
14 ಮಿಡತೆಗಳು ಈಜಿಪ್ಟ್ ದೇಶದೊಳಗೆ ಹಾರಿಬಂದು ನೆಲದ ಮೇಲೆ ಇಳಿದವು. ಈಜಿಪ್ಟಿನಲ್ಲಿ ಹಿಂದೆಂದೂ ಇಷ್ಟು ಮಿಡತೆಗಳು ಇರಲಿಲ್ಲ; ಇನ್ನು ಮುಂದೆಯೂ ಇರುವುದಿಲ್ಲ.
15 ಮಿಡತೆಗಳು ನೆಲವನ್ನು ಮುಚ್ಚಿಕೊಂಡವು; ಇದರಿಂದಾಗಿ ನೆಲವು ಕಾಣದಂತಾಯಿತು. ಆಲಿಕಲ್ಲಿನ ಮಳೆಗೆ ನಾಶವಾಗದೆ ಉಳಿದಿದ್ದ ಎಲ್ಲಾ ಪೈರುಗಳನ್ನೂ ಮರಗಳಲ್ಲಿದ್ದ ಕಾಯಿಗಳನ್ನೂ ಅವು ತಿಂದುಬಿಟ್ಟವು. ಈಜಿಪ್ಟಿನಲ್ಲೆಲ್ಲಾ ಮರಗಳಲ್ಲಾಗಲಿ ಗಿಡಗಳಲ್ಲಾಗಲಿ ಹಸುರಾಗಿದ್ದ ಒಂದಾದರೂ ಉಳಿಯಲಿಲ್ಲ.
16 ಫರೋಹನು ಕೂಡಲೇ ಮೋಶೆ ಆರೋನರನ್ನು ಕರೆಸಿ, “ನಾನು ನಿಮ್ಮ ದೇವರಾದ ಯೆಹೋವನಿಗೂ ನಿಮಗೂ ವಿರುದ್ಧವಾಗಿ ಪಾಪ ಮಾಡಿದ್ದೇನೆ.
17 ಇದೊಂದು ಸಲ ನನ್ನ ಪಾಪಗಳನ್ನು ಕ್ಷಮಿಸಿ ಈ ‘ವಿಪತ್ತನ್ನು’ ನನ್ನಿಂದ ತೊಲಗಿಸಬೇಕೆಂದು ಯೆಹೋವನಿಗೆ ಪ್ರಾರ್ಥಿಸಿರಿ” ಎಂದು ಹೇಳಿದನು.
18 ಮೋಶೆಯು ಫರೋಹನ ಬಳಿಯಿಂದ ಹೋಗಿ ಯೆಹೋವನಿಗೆ ಪ್ರಾರ್ಥಿಸಿದನು.
19 ಆದ್ದರಿಂದ ಯೆಹೋವನು ಗಾಳಿಯ ದಿಕ್ಕನ್ನು ಬದಲಾಯಿಸಿ, ಪಶ್ಚಿಮದಿಂದ ಬಲವಾದ ಗಾಳಿ ಬೀಸುವಂತೆ ಮಾಡಿದನು; ಅದು ಮಿಡತೆಗಳನ್ನು ಕೆಂಪು ಸಮುದ್ರಕ್ಕೆ ಹಾರಿಸಿತು. ಈಜಿಪ್ಟಿನಲ್ಲಿ ಒಂದು ಮಿಡತೆಯೂ ಉಳಿಯಲಿಲ್ಲ.
20 ಆದರೆ ಫರೋಹನು ಮತ್ತೆ ಹೃದಯವನ್ನು ಕಠಿಣಪಡಿಸಿಕೊಂಡು ಇಸ್ರೇಲರನ್ನು ಕಳುಹಿಸಿಕೊಡಲಿಲ್ಲ.
21 ಬಳಿಕ ಯೆಹೋವನು ಮೋಶೆಗೆ, “ನಿನ್ನ ಕೈಯನ್ನು ಆಕಾಶದ ಕಡೆಗೆ ಚಾಚು. ಆಗ ಕಾರ್ಗತ್ತಲೆಯು ಈಜಿಪ್ಟನ್ನು ಆವರಿಸುವುದು. ಆ ಕಾರ್ಗತ್ತಲೆಯಿಂದ ಜನರು ತಡವರಿಸುತ್ತಾ ನಡೆಯುವರು” ಎಂದು ಹೇಳಿದನು.
22 ಮೋಶೆ ತನ್ನ ಕೈಯನ್ನು ಆಕಾಶದ ಕಡೆಗೆ ಚಾಚಿದಾಗ ಕಾರ್ಗತ್ತಲು ಈಜಿಪ್ಟನ್ನು ಆವರಿಸಿತು. ಕಾರ್ಗತ್ತಲು ಈಜಿಪ್ಟಿನಲ್ಲಿ ಮೂರು ದಿನಗಳವರೆಗೆ ಇತ್ತು.
23 ಈ ಮೂರು ದಿನಗಳಲ್ಲಿ ಯಾರೂ ಒಬ್ಬರನ್ನೊಬ್ಬರು ನೋಡಲಾಗಲಿಲ್ಲ. ಯಾವ ಸ್ಥಳಕ್ಕೂ ಹೋಗಲಿಲ್ಲ. ಆದರೆ ಇಸ್ರೇಲರು ವಾಸಿಸುತ್ತಿದ್ದ ಸ್ಥಳಗಳಲ್ಲಿ ಬೆಳಕಿತ್ತು.
24 ಫರೋಹನು ಮತ್ತೆ ಮೋಶೆಯನ್ನು ಕರೆಸಿ, “ಹೋಗಿ, ಯೆಹೋವನನ್ನು ಆರಾಧಿಸಿರಿ! ನೀವು ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಬಹುದು. ಆದರೆ ನೀವು ನಿಮ್ಮ ಕುರಿಗಳನ್ನು ದನಕರುಗಳನ್ನು ಇಲ್ಲಿಯೇ ಬಿಟ್ಟುಹೋಗಬೇಕು” ಎಂದು ಹೇಳಿದನು.
25 ಮೋಶೆಯು, “ನಾವು ನಮ್ಮ ಕುರಿಗಳನ್ನೂ ದನಕರುಗಳನ್ನೂ ಕಾಣಿಕೆಗಳಿಗಾಗಿ ಮತ್ತು ಯಜ್ಞಗಳಿಗಾಗಿ ತೆಗೆದುಕೊಂಡು ಹೋಗಬೇಕು; ಮಾತ್ರವಲ್ಲದೆ
26 ನಮ್ಮ ಪ್ರಾಣಿಗಳನ್ನೆಲ್ಲಾ ತೆಗೆದುಕೊಂಡು ಹೋಗುವೆವು. ಒಂದನ್ನಾದರೂ ಬಿಟ್ಟುಹೋಗುವುದಿಲ್ಲ; ಯಾವ ಪಶುಗಳನ್ನು ಅರ್ಪಿಸಬೇಕೆಂಬುದು ಅಲ್ಲಿಗೆ ಹೋದಾಗಲೇ ನಮಗೆ ತಿಳಿಯುವುದು. ಆದ್ದರಿಂದ, ನಾವು ಇವುಗಳನ್ನೆಲ್ಲಾ ನಮ್ಮ ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕು” ಎಂದು ಹೇಳಿದನು.
27 ಯೆಹೋವನು ಫರೋಹನ ಹೃದಯವನ್ನು ಮತ್ತೆ ಕಠಿಣಗೊಳಿಸಿದನು. ಆದ್ದರಿಂದ ಫರೋಹನು ಅವರನ್ನು ಕಳುಹಿಸಿಕೊಡಲಿಲ್ಲ.
28 ಫರೋಹನು ಮೋಶೆಗೆ, “ಇಲ್ಲಿಂದ ತೊಲಗಿ ಹೋಗು! ನೀನು ನನ್ನ ಸನ್ನಿಧಿಗೆ ಇನ್ನು ಮೇಲೆ ಬರಕೂಡದು. ನೀನು ಮತ್ತೆ ಬಂದರೆ ನಿನಗೆ ಮರಣದಂಡನೆ ವಿಧಿಸುವೆನು” ಎಂದನು.
29 ಅದಕ್ಕೆ ಮೋಶೆಯು ಫರೋಹನಿಗೆ, “ಸರಿ, ಇನ್ನು ಮೇಲೆ ನಾನು ನಿನ್ನ ಸನ್ನಿಧಿಗೆ ಬರುವುದೇ ಇಲ್ಲ” ಎಂದು ಹೇಳಿದನು.
×

Alert

×