Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Books

Ecclesiastes Chapters

Ecclesiastes 5 Verses

1 ದೇವರನ್ನು ಆರಾಧಿಸಲು ಹೋಗುವಾಗ ಎಚ್ಚರಿಕೆಯಿಂದಿರಿ. ಮೂಢರಂತೆ ಯಜ್ಞಗಳನ್ನು ಅರ್ಪಿಸುವುದಕ್ಕಿಂತ ದೇವರಿಗೆ ಕಿವಿಗೊಡುವುದೇ ಉತ್ತಮ. ಮೂಢರು ದುಷ್ಕೃತ್ಯಗಳನ್ನು ಮಾಡುತ್ತಲೇ ಇರುವರು; ಆದರೆ ಅವರಿಗೆ ಅದು ಗೊತ್ತೇ ಇಲ್ಲ.
2 ದೇವರಿಗೆ ಹರಕೆ ಮಾಡುವಾಗ ಎಚ್ಚರಿಕೆಯಿಂದಿರಿ. ನೀವು ದೇವರೊಂದಿಗೆ ಮಾತಾಡುವಾಗ ಎಚ್ಚರಿಕೆಯಿಂದಿರಿ. ನಿಮ್ಮ ಮನೋದ್ವೇಗಗಳು ನಿಮ್ಮನ್ನು ಮಾತಿನಲ್ಲಿ ದುಡುಕಿಸದಂತೆ ನೋಡಿಕೊಳ್ಳಿ. ದೇವರು ಪರಲೋಕದಲ್ಲಿರುವುದರಿಂದ ಮತ್ತು ನೀವು ಈ ಲೋಕದಲ್ಲಿರುವುದರಿಂದ ನಿಮ್ಮ ಮಾತುಗಳು ಮಿತವಾಗಿರಲಿ. ಈ ನುಡಿ ಸತ್ಯವಾದದ್ದೇ:
3 “ಅನೇಕ ಚಿಂತೆಗಳಿಂದ ದುಸ್ವಪ್ನಗಳಾಗುವಂತೆ ಮೂಢನು ಅನೇಕ ಮಾತುಗಳನ್ನಾಡುವನು.”
4 ನೀವು ಹರಕೆ ಮಾಡಿಕೊಂಡರೆ ತಡಮಾಡದೆ ಅದನ್ನು ನೆರವೇರಿಸಿ. ಮೂಢರ ವಿಷಯದಲ್ಲಿ ದೇವರಿಗೆ ಸಂತೋಷವಿಲ್ಲ. ನೀವು ದೇವರಿಗೆ ಹರಕೆ ಮಾಡಿಕೊಂಡದ್ದನ್ನು ಸಲ್ಲಿಸಿರಿ.
5 ಹರಕೆ ಮಾಡಿ ಸಲ್ಲಿಸದಿರುವುದಕ್ಕಿಂತ ಹರಕೆ ಮಾಡದಿರುವುದೇ ಉತ್ತಮ.
6 ಆದ್ದರಿಂದ ನಿಮ್ಮ ಮಾತುಗಳು ನಿಮ್ಮನ್ನು ಪಾಪಕ್ಕೆ ನಡೆಸದಂತೆ ನೋಡಿಕೊಳ್ಳಿ. “ನಾನು ಅಜಾಗ್ರತೆಯಿಂದ ಹೇಳಿದೆ” ಎಂದು ಯಾಜಕನಿಗೆ ತಿಳಿಸಬೇಡಿ. ಇಲ್ಲವಾದರೆ, ದೇವರು ನಿಮ್ಮ ಮಾತುಗಳಿಗೆ ಕೋಪಗೊಂಡು ನೀವು ದುಡಿದಿರುವುದನ್ನೆಲ್ಲಾ ನಾಶಮಾಡಬಹುದು.
7 ಉಪಯೋಗವಿಲ್ಲದ ನಿಮ್ಮ ಕನಸುಗಳಾಗಲಿ ಜಂಬದ ಮಾತುಗಳಾಗಲಿ ನಿಮ್ಮನ್ನು ಕೇಡಿಗೆ ನಡೆಸದಂತೆ ನೋಡಿಕೊಳ್ಳಿರಿ; ದೇವರಲ್ಲಿ ಭಯಭಕ್ತಿಯುಳ್ಳವರಾಗಿರಿ.
8 ದೇಶದಲ್ಲಿ ಬಡವರಿಂದ ಬಲವಂತ ಸೇವೆಮಾಡಿಸುವುದನ್ನು ಕಂಡು ಅವರಿಗೆ ಅನ್ಯಾಯವಾಗಿದೆಯೆಂದೂ ಹಕ್ಕಿಗೆ ಚ್ಯುತಿಯಾಗಿದೆಯೆಂದೂ ಆಶ್ಚರ್ಯಪಡಬೇಡಿ. ಅವರಿಂದ ಬಲವಂತವಾಗಿ ದುಡಿಸುವ ಅಧಿಪತಿಗೆ ಬಲವಂತದಿಂದ ದುಡಿಸುವ ಮತ್ತೊಬ್ಬ ಅಧಿಪತಿಯಿರುವನು. ಈ ಇಬ್ಬರು ಅಧಿಪತಿಗಳಿಗೂ ಮತ್ತೊಬ್ಬ ಅಧಿಪತಿಯಿರುವನು.
9 ರಾಜನು ಸಹ ಸೇವಕನಾಗಿದ್ದಾನೆ; ಅವನ ದೇಶವು ಅವನನ್ನು ಗಳಿಸಿಕೊಂಡಿದೆ.
10 ಹಣದಾಸೆಯುಳ್ಳವನು ತನ್ನಲ್ಲಿ ಎಷ್ಟೇ ಹಣವಿದ್ದರೂ ತೃಪ್ತನಾಗಲಾರನು. ಐಶ್ವರ್ಯದಾಸೆಯುಳ್ಳವನು ಎಷ್ಟೇ ಸಂಪಾದಿಸಿದರೂ ತೃಪ್ತನಾಗುವುದಿಲ್ಲ. ಇದು ಸಹ ವ್ಯರ್ಥ.
11 ಐಶ್ವರ್ಯ ಹೆಚ್ಚಿದಂತೆಲ್ಲಾ “ಅನುಭವಿಸುವವರ” ಸಂಖ್ಯೆಯೂ ಹೆಚ್ಚುವುದು. ಐಶ್ವರ್ಯವಂತನು ಅದನ್ನು ಕಣ್ಣಿಂದ ನೋಡಬಹುದಷ್ಟೇ ಹೊರತು ಬೇರೆ ಯಾವ ಲಾಭವೂ ಅವನಿಗಿಲ್ಲ.
12 ದಿನವೆಲ್ಲಾ ಪ್ರಯಾಸಪಟ್ಟು ದುಡಿಯುವವನು ಸಮಾಧಾನದಿಂದ ಮಲಗಿಕೊಳ್ಳುವನು. ಅವನಿಗೆ ತಿನ್ನಲು ಸ್ವಲ್ಪವೇ ಇರಲಿ ಅಥವಾ ಹೆಚ್ಚೇ ಇರಲಿ, ಅದು ಮುಖ್ಯವಲ್ಲ. ಐಶ್ವರ್ಯವಂತನಿಗಾದರೊ ತನ್ನ ಸಂಪತ್ತಿನ ಕುರಿತು ಚಿಂತಿಸುತ್ತಾ ನಿದ್ರಿಸಲಾರನು.
13 ಈ ಲೋಕದಲ್ಲಿ ದುರ್ಗತಿಯೊಂದನ್ನು ನೋಡಿದ್ದೇನೆ. ಒಬ್ಬನು ತನ್ನ ಭವಿಷ್ಯತ್ತಿಗಾಗಿ ಹಣವನ್ನು ಕೂಡಿಡುತ್ತಾನೆ.
14 ಬಳಿಕ ಅವನು ಯಾವುದೊ ಕೇಡಿಗೆ ಗುರಿಯಾಗಿ ತನ್ನ ಹಣವನ್ನೆಲ್ಲಾ ಕಳೆದುಕೊಳ್ಳುವನು; ಕೊನೆಯಲ್ಲಿ ತನ್ನ ಮಗನಿಗೆ ಕೊಡಲು ಅವನಲ್ಲಿ ಏನೂ ಉಳಿದಿರುವುದಿಲ್ಲ.
15 ಮನುಷ್ಯನು ತಾಯಿಯ ಗರ್ಭದಿಂದ ಬರಿದಾಗಿ ಈ ಲೋಕಕ್ಕೆ ಬರುವನು; ಸಾಯುವಾಗ ಅದೇ ರೀತಿ ಬರಿದಾಗಿ ಹೋಗುವನು; ತಾನು ಪ್ರಯಾಸಪಟ್ಟು ಸಂಪಾದಿಸಿದವುಗಳಲ್ಲಿ ಒಂದನ್ನೂ ಅವನು ತನ್ನೊಡನೆ ತೆಗೆದುಕೊಂಡು ಹೋಗಲಾರನು.
16 ಅದು ಸಹ ತುಂಬ ದುಃಖಕರ. ಅವನು ಬಂದ ರೀತಿಯಲ್ಲಿಯೇ ಈ ಲೋಕವನ್ನು ಬಿಟ್ಟುಹೋಗುವನು. “ಗಾಳಿಯನ್ನು ಹಿಂದಟ್ಟುವುದರಿಂದ” ಅವನಿಗಾಗುವ ಪ್ರಯೋಜನವೇನು?
17 ಅವನ ಜೀವಮಾನವೆಲ್ಲಾ ವ್ಯಸನದಿಂದಲೂ ದುಃಖದಿಂದಲೂ ಕೂಡಿದೆ. ನಿರಾಶೆಯೂ ಕಾಯಿಲೆಯೂ ಕೋಪವೂ ಅವನನ್ನು ಕಾಡುತ್ತಲೇ ಇರುತ್ತವೆ.
18 ನಾನು ಕಂಡುಕೊಂಡದ್ದೇನಂದರೆ, ಒಬ್ಬನು ತನ್ನ ಅಲ್ಪಕಾಲದ ಜೀವಮಾನದಲ್ಲಿ ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಪ್ರಯಾಸದಲ್ಲಿಯೂ ಸುಖವನ್ನನುಭವಿಸುವುದೇ ಅವನಿಗೆ ಮೇಲು. ಇದೇ ಅವನ ಪಾಲು.
19 ದೇವರು ಒಬ್ಬನಿಗೆ ಐಶ್ವರ್ಯವನ್ನೂ ಆಸ್ತಿಯನ್ನೂ ಮತ್ತು ಅವುಗಳನ್ನು ಅನುಭವಿಸುವ ಭಾಗ್ಯವನ್ನೂ ಕೊಟ್ಟಿದ್ದರೆ ಅವನು ಅವುಗಳನ್ನು ಅನುಭವಿಸಲಿ. ಅವನು ತನಗಿರುವಂಥವುಗಳನ್ನು ಹೊಂದಿಕೊಂಡು ತನ್ನ ದುಡಿಮೆಯಲ್ಲಿ ಸಂತೋಷಿಸಲಿ. ಅದು ದೇವರ ಅನುಗ್ರಹವಷ್ಟೇ.
20 ತನ್ನ ಜೀವಿತವು ಅಲ್ಪಕಾಲದ್ದೆಂದು ಅವನು ನೆನಪು ಮಾಡಿಕೊಳ್ಳಬೇಕು. ಯಾಕೆಂದರೆ ಅವನನ್ನು ಅವನಿಗೆ ಇಷ್ಟವಾದ ಕೆಲಸದಲ್ಲಿ ನಿರತನನ್ನಾಗಿ ಮಾಡಿರುವಾತನು ದೇವರೇ.
×

Alert

×