ಒಬ್ಬನು ಇನ್ನೊಬ್ಬ ಇಸ್ರೇಲನಿಗೆ ಸಾಲಕೊಟ್ಟರೆ ಆ ಸಾಲವನ್ನು ವಜಾಮಾಡಬೇಕು. ತನ್ನ ಸಹೋದರನಾದ ಇಸ್ರೇಲನಿಂದ ಸಾಲ ಹಿಂದೆ ಕೇಳಬಾರದು. ಆ ವರ್ಷದಲ್ಲಿ ಸಾಲವನ್ನೆಲ್ಲಾ ವಜಾ ಮಾಡಬೇಕೆಂಬುದಾಗಿ ದೇವರು ಆದೇಶವನ್ನು ನೀಡಿದ್ದಾನೆ.
ಆತನು ಮಾಡಿದ ವಾಗ್ದಾನದ ಪ್ರಕಾರ ಆಶೀರ್ವದಿಸುವನು. ಆಗ ನಿಮ್ಮಲ್ಲಿ ಬೇರೆ ಜನಾಂಗಗಳಿಗೆ ಸಾಲ ಕೊಡಲು ಯಥೇಚ್ಛವಾಗಿ ಹಣವಿರುವುದು. ನಿಮಗೆ ಬೇರೆಯವರಿಂದ ಹಣ ಸಾಲ ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ನೀವು ಎಷ್ಟೋ ದೇಶಗಳನ್ನು ಆಳುವಿರಿ. ಆದರೆ ಆ ದೇಶಗಳು ನಿಮ್ಮನ್ನು ಆಳವು.
“ಸಾಲ ವಜಾಮಾಡುವ ಏಳನೆಯ ವರ್ಷ ಸಮೀಪವಾಯಿತೆಂದು ನೀವು ಯಾರಿಗೂ ಸಾಲ ಕೊಡದೇ ಸಹಾಯ ಮಾಡದೇ ಇರಬಾರದು. ಅಂಥಾ ದುಷ್ಟ ಆಲೋಚನೆ ನಿಮ್ಮ ಮನಸ್ಸಿನೊಳಗೆ ಹುಟ್ಟದಿರಲಿ. ಸಹಾಯದ ಅಗತ್ಯವಿರುವ ವ್ಯಕ್ತಿಯ ಬಗ್ಗೆ ನಿಮ್ಮಲ್ಲಿ ಯಾವ ಕೆಟ್ಟ ಆಲೋಚನೆಯೂ ಇರಬಾರದು. ನೀವು ಆ ಬಡ ವ್ಯಕ್ತಿಗೆ ಸಹಾಯ ಮಾಡದಿದ್ದರೆ ನಿಮ್ಮ ವಿರುದ್ಧವಾಗಿ ಅವನು ಯೆಹೋವನಿಗೆ ದೂರು ಹೇಳುವನು. ಆಗ ನೀವು ಯೆಹೋವನ ಮುಂದೆ ದೋಷಿಗಳಾಗಿ ಕಂಡುಬರುವಿರಿ.
“ಆ ಬಡ ಮನುಷ್ಯನಿಗೆ ನಿಮ್ಮಿಂದ ಎಷ್ಟು ಸಹಾಯ ಮಾಡಲು ಸಾಧ್ಯವಿದೆಯೋ ಅಷ್ಟು ಸಹಾಯಮಾಡಿ; ಕೊಡುವುದಕ್ಕೆ ಬೇಸರಪಡಬೇಡಿ. ಯಾಕೆಂದರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಒಳ್ಳೆಯ ಕಾರ್ಯಗಳಿಗಾಗಿ ನಿಮ್ಮನ್ನು ಆಶೀರ್ವದಿಸುವನು; ನಿಮ್ಮ ಕೆಲಸವನ್ನೆಲ್ಲಾ ಸಫಲಪಡಿಸುವನು.
“ನೀವು ಹೀಬ್ರೂ ಮನುಷ್ಯನನ್ನೋ ಸ್ತ್ರೀಯನ್ನೋ ನಿಮ್ಮ ಗುಲಾಮರಾಗಿ ಕ್ರಯಕ್ಕೆ ತೆಗೆದುಕೊಳ್ಳಬಹುದು. ಅವರನ್ನು ನಿಮ್ಮ ಗುಲಾಮರಾಗಿ ಆರು ವರ್ಷಗಳ ಕಾಲ ಇಟ್ಟುಕೊಳ್ಳಬಹುದು. ಆದರೆ ಏಳನೆಯ ವರ್ಷದಲ್ಲಿ ನೀವು ಅವರನ್ನು ಸ್ವತಂತ್ರರಾಗಿ ಬಿಟ್ಟುಬಿಡಬೇಕು.
ನೀವು ಅವರಿಗೆ ನಿಮ್ಮ ಪಶುಗಳಲ್ಲಿ ಕೆಲವನ್ನು, ಸ್ವಲ್ಪ ಧಾನ್ಯವನ್ನು ಮತ್ತು ಸ್ವಲ್ಪ ದ್ರಾಕ್ಷಾರಸವನ್ನು ಕೊಡಬೇಕು. ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಆಶೀರ್ವದಿಸಿ ನಿಮಗೆ ಹೇರಳವಾಗಿ ಅನುಗ್ರಹಿಸಿದ್ದಾನೆ. ಆದ್ದರಿಂದ ನಿಮ್ಮ ಗುಲಾಮರಿಗೆ ಒಳ್ಳೆಯವುಗಳನ್ನು ಹೇರಳವಾಗಿ ಕೊಡಿರಿ.
“ಆದರೆ ನಿಮ್ಮ ಗುಲಾಮರಲ್ಲಿ ಒಬ್ಬನು, ‘ನಾನು ನಿಮ್ಮನ್ನು ಬಿಟ್ಟುಹೋಗುವುದಿಲ್ಲ’ ಎಂದು ಹೇಳಿದರೆ, ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಅವನು ಪ್ರೀತಿಸುವುದರಿಂದ ಮತ್ತು ನಿಮ್ಮೊಂದಿಗೆ ಒಳ್ಳೆಯ ಜೀವಿತವನ್ನು ಅವನು ಅನುಭವಿಸಿದ್ದರಿಂದ ಅವನು ನಿಮ್ಮೊಂದಿಗೆ ಇರಲು ಇಷ್ಟಪಟ್ಟರೆ,
ಅವನನ್ನು ನಿಮ್ಮ ಬಾಗಿಲಿನ ನಿಲುವು ಕಂಬದ ಬಳಿಯಲ್ಲಿ ನಿಲ್ಲಿಸಿ ಅವನ ಕಿವಿಯನ್ನು ಒಂದು ಹರಿತವಾದ ಸಾಧನದಿಂದ ರಂಧ್ರ ಮಾಡಬೇಕು. ಇದು, ಅವನು ನಿಮ್ಮ ಶಾಶ್ವತ ಗುಲಾಮನು ಎಂದು ತೋರಿಸುವುದು. ಗುಲಾಮಳಿಗೂ ಇದು ಅನ್ವಯಿಸುತ್ತದೆ.
“ನಿಮ್ಮ ಗುಲಾಮರನ್ನು ಸ್ವತಂತ್ರರಾಗಿ ಬಿಡಬೇಕಲ್ಲಾ ಎಂದು ಬೇಸರಪಡಬೇಡಿ. ಅವರು ಅರ್ಧಕೂಲಿ ತೆಗೆದುಕೊಂಡು ಆರು ವರ್ಷ ನಿಮ್ಮ ಸೇವೆ ಮಾಡಿದ್ದಾರಲ್ಲಾ? ನಿಮ್ಮ ಕಾರ್ಯಗಳನ್ನೆಲ್ಲಾ ನಿಮ್ಮ ದೇವರಾದ ಯೆಹೋವನು ಸಫಲಪಡಿಸುವನು.
“ನಿಮ್ಮ ಹಿಂಡಿನಲ್ಲಾಗಲಿ ಹಟ್ಟಿಯಲ್ಲಾಗಲಿ ಚೊಚ್ಚಲ ಮರಿಗಳು ನನಗೆ ವಿಶೇಷವಾದವುಗಳು. ನೀವು ಅವುಗಳನ್ನು ಯೆಹೋವನಿಗೆ ಸಮರ್ಪಿಸಬೇಕು. ಅಂಥಾ ಪ್ರಾಣಿಗಳನ್ನು ನಿಮ್ಮ ಕೆಲಸಕಾರ್ಯಗಳಿಗಾಗಿ ಉಪಯೋಗಿಸಕೂಡದು. ಮತ್ತು ಅಂಥಾ ಕುರಿಮರಿಗಳ ಉಣ್ಣೆಯನ್ನು ಕತ್ತರಿಸಬಾರದು.
ಅವುಗಳನ್ನು ನಿಮ್ಮ ಮನೆಗಳಲ್ಲಿಯೇ ಬೇಕಾದರೆ ತಿನ್ನಬಹುದು. ಅದನ್ನು ಯಾರು ಬೇಕಾದರೂ ಅಂದರೆ ಶುದ್ಧರೂ ಅಶುದ್ಧರೂ ತಿನ್ನಬಹುದು. ಜಿಂಕೆಯನ್ನು, ಟಗರನ್ನು ತಿನ್ನಲು ಯಾವ ನಿಯಮಗಳು ಇವೆಯೋ, ಅದೇ ನಿಯಮಗಳು ಇದಕ್ಕೂ ಅನ್ವಯಿಸುತ್ತವೆ.