“ಆಗ ಯೆಹೋವನು ನನಗೆ, ‘ಮೊದಲಿನ ಎರಡು ಕಲ್ಲಿನ ಹಲಗೆಗಳಂತೆಯೇ ಎರಡು ಕಲ್ಲಿನ ಹಲಗೆಗಳನ್ನು ಮಾಡು. ಆಮೇಲೆ ಬೆಟ್ಟದ ಮೇಲೆ ನನ್ನ ಬಳಿಗೆ ಬಾ. ಅಲ್ಲದೆ ಒಂದು ಮರದ ಪೆಟ್ಟಿಗೆಯನ್ನೂ ತಯಾರು ಮಾಡು.
ನೀನು ಒಡೆದುಹಾಕಿದ ಮೊದಲಿನ ಕಲ್ಲು ಹಲಗೆಗಳ ಮೇಲೆ ಯಾವ ಪದಗಳನ್ನು ಬರೆದಿದ್ದೆನೋ ಅದೇ ಪದಗಳನ್ನು ಈ ಕಲ್ಲಿನ ಹಲಗೆಗಳ ಮೇಲೆ ಬರೆಯುತ್ತೇನೆ. ಈ ಹೊಸ ಕಲ್ಲಿನ ಹಲಗೆಗಳನ್ನು ನೀನು ಮರದ ಪೆಟ್ಟಿಗೆಯಲ್ಲಿಡಬೇಕು’ ಎಂದು ಹೇಳಿದನು.
(ಇಸ್ರೇಲರು ಯಾಕಾನ್ಯರ ಬಾವಿಗಳ ಬಳಿಯಿಂದ ಪ್ರಯಾಣ ಮಾಡಿ ಮೋಸೇರಕ್ಕೆ ಬಂದರು. ಆರೋನನು ಸತ್ತುಹೋದದ್ದು ಮತ್ತು ಅವನ ಶವವನ್ನು ಹೂಳಿಟ್ಟದ್ದು ಅಲ್ಲಿಯೇ. ಆರೋನನ ಬದಲಿಗೆ ಅವನ ಮಗನಾದ ಎಲ್ಲಾಜಾರನು ಯಾಜಕನಾದನು.
ಆ ಸಮಯದಲ್ಲಿ ಯೆಹೋವನು ಲೇವಿಕುಲದವರನ್ನು ಒಂದು ವಿಶೇಷವಾದ ಕೆಲಸಕ್ಕಾಗಿ ಬೇರೆ ಕುಲಗಳವರಿಂದ ಪ್ರತ್ಯೇಕಿಸಿದನು. ಅವರಿಗೆ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಎತ್ತಿಕೊಂಡು ಹೋಗುವ ಕೆಲಸ ಕೊಡಲ್ಪಟ್ಟಿತು. ಯೆಹೋವನ ಸನ್ನಿಧಾನದಲ್ಲಿ ಅವರು ಯಾಜಕರ ಕೆಲಸವನ್ನು ಮಾಡಿದರು. ಅಲ್ಲದೆ ಯೆಹೋವನ ಜನರಿಗೆ ದೇವರ ಆಶೀರ್ವಾದ ವಚನಗಳನ್ನು ಹೇಳುವ ಕೆಲಸವನ್ನು ಅವರು ಮಾಡಿದರು.
“ಇಸ್ರೇಲ್ ಜನರೇ, ಕೇಳಿರಿ! ನಿಮ್ಮ ದೇವರಾದ ಯೆಹೋವನು ನಿಮ್ಮಿಂದ ನಿಜವಾಗಿಯೂ ಅಪೇಕ್ಷಿಸುವುದೇನು? ನೀವು ಆತನನ್ನು ಗೌರವಿಸಬೇಕೆಂದೂ ಆತನ ಆಜ್ಞಾವಿಧಿಗಳಿಗೆ ವಿಧೇಯರಾಗಬೇಕೆಂದೂ ಅಪೇಕ್ಷಿಸುತ್ತಾನೆ. ನೀವು ಆತನನ್ನು ಪ್ರೀತಿಸಿ, ನಿಮ್ಮ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಆತನ ಸೇವೆ ಮಾಡಬೇಕೆಂದು ಆತನು ಅಪೇಕ್ಷಿಸುತ್ತಾನೆ.
ಯೆಹೋವನು ನಿಮ್ಮ ಪೂರ್ವಿಕರನ್ನು ಎಷ್ಟು ಪ್ರೀತಿಮಾಡಿದ್ದನೆಂದರೆ, ಅವರ ಸಂತಾನದವರಾದ ನಿಮ್ಮನ್ನು ತನ್ನ ಜನರನ್ನಾಗಿ ಆರಿಸಿಕೊಳ್ಳುವಷ್ಟು ಪ್ರೀತಿಸಿದನು; ಬೇರೆ ಜನಾಂಗದವರ ಬದಲಾಗಿ ನಿಮ್ಮನ್ನೇ ಆರಿಸಿಕೊಂಡನು. ನೀವು ಇಂದಿಗೂ ಆತನಿಂದ ಆರಿಸಲ್ಪಟ್ಟ ಜನರಾಗಿದ್ದೀರಿ.
ಯಾಕೆಂದರೆ ಯೆಹೋವನೇ ನಿಮ್ಮ ದೇವರು. ಆತನು ದೇವರುಗಳ ದೇವರೂ ಪ್ರಭುಗಳ ಪ್ರಭುವೂ ಆಗಿದ್ದಾನೆ. ಆತನು ಮಹಾದೇವರೂ ಆಶ್ಚರ್ಯಕಾರನೂ ಪರಾಕ್ರಮಶಾಲಿಯೂ ಭಯಂಕರನೂ ಆಗಿದ್ದಾನೆ. ಆತನಿಗೆ ಎಲ್ಲಾ ಜನರೂ ಒಂದೇ. ಆತನು ತನ್ನ ತೀರ್ಮಾನವನ್ನು ಬದಲಾಯಿಸಲು ಲಂಚ ಸ್ವೀಕರಿಸುವವನಲ್ಲ.
ನಿಮ್ಮ ಪೂರ್ವಿಕರು ಈಜಿಪ್ಟಿಗೆ ಹೋದಾಗ ಅವರಲ್ಲಿ ಕೇವಲ ಎಪ್ಪತ್ತು ಮಂದಿ ಮಾತ್ರ ಇದ್ದರು. ಆದರೆ ನಿಮ್ಮ ದೇವರಾದ ಯೆಹೋವನು ಆಕಾಶದಲ್ಲಿರುವ ನಕ್ಷತ್ರಗಳಂತೆ ನಿಮ್ಮನ್ನು ಅನೇಕಾನೇಕ ಜನರನ್ನಾಗಿ ಮಾಡಿದ್ದಾನೆ.