ಫೆಸ್ತನು ಇನ್ನೂ ಎಂಟು-ಹತ್ತು ದಿನಗಳವರೆಗೆ ಜೆರುಸಲೇಮಿನಲ್ಲಿ ಇದ್ದನು. ಬಳಿಕ ಅವನು ಸೆಜರೇಯಕ್ಕೆ ಹಿಂತಿರುಗಿದನು. ಮರುದಿನ ಅವನು ಸೈನಿಕರಿಗೆ ಪೌಲನನ್ನು ತನ್ನ ಮುಂದೆ ಕರೆದುಕೊಂಡು ಬರಬೇಕೆಂದು ತಿಳಿಸಿದನು. ಫೆಸ್ತನು ನ್ಯಾಯಾಸ್ಥಾನದ ಮೇಲೆ ಕುಳಿತುಕೊಂಡಿದ್ದನು.
ಪೌಲನು ನ್ಯಾಯಾಲಯದೊಳಗೆ ಬಂದನು. ಜೆರುಸಲೇಮಿನಿಂದ ಬಂದಿದ್ದ ಯೆಹೂದ್ಯರು ಅವನ ಸುತ್ತಲೂ ನಿಂತುಕೊಂಡು ಅವನ ಮೇಲೆ ಅನೇಕ ದೋಷಾರೋಪಗಳನ್ನು ಮಾಡಿದರು. ಆದರೆ ಅವುಗಳಲ್ಲಿ ಯಾವುದಕ್ಕೂ ಆಧಾರವಿರಲಿಲ್ಲ.
ಆದರೆ ಫೆಸ್ತನು ಯೆಹೂದ್ಯರ ಮೆಚ್ಚಿಕೆ ಗಳಿಸಿಕೊಳ್ಳಬೇಕೆಂದಿದ್ದನು. ಆದ್ದರಿಂದ ಅವನು ಪೌಲನಿಗೆ, “ನೀನು ಜೆರುಸಲೇಮಿಗೆ ಹೋಗಬಯಸುವೆಯಾ? ಈ ದೋಷಾರೋಪಣೆಗಳ ಕುರಿತು ನಾನು ಅಲ್ಲಿಯೇ ನಿನಗೆ ತೀರ್ಪು ಮಾಡಬೇಕೆಂದು ಅಪೇಕ್ಷಿಸುವಿಯಾ?” ಎಂದು ಕೇಳಿದನು.
(10-11) ಪೌಲನು, “ಈಗ ನಾನು ಸೀಸರನ ನ್ಯಾಯಾಸ್ಥಾನದ ಮುಂದೆ ನಿಂತಿದ್ದೇನೆ. ನನಗೆ ತೀರ್ಪಾಗಬೇಕಾದದ್ದು ಇಲ್ಲಿಯೇ! ನಾನು ಯೆಹೂದ್ಯರಿಗೆ ಯಾವ ಅಪರಾಧವನ್ನೂ ಮಾಡಿಲ್ಲ. ಇದು ಸತ್ಯವೆಂದು ನಿನಗೆ ಗೊತ್ತಿದೆ. ನಾನು ಅಪರಾಧಿಯಾಗಿದ್ದು ಧರ್ಮಶಾಸ್ತ್ರವು ನನಗೆ ಮರಣದಂಡನೆ ವಿಧಿಸಿದರೆ, ನಾನು ಆ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಇವರ ದೋಷಾರೋಪಣೆಗಳು ಸತ್ಯವಾಗಿಲ್ಲದಿದ್ದರೆ, ನನ್ನನ್ನು ಇವರ ಕೈಗೆ ಒಪ್ಪಿಸಲು ಯಾರಿಗೂ ಸಾಧ್ಯವಿಲ್ಲ! ನನ್ನ ವಿಷಯವನ್ನು ಸೀಸರನೇ ಪರಿಶೀಲಿಸಲಿ!” ಎಂದನು.
ಫೆಸ್ತನು ತನ್ನ ಸಲಹೆಗಾರರೊಂದಿಗೆ ಇದರ ಬಗ್ಗೆ ಮಾತಾಡಿದನು. ಬಳಿಕ ಅವನು, “ನನ್ನ ವಿಷಯವನ್ನು ಸೀಸರನೇ ಪರಿಶೀಲಿಸಲಿ ಎಂದು ನೀನು ಕೇಳಿಕೊಂಡದ್ದರಿಂದ ನಿನ್ನನ್ನು ಸೀಸರನ ಬಳಿಗೇ ಕಳುಹಿಸಿಕೊಡುತ್ತೇನೆ” ಎಂದನು.
ನಾನು ಜೆರುಸಲೇಮಿಗೆ ಹೋಗಿದ್ದಾಗ ಮಹಾಯಾಜಕರು ಮತ್ತು ಯೆಹೂದ್ಯ ಹಿರಿಯ ನಾಯಕರು ಅವನಿಗೆ ವಿರೋಧವಾಗಿ ದೋಷಾರೋಪಣೆ ಮಾಡಿದರು. ನಾನು ಅವನಿಗೆ ಮರಣದಂಡನೆ ವಿಧಿಸಬೇಕೆಂಬುದು ಈ ಯೆಹೂದ್ಯರ ಅಪೇಕ್ಷೆಯಾಗಿತ್ತು.
ಆದರೆ ನಾನು, ‘ದೋಷಾರೋಪಣೆ ಹೊರಿಸಲ್ಪಟ್ಟಿರುವ ವ್ಯಕ್ತಿಯನ್ನು ತೀರ್ಪಿಗಾಗಿ ಬೇರೆಯವರಿಗೆ ಒಪ್ಪಿಸುವುದು ರೋಮ್ನವರ ಪದ್ಧತಿಯಲ್ಲ. ಮೊದಲನೆಯದಾಗಿ, ಅವನು ತನ್ನ ಮೇಲೆ ದೋಷಾರೋಪಣೆ ಮಾಡುತ್ತಿರವವರನ್ನು ಮುಖಾಮುಖಿಯಾಗಿ ಸಂಧಿಸಿ ಅವರ ದೋಷಾರೋಪಣೆಗಳಿಗೆ ವಿರೋಧವಾಗಿ ತನ್ನನ್ನು ಪ್ರತಿಪಾದಿಸಿಕೊಳ್ಳಲು ಅವಕಾಶ ಕೊಡಲೇಬೇಕು’ ಎಂದು ಹೇಳಿದೆನು.
ಅವರು ಹೇಳಿದ ಸಂಗತಿಗಳು ಅವರ ಸ್ವಂತ ಧರ್ಮಕ್ಕೆ ಸಂಬಂಧಪಟ್ಟಿದ್ದವು ಮತ್ತು ಯೇಸು ಎಂಬ ವ್ಯಕ್ತಿಯನ್ನು ಕುರಿತದ್ದಾಗಿದ್ದವು. ಸತ್ತುಹೋದ ಯೇಸು ಈಗ ಜೀವಂತವಾಗಿದ್ದಾನೆಂದು ಪೌಲನು ಹೇಳಿದನು.
ಈ ಸಂಗತಿಗಳ ಬಗ್ಗೆ ನನಗೆ ಹೆಚ್ಚಿಗೆ ತಿಳಿದಿರಲಿಲ್ಲ. ಆದ್ದರಿಂದ ನಾನು ಪ್ರಶ್ನೆಗಳನ್ನು ಕೇಳಲಿಲ್ಲ. ಆದರೆ ನಾನು ಪೌಲನಿಗೆ, ‘ನೀನು ಜೆರುಸಲೇಮಿಗೆ ಹೋಗಿ ಅಲ್ಲೇ ನ್ಯಾಯತೀರ್ಪು ಹೊಂದಲು ಬಯಸುವೆಯಾ?’ ಎಂದು ಕೇಳಿದೆನು.
ಅದಕ್ಕೆ ಅವನು, ‘ಚಕ್ರವರ್ತಿಯೇ (ಸೀಸರನೇ) ನನ್ನ ವಾದವನ್ನು ತೀರ್ಮಾನಿಸಲಿ. ಅಲ್ಲಿಯವರೆಗೆ ನನ್ನನ್ನು ಸಂರಕ್ಷಿಸಬೇಕು’ ಎಂದು ಕೇಳಿಕೊಂಡನು. ಆದ್ದರಿಂದ ರೋಮಿನಲ್ಲಿರುವ ಚಕ್ರವರ್ತಿಯ ಬಳಿಗೆ ಕಳುಹಿಸುವ ತನಕ ಅವನನ್ನು ಕಾವಲಿನಲ್ಲಿರಿಸಬೇಕೆಂದು ಆಜ್ಞಾಪಿಸಿದೆನು.”
ಮರುದಿನ ಅಗ್ರಿಪ್ಪ ರಾಜ ಮತ್ತು ಬೆರ್ನಿಕೆ ರಾಣಿ ವೈಭವದ ಬಟ್ಟೆಗಳನ್ನು ಧರಿಸಿಕೊಂಡು ಸೇನಾಧಿಕಾರಿಗಳೊಡನೆ ಹಾಗೂ ಸೆಜರೇಯದ ಪ್ರಮುಖರೊಡನೆ ನ್ಯಾಯಾಲಯದೊಳಗೆ ಬಂದರು. ಪೌಲನನ್ನು ಒಳಗೆ ಕರೆದುಕೊಂಡು ಬರಬೇಕೆಂದು ಫೆಸ್ತನು ಸೈನಿಕರಿಗೆ ಆಜ್ಞಾಪಿಸಿದನು.
ಫೆಸ್ತನು ಹೀಗೆಂದನು: “ರಾಜ ಅಗ್ರಿಪ್ಪನೇ, ನಮ್ಮೊಂದಿಗೆ ಇಲ್ಲಿ ನೆರೆದಿರುವ ಎಲ್ಲಾ ಜನರೇ, ನೀವು ನೋಡುತ್ತಿರುವ ಈ ಮನುಷ್ಯನ (ಪೌಲನ) ಮೇಲೆ ಇಲ್ಲಿರುವ ಮತ್ತು ಜೆರುಸಲೇಮಿನಲ್ಲಿರುವ ಎಲ್ಲಾ ಯೆಹೂದ್ಯರು ನನಗೆ ದೂರುಗಳನ್ನು ಹೇಳಿ, ಇವನಿಗೆ ಮರಣದಂಡನೆ ಆಗಬೇಕೆಂದು ಆರ್ಭಟಿಸಿದರು.
ನಾನು ಇವನನ್ನು ವಿಚಾರಣೆ ಮಾಡಿದಾಗ ಇವನಲ್ಲಿ ನನಗೆ ಯಾವ ತಪ್ಪೂ ಕಾಣಲಿಲ್ಲ. ಆದರೆ ಸೀಸರನಿಂದಲೇ ತನಗೆ ನ್ಯಾಯತೀರ್ಪಾಗಬೇಕೆಂದು ಇವನು ಕೇಳಿಕೊಂಡಿದ್ದಾನೆ. ಆದ್ದರಿಂದ ಇವನನ್ನು ರೋಮಿಗೆ ಕಳುಹಿಸಲು ನಾನು ತೀರ್ಮಾನಿಸಿದೆ.
ಆದರೆ ಇವನ ವಿಷಯದಲ್ಲಿ ಸೀಸರನಿಗೆ ಬರೆಯಲು ನಿರ್ದಿಷ್ಟವಾದ ಅಪರಾಧವೇನೂ ನನಗೆ ತೋರುತ್ತಿಲ್ಲ. ಆದ್ದರಿಂದ ನಾನು ಇವನನ್ನು ನಿಮ್ಮೆಲ್ಲರ ಮುಂದೆಯೂ ವಿಶೇಷವಾಗಿ ರಾಜನಾದ ಅಗ್ರಿಪ್ಪನ ಮುಂದೆಯೂ ತಂದಿದ್ದೇನೆ. ಆದ್ದರಿಂದ ನೀವು ಇವನನ್ನು ಪ್ರಶ್ನಿಸಿ ಇವನ ಬಗ್ಗೆ ಸೀಸರನಿಗೆ ಬರೆಯಲು ಏನಾದರೂ ವಿಷಯವುನ್ನು ಕೊಡಬಲ್ಲಿರೆಂದು ನಿರೀಕ್ಷಿಸುತ್ತೇನೆ.