English Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Assamese

Books

Acts Chapters

Acts 18 Verses

1 ತರುವಾಯ ಪೌಲನು ಅಥೆನ್ಸನ್ನು ಬಿಟ್ಟು ಕೊರಿಂಥ ಪಟ್ಟಣಕ್ಕೆ ಹೋದನು.
2 ಕೊರಿಂಥದಲ್ಲಿ ಪೌಲನು ಅಕ್ವಿಲ ಎಂಬ ಯೆಹೂದ್ಯನನ್ನು ಕಂಡನು. ಅಕ್ವಿಲನು ಪೊಂತ ಎಂಬ ನಾಡಿನವನು. ಆದರೆ ಅಕ್ವಿಲ ಮತ್ತು ಅವನ ಹೆಂಡತಿ ಪ್ರಿಸ್ಕಿಲ್ಲ ಇಟಲಿಯಿಂದ ಕೊರಿಂಥಕ್ಕೆ ಇತ್ತೀಚಿಗೆ ಬಂದಿದ್ದರು. ಎಲ್ಲಾ ಯೆಹೂದ್ಯರು ರೋಮನ್ನು ಬಿಟ್ಟುಹೋಗಬೇಕೆಂದು ಕ್ಲಾಡಿಯಸನು [*ಕ್ಲಾಡಿಯಸ್ ರೋಮ್ ಚಕ್ರವರ್ತಿ.] ಆಜ್ಞಾಪಿಸಿದ್ದರಿಂದ ಅವರು ಇಟಲಿಯನ್ನು ಬಿಟ್ಟುಬಂದಿದ್ದರು. ಪೌಲನು ಅಕ್ವಿಲ ಮತ್ತು ಪ್ರಿಸ್ಕಿಲ್ಲರನ್ನು ಭೇಟಿಯಾಗಲು ಹೋದನು.
3 ಅವರು ಪೌಲನಂತೆ ಗುಡಾರ ತಯಾರಕರಾಗಿದ್ದರು. ಪೌಲನು ಅವರಲ್ಲೇ ತಂಗಿದ್ದು, ಅವರೊಂದಿಗೆ ಕೆಲಸ ಮಾಡುತ್ತಿದ್ದನು.
4 ಪ್ರತಿ ಸಬ್ಬತ್‌ದಿನದಂದು ಪೌಲನು ಸಭಾಮಂದಿರದಲ್ಲಿ ಯೆಹೂದ್ಯರೊಂದಿಗೂ ಗ್ರೀಕರೊಂದಿಗೂ ಚರ್ಚಿಸುತ್ತಾ ಯೇಸುವಿನಲ್ಲಿ ನಂಬಿಕೆ ಇಡುವಂತೆ ಅವರನ್ನು ಪ್ರೋತ್ಸಾಹಿಸಿದನು.
5 ಕೊರಿಂಥದಲ್ಲಿದ್ದ ಪೌಲನ ಬಳಿಗೆ ಸೀಲ ತಿಮೊಥೆಯರು ಮಕೆದೋನಿಯದಿಂದ ಬಂದರು. ಅನಂತರ, ಜನರಿಗೆ ಸುವಾರ್ತೆಯನ್ನು ತಿಳಿಸುವುದರಲ್ಲೇ ಪೌಲನು ತನ್ನ ಸಮಯವನ್ನೆಲ್ಲ ಕಳೆದನು. ಯೇಸುವೇ ಕ್ರಿಸ್ತನೆಂಬುದನ್ನು ಅವನು ಯೆಹೂದ್ಯರಿಗೆ ತೋರಿಸಿಕೊಟ್ಟನು.
6 ಆದರೆ ಯೆಹೂದ್ಯರು ಪೌಲನ ಉಪದೇಶವನ್ನು ತಿರಸ್ಕರಿಸಿ ದೂಷಣೆ ಮಾಡಿದರು. ಆದ್ದರಿಂದ ಪೌಲನು ತನ್ನ ಬಟ್ಟೆಗಳ ಧೂಳನ್ನು ಝಾಡಿಸಿ ಯೆಹೂದ್ಯರಿಗೆ, “ನೀವು ರಕ್ಷಣೆ ಹೊಂದದಿದ್ದರೆ, ಅದು ನಿಮ್ಮ ಸ್ವಂತ ತಪ್ಪು. ನನ್ನಿಂದ ಸಾಧ್ಯವಾದದ್ದನ್ನೆಲ್ಲ ನಾನು ಮಾಡಿದ್ದೇನೆ. ಇನ್ನು ಮೇಲೆ ನಾನು ಯೆಹೂದ್ಯರಲ್ಲದ ಜನರ ಬಳಿಗೆ ಹೋಗುತ್ತೇನೆ!” ಎಂದು ಹೇಳಿದನು.
7 ಪೌಲನು ಸಭಾಮಂದಿರವನ್ನು ಬಿಟ್ಟು ತೀತಯುಸ್ತ ಎಂಬುವನ ಮನೆಗೆ ಹೋದನು. ಈ ಮನುಷ್ಯನು ನಿಜದೇವರನ್ನು ಆರಾಧಿಸುತ್ತಿದ್ದನು. ಇವನ ಮನೆ ಸಭಾಮಂದಿರದ ಪಕ್ಕದಲ್ಲಿತ್ತು.
8 ಕ್ರಿಸ್ಪನು ಸಭಾಮಂದಿರದ ಅಧ್ಯಕ್ಷನಾಗಿದ್ದನು. ಕ್ರಿಸ್ಪನು ಮತ್ತು ಅವನ ಮನೆಯಲ್ಲಿ ವಾಸವಾಗಿದ್ದ ಎಲ್ಲಾ ಜನರು ಪ್ರಭುವಿನಲ್ಲಿ ನಂಬಿಕೆಯಿಟ್ಟರು. ಕೊರಿಂಥದಲ್ಲಿ ಇತರ ಅನೇಕ ಜನರು ಪೌಲನಿಗೆ ಕಿವಿಗೊಟ್ಟರು ಮತ್ತು ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡರು.
9 ಒಂದು ರಾತ್ರಿ ಪೌಲನಿಗೆ ದರ್ಶನವಾಯಿತು. ಪ್ರಭುವು ಅವನಿಗೆ, “ಭಯಪಡಬೇಡ! ಜನರಿಗೆ ಬೋಧಿಸುತ್ತಲೇ ಇರು, ನಿಲ್ಲಿಸಬೇಡ!
10 ನಾನು ನಿನ್ನೊಂದಿಗಿದ್ದೇನೆ. ನಿನಗೆ ಕೇಡುಮಾಡಲು ಯಾರಿಗೂ ಸಾಧ್ಯವಿಲ್ಲ. ನನ್ನ ಅನೇಕ ಜನರು ಈ ಪಟ್ಟಣದಲ್ಲಿ ಇದ್ದಾರೆ” ಎಂದು ಹೇಳಿದನು.
11 ಪೌಲನು ದೇವರ ಸತ್ಯವನ್ನು ಜನರಿಗೆ ಉಪದೇಶಿಸುತ್ತಾ ಅಲ್ಲಿ ಒಂದೂವರೆ ವರ್ಷದವರೆಗೆ ಇದ್ದನು.
12 ಅಖಾಯ ನಾಡಿಗೆ ಗಲ್ಲಿಯೋನನು ರಾಜ್ಯಪಾಲನಾದಾಗ ಕೆಲವು ಯೆಹೂದ್ಯರು ಪೌಲನಿಗೆ ವಿರೋಧವಾಗಿ ಸೇರಿಬಂದರು. ಅವರು ಪೌಲನನ್ನು ನ್ಯಾಯಾಲಯಕ್ಕೆ ಕರದೊಯ್ದು,
13 ರಾಜ್ಯಪಾಲನಿಗೆ, “ನಮ್ಮ ಧರ್ಮಶಾಸ್ತ್ರಕ್ಕೆ ವಿರುದ್ಧವಾದ ರೀತಿಯಲ್ಲಿ ದೇವರನ್ನು ಆರಾಧಿಸಬೇಕೆಂದು ಇವನು ಜನರಿಗೆ ಉಪದೇಶಿಸುತ್ತಿದ್ದಾನೆ!” ಎಂದು ಹೇಳಿದರು.
14 ಪೌಲನು ಮಾತಾಡುವುದಕ್ಕೆ ಸಿದ್ಧನಾಗಿದ್ದನು. ಆದರೆ ಗಲ್ಲಿಯೋನ ಯೆಹೂದ್ಯರಿಗೆ, “ಯೆಹೂದ್ಯರೇ, ಅಪರಾಧವಾಗಲಿ ದುಷ್ಕೃತ್ಯವಾಗಲಿ ನಡೆದಿದ್ದರೆ ನಾನು ನಿಮ್ಮ ದೂರು ಕೇಳುತ್ತಿದ್ದೆನು.
15 ನಿಮ್ಮ ಅಪವಾದಗಳು ಕೇವಲ ಪದಗಳಿಗೂ ಹೆಸರುಗಳಿಗೂ ಮತ್ತು ನಿಮ್ಮ ಸ್ವಂತ ಧರ್ಮಶಾಸ್ತ್ರಕ್ಕೂ ಸಂಬಂಧಪಟ್ಟಿವೆ. ಆದ್ದರಿಂದ ನೀವೇ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಈ ಸಂಗತಿಗಳಿಗೆ ನ್ಯಾಯಾಧೀಶನಾಗಿರಲು ನನಗೆ ಇಷ್ಟವಿಲ್ಲ!” ಎಂದು ಹೇಳಿ,
16 ಅವರನ್ನು ನ್ಯಾಯಾಲಯದಿಂದ ಹೊರಡಿಸಿದನು.
17 ಬಳಿಕ ಅವರೆಲ್ಲರೂ ಸೋಸ್ಥೆನನನ್ನು ಹಿಡಿದುಕೊಂಡು ನ್ಯಾಯಾಲಯದ ಮುಂದೆಯೇ ಹೊಡೆದರು. (ಸೋಸ್ಥೆನನು ಆಗ ಸಭಾಮಂದಿರದ ಅಧ್ಯಕ್ಷನಾಗಿದ್ದನು.) ಆದರೆ ಗಲ್ಲಿಯೋನ ಅದನ್ನು ತನ್ನ ಗಮನಕ್ಕೆ ತೆಗೆದುಕೊಳ್ಳಲಿಲ್ಲ.
18 ಪೌಲನು ಅನೇಕ ದಿನಗಳವರೆಗೆ ಸಹೋದರರೊಂದಿಗೆ ಇದ್ದನು. ಬಳಿಕ ಅವನು ಅಲ್ಲಿಂದ ಸಿರಿಯಕ್ಕೆ ನೌಕಾಯಾನ ಮಾಡಿದನು. ಪ್ರಿಸ್ಕಿಲ್ಲ ಮತ್ತು ಅಕ್ವಿಲ ಸಹ ಅವನೊಂದಿಗಿದ್ದರು. ಕೆಂಖ್ರೆ ಎಂಬ ಸ್ಥಳದಲ್ಲಿ ಪೌಲನು ತನ್ನ ತಲೆಕೂದಲನ್ನು ಕತ್ತರಿಸಿಕೊಂಡನು. ಅವನು ದೇವರಿಗೆ ಹರಕೆಯನ್ನು ಮಾಡಿಕೊಂಡಿದ್ದನೆಂಬುದನ್ನು ಅದು ಸೂಚಿಸುತ್ತಿತ್ತು.
19 ಬಳಿಕ ಅವರು ಎಫೆಸ ಪಟ್ಟಣಕ್ಕೆ ಹೋದರು. ಪ್ರಿಸ್ಕಿಲ್ಲ ಮತ್ತು ಅಕ್ವಿಲರನ್ನು ಪೌಲನು ಬಿಟ್ಟಿಹೋದದ್ದು ಇಲ್ಲಿಯೇ. ಪೌಲನು ಎಫೆಸದಲ್ಲಿದ್ದಾಗ ಸಭಾಮಂದಿರಕ್ಕೆ ಹೋಗಿ ಯೆಹೂದ್ಯರೊಂದಿಗೆ ಚರ್ಚಿಸಿದನು.
20 ಆ ಯೆಹೂದ್ಯರು ಇನ್ನೂ ಸ್ವಲ್ಪಕಾಲ ಇರಬೇಕೆಂದು ಪೌಲನನ್ನು ಕೇಳಿಕೊಂಡರು. ಆದರೆ ಅವನು ಒಪ್ಪಲಿಲ್ಲ.
21 ಪೌಲನು ಅವರಿಗೆ, “ದೇವರು ಬಯಸುವುದಾದರೆ, ನಾನು ನಿಮ್ಮ ಬಳಿಗೆ ಮತ್ತೆ ಬರುತ್ತೇನೆ” ಎಂದು ಹೇಳಿ ಅಲ್ಲಿಂದ ಹೊರಟನು. ಹೀಗೆ ಪೌಲನು ಎಫೆಸದಿಂದ ನೌಕಾಯಾನ ಮಾಡಿದನು.
22 ಪೌಲನು ಸೆಜರೇಯ ಪಟ್ಟಣಕ್ಕೆ ಹೋದನು. ಅಲ್ಲಿಂದ ಜೆರುಸಲೇಮಿಗೆ ಹೋಗಿ ಸಭೆಯವರನ್ನು ವಂದಿಸಿದನು. ಅನಂತರ ಪೌಲನು ಅಂತಿಯೋಕ್ಯ ಪಟ್ಟಣಕ್ಕೆ ಹೋದನು.
23 ಅಲ್ಲಿ ಅವನು ಸ್ವಲ್ಪಕಾಲವಿದ್ದನು. ಬಳಿಕ ಅಲ್ಲಿಂದ ಹೊರಟು ಗಲಾತ್ಯ ಮತ್ತು ಫ್ರಿಜಿಯ ನಾಡುಗಳಲ್ಲಿ ಸಂಚರಿಸುತ್ತಾ ಯೇಸುವಿನ ಶಿಷ್ಯರೆಲ್ಲರನ್ನು ಬಲಪಡಿಸಿದನು.
24 ಅಲೆಕ್ಸಾಂಡ್ರಿಯಾ ಪಟ್ಟಣದಿಂದ ಅಪೊಲ್ಲೋಸನೆಂಬ ಯೆಹೂದ್ಯನು ಎಫೆಸಕ್ಕೆ ಬಂದನು. ಅವನು ವಿದ್ಯಾವಂತನಾಗಿದ್ದನು ಮತ್ತು ಪವಿತ್ರ ಗ್ರಂಥದಲ್ಲಿ ಪಾಂಡಿತ್ಯ ಪಡೆದಿದ್ದನು.
25 ಅಪೊಲ್ಲೋಸನು ಯಾವಾಗಲೂ ಬಹು ಉತ್ಸುಕತೆಯಿಂದ ಯೇಸುವಿನ ಬಗ್ಗೆ ಜನರಿಗೆ ಉಪದೇಶಿಸುತ್ತಿದ್ದನು. ಯೇಸುವಿನ ಬಗ್ಗೆ ಅಪೊಲ್ಲೋಸನು ಹೇಳಿದ ಸಂಗತಿಗಳು ಸರಿಯಾಗಿದ್ದವು. ಆದರೆ ಸ್ನಾನಿಕ ಯೋಹಾನನ ದೀಕ್ಷಾಸ್ನಾನವೊಂದೇ ಇವನಿಗೆ ಗೊತ್ತಿತ್ತು.
26 ಅಪೊಲ್ಲೋಸನು ಸಭಾಮಂದಿರದಲ್ಲಿ ಬಹು ಧೈರ್ಯವಾಗಿ ಮಾಡಿದ ಉಪದೇಶವನ್ನು ಕೇಳಿದ ಪ್ರಿಸ್ಕಿಲ್ಲ ಮತ್ತು ಅಕ್ವಿಲ ಅವನನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ, ದೇವರ ಮಾರ್ಗವನ್ನು ಆಳವಾಗಿ ಗ್ರಹಿಸಿಕೊಳ್ಳಲು ನೆರವು ನೀಡಿದರು.
27 ಅಪೊಲ್ಲೋಸನು ಅಖಾಯ ಪ್ರಾಂತ್ಯಕ್ಕೆ ಹೋಗಲು ಅಪೇಕ್ಷಿಸಿದಾಗ ಎಫೆಸದ ಸಹೋದರರು ಅವನನ್ನು ಪ್ರೋತ್ಸಾಹಿಸಿದರು. ಅಲ್ಲದೆ ಅಖಾಯದಲ್ಲಿದ್ದ ಯೇಸುವಿನ ಶಿಷ್ಯರಿಗೆ ಅವರು ಪತ್ರವನ್ನು ಬರೆದು, ಅಪೊಲ್ಲೋಸನನ್ನು ಸ್ವೀಕರಿಸಿಕೊಳ್ಳಬೇಕೆಂದು ಅವರನ್ನು ಕೇಳಿಕೊಂಡರು. ಅಖಾಯದಲ್ಲಿ ಈ ಶಿಷ್ಯರು ದೇವರ ಕೃಪೆಯಿಂದಾಗಿ ಯೇಸುವಿನಲ್ಲಿ ನಂಬಿಕೆಯಿಟ್ಟಿದ್ದರು. ಅಪೊಲ್ಲೋಸನು ಅಲ್ಲಿಗೆ ಹೋಗಿ ಅವರಿಗೆ ಬಹಳ ನೆರವು ನೀಡಿದನು.
28 ಅವನು ಜನರೆಲ್ಲರ ಮುಂದೆ ಯೆಹೂದ್ಯರ ವಿರುದ್ಧ ಬಹು ಬಲವಾಗಿ ವಾದಿಸಿ, ಪವಿತ್ರ ಗ್ರಂಥವನ್ನು ಆಧಾರವಾಗಿ ತೆಗೆದುಕೊಂಡು ಯೇಸುವೇ ಕ್ರಿಸ್ತನೆಂಬುದನ್ನು ಸ್ಪಷ್ಟವಾಗಿ ನಿರೂಪಿಸಿದನು.
×

Alert

×