ಪೌಲ ಬಾರ್ನಬರು ಇಕೋನಿಯಾ ಪಟ್ಟಣಕ್ಕೆ ಹೋದರು. (ಪ್ರತಿಯೊಂದು ಪಟ್ಟಣದಲ್ಲಿಯೂ ಅವರು ಮಾಡುತ್ತಿದ್ದಂತೆ) ಇಲ್ಲಿಯೂ ಯೆಹೂದ್ಯರ ಸಭಾಮಂದಿರದೊಳಗೆ ಹೋಗಿ ಜನರಿಗೆ ಬೋಧಿಸಿದರು. ಪೌಲ ಬಾರ್ನಬರ ಅಮೋಘ ಬೋಧನೆಯನ್ನು ಕೇಳಿ ಅನೇಕ ಯೆಹೂದ್ಯರು ಮತ್ತು ಗ್ರೀಕರು ನಂಬಿಕೊಂಡರು.
ಆದರೆ ಪೌಲ ಬಾರ್ನಬರು ಇಕೋನಿಯಾದಲ್ಲಿ ಬಹುಕಾಲವಿದ್ದು ಪ್ರಭುವಿನ ಕುರಿತು ಧೈರ್ಯದಿಂದ ಮಾತಾಡಿದರು. ಪ್ರಭುವು ಅವರ ಮೂಲಕ ಸೂಚಕಕಾರ್ಯಗಳನ್ನು ಮತ್ತು ಅದ್ಭುತಕಾರ್ಯಗಳನ್ನು ಮಾಡಿ ತನ್ನ ಕೃಪಾಸಂದೇಶವನ್ನು ನಿರೂಪಿಸಿದನು.
ಜನರು ಬಾರ್ನಬನನ್ನು “ಜೆಯುಸ್” [*ಜೆಯುಸ್ ಅನೇಕ ಗ್ರೀಕ್ ದೇವರುಗಳಲ್ಲಿ ಅತ್ಯಂತ ಪ್ರಮುಖನಾದ ದೇವರು.] ದೇವರೆಂದೂ ಮುಖ್ಯ ಬೋಧಕನಾಗಿದ್ದ ಪೌಲನನ್ನು “ಹೆರ್ಮೆ” [†ಹೆರ್ಮೆ ಮತ್ತೊಬ್ಬ ಗ್ರೀಕ್ ದೇವರು. ಇತರ ದೇವರುಗಳಿಗೆ ಇವನು ಸಂದೇಶಕನೆಂದು ಗ್ರೀಕರು ನಂಬಿದ್ದರು.] ದೇವರೆಂದೂ ಕರೆದರು.
ಜೆಯುಸ್‌ನ ಗುಡಿಯು ಪಟ್ಟಣದ ಸಮೀಪದಲ್ಲಿತ್ತು. ಈ ಗುಡಿಯ ಅರ್ಚಕನು ಕೆಲವು ಹೋರಿಗಳನ್ನು ಮತ್ತು ಹೂವುಗಳನ್ನು ಪಟ್ಟಣದ ಬಾಗಿಲಿನ ಬಳಿಗೆ ತೆಗೆದುಕೊಂಡು ಬಂದನು. ಆ ಅರ್ಚಕನು ಮತ್ತು ಜನರು ಪೌಲ ಬಾರ್ನಬರಿಗೆ ಬಲಿಕೊಟ್ಟು ಅವರನ್ನು ಆರಾಧಿಸಬೇಕೆಂದಿದ್ದರು.
ಇದನ್ನು ಕೇಳಿದ ಪೌಲ ಬಾರ್ನಬರು ತಮ್ಮ ಬಟ್ಟೆಗಳನ್ನು ಹರಿದುಕೊಂಡು [‡ಬಟ್ಟೆಗಳನ್ನು ಹರಿದುಕೊಂಡು ಇದು ಅವರ ಕೋಪವನ್ನು ಸೂಚಿಸುತ್ತದೆ.] ಜನಸಮೂಹದೊಳಕ್ಕೆ ಓಡಿಹೋಗಿ ಹೀಗೆಂದು ಕೂಗಿ ಹೇಳಿದರು:
“ಜನರೇ, ನೀವು ಈ ಕಾರ್ಯಗಳನ್ನು ಮಾಡುತ್ತಿರುವುದೇಕೆ? ನಾವು ದೇವರುಗಳಲ್ಲ. ನಾವು ನಿಮ್ಮಂತೆ ಕೇವಲ ಮನುಷ್ಯರು. ನಿಮಗೆ ಸುವಾರ್ತೆಯನ್ನು ಹೇಳುವುದಕ್ಕಾಗಿ ನಾವು ಬಂದೆವು. ವ್ಯರ್ಥವಾದ ಈ ಕಾರ್ಯಗಳನ್ನು ನೀವು ಬಿಟ್ಟುಬಿಡಿರಿ; ಜೀವಸ್ವರೂಪನಾದ ದೇವರ ಕಡೆಗೆ ತಿರುಗಿಕೊಳ್ಳಿರಿ. ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಮತ್ತು ಅವುಗಳಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಮಾಡಿದಾತನು ಆತನೇ.
ಆದರೆ ತಾನೊಬ್ಬನೇ ನಿಜದೇವರೆಂಬುದನ್ನು ಆತನು ತನ್ನ ಒಳ್ಳೆಯ ಕಾರ್ಯಗಳಿಂದ ನಿರೂಪಿಸುತ್ತಿದ್ದಾನೆ. ಆತನು ನಿಮಗೆ ಆಕಾಶದಿಂದ ಮಳೆಯನ್ನೂ ನಿಮ್ಮ ಆಹಾರಕೋಸ್ಕರ ಸಕಾಲದಲ್ಲಿ ಸುಗ್ಗಿಯನ್ನೂ ದಯಪಾಲಿಸಿ ನಿಮ್ಮ ಹೃದಯಗಳನ್ನು ಆನಂದದಿಂದ ತುಂಬಿಸುತ್ತಿದ್ದಾನೆ.”
ಬಳಿಕ ಕೆಲವು ಯೆಹೂದ್ಯರು ಅಂತಿಯೋಕ್ಯದಿಂದ ಮತ್ತು ಇಕೋನಿಯದಿಂದ ಬಂದು ಪೌಲನಿಗೆ ವಿರೋಧವಾಗಿ ಜನರನ್ನು ಹುರಿದುಂಬಿಸಿ ಪೌಲನಿಗೆ ಕಲ್ಲೆಸೆದು, ಅವನು ಸತ್ತನೆಂದು ಭಾವಿಸಿ ಪಟ್ಟಣದಿಂದ ಹೊರಗೆ ಎಳೆದುಹಾಕಿದರು.
ಪೌಲ ಬಾರ್ನಬರು ಇಲ್ಲಿಗೆ ತಲುಪಿದಾಗ, ಸಭಿಕರನ್ನೆಲ್ಲ ಒಟ್ಟುಗೂಡಿಸಿ, ದೇವರು ತಮ್ಮೊಂದಿಗಿದ್ದು ಮಾಡಿದ ಎಲ್ಲಾ ಕಾರ್ಯಗಳ ಬಗ್ಗೆ ಅವರಿಗೆ ತಿಳಿಸಿದರು. ಮತ್ತು “ಇತರ ಜನಾಂಗಗಳವರು ಸಹ ನಂಬಿಕೊಳ್ಳುವಂತೆ ದೇವರು ಬಾಗಿಲನ್ನು ತೆರೆದಿದ್ದಾನೆ!” ಎಂದು ವಿವರಿಸಿದರು.