Bible Languages

Indian Language Bible Word Collections

Bible Versions

Books

2 Kings Chapters

2 Kings 8 Verses

Bible Versions

Books

2 Kings Chapters

2 Kings 8 Verses

1 ಎಲೀಷನು ತಾನು ಮರಳಿ ಜೀವಿಸುವಂತೆ ಮಾಡಿದ ಬಾಲಕನ ತಾಯಿಯೊಂದಿಗೆ ಮಾತನಾಡಿದನು. ಎಲೀಷನು, “ನೀನು ಮತ್ತು ನಿನ್ನ ಕುಟುಂಬವು ಬೇರೆ ದೇಶಕ್ಕೆ ಹೋಗಬೇಕು. ಏಕೆಂದರೆ ಈ ದೇಶದಲ್ಲಿ ಬರಗಾಲವು ಏಳು ವರ್ಷಗಳವರೆಗೆ ಇರಬೇಕೆಂದು ಯೆಹೋವನು ತೀರ್ಮಾನಿಸಿದ್ದಾನೆ” ಎಂದು ಹೇಳಿದನು.
2 ದೇವಮನುಷ್ಯನು ಹೇಳಿದಂತೆಯೇ ಆ ಸ್ತ್ರೀಯು ಫಿಲಿಷ್ಟಿಯರ ದೇಶದಲ್ಲಿ ಏಳು ವರ್ಷಗಳ ಕಾಲ ನೆಲೆಸಲು ತನ್ನ ಕುಟುಂಬದೊಂದಿಗೆ ಹೋದಳು.
3 ಏಳು ವರ್ಷಗಳು ಮುಗಿದ ನಂತರ ಆ ಸ್ತ್ರೀಯು ಫಿಲಿಷ್ಟಿಯರ ದೇಶದಿಂದ ಹಿಂದಿರುಗಿ ಬಂದಳು. ಆ ಸ್ತ್ರೀಯು ತನ್ನ ಮನೆಯನ್ನು ಮತ್ತು ಭೂಮಿಯನ್ನು ತನಗೆ ಮತ್ತೆ ಕೊಡಿಸುವಂತೆ ಕೇಳಲು ರಾಜನ ಬಳಿಗೆ ಹೋದಳು.
4 ಆ ಸಮಯದಲ್ಲಿ ರಾಜನು ದೇವಮನುಷ್ಯನ ಸೇವಕನಾದ ಗೇಹಜಿಯ ಸಂಗಡ ಮಾತನಾಡುತ್ತಿದ್ದನು. ರಾಜನು ಗೇಹಜಿಗೆ, “ಎಲೀಷನು ಮಾಡಿರುವ ಮಹತ್ಕಾರ್ಯಗಳೆಲ್ಲವುಗಳನ್ನು ನನಗೆ ದಯವಿಟ್ಟು ತಿಳಿಸು” ಎಂದು ಕೇಳಿದನು.
5 ಎಲೀಷನು ಸತ್ತಬಾಲಕನಿಗೆ ಮತ್ತೆ ಜೀವವನ್ನು ಬರುವಂತೆ ಮಾಡಿದ್ದರ ಬಗ್ಗೆ ಗೇಹಜಿಯು ರಾಜನಿಗೆ ಹೇಳುತ್ತಿದ್ದನು. ಎಲೀಷನು ಮರಳಿ ಜೀವಬರಿಸಿದ ಬಾಲಕನ ತಾಯಿಯು ಆ ಸಮಯದಲ್ಲಿ ರಾಜನ ಬಳಿಗೆ ಹೋದಳು. ತನ್ನ ಮನೆಯನ್ನು ಮತ್ತು ಭೂಮಿಯನ್ನು ತನಗೆ ಕೊಡಿಸಬೇಕೆಂದು ಕೇಳಿಕೊಳ್ಳಲು ಆಕೆ ಬಂದಿದ್ದಳು. ಗೇಹಜಿಯು, “ನನ್ನ ಒಡೆಯನೇ, ರಾಜನೇ, ಇವಳೇ ಆ ಸ್ತ್ರೀಯು! ಎಲೀಷನು ಮರಳಿ ಜೀವಬರಿಸಿದ ಬಾಲಕನು ಇವನೇ!” ಎಂದು ಹೇಳಿದನು.
6 ರಾಜನು ಆ ಸ್ತ್ರೀಯನ್ನು ಕೇಳಿದಾಗ, ಅವಳು ತನಗೆ ಸಂಭವಿಸಿದ್ದನ್ನು ಮತ್ತು ತನಗಿದ್ದ ಇಚ್ಛೆಯನ್ನು ತಿಳಿಸಿದಳು. ಆಗ ರಾಜನು ಅವಳಿಗೆ ಸಹಾಯಮಾಡಲು ಒಬ್ಬ ಅಧಿಕಾರಿಯನ್ನು ಕರೆದು, “ಅವಳಿಗೆ ಸೇರಬೇಕಾದ ಆಸ್ತಿಯೆಲ್ಲವನ್ನೂ ಆಕೆಗೆ ಕೊಡಿಸು. ಅವಳು ದೇಶವನ್ನು ಬಿಟ್ಟಂದಿನಿಂದ ಈವರೆಗಿನ ಆಕೆಯ ಭೂಮಿಯ ಉತ್ಪಾದನೆಯನ್ನೂ ಅವಳಿಗೆ ಕೊಡಿಸು” ಎಂದು ಹೇಳಿದನು.
7 ಎಲೀಷನು ದಮಸ್ಕಕ್ಕೆ ಹೋದನು. ಅರಾಮ್ಯರ ರಾಜನಾದ ಬೆನ್ಹದದನಿಗೆ ಕಾಯಿಲೆಯಾಗಿತ್ತು. ಬೆನ್ಹದದನಿಗೆ ಒಬ್ಬನು, “ದೇವಮನುಷ್ಯನು ಇಲ್ಲಿಗೆ ಬಂದಿದ್ದಾನೆ” ಎಂದು ಹೇಳಿದನು.
8 ಆಗ ರಾಜನಾದ ಬೆನ್ಹದದನು ಹಜಾಯೇಲನಿಗೆ, “ದೇವಮನುಷ್ಯನನ್ನು ಕಾಣಲು ಒಂದು ಕಾಣಿಕೆಯನ್ನು ತೆಗೆದುಕೊಂಡು ಹೋಗು. ನಾನು ನನ್ನ ಕಾಯಿಲೆಯಿಂದ ಗುಣವಾಗುತ್ತೇನೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಅವನು ಯೆಹೋವನಲ್ಲಿ ಪ್ರಾರ್ಥಿಸಲಿ” ಎಂದು ಹೇಳಿದನು.
9 ಹಜಾಯೇಲನು ತನ್ನೊಡನೆ ಕಾಣಿಕೆಯನ್ನು ತೆಗೆದುಕೊಂಡು ಎಲೀಷನನ್ನು ಭೇಟಿಮಾಡಲು ಹೋದನು. ಅವನು ದಮಸ್ಕದಿಂದ ಎಲ್ಲಾ ವಿಧವಾದ ಉತ್ತಮ ವಸ್ತುಗಳನ್ನು ನಲವತ್ತು ಒಂಟೆಗಳ ಮೇಲೆ ಹೇರಿಸಿಕೊಂಡು ಹೋದನು. ಹಜಾಯೇಲನು ಎಲೀಷನ ಬಳಿಗೆ ಹೋಗಿ, “ನಿನ್ನ ಹಿಂಬಾಲಕನೂ ಅರಾಮ್ಯರ ರಾಜನೂ ಆದ ಬೆನ್ಹದದನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದನು. ತನ್ನ ಕಾಯಿಲೆಯು ವಾಸಿಯಾಗುತ್ತದೆಯೇ ಇಲ್ಲವೇ ಎಂಬುದನ್ನು ಅವನು ನಿನ್ನಿಂದ ತಿಳಿದುಕೊಳ್ಳಬೇಕೆಂದಿದ್ದಾನೆ” ಎಂದು ಹೇಳಿದನು.
10 ಆಗ ಎಲೀಷನು ಹಜಾಯೇಲನಿಗೆ, “ವಾಸಿಯಾಗುವುದು’ ಎಂದು ಬೆನ್ಹದದನಿಗೆ ಹೇಳು. ಆದರೆ, ‘ಅವನು ಸಾಯುವುದು ಖಂಡಿತ’ ಎಂದು ಯೆಹೋವನು ನನಗೆ ತಿಳಿಸಿದ್ದಾನೆ” ಎಂದು ಹೇಳಿದನು.
11 ಹಜಾಯೇಲನು ನಾಚಿಕೊಳ್ಳುವ ತನಕ ಎಲೀಷನು ಅವನನ್ನು ಒಂದೇ ಸಮನೆ ನೋಡಿದನು. ನಂತರ ದೇವಮನುಷ್ಯನು ಅಳತೊಡಗಿದನು.
12 ಹಜಾಯೇಲನು, “ಸ್ವಾಮೀ, ನೀವು ಅಳುವುದೇಕೇ?” ಎಂದು ಕೇಳಿದನು. ಎಲೀಷನು, “ನಾನು ಅಳುತ್ತಿರುವುದೇಕೆಂದರೆ ನೀನು ಇಸ್ರೇಲರಿಗೆ ಮಾಡುವ ಕೆಟ್ಟಕಾರ್ಯಗಳು ನನಗೆ ತಿಳಿದಿವೆ. ನೀನು ಅವರ ನಗರಗಳ ಕೋಟೆಗಳನ್ನು ಸುಟ್ಟುಹಾಕುವೆ. ನೀನು ಅವರ ತರುಣರನ್ನು ಖಡ್ಗಗಳಿಂದ ಇರಿದುಕೊಲ್ಲುವೆ. ನೀನು ಅವರ ಮಕ್ಕಳನ್ನು ಕೊಂದುಹಾಕುವೆ. ನೀನು ಅವರ ಗರ್ಭಿಣಿ ಸ್ತ್ರೀಯರನ್ನು ಸೀಳಿ ಹಾಕುವೆ” ಎಂದು ಹೇಳಿದನು.
13 ಹಜಾಯೇಲನು, “ನಾನು ಬಲಾಢ್ಯನಾದ ಮನುಷ್ಯನಲ್ಲ! ನಾನು ಈ ಮಹತ್ಕಾರ್ಯಗಳನ್ನು ಮಾಡಲಾಗುವುದಿಲ್ಲ!” ಎಂದು ಹೇಳಿದನು. ಎಲೀಷನು, “ನೀನು ಅರಾಮ್ಯರ ರಾಜನಾಗುವೆಯೆಂದು ಯೆಹೋವನು ನನಗೆ ತಿಳಿಸಿದ್ದಾನೆ” ಎಂದು ಹೇಳಿದನು.
14 ಹಜಾಯೇಲನು ಎಲೀಷನ ಬಳಿಯಿಂದ ಹೊರಟು ತನ್ನ ರಾಜನ ಬಳಿಗೆ ಹೋದನು. ಬೆನ್ಹದದನು ಹಜಾಯೇಲನಿಗೆ, “ಎಲೀಷನು ನಿನಗೆ ಏನು ಹೇಳಿದನು?” ಎಂದು ಕೇಳಿದನು. ಹಜಾಯೇಲನು, “ನಿನ್ನ ಕಾಯಿಲೆಯು ವಾಸಿಯಾಗುತ್ತದೆಯೆಂದು ಎಲೀಷನು ನನಗೆ ಹೇಳಿದನು” ಎಂದನು.
15 ಆದರೆ ಮಾರನೆಯ ದಿನ ಹಜಾಯೇಲನು ಒಂದು ಹೊದಿಕೆಯನ್ನು ತೆಗೆದುಕೊಂಡು ನೀರಿನಲ್ಲಿ ನೆನೆಸಿದನು. ನಂತರ ಅವನು ಆ ಹೊದಿಕೆಯನ್ನು ಬೆನ್ಹದದನ ಮುಖದ ಮೇಲೆ ಹಾಕಿ, ಅವನ ಉಸಿರುಕಟ್ಟಿಸಿ ಸಾಯಿಸಿದನು. ಹಜಾಯೇಲನು ನೂತನ ರಾಜನಾದನು.
16 ಯೆಹೋಷಾಫಾಟನ ಮಗನಾದ ಯೆಹೋರಾಮನು ಯೆಹೂದದ ರಾಜನಾಗಿದ್ದನು. ಅಹಾಬನ ಮಗನಾದ ಯೋರಾವುನು ಇಸ್ರೇಲಿನ ರಾಜನಾಗಿದ್ದ ಐದನೆಯ ವರ್ಷದಲ್ಲಿ ಯೆಹೋರಾಮನು ಆಳಲಾರಂಭಿಸಿದನು.
17 ಯೆಹೋರಾಮನು ಆಳುವುದಕ್ಕೆ ಆರಂಭಿಸಿದಾಗ ಅವನಿಗೆ ಮೂವತ್ತೆರಡು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಎಂಟು ವರ್ಷ ಆಳಿದನು.
18 ಆದರೆ ಯೆಹೋರಾಮನು ಇಸ್ರೇಲಿನ ರಾಜರುಗಳಂತೆ ಜೀವಿಸಿದನು ಮತ್ತು ಯೆಹೋವನು ಕೆಟ್ಟಕಾರ್ಯಗಳೆಂದು ಹೇಳಿದ್ದನ್ನೇ ಮಾಡಿದನು. ಯೆಹೋರಾಮನು ಅಹಾಬನ ಕುಟುಂಬದ ಜನರಂತೆ ಜೀವಿಸಿದನು. ಅವನ ಪತ್ನಿಯು ಅಹಾಬನ ಮಗಳಾದ್ದರಿಂದ ಯೆಹೋರಾಮನು ಹೀಗೆ ಜೀವಿಸಿದನು.
19 ಆದರೆ ಯೆಹೋವನು ತನ್ನ ಸೇವಕನಾದ ದಾವೀದನಿಗೆ ವಾಗ್ದಾನ ಮಾಡಿದ್ದುದರಿಂದ ಯೆಹೂದವನ್ನು ನಾಶಗೊಳಿಸಲಿಲ್ಲ. ಯಾವಾಗಲೂ ದಾವೀದನ ಕುಟುಂಬದ ಒಬ್ಬನು ರಾಜನಾಗಿರುತ್ತಾನೆಂದು ಯೆಹೋವನು ವಾಗ್ದಾನ ಮಾಡಿದ್ದನು.
20 ಯೆಹೋರಾಮನ ಕಾಲದಲ್ಲಿ ಎದೋಮ್ಯರು ಯೆಹೂದದ ಆಳ್ವಿಕೆಗೆ ವಿರುದ್ಧವಾಗಿ ದಂಗೆ ಎದ್ದರು. ಎದೋಮ್ಯರು ತಮ್ಮಲ್ಲೇ ಒಬ್ಬ ರಾಜನನ್ನು ಆರಿಸಿಕೊಂಡಿದ್ದರು.
21 ಆಗ ಯೆಹೋರಾಮನು ಮತ್ತು ಅವನ ರಥಗಳೆಲ್ಲ ಚಾಯೀರಿಗೆ ಹೋದವು. ಎದೋಮಿನ ಸೇನೆಯು ಅವರನ್ನು ಸುತ್ತುವರಿಯಿತು. ಯೆಹೋರಾಮನು ತನ್ನ ಅಧಿಕಾರಿಗಳೊಂದಿಗೆ ಅವರನ್ನು ರಾತ್ರಿಯಲ್ಲಿ ಮುತ್ತಿಗೆ ಹಾಕಿ ತಪ್ಪಿಸಿಕೊಂಡರು. ಆದರೆ ಅವನ ಸೈನಿಕರು ತಮ್ಮ ಗುಡಾರಗಳಿಗೆ ಓಡಿಹೋದರು.
22 ಹೀಗೆ ಎದೋಮ್ಯರು ಯೆಹೂದದ ಆಳ್ವಿಕೆಯಿಂದ ಬೇರ್ಪಟ್ಟರು. ಅವರು ಇಂದಿನ ತನಕ ಯೆಹೂದದ ಆಳ್ವಿಕೆಯಿಂದ ಬೇರ್ಪಟ್ಟು ಸ್ವತಂತ್ರರಾಗಿದ್ದಾರೆ. ಅದೇ ಸಮಯದಲ್ಲಿ ಲಿಬ್ನದವರು ಯೆಹೂದದ ಆಳ್ವಿಕೆಯಿಂದ ಬೇರೆಯಾದರು.
23 ಯೆಹೂದದ ರಾಜರುಗಳು ಎಂಬ ಇತಿಹಾಸ ಪುಸ್ತಕದಲ್ಲಿ ಯೆಹೋರಾಮನು ಮಾಡಿದ ಇತರ ಎಲ್ಲಾ ಕಾರ್ಯಗಳನ್ನು ಬರೆಯಲಾಗಿದೆ.
24 ಯೆಹೋರಾಮನು ಸತ್ತುಹೋದನು. ಅವನನ್ನು ದಾವೀದನಗರದಲ್ಲಿ ಅವನ ಪೂರ್ವಿಕರ ಬಳಿ ಸಮಾಧಿ ಮಾಡಿದರು. ಯೆಹೋರಾಮನ ಮಗನಾದ ಅಹಜ್ಯನು ನೂತನ ರಾಜನಾದನು.
25 ಅಹಾಬನ ಮಗನಾದ ಯೋರಾವುನು ಇಸ್ರೇಲಿನ ರಾಜನಾಗಿದ್ದ ಹನ್ನೆರಡನೆಯ ವರ್ಷದಲ್ಲಿ ಯೆಹೋರಾಮನ ಮಗನಾದ ಅಹಜ್ಯನು ಯೆಹೂದದ ರಾಜನಾದನು.
26 ಅಹಜ್ಯನು ಆಳಲಾರಂಭಿಸಿದಾಗ ಅವನಿಗೆ ಇಪ್ಪತ್ತೆರಡು ವರ್ಷ ವಯಸ್ಸಾಗಿತ್ತು. ಅವನು ಜೆರುಸಲೇಮಿನಲ್ಲಿ ಒಂದು ವರ್ಷ ಆಳಿದನು. ಅವನ ತಾಯಿಯ ಹೆಸರು ಅತಲ್ಯ. ಅವಳು ಇಸ್ರೇಲಿನ ರಾಜನಾದ ಒಮ್ರಿಯ ಮಗಳು.
27 ಯೆಹೋವನು ಕೆಟ್ಟದ್ದೆಂದು ಹೇಳಿದ ಕಾರ್ಯಗಳನ್ನು ಅಹಜ್ಯನು ಮಾಡಿದನು. ಅಹಜ್ಯನು ಅಹಾಬನ ಕುಟುಂಬದ ಜನರಂತೆ ಜೀವಿಸಿದ್ದನು. ಅಹಜ್ಯನು ಅಹಾಬನ ಅಳಿಯನಾದ್ದರಿಂದ ಅವನು ಹೀಗೆ ಜೀವಿಸಿದನು.
28 ಅಹಜ್ಯನು ಅಹಾಬನ ಮಗನಾದ ಯೋರಾವುನ ಜೊತೆಯಲ್ಲಿ ಅರಾಮ್ಯರ ರಾಜನಾದ ಹಜಾಯೇಲನ ವಿರುದ್ಧ ಯುದ್ಧಮಾಡಲು ರಾಮೋತ್‌ಗಿಲ್ಯಾದಿಗೆ ಹೋದನು. ಅರಾಮ್ಯರು ಯೋರಾವುನನ್ನು ಗಾಯಗೊಳಿಸಿದರು.
29 ರಾಜ ಯೋರಾವುನು ಹಜಾಯೇಲನ ವಿರುದ್ಧವಾಗಿ ಹೋರಾಡಿದಾಗ ರಾಮಾದಲ್ಲಿ ಅರಾಮ್ಯದಿಂದ ತನಗಾದ ಗಾಯಗಳನ್ನು ಗುಣಪಡಿಸಿಕೊಳ್ಳಲು ಇಸ್ರೇಲಿನ ರಾಜನು ಇಜ್ರೇಲ್ ಎಂಬ ಪಟ್ಟಣಕ್ಕೆ ಹಿಂತಿರುಗಿದನು. ಯೆಹೂದದ ರಾಜನೂ ಯೆಹೋರಾಮನ ಮಗನೂ ಆದ ಅಹಜ್ಯನು, ಅಹಾಬನ ಮಗನಾದ ಯೋರಾವುನನ್ನು ನೋಡಲು ಇಜ್ರೇಲಿಗೆ ಹೋದನು. ಯಾಕೆಂದರೆ ಅವನಿಗೆ ಕಾಯಿಲೆಯಾಗಿತ್ತು.

2-Kings 8:22 Kannada Language Bible Words basic statistical display

COMING SOON ...

×

Alert

×