Bible Languages

Indian Language Bible Word Collections

Bible Versions

Books

2 Kings Chapters

2 Kings 7 Verses

Bible Versions

Books

2 Kings Chapters

2 Kings 7 Verses

1 ಎಲೀಷನು ಅವನಿಗೆ, “ಯೆಹೋವನ ಸಂದೇಶವನ್ನು ಕೇಳು: ‘ನಾಳೆ ಇದೇ ಸಮಯಕ್ಕೆ, ಅಧಿಕವಾದ ಆಹಾರವು ಬಹಳ ಕಡಿಮೆ ಬೆಲೆಗೆ ಸಿಗುತ್ತದೆ. ಒಂದು ರೂಪಾಯಿಗೆ ಒಂದು ಗೂಡೆ ಹಿಟ್ಟನ್ನೂ ಎರಡು ಗೂಡೆ ಜವೆಗೋಧಿಯನ್ನೂ ಸಮಾರ್ಯನಗರದ ಊರ ಬಾಗಿಲಿನಲ್ಲಿರುವ ಮಾರುಕಟ್ಟೆಯಲ್ಲಿ ಮಾರಲಾಗುವುದು” ಎಂದನು.
2 ಆಗ ರಾಜನಿಗೆ ಆಪ್ತನಾಗಿದ್ದ ಅಧಿಕಾರಿಯು ದೇವಮನುಷ್ಯನಿಗೆ, “ಯೆಹೋವನು ಪರಲೋಕಕ್ಕೆ ಕಿಟಕಿಗಳನ್ನು ಮಾಡಿಸಿದರೂ ಇದು ಸಂಭವಿಸುವುದಿಲ್ಲ!” ಎಂದು ಉತ್ತರಿಸಿದನು. ಎಲೀಷನು, “ನೀನು ನಿನ್ನ ಸ್ವಂತ ಕಣ್ಣುಗಳಿಂದಲೇ ಇದನ್ನು ನೋಡುವೆ. ಆದರೆ ಆ ಆಹಾರದಲ್ಲಿ ಯಾವುದನ್ನೂ ನೀನು ತಿನ್ನುವುದಿಲ್ಲ” ಎಂದನು.
3 ನಗರದ ಬಾಗಿಲಿನ ಹತ್ತಿರ ನಾಲ್ಕು ಮಂದಿ ಕುಷ್ಠರೋಗಿಗಳಿದ್ದರು. ಅವರು, “ನಾವು ಸಾಯುವುದನ್ನೇ ಕಾಯುತ್ತಾ ಕುಳಿತಿರುವುದೇಕೆ?
4 ಸಮಾರ್ಯದಲ್ಲಿ ಆಹಾರವು ಇಲ್ಲವೇ ಇಲ್ಲ. ನಾವು ನಗರದ ಒಳಗೆ ಹೋದರೆ, ನಾವು ಅಲ್ಲೇ ಸಾಯುತ್ತೇವೆ. ನಾವು ಇಲ್ಲೇ ಕುಳಿತಿದ್ದರೂ, ಸಾಯುವುದು ನಿಶ್ಚಿತ. ಆದ್ದರಿಂದ ನಾವು ಅರಾಮ್ಯರ ಪಾಳೆಯಕ್ಕೆ ಹೋಗೋಣ. ಅವರು ನಮ್ಮನ್ನು ಬದುಕಿಸಿದರೆ ನಾವು ಬದುಕೋಣ. ಅವರು ನಮ್ಮನ್ನು ಕೊಂದರೆ ಸಾಯೋಣ” ಎಂದು ಮಾತನಾಡಿಕೊಂಡರು.
5 ಅಂದು ಸಂಜೆ ಆ ನಾಲ್ವರು ಕುಷ್ಠರೋಗಿಗಳು ಅರಾಮ್ಯರ ಪಾಳೆಯಕ್ಕೆ ಹೋದರು. ಅವರು ಪಾಳೆಯದ ಹೊರ ಅಂಚಿಗೆ ಬಂದರು. ಅಲ್ಲಿ ಜನರೇ ಇರಲಿಲ್ಲ!
6 ಅರಾಮ್ಯರ ಸೇನೆಯು ರಥಗಳ, ಕುದುರೆಗಳ ಮತ್ತು ಮಹಾಸೇನೆಯ ರಣಘೋಷವನ್ನು ಕೇಳುವಂತೆ ಯೆಹೋವನು ಮಾಡಿದ್ದನು. ಅರಾಮ್ಯ ಸೈನಿಕರು, “ಇಸ್ರೇಲಿನ ರಾಜನು, ಹಿತ್ತೀಯರಿಗೆ ಮತ್ತು ಈಜಿಪ್ಟಿನವರಿಗೆ ಹಣಕೊಟ್ಟು ನಮ್ಮ ವಿರುದ್ಧ ಹೋರಾಟಕ್ಕೆ ಬರುವಂತೆ ಮಾಡಿದ್ದಾನೆ” ಎಂದು ಮಾತನಾಡಿಕೊಂಡು,
7 ಸಂಜೆಗೆ ಮುಂಚೆಯೇ ಓಡಿಹೋಗಿದ್ದರು. ಅವರು ಎಲ್ಲವನ್ನೂ ಅಲ್ಲಿಯೇ ಬಿಟ್ಟುಹೋಗಿದ್ದರು. ಅವರು ತಮ್ಮ ಗುಡಾರಗಳನ್ನು, ಕುದುರೆಗಳನ್ನು, ಹೇಸರಕತ್ತೆಗಳನ್ನು ಅಲ್ಲಿಯೇ ಬಿಟ್ಟು ತಮ್ಮ ಜೀವರಕ್ಷಣೆಗಾಗಿ ಓಡಿಹೋಗಿದ್ದರು.
8 ಈ ಕುಷ್ಠರೋಗಿಗಳು ಪಾಳೆಯವು ಆರಂಭವಾಗಿದ್ದಲ್ಲಿಗೆ ಬಂದು, ಒಂದು ಗುಡಾರದೊಳಕ್ಕೆ ಹೋದರು. ಅವರು ಅಲ್ಲಿ ತಿಂದರು ಮತ್ತು ಕುಡಿದರು. ನಂತರ ಈ ನಾಲ್ವರು ಬೆಳ್ಳಿಬಂಗಾರಗಳನ್ನು ಮತ್ತು ಬಟ್ಟೆಗಳನ್ನು ಪಾಳೆಯದಿಂದ ಹೊರಗೆ ತೆಗೆದುಕೊಂಡು ಹೋದರು. ಅವರು ಬೆಳ್ಳಿಬಂಗಾರಗಳನ್ನು ಮತ್ತು ಬಟ್ಟೆಗಳನ್ನು ಅಡಗಿಸಿಟ್ಟರು. ನಂತರ ಅವರು ಹಿಂದಿರುಗಿ ಬಂದು, ಮತ್ತೊಂದು ಗುಡಾರವನ್ನು ಪ್ರವೇಶಿಸಿದರು. ಆ ಗುಡಾರದಿಂದಲೂ ಅವರು ವಸ್ತುಗಳನ್ನು ಕೊಂಡೊಯ್ದರು. ಅವರು ಹೊರಗೆ ಹೋಗಿ ಅವುಗಳನ್ನು ಅಡಗಿಸಿಟ್ಟರು.
9 ಆಗ ಆ ಕುಷ್ಠರೋಗಿಗಳು, “ನಾವು ತಪ್ಪು ಮಾಡುತ್ತಿದ್ದೇವೆ! ಈ ದಿನ ನಮಗೆ ಶುಭವಾರ್ತೆ ಸಿಕ್ಕಿದೆ. ಆದರೆ ನಾವು ನಿಶಬ್ಧದಿಂದ ಇದ್ದೇವೆ. ಸೂರ್ಯನು ಮೇಲಕ್ಕೇರಿ ಬರುವವರೆಗೆ ನಾವು ಸುಮ್ಮನಿದ್ದರೆ ನಮ್ಮನ್ನು ದಂಡಿಸಲಾಗುವುದು. ಈಗ ನಾವು ರಾಜನ ಮನೆಗೆ ಹೋಗಿ ಅಲ್ಲಿ ವಾಸಿಸುವ ಜನರಿಗೆ ಇದನ್ನು ತಿಳಿಸೋಣ” ಎಂದು ಮಾತನಾಡಿಕೊಂಡರು.
10 ಈ ಕುಷ್ಠರೋಗಿಗಳು ನಗರದ ಬಾಗಿಲಿಗೆ ಬಂದು ದ್ವಾರಪಾಲಕರನ್ನು ಕರೆದು, “ನಾವು ಅರಾಮ್ಯರ ಪಾಳೆಯಕ್ಕೆ ಹೋಗಿದ್ದೆವು. ಆದರೆ ನಾವು ಜನರ ಧ್ವನಿಯನ್ನು ಕೇಳಲೇ ಇಲ್ಲ. ಅಲ್ಲಿ ಜನರ ಸುಳಿವಿಲ್ಲ. ಕುದುರೆಗಳು ಮತ್ತು ಹೇಸರಕತ್ತೆಗಳು ಕಟ್ಟಿಹಾಕಿದಂತೆಯೇ ಇವೆ. ಗುಡಾರಗಳಿನ್ನೂ ಯಥಾಸ್ಥಿತಿಯಲ್ಲಿವೆ. ಆದರೆ ಸೈನಿಕರೆಲ್ಲರೂ ಹೊರಟುಹೋಗಿದ್ದಾರೆ” ಎಂದು ಹೇಳಿದರು.
11 ಆಗ ನಗರದ ದ್ವಾರಪಾಲಕರು ಕೂಗುತ್ತಾ ರಾಜನ ಮನೆಯಲ್ಲಿದ್ದ ಜನರಿಗೆ ಈ ಸಂಗತಿಗಳನ್ನು ತಿಳಿಸಿದರು.
12 ಆಗ ರಾತ್ರಿಯಾಗಿದ್ದರೂ ರಾಜನು ತನ್ನ ಹಾಸಿಗೆಯಿಂದ ಮೇಲಕ್ಕೆದ್ದನು. ರಾಜನು ತನ್ನ ಅಧಿಕಾರಿಗಳಿಗೆ, “ಅರಾಮ್ಯರ ಸೈನಿಕರು ಮಾಡಬೇಕೆಂದಿರುವುದನ್ನು ನಾನು ನಿಮಗೆ ಹೇಳುತ್ತೇನೆ. ನಾವು ಬಹಳ ಹಸಿದಿದ್ದೇವೆಂಬುದು ಅವರಿಗೆ ತಿಳಿದಿದೆ. ಅವರು ಹೊಲಗಳಲ್ಲಿ ಅಡಗಿಕೊಳ್ಳಲು ಪಾಳೆಯನ್ನು ಬಿಟ್ಟುಹೋಗಿದ್ದಾರೆ. ‘ಇಸ್ರೇಲರು ನಗರದಿಂದ ಹೊರಗೆ ಬಂದಾಗ, ನಾವು ಅವರನ್ನು ಜೀವಂತವಾಗಿ ಸೆರೆಹಿಡಿದು ಅವರ ನಗರವನ್ನು ಪ್ರವೇಶಿಸಬಹುದು’ ಎಂದು ಅರಾಮ್ಯರು ಆಲೋಚಿಸಿದ್ದಾರೆ” ಎಂದು ಹೇಳಿದನು.
13 ರಾಜನ ಅಧಿಕಾರಿಗಳಲ್ಲಿ ಒಬ್ಬನು, “ನಮ್ಮಲ್ಲಿ ಕೆಲವರು ನಗರದಲ್ಲಿ ಉಳಿದಿರುವ ಐದು ಕುದುರೆಗಳನ್ನು ತೆಗೆದುಕೊಳ್ಳೋಣ. ನಗರದಲ್ಲಿ ಉಳಿದಿರುವ ಇಸ್ರೇಲಿನ ಜನರಂತೆ ಹೇಗಾದರೂ ಈ ಕುದುರೆಗಳೂ ಬಹುಬೇಗ ಸತ್ತುಹೋಗುತ್ತವೆ. ಈ ಜನರನ್ನು ಕಳುಹಿಸಿ ಅಲ್ಲಿ ಏನು ನಡೆದಿದೆಯೆಂಬುದನ್ನು ನಾವು ತಿಳಿದುಕೊಳ್ಳೋಣ” ಎಂದು ಹೇಳಿದನು.
14 ಕೂಡಲೇ ರಾಜನು ಎರಡು ರಥಗಳನ್ನು ತರಿಸಿ ಅರಾಮ್ಯರ ಸೇನೆಯು ಎಲ್ಲಿದೆ ಎಂಬುದನ್ನು ನೋಡಿಕೊಂಡು ಬರುವುದಕ್ಕಾಗಿ ಅವರನ್ನು ಕಳುಹಿಸಿದನು.
15 ಅವರು ಅರಾಮ್ಯರ ಸೇನೆಗಾಗಿ ಹುಡುಕಿಕೊಂಡು ಜೋರ್ಡನ್ ನದಿಯವರೆಗೂ ಹೋದರು. ರಸ್ತೆಯ ದಾರಿಯಲ್ಲೆಲ್ಲಾ ಬಟ್ಟೆಗಳು ಮತ್ತು ಆಯುಧಗಳು ಬಿದ್ದಿದ್ದವು. ಅರಾಮ್ಯರು ಆತುರಾತುರವಾಗಿ ಹೋಗುವಾಗ ಅವುಗಳನ್ನೆಲ್ಲಾ ಬಿಸಾಡಿ ಹೋಗಿದ್ದರು. ಸಂದೇಶಕರು ಸಮಾರ್ಯಕ್ಕೆ ಹಿಂದಿರುಗಿ ಬಂದು ರಾಜನಿಗೆ ವಿಷಯವನ್ನು ಹೇಳಿದರು.
16 ಆಗ ಜನರು ಅರಾಮ್ಯರ ಪಾಳೆಯಕ್ಕೆ ಓಡುತ್ತಾ ಹೋಗಿ, ಅಲ್ಲಿನ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡರು. ಪ್ರತಿಯೊಬ್ಬರಿಗೂ ಹೇರಳವಾಗಿ ದೊರೆಯಿತು. ಯೆಹೋವನು ಹೇಳಿದಂತೆಯೇ ಇದಾಯಿತು. ಒಬ್ಬನು ಉತ್ತಮವಾದ ಒಂದು ಗೂಡೆ ಹಿಟ್ಟನ್ನು ಮತ್ತು ಎರಡು ಗೂಡೆ ಜವೆಗೋಧಿಯನ್ನು ಕೇವಲ ಒಂದು ರೂಪಾಯಿಗೆ ಕೊಳ್ಳಬಹುದಾಗಿತ್ತು!
17 ರಾಜನು ತನಗೆ ಆಪ್ತನಾಗಿದ್ದ ಅಧಿಕಾರಿಯನ್ನು ಪಟ್ಟಣದ ಬಾಗಿಲನ್ನು ಕಾಯಲು ಆರಿಸಿಕೊಂಡನು. ಆದರೆ ಜನರು ಶತ್ರುಗಳ ಪಾಳೆಯದಲ್ಲಿದ್ದ ಆಹಾರವನ್ನು ಪಡೆಯಲು ಓಡಿಹೋಗುವಾಗ ಅವನು ಜನರ ತುಳಿತಕ್ಕೆ ಸಿಕ್ಕಿಕೊಂಡು ಸತ್ತುಹೋದನು. ರಾಜನು ಎಲೀಷನ ಮನೆಗೆ ಬಂದಿದ್ದಾಗ, ದೇವಮನುಷ್ಯನು ಹೇಳಿದಂತೆಯೇ ಈ ಸಂಗತಿಗಳೆಲ್ಲಾ ಸಂಭವಿಸಿದವು.
18 ಎಲೀಷನು, “ಒಂದು ರೂಪಾಯಿಗೆ ಒಂದು ಗೂಡೆ ಹಿಟ್ಟನ್ನೂ ಎರಡು ಗೂಡೆ ಜವೆಗೋಧಿಯನ್ನೂ ಸಮಾರ್ಯನಗರದ ಊರು ಬಾಗಿಲಿನಲ್ಲಿರುವ ಮಾರುಕಟ್ಟೆಯ ಸ್ಥಳದಲ್ಲಿ ಮಾರಲ್ಪಡುವುದು” ಎಂದು ಮೊದಲೇ ಹೇಳಿದ್ದನು.
19 ಆದರೆ ಆ ಅಧಿಕಾರಿಯು ದೇವಮನುಷ್ಯನಿಗೆ, “ಯೆಹೋವನು ಪರಲೋಕಕ್ಕೆ ಕಿಟಿಕಿಗಳನ್ನು ಮಾಡಿಸಿದರೂ ಇದು ಸಂಭವಿಸುವುದಿಲ್ಲ!” ಎಂದು ಉತ್ತರಿಸಿದನು. ಎಲೀಷನು ಆ ಅಧಿಕಾರಿಗೆ, “ನೀನು ನಿನ್ನ ಸ್ವಂತ ಕಣ್ಣುಗಳಿಂದಲೇ ಇದನ್ನು ನೋಡುವೆ. ಆದರೆ ಆ ಆಹಾರದಲ್ಲಿ ಯಾವುದನ್ನೂ ನೀನು ತಿನ್ನುವುದಿಲ್ಲ” ಎಂದು ಹೇಳಿದ್ದನು.
20 ಆ ಅಧಿಕಾರಿಗೆ ಅಂದು ಹೇಳಿದಂತೆಯೇ ಆಯಿತು. ಅವನು ಊರ ಬಾಗಿಲಿನಲ್ಲಿ ಜನರ ತುಳಿತಕ್ಕೆ ಸಿಕ್ಕಿಕೊಂಡು ಸತ್ತುಹೋದನು.

2-Kings 7:19 Kannada Language Bible Words basic statistical display

COMING SOON ...

×

Alert

×